ಪುಟ್ಟ ಪ್ರಪಂಚವನ್ನೇ ಸಲಹುವ ಮರಗಳ ಲೋಕ
Team Udayavani, Jun 10, 2018, 9:39 AM IST
ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಬೂರುಗ ಮರ ಸಿಗುವ ಇತರ ಪ್ರದೇಶಗಳಲ್ಲಿ ಈ ಮರದ ಬಗ್ಗೆ ಸಾಕಷ್ಟು ಸ್ಥಳೀಯ ಜನಪದ ನಂಬಿಕೆಗಳಿವೆ. ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಈ ಮರದಲ್ಲಿ ಆತ್ಮ, ಚೇತನಗಳಿವೆ ಎಂಬ ನಂಬಿಕೆಯಿರುವುದರಿಂದ ಇವನ್ನು ಯಾರೂ ಕಡಿಯುವುದಿಲ್ಲ. ಹೆ¨ªಾರಿಗಳ ಮಧ್ಯೆ ಬಂದರೂ ಕೂಡ ಈ ಮರಗಳನ್ನು ಕಡಿಯುವುದಿಲ್ಲವಂತೆ.
ಬೂರುಗ ಮರದ ಹೂವಿನ ಮಕರಂದ ಹೀರುತ್ತಿರುವ ಮರಕುಟಿಗ ವನ್ಯಜೀವಿ ನನಗೆ ಜನವರಿಯಿಂದ ಮಾರ್ಚ್ ತಿಂಗಳ ನಡುವೆ ಕಾಡು ತಿರುಗುವುದೆಂದರೆ ಬಲು ಇಷ್ಟ. ಅಯ್ಯೋ ಮಾಗಿಯ ಕಾಲ ಇನ್ನೇನು ಮುಗಿಯಿತಲ್ಲ ಎಂದು ಮನಸ್ಸಿನಲ್ಲಿ ಅಸಮಾಧಾನ. ಆದರೆ ಫೆಬ್ರವರಿ ಮಾರ್ಚ್ ತಿಂಗಳೆಂದರೆ ಕಾಡು ತನ್ನದೇ ಸೌಂದರ್ಯವನ್ನು ಎತ್ತಿ ತೋರಿಸುವ ಬಹು ಸುಂದರ ಋತು. ಕಾಡು ಸ್ವಲ್ಪ ಒಣಗಲು ಪ್ರಾರಂಭವಾಗುತ್ತದೆ. ಒಣಗುತ್ತಿರುವ ಕಾಡಿನ ಮಧ್ಯೆ ಕೆಲ ಮರಗಳು ಮೈತುಂಬ ಹೂ ತಳೆದು ಎಲ್ಲರ ಗಮನ ಸೆಳೆಯುವುದಕ್ಕೇನೋ ಎಂಬಂತೆ ತಮ್ಮ ಇರವನ್ನು ಪ್ರದರ್ಶಿಸಲು ಪ್ರಾರಂಭಿಸುತ್ತವೆ.
ಈ ತಿಂಗಳುಗಳಲ್ಲಿ ಒಣ ಕಾಡುಗಳಲ್ಲಿ ಮೂರು ಪ್ರಮುಖವಾದ ಮರಗಳು ಹೂಬಿಡುತ್ತವೆ. ಬೂರುಗ, ಮುತ್ತಗ ಮತ್ತು ಹಾಲು ವಾಣ. ಸೃಷ್ಟಿಯ ವೈಚಿತ್ರ ನೋಡಿ, ಮೂರೂ ಮರಗಳ ಹೂವುಗಳದ್ದೂ ವೈವಿಧ್ಯಮಯ ಕೆಂಪು. ಮುತ್ತಗದ ಹೂವು ದೂರದಿಂದ ಸಂಪೂರ್ಣ ಕೆಂಪು ಕಂಡರೂ ಅದು ಕ್ಯಾರೆಟ್‌ನ ಹಾಗೆ ಕೇಸರಿ ಮಿಶ್ರಿತ ಕೆಂಪು, ಬೂರುಗದ ಹೂವು ರಕ್ತದ ಹಾಗೆ ಕಡುಗೆಂಪು, ಹಾಲುವಾಣ ಮರದ ಹೂವುಗಳದ್ದಂತೂ ಹವಳವನ್ನು ನಾಚಿಸುವ ಕೆಂಪು ಬಣ್ಣ.
ಈ ಮೂರೂ ಮರಗಳು ಗುಂಪು ಗುಂಪಾಗಿ ಬೆಳೆಯುವುದಿಲ್ಲ. ಒಂದೊಂದು ಗಿಡಕ್ಕೂ ನೂರಾರು ಮೀಟರ್‌ನ ಅಂತರವಿರುತ್ತದೆ. ಹಾಗಾಗಿ ಕಾಡಿನ ಮಧ್ಯೆ ಕೆಂಪು ಕೆಂಪಾಗಿ, ನಾವು ಆಹಾರದ ಮೇಲೆ ಕೆಲವೊಮ್ಮೆ ಕಾಳು ಮೆಣಸಿನ ಪುಡಿಯನ್ನು ಉದುರಿಸಿಕೊಂಡ ಹಾಗೆ, ಈ ಮರಗಳು ನಾವು ಇಲ್ಲಿದ್ದೇವೆ ಎಂದು ತಮ್ಮ ಹೂವುಗಳ ಸುಂದರ ಬಣ್ಣಗಳನ್ನು ಪ್ರದರ್ಶಿಸಿ ಹೇಳುತ್ತವೆ. ಈ ಮರಗಳ ವೈಭವದಿಂದ ಕಾಡು ತನ್ನನ್ನು ತನ್ನ ಅತ್ಯುತ್ತಮ ಒಡವೆಗಳಿಂದ ಶೃಂಗರಿಸಿಕೊಂಡಿರಬಹುದೇ ಅನಿಸುತ್ತದೆ.
ಹತ್ತಿರ ಹೋದರೆ ಈ ಮರಗಳ ಭವ್ಯತೆ ನೋಡಲು ಕಾಣಸಿಗುತ್ತದೆ. ಒಂದೊಂದು ಎಲೆಗುತ್ತಿಗೂ ಒಂದೊಂದು ಹೂ ಗೊಂಚಲು. ಪ್ರತಿ ಹೂಗೊಂಚಲಿಗೂ ಒಂದೊಂದು ಬಗೆಯ ಪಕ್ಷಿಗಳು ಮುತ್ತಿಕೊಂಡಿರುತ್ತವೆ. ಕಾಡು ಗೊರವಂಕಗಳು, ಕಬ್ಬಕ್ಕಿ, ಪಿಕಳಾರಗಳು, ಹೊನ್ನಕ್ಕಿ, ಎಲೆಯಕ್ಕಿಗಳು, ಮಧುರಕಂಠ, ಸೂರಕ್ಕಿ ಹೀಗೆ ನಾಮುಂದು ತಾಮುಂದೆಂದು ಈ ಮರಗಳ ಹೂವಿನ ಮಕರಂದ ಹೀರಲು ಮತ್ತು ಅನ್ನದಾತೋ ಸುಖೀಭವ ಎನ್ನುವ ಹಾಗೆ ಮರಕ್ಕೆ ತಮ್ಮ ಪುಟ್ಟ ಕೊಡುಗೆಯಾಗಿ ಪರಾಗ ಸ್ಪರ್ಶ ಮಾಡಲು ಶಾಲಾ ಮೈದಾನದಲ್ಲಿ ಬಿಡುವಿಲ್ಲದೆ, ಉತ್ಸಾಹದಿಂದ ಆಡುತ್ತಿರುವ ಮಕ್ಕಳ ಹಾಗೆ ಹತ್ತಾರು ಪ್ರಭೇದದ ಪಕ್ಷಿಗಳು ಪ್ರಪಂಚವನ್ನೇ ಮರೆತು ಹಾರುತ್ತಿರುತ್ತವೆ. ಮರ ಮತ್ತು ಪಕ್ಷಿಗಳು ತಮ್ಮ ಮಧ್ಯೆ ಸಾವಿರಾರು ವರ್ಷಗಳಿಂದ ಬಂದಿರುವ ಅನ್ಯೋನ್ಯ ಸಂಬಂಧವನ್ನು ಮುಂದುವರಿಸುತ್ತಿರುತ್ತವೆ. ಆದರೆ ಈ ಮರಗಳಿಗೆ ಪಕ್ಷಿಗಳೇ ಹೆಚ್ಚಾಗಿ ಬರುತ್ತವೆ ಅನ್ನುವುದಕ್ಕೆ ಕಾರಣವಿದೆ. ಪಕ್ಷಿಗಳು ನೀಲಿ, ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳನ್ನು ನೋಡುವ ಶಕ್ತಿ ಹೊಂದಿವೆ. ಹಾಗಾಗಿ ಕೆಂಪು ಬಣ್ಣದ ಹೂ ಬಿಡುವ ಬೂರಗ, ಹಾಲುವಾಣ, ಮುತ್ತಗದ ಮರಗಳಿಗೆ ಪಕ್ಷಿಗಳೇ ಬಹುಮುಖ್ಯ.
ಇವುಗಳಲ್ಲಿ ಯಾವುದು ನನಗೆ ಹೆಚ್ಚು ಇಷ್ಟವಾದ ಮರವೆಂದು ಹೇಳಲು ಆಗದ ಸಂದಿಗ್ಧ ಪರಿಸ್ಥಿತಿ. ಆದರೆ ಇವುಗಳಲ್ಲಿ ಬೂರುಗ ಮರದ ಬಗ್ಗೆ ನಾಲ್ಕು ಪದ ಬರೆಯಬೇಕೆಂಬ ಆಕಾಂಕ್ಷೆ. ವೇದಕಾಲದಲ್ಲಿ ಋಷಿಗಳು ಇದಕ್ಕೆ ಶಾಲ್ಮಲೀ ವೃಕ್ಷವೆಂದು ಕರೆಯುತ್ತಿದ್ದರು. ಋಗ್ವೇದದ ಕಾಲದಲ್ಲಿ ವಧುವರರನ್ನು ಶಾಲ್ಮಲೀ ಮರದಿಂದ ತಯಾರಿಸಿದ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯವಿತ್ತಂತೆ. ಹಳ್ಳಿಗಳ ಮೇರೆಯನ್ನು ಸೂಚಿಸುವುದಕ್ಕಾಗಿಯೂ ಈ ಮರವನ್ನು ನೆಡುತ್ತಿದ್ದರು; ಎಂತಹ ಸೃಜನಶೀಲ ಆಲೋಚನೆ. ಈಗ ಹಾಕುವ “ಗ್ರಾಮ ಪಂಚಾಯತಿಯ ಸರಹದ್ದು ಪ್ರಾರಂಭ’ ಎಂಬ ಫಲಕಗಳಿಗಿಂತ ಎಷ್ಟು ಚೆನ್ನ.
ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಬೂರುಗ ಮರ ಸಿಗುವ ಇತರ ಪ್ರದೇಶಗಳಲ್ಲಿ ಈ ಮರದ ಬಗ್ಗೆ ಸಾಕಷ್ಟು ಸ್ಥಳೀಯ ಜನಪದ ನಂಬಿಕೆಗಳಿವೆ. ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಈ ಮರದಲ್ಲಿ ಆತ್ಮ, ಚೇತನಗಳಿವೆ ಎಂಬ ನಂಬಿಕೆಯಿರುವುದರಿಂದ ಇವನ್ನು ಯಾರೂ ಕಡಿಯುವುದಿಲ್ಲ. ಕಟ್ಟಡ, ಹೆ¨ªಾರಿಗಳ ಮಧ್ಯೆ ಬಂದರೂ ಕೂಡ ಈ ಮರಗಳನ್ನು ಕಡಿಯುವುದಿಲ್ಲವಂತೆ.
ಈ ಮರದ ಬೆಳವಣಿಗೆ ಹುಲುಸಾಗಿರುತ್ತದೆ ಹಾಗೂ ಇನ್ನೂರು ಅಡಿಯವರೆಗೂ ಬೆಳೆಯಬಲ್ಲದು. ರೆಂಬೆ ಕೊಂಬೆಗಳಿಲ್ಲದ 30-40 ಅಡಿ ಎತ್ತರದ ಬೂದು ಬಣ್ಣದ, ಉರುಳೆಯಾಕಾರದ ಕಾಂಡ, ಅದರ ಮೇಲೆ ಪ್ರತಿ ಗಿಣ್ಣಿಗೂ ಕವಲೊಡೆದು ಶಿಸ್ತಿನ ಸಿಪಾಯಿಗಳಂತೆ ಹೆಚ್ಚು ಕಡಿಮೆ ನೆಲಕ್ಕೆ ಸಮಾನಾಂತರವಾಗಿ ಹರಡಿ ನಿಂತಿರುವ ಕೊಂಬೆಗಳು. ಈ ಕೊಂಬೆಗಳ ತುದಿಯಲ್ಲಿ ಸುಂದರ ಹೂವುಗಳು. ಬಿ.ಜಿ.ಎಲ್. ಸ್ವಾಮಿಯವರು ಈ ಮರದ ಹೂವನ್ನು ತಮ್ಮ ಪುಸ್ತಕದಲ್ಲಿ ಅದ್ಭುತವಾಗಿ ವಿವರಿಸಿ¨ªಾರೆ. “”ಶಾಖೆಗಳ ಕೊನೆಗಳು ಅಚ್ಚಗೆಂಪು ಬಣ್ಣದ ಬಟ್ಟಲುಗಳಂತಿರುವ ಹೂಗಳಿಂದ ಅಲಂಕಾರಗೊಂಡು ಅಂಗೈಯಲ್ಲಿ ಕಡುಗೆಂಪು ದೀಪಗಳನ್ನು ಹಿಡಿದಿದ್ದ ಲಕ್ಷಿಯ ಭುಜಗಳಂತಿದ್ದವೆಂಬ ಜಾನಪದ ಉಪಮೇಯ ಔಚಿತ್ಯವೊ ಚಿತ್ರದಂತೆ ಕಣ್ಣಿಗೆ ಬಿದ್ದಿತ್ತು.” ಮರದ ಹೂವೊಂದರ ಬಗ್ಗೆ ಎಂತಹ ಸುಂದರ ವರ್ಣನೆ.
ಇದರ ಬಿಡಿ ಹೂವಿನ ರಚನೆ ವಿಶಿಷ್ಟವಾದದ್ದು. ದಪ್ಪವಾದ ತಿರುಳಿರುವ, ಎಂಟರಿಂದ ಹನ್ನೆರೆಡು ಸೆಂಟಿಮೀಟರ್ ಉದ್ದ ಇರುವ, ಐದು ದೊಡ್ಡ ದಳಗಳನ್ನೊಳಗೊಂಡ, ಬಟ್ಟಲಾಕಾರದ ಈ ಹೂವುಗಳ ಮಧ್ಯದಲ್ಲಿ ಗುಚ್ಚಿನಲ್ಲಿ ಎರಡು ಸುತ್ತಿನಲ್ಲಿ ಕೇಸರಗಳಿರುತ್ತವೆ. ಮೊದಲ ಸುತ್ತಿನಲ್ಲಿ ಯೋಗದಲ್ಲಿ ಹಸ್ತ ಉತ್ಥಾಸನ ಮಾಡಿದ ಹಾಗೆ, ಸ್ವಲ್ಪ ಹಿಂದಕ್ಕೆ ಬಾಗಿ ವೃತ್ತಾಕಾರದಲ್ಲಿ ಕೇಸರಗಳಿದ್ದರೆ, ಇನ್ನೊಂದು ಜೊತೆ ಕೇಸರಗಳು ಮೊದಲ ಕೇಸರಗಳ ಮಧ್ಯದಲ್ಲಿ ಗುಂಪಾಗಿ ನಮ್ಮ ಸರ್ಕಲ್‌ಗಳ ಮಧ್ಯೆ ನೀರಿನ ಕಾರಂಜಿಯಿರುವ ಹಾಗೆ ಉದ್ದವಾಗಿ ಹೂವಿನ ಮಧ್ಯೆ ನಿಂತಿರುತ್ತವೆ.
ಚಿಕ್ಕ ಪ್ರಾಯದ ಮರದ ಕಾಂಡದ ಮೇಲೆ ದಪ್ಪ ಶಂಖಾಕೃತಿಯ ಮುಳ್ಳುಗಳಿರುತ್ತವೆ. ಆದರೆ ಇವು ಮರಕ್ಕೆ ಪ್ರಾಯವಾದ ಹಾಗೆ ಕಾಣೆಯಾಗುತ್ತವೆ. ಆದರೆ ಈ ಮರದ ಕೊಂಬೆಗಳು ಹೂವಿನ ಹಾಗೆ ಅಷ್ಟೇನೂ ಕೋಮಲವಲ್ಲ. ಇವುಗಳ ಮೇಲೆ ಸದಾ ಮುಳ್ಳುಗಳಿರುತ್ತವೆ. ಸಪೋಟ ಮರದ ಎಲೆಗಳನ್ನು ಹೋಲುವ, ಬೆರಳುಗಳಂತೆ ಸೀಳಿರುವ ಬೂರುಗ ಮರದ ಪತ್ರೆಗಳೆÇÉಾ ಮರ ಹೂ ಬಿಟ್ಟಾಗ ಉದುರಿ ಹೋಗಿ ಈ ತರುವೆಲ್ಲ ಹೂ ಮಯವಾಗಿರುತ್ತದೆ.
ಈ ಮರದ ಕೆಂಪು ಬಣ್ಣದ ಹೂಗಳಿಗೆ ನಿಸರ್ಗವೊಂದೇ ಪೈಪೋಟಿ ಕೊಡಲು ಸಾಧ್ಯ ಎನ್ನುವಂತೆ ಇಲ್ಲಿಗೆ ಬರುವ ಹಕ್ಕಿಗಳ ಬಣ್ಣ ಕೂಡ ಬಹು ವೈವಿಧ್ಯಮಯ. ಈ ಹೂವಿನ ಬಣ್ಣಕ್ಕೆ ಬಹು ವ್ಯತಿರಿಕ್ತವಾಗಿರುವ ಗಾಢ ಹಸಿರುಬಣ್ಣದ ಚಿಟ್ಟುಗಿಳಿ, ರಾಜ್ಯದ ಬಾವುಟದಲ್ಲಿರುವ ಗಾಢ ಹಳದಿ ಬಣ್ಣವನ್ನು ಹೋಲುವ ಹೊನ್ನಕ್ಕಿ, ಕಾಗೆಗಿಂತಲೂ ಕಪ್ಪಿರುವ ಕಾಜಾಣ, ನಾನು ನಿನಗೇನೂ ಕಡಿಮೆಯಿಲ್ಲ ಎಂದು ಬೂರುಗ ಮರದ ಹೂವಿಗೆ ಪೈಪೋಟಿ ಕೊಡುವಂತೆ ಅದಕ್ಕಿಂತಲೂ ಗಾಢವಾದ ಕೆಂಪಿರುವ ಚಿತ್ರಪಕ್ಷಿ, ಹೀಗೆ ಇನ್ನೂ ಹಲವಾರು ಬಣ್ಣಗಳ ಸುಂದರ ಖಗಗಳು. ಈ ನಿಸರ್ಗದ ರಮಣೀಯತೆಯನ್ನು ಪ್ರತಿ ಬಾರಿ ನೋಡಿದಾಗಲೂ ಅದೇ ಮೊದಲ ಸಲ ನೋಡಿದಂತೆ ರೋಮಾಂಚನವಾಗುತ್ತದೆ.
ಹಕ್ಕಿಗಳು ಮಕರಂದ ಹೀರಲಷ್ಟೇ ಅಲ್ಲದೆ, ಹೆಚ್ಚು ಸಕ್ಕರೆಯ ಅಂಶವಿರುವ ಮಕರಂದಭರಿತ ಹೂವುಗಳಿಗೆ ಆಕರ್ಷಿತವಾಗಿ ಬರುವ ಹಲವಾರು ಜಾತಿಯ ಕ್ರಿಮಿಕೀಟಗಳನ್ನು ತಿನ್ನಲು ಸಹ ಬರುತ್ತವೆ. ಹೂವಿನಲ್ಲಿ ಸಕ್ಕರೆಯ ಅಂಶ ಶೇಖಡಾ 20ರಷ್ಟಿರುತ್ತದೆ ಎಂದು ವೈಜ್ಞಾನಿಕ ವರದಿಗಳು ತಿಳಿಸುತ್ತವೆ! ರವಿ ಮರೆಯಾಗಿ ಶಶಿ ಬಂದರೂ ಬೂರುಗ ಮರದ ಹೂವುಗಳಿಗೆ ಬಿಡುವೇ ಇರುವುದಿಲ್ಲ. ಇರುಳಿನಲ್ಲಿ ಬಾವಲಿಗಳು, ಹಾರುಬೆಕ್ಕುಗಳು ಲಗ್ಗೆಯಿಡುತ್ತವೆ. ಕುತೂಹಲಕಾರಿಯೆಂದರೆ ಹೂವು ಅರಳುವುದು ಮಧ್ಯರಾತ್ರಿಯೇ. ಹಾಗಾಗಿ ನಿಶಾಚಾರಿ ಪ್ರಾಣಿಗಳಿಗೆ ಇದರ ತಾಜಾ ಹೂವುಗಳನ್ನು ಆಸ್ವಾದಿಸುವ ಅವಕಾಶ. ಆದರೆ, ಅವು ಕೂಡ ಉಪ್ಪಿನ ಋಣವನ್ನು ಪರಾಗಸ್ಪರ್ಶ ಮಾಡುವ ಮೂಲಕ ತೀರಿಸುತ್ತವೆ. ಹಾಗಾಗಿ ಬೂರುಗ ಮರ ತನ್ನದೇ ಆದ ಒಂದು ಪುಟ್ಟ ಪ್ರಪಂಚವನ್ನೇ ಸಲು ಹುತ್ತದೆ. ಈ ಮರದ ಹೂವುಗಳನ್ನು, ಅದರ ಮೊಗ್ಗನ್ನು ತಿನ್ನಲು ಬರುವ ಮರದ ಇತರ ನೈಸರ್ಗಿಕ ಹಕ್ಕುದಾರರಾದ ಕೆಂದಳಿಲು, ಮುಚ್ಚ, ಕಪಿಗಳು ಇದರ ಸಣ್ಣ ರೆಂಬೆಗಳ ಮೇಲೆ ಇರುವ ಚೂಪಾದ ಮುಳ್ಳುಗಳನ್ನು ತಪ್ಪಿಸಿ ಅತೀ ಜಾಗರೂಕತೆಯಿಂದ ನಡೆಯು ವುದನ್ನು ನೋಡಿದಾಗ, ಹುಡುಗಿಯರು ಸೂಕ್ಷ¾ವಾಗಿ ಬ್ಯಾಲೆ ನರ್ತನ ಮಾಡಿದಂತೆ ಕಾಣುತ್ತದೆ.
ಈ ಮರದ ದೊಡ್ಡ ಕಾಯಿಯೊಳಗಿರುವ ಹತ್ತಿಯಿಂದ ತಲೆದಿಂಬು ತಯಾರಿಸುತ್ತಾರೆ. ಈ ಹತ್ತಿ ಎಷ್ಟು ಮೃದುವೆಂದರೆ ಬಿ.ಜಿ.ಎಲ….ಸ್ವಾಮಿಯವರು ಇದನ್ನು “”ಹಂಸತೂಲಿಕಾತಲ್ಪದಂತೆ ಮೃದುವಾದ ಹಾಸಿಗೆ ದಿಂಬುಗಳು” ಎಂದು ವರ್ಣಿಸುತ್ತಾರೆ. ಈ ಮರದ ಚೌಬೀನೆ ಮೆದುವಾಗಿರುವುದರಿಂದ, ಹಿಂದೆ ಬೆಂಕಿಯಕಡ್ಡಿ, ಬೆಂಕಿಪೊಟ್ಟಣ, ಕಾಗದ ಮಾಡಲು ಹಾಗೂ ಹಗುರವಾಗಿರುವುದರಿಂದ ಪ್ಲಯ…ವುಡ್ ಮಾಡಲು ಸಹ ಈ ಮರವನ್ನು ಯಥೇತ್ಛವಾಗಿ ಕಡಿಯಲಾಗಿದೆ.
ಬಿಳಿಗಿರಿರಂಗನಬೆಟ್ಟದÇÉೊಮ್ಮೆ ಬೂರುಗ ಮರದ ಕೆಳಗೆ ಐದಾರು ಸೋಲಿಗರು ಚಿಕ್ಕ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಏಕಾಗ್ರತೆಯಿಂದ ನೆಲವನ್ನೇ ನೋಡುತ್ತಾ ಏನೋ ಹುಡುಕುತ್ತಿದ್ದರು. ತಕ್ಷಣ ಹೊಳೆಯಿತು, ಬೂರಗ ಮರದ ಮೊಗ್ಗುಗಳನ್ನು ಹುಡುಕುತ್ತಿ¨ªಾರೆಂದು. ಅಲ್ಲಿದ್ದ ಸೋಲಿಗನೊಬ್ಬನಿಗೆ ನನಗೂ ಒಂದು ಮೊಗ್ಗು ಕೊಡಿ ಎಂದು ಕೇಳಿಕೊಂಡೆ. ಒಂದು ಕೇಳಿದರೆ ಉದಾರಿಯಾಗಿ ನಾಲ್ಕಾರು ಕೊಟ್ಟ. ಎಷ್ಟಕ್ಕೆ ಮಾರುತ್ತೀಯ? ಎಂದರೆ ನಗರದಲ್ಲಿ ಕೆ.ಜಿಗೆ ಐದುನೂರು ಕೊಡುತ್ತಾರೆ ಎಂದ. ಮರಾಠಿ ಮೊಗ್ಗು ಎಂದೇ ಪ್ರಚಲಿತವಾಗಿರುವ ಈ ಮರದ ಮೊಗ್ಗನ್ನು ಸಾಂಬ್ರಾಣಿ ಪದಾರ್ಥವಾಗಿ ಉಪಯೋಗಿಸಲಾಗುತ್ತದೆ. ಕರ್ನಾಟಕದಲ್ಲಿ ಸ್ಥಳೀಯವಾಗಿ ಬೆಳೆಯುವ ಈ ಮರದ ಮೊಗ್ಗಿಗೆ ಮರಾಠಿ ಮೊಗ್ಗು ಎಂಬ ಹೆಸರು ಅಪಾರ್ಥ ಕೊಡುತ್ತದೆ. ಆದರೂ ಕನ್ನಡನಾಡಿನ ಸ್ಥಳೀಯ ಬಿಸಿಬೇಳೆಬಾತ್, ಕನ್ನಡ ಶೈಲಿಯ ಕೂಟುಗಳಲ್ಲಿ, ಸಾರಿನ ಪುಡಿಗಳಲ್ಲಿ ಇದನ್ನು ಉಪಯೋಗಿಸುವುದಕ್ಕೆ ಇದರ ಹೆಸರೇನೂ ಅಡ್ಡ ಬಂದಿಲ್ಲ.
ಮಾರ್ಚ್ ಕೊನೆಯ ಹೊತ್ತಿಗೆ ಈ ಮರಗಳ ಸುಂದರ ರೂಪಾಂತರ ಗತವೈಭವಾಗಿಬಿಡುತ್ತದೆ. ಆದರೆ ಇನ್ನು ಹತ್ತು ತಿಂಗಳುಗಳ ನಂತರ ಪ್ರಕೃತಿಯು ಯಾರು ನೋಡಲಿ ನೋಡದಿರಲಿ, ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಹಾಗೆ “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಎನ್ನುವಂತೆ ಮತ್ತೆ ತನ್ನ ವೈಭವನ್ನು ತೆರೆದಿಡುತ್ತದೆ. ಇಂತಹ ದೃಶ್ಯಗಳನ್ನು ಅದೆಷ್ಟೋ ವರ್ಷಗಳು ಸವಿದ ಪ್ರಪಂಚದ ಕೆಲವರಲ್ಲಿ ನಾನೂ ಒಬ್ಬ ಎಂಬುದರ ಬಗ್ಗೆ ನನಗೆ ಹೆಮ್ಮೆ, ಸಂತೋಷವಿದೆ.
– ಸಂಜಯ್ ಗುಬ್ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Kundapura: ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯ ಶವ ಪತ್ತೆ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Kundapura: ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯ ಶವ ಪತ್ತೆ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.