Road Mishap ಉಚ್ಚಿಲ: ಅಪರಿಚಿತ ವಾಹನ ಢಿಕ್ಕಿ; ಕಾರ್ಮಿಕ ಸಾವು
Team Udayavani, Jan 14, 2025, 9:32 PM IST
ಪಡುಬಿದ್ರಿ: ಬಡಾ ಗ್ರಾಮದ ಉಚ್ಚಿಲ ಮಸೀದಿ ಬಳಿ ಮಂಗಳೂರು-ಉಡುಪಿ ರಾ.ಹೆ. 66ರಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ಹಾವೇರಿ ಜಿಲ್ಲೆ, ಹಾನಗಲ್ ಮೂಲದ ಕಾರ್ಮಿಕ ಮಂಜಪ್ಪ ಕರಿಬಸಣ್ಣವರ್ (54) ದಾರುಣ ಅಂತ್ಯ ಕಂಡಿದ್ದಾರೆ.
ಹೆದ್ದಾರಿ ದುರಂತಗಳಿಗೆ ಸಾಲು ಸಾಲು ಮಂದಿ ಬಲಿಯಾಗುತ್ತಿದ್ದಾರೆ. ಈ ಅಪಘಾತದ ಕುರಿತು ರಾಷ್ಟ್ರೀಯ ಹೆದ್ದಾರಿ 66ರ ಯೋಜನ ನಿರ್ದೇಶಕ ಹಾಗೂ ಕೆಕೆಆರ್ ಟೋಲ್ ಪ್ರಬಂಧಕರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಢಿಕ್ಕಿಯಾದ ವಾಹನ ಚಾಲಕನ ಅತೀವೇಗ ಅಜಾಗ್ರತೆಯ ಜಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಆತ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಇತ್ತ ರಸ್ತೆ ಮಧ್ಯೆಯೇ ಬಿದ್ದಿದ್ದ ಗಾಯಾಳು ಮಂಜಪ್ಪ ಅವರ ದೇಹದ ಮೇಲೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರಿದು ಹೋಗಿದೆ. ಸಮೀಪದಲ್ಲೇ ಇದ್ದ ಮಸೀದಿಯೊಂದರಲ್ಲಿ ಪ್ರಾರ್ಥನ ನಿರತರಾಗಿದ್ದ ಮಂದಿ ಹೆದ್ದಾರಿಯತ್ತ ಬಂದು ನೋಡಿದಾಗಲಷ್ಟೇ ಅಪಘಾತದ ಕುರಿತಾಗಿ ತಿಳಿದುಬಂದಿದೆ. ಆ ಹೊತ್ತಿಗಾಗಲೇ ಗಾಯಾಳುವಿನ ದೇಹವು ಛಿದ್ರಛಿದ್ರವಾಗಿತ್ತು ಎಂದು ಪ್ರತ್ಯಕ್ಷದರ್ಶಿ ಸಿರಾಜುದ್ದೀನ್ ಪೊಲೀಸರಿಗಿತ್ತ ದೂರಲ್ಲಿ ತಿಳಿಸಿದ್ದಾರೆ.
ಮಂಜಪ್ಪ ಅವರು ಹೊಟೇಲ್ ಕಾರ್ಮಿಕನಾಗಿ ದುಡಿಯುತ್ತಿದ್ದು, ಮೂರ್‍ನಾಲ್ಕು ದಿನಗಳಿಂದ ಉಚ್ಚಿಲ ಪರಿಸರದಲ್ಲೇ ತಿರುಗಾಡುತ್ತಿದ್ದರು ಎಂದು ಹೇಳಲಾಗಿದೆ. ಮೃತ ಮಂಜಪ್ಪ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ದೇಹವನ್ನು ಸಂಬಂಧಿಕರು ಹಾನಗಲ್‌ಗೆ ಒಯ್ದಿದ್ದಾರೆ.
ಕುಲಗೆಟ್ಟ ಹೆದ್ದಾರಿ ವ್ಯವಸ್ಥೆ
ಹೆದ್ದಾರಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಿಲ್ಲ. ಬ್ಲಿಂಕರ್ ಆಗಲೀ, ಸಿಗ್ನಲ್ ಲೈಟ್‌ಗಳನ್ನಾಗಲೀ ಹೆದ್ದಾರಿ ಡಾಮರೀಕರಣದ ಬಳಿಕ ಇನ್ನೂ ಅಳವಡಿಸಲಾಗಿಲ್ಲ. ಟೋಲ್ ಅಧಿಕಾರಿಗಳಿಗಲೀ, ಹೆದ್ದಾರಿ ಸುರಕ್ಷೆಯ ಬಗೆಗೆ ಎನ್‌ಎಚ್‌ಎಐ ಅಧಿಕಾರಿಗಳಾಗಲೀ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ 2025ರ ಎರಡು ಹೆದ್ದಾರಿ ಮಾರಣಾಂತಿಕ ಅಪಘಾತಗಳ ಬಳಿಕವೂ ಎಚ್ಚರಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ದಿನಗಳೊಳಗೆ ಸರಿಪಡಿಸದಿದ್ದರೆ ಹೆದ್ದಾರಿ ತಡೆ
ಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ಸಕಾಲಿಕ ತುರ್ತು ಕ್ರಮಗಳನ್ನು ಮುಂದಿನ ಎರಡು ದಿನಗಳಲ್ಲಿ ಕೈಗೊಳ್ಳದಿದ್ದಲ್ಲಿ ಜ. 20ರಂದು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸುವುದಾಗಿ ಘಟನೆಯ ಕುರಿತಾಗಿ ರೊಚ್ಚಿಗೆದ್ದಿರುವ ಉಚ್ಚಿಲದ ಹೆದ್ದಾರಿ ಹೋರಾಟ ಸಮಿತಿ ಮಂಗಳವಾರ ಪಡುಬಿದ್ರಿ ಪೊಲೀಸರ ಸಮಕ್ಷಮ ಹೆದ್ದಾರಿ ಅಧಿಕಾರಿಗಳಿಗೆ ಮನವಿಯೊಂದನ್ನು ಹಸ್ತಾಂತರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.