ಅಧ್ಯಯನಕ್ಕೆ ಸಿಗಲಿ ಮಾನ್ಯತೆ; ವಿಶ್ವವಿದ್ಯಾನಿಲಯಗಳಲ್ಲಿ ಹೆಸರಿಗಷ್ಟೇ ಅಧ್ಯಯನ ಪೀಠ
ಕೇವಲ ಸಮಾರಂಭ, ವಿಚಾರ ಸಂಕಿರಣಕ್ಕಷ್ಟೇ ಸೀಮಿತ
Team Udayavani, Jan 29, 2022, 7:05 AM IST
ಬೆಂಗಳೂರು: ಇತಿಹಾಸ ಮತ್ತು ವರ್ತಮಾನದ ಪ್ರಸಿದ್ಧ ವ್ಯಕ್ತಿಗಳಿಗೆ ಗೌರವ ನೀಡುವ ಸಲುವಾಗಿ ಬಹುತೇಕ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಅಧ್ಯಯನ ಪೀಠ ರಚಿಸಿದ್ದು, ಇವು ಯಾರಿಗೂ ಬೇಡವಾದ ಕೇಂದ್ರಗಳಾಗಿ ಮಾರ್ಪಟ್ಟಿವೆ!
ವಿವಿಗಳ ಅಧ್ಯಯನ ಪೀಠಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ಉದಯವಾಣಿ ರಿಯಾಲಿಟಿ ಚೆಕ್ ನಡೆಸಿದ್ದು, ನೈಜತೆ ಅನಾವರಣಗೊಂಡಿದೆ.
ನಾಡು-ನುಡಿಗೆ ಸಾರ್ಥಕ ಸೇವೆ ಸಲ್ಲಿಸಿದವರ ಆದರ್ಶ ಗಳನ್ನು ಮುಂದಿನ ಜನಾಂಗಕ್ಕೆ ರವಾನಿ ಸುವ ಉದ್ದೇಶದಿಂದ ಇಂಥ ಪೀಠಗಳನ್ನು ಸ್ಥಾಪಿಸಲಾಗಿದೆ. ಆದರೆ, ಬಹುತೇಕ ಪೀಠಗಳು ನಿಷ್ಕ್ರಿಯವಾಗಿವೆ. ಗಾಂಧೀಜಿಯಿಂದ ಹಿಡಿದು, ಬಸವಣ್ಣ, ಕುವೆಂಪು, ಡಾ| ಅಂಬೇಡ್ಕರ್, ಡಾ| ರಾಜ್‌ಕುಮಾರ್ ಸಹಿತ ಹಲವಾರು ಸಾಧಕರ ಹೆಸರಿನ ಪೀಠಗಳಿವೆ. ಕೆಲವು ಪೀಠಗಳು ಕೊಂಚ ಸಕ್ರಿಯವಾಗಿದ್ದರೆ, ಕೆಲವಕ್ಕೆ ಹಣವನ್ನೇ ನೀಡಿಲ್ಲ. ಕೆಲವುಗಳಿಗೆ ವಿದ್ಯಾರ್ಥಿಗಳೇ ಇಲ್ಲ. ಬಹುತೇಕ ಪೀಠಗಳು ಉಪನ್ಯಾಸ ಮತ್ತು ಜಯಂತಿಗಳಿಗೆ ಸೀಮಿತವಾಗಿವೆ.
ಕಾರ್ಯನಿರ್ವಹಣೆ ಹೇಗೆ?
ವಿವಿಗಳಲ್ಲಿನ ಅಧ್ಯಯನ ಪೀಠಗಳಿಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ. ಅಂದರೆ ಇದು ವಾರ್ಷಿಕ ಅನುದಾನವಲ್ಲ. ಅಧ್ಯಯನ ಪೀಠ ಆರಂಭಿಸುವ ವೇಳೆ ಮಾತ್ರ ಇಂತಿಷ್ಟು ಎಂದು ನೀಡುತ್ತದೆ. ಇದನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, ಬಂದ ಆದಾಯದಲ್ಲಿ ಪೀಠಗಳ ನಿರ್ವಹಣೆ ಮಾಡಬೇಕಾಗೆದೆ. ಹೆಚ್ಚು ಹಣವಿರುವ ಪೀಠಗಳಲ್ಲಿ ಆರ್ಥಿಕ ಸಮಸ್ಯೆ ತಲೆದೋರಲ್ಲ. ಇತರೆಡೆ ಸಮಸ್ಯೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಸಂಶೋಧನೆಗೂ ಆರ್ಥಿಕ ಸಹಾಯ ನೀಡಲಾಗುತ್ತಿಲ್ಲ.
ಯಾರ್ಯಾರ ಹೆಸರಲ್ಲಿ ಅಧ್ಯಯನ ಪೀಠ?
ರಾಜ್ಯದ ವಿವಿಗಳಲ್ಲಿ ಆ ಭಾಗದ ಪ್ರಮುಖ ವ್ಯಕ್ತಿಗಳು, ಸಂಸ್ಕೃತಿಗೆ ಸಂಬಂಧಿಸಿದ ಪೀಠಗಳು ರಚನೆಯಾಗಿವೆ. ಅಂದರೆ, ಮಂಗಳೂರು ವಿವಿಯಲ್ಲಿ ಯಕ್ಷಗಾನ, ತುಳು, ಕೊಂಕಣಿ, ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನ, ಕುವೆಂಪು ವಿವಿಯಲ್ಲಿ ಡಾ| ರಾಜಕುಮಾರ್, ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಹಂಪಿ ವಿವಿಯಲ್ಲಿ ದಲಿತ ಸಂಸ್ಕೃತಿ, ಸಮಗ್ರ ದಾಸಸಾಹಿತ್ಯ, ಜೈನ ಸಂಸ್ಕೃತಿ, ಹಾಲುಮತದ ಸಂಸ್ಕೃತಿ, ಎಚ್‌ಕೆಡಿಬಿ, ಬೆಂಗಳೂರಿನಲ್ಲಿ ಯೋಗ ಅಧ್ಯಯನ, ಮೈಸೂರಿನಲ್ಲಿ ಸಿದ್ದಪ್ಪಾಜಿ, ರಾಜಪ್ಪಾಜಿ, ಯೋಜನ ಆಯೋಗ, ಟಿಪ್ಪು ಸುಲ್ತಾನ್ ಪೀಠಗಳನ್ನು ರಚಿಸಲಾಗಿದೆ. ಇದರ ಜತೆಗೆ, ಬಹುತೇಕ ವಿವಿಗಳಲ್ಲಿ ಗಾಂಧೀಜಿ, ಬಾಬು ಜಗಜೀವನ್ ರಾಂ, ಡಾ| ಬಿ.ಆರ್. ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ಗೌತಮ ಬುದ್ಧ, ನಾಡಪ್ರಭು ಕೆಂಪೇಗೌಡ, ಬಸವೇಶ್ವರ ಅವರ ಅಧ್ಯಯನ ಪೀಠಗಳಿವೆ.
ಅನುದಾನ ನೀಡಲಿ
ಬಹುತೇಕ ಎಲ್ಲ ವಿವಿಗಳ ಕುಲಪತಿಗಳು ಹೇಳುವ ಮಾತು ಒಂದೇ. ನಾವು ಅಧ್ಯಯನ ಪೀಠಗಳನ್ನು ಸಕ್ರಿಯವಾಗಿಟ್ಟುಕೊಳ್ಳಬೇಕಾದರೆ, ರಾಜ್ಯ ಸರಕಾರ ಧನಸಹಾಯ ಮಾಡಬೇಕು ಎಂಬುದು. ಅಧ್ಯಯನ ಪೀಠಗಳನ್ನು ಸ್ಥಾಪಿಸಿ, ಹಣವನ್ನೇ ನೀಡುವುದಿಲ್ಲವೆಂದಾದರೆ ಸಕ್ರಿಯವಾಗಿ ಇರಿಸಿಕೊಳ್ಳುವುದು ಹೇಗೆ? ಅಲ್ಲದೆ, ಬಹುತೇಕ ವಿವಿಗಳು, ವೆಚ್ಚದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕಾಗಿ ಕಾಯುತ್ತಿವೆ.
ಯಾಕೆ ವಿದ್ಯಾರ್ಥಿಗಳ ಅಸಡ್ಡೆ?
ಸಾಮಾನ್ಯವಾಗಿ ಅಧ್ಯಯನ ಪೀಠಗಳಿಗೆ ವಿದ್ಯಾರ್ಥಿಗಳು ಬರುವುದಿಲ್ಲ. ಇಲ್ಲಿ ಹೆಚ್ಚಾಗಿ ಸಂಶೋಧಕರೇ ಹೆಚ್ಚಾಗಿ ಸೇರ್ಪಡೆಯಾಗುತ್ತಾರೆ. ಅಂದರೆ, ಒಮ್ಮೆ ಪ್ರಾಧ್ಯಾಪಕರಾಗಿ ಅಥವಾ ಉಪನ್ಯಾಸಕರಾಗಿ ಸೇರಿದ ಬಳಿಕ ಕುವೆಂಪು, ಗಾಂಧೀಜಿ, ಅಂಬೇಡ್ಕರ್ ಸಹಿತ ಮಹನೀಯರ ಇಡೀ ಜೀವನವನ್ನು ಅಧ್ಯಯನ ಮಾಡುವ ಸಲುವಾಗಿ ಸೇರ್ಪಡೆಯಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಸೇರುವವರ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ.
ಯಾವ ವಿವಿಗಳಲ್ಲಿ ಎಷ್ಟು ಅಧ್ಯಯನ ಪೀಠ?
ಮಂಗಳೂರು 20
ಕುವೆಂಪು 20
ಬೆಂಗಳೂರು 19
ಮೈಸೂರು 17
ತುಮಕೂರು 14
ಕರ್ನಾಟಕ ವಿವಿ 13
ಹಂಪಿ 12
ಗುಲ್ಬರ್ಗ ವಿವಿ 11
ಅಕ್ಕಮಹಾದೇವಿ 09
ದಾವಣಗೆರೆ 05
ವಿಜಯನಗರ 03
ರಾಣಿ ಚೆನ್ನಮ್ಮ ವಿವಿ 04
ಸಮಸ್ಯೆಗಳೇನು?
1.ಅನುದಾನದ ಕೊರತೆ
2.ಸಂಶೋಧನೆಗೆ ಸಿಗದ ಪೂರಕ ಸೌಲಭ್ಯ
3.ಜಾತಿ ಕೇಂದ್ರಿತವಾಗಿ ಪೀಠಗಳ ರಚನೆ
4.ವಿದ್ಯಾರ್ಥಿಗಳ ನಿರಾಸಕ್ತಿ
5.ಅಧ್ಯಾಪಕರ ಕೊರತೆ
6.ಸ್ವಂತ ಕಟ್ಟಡಇಲ್ಲದಿರುವುದು
ಮಂಗಳೂರಿನಲ್ಲಿ 20 ಪೀಠ
ಮಂಗಳೂರು ವಿವಿಯಲ್ಲಿ 20 ಪೀಠಗಳಿವೆ. ಸಾಹಿತ್ಯದಿಂದ ಪರಿಸರದವರೆಗೆ, ಭಾಷೆಯ ಅಧ್ಯಯನದಿಂದ ಯಕ್ಷಗಾನದವರೆಗೂ ವಿಸ್ತಾರ ಹೊಂದಿದೆ. ಇಲ್ಲಿಗೂ ಪೂರ್ಣ ಅನುದಾನದ ಕೊರತೆಯಿದೆ.
ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಪೀಠ-
-ದಾವಣಗೆರೆ ವಿವಿಯ ಬಾಬು ಜಗಜೀವನ್ ರಾಂ ಮತ್ತು ಸರ್ವಜ್ಞ ಪೀಠ – ಪ್ರತೀ ವರ್ಷ 80-100 ವಿದ್ಯಾರ್ಥಿಗಳು
-ಮಂಗಳೂರು ವಿವಿಯ ಯಕ್ಷಗಾನ ಸಹಿತ ಕೆಲವು ಪೀಠಗಳು- ಪ್ರತೀ ವರ್ಷ 25 ವಿದ್ಯಾರ್ಥಿಗಳು
ಅಧ್ಯಯನ ಪೀಠಗಳಿಗೆ ಅನುದಾನ ಕಡಿಮೆಯಿದೆ. ಹಾಗಾಗಿ ಬಡ್ಡಿ ಹಣದಲ್ಲಿ ಜಯಂತಿ, ಪುಸ್ತಕಗಳ ಪ್ರಕಟನೆ ಇನ್ನಿತರ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
-ಸ.ಚಿ. ರಮೇಶ್, ಕುಲಪತಿ,
ಹಂಪಿ ಕನ್ನಡ ವಿವಿ, ಹೊಸಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.