ಹುಡುಕಾಟದಲ್ಲೇ ಬಡವಾದ ಯೋಜನೆ! 2015ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ
Team Udayavani, Jan 8, 2021, 5:10 PM IST
ಸಿಂಧನೂರು: ಬರೋಬ್ಬರಿ ಹದಿನಾರು ವರ್ಷದಿಂದ ಇಲ್ಲಿನ ನಗರಸಭೆ ಆಡಳಿತ ಮಂಡಳಿ ವಾಜಪೇಯಿ ನಗರ ವಸತಿ ಯೋಜನೆಯಡಿ ನಿವೇಶನ ಕಲ್ಪಿಸಲು ಅರ್ಹರನ್ನು ಹುಡುಕುತ್ತಲೇ ಇದೆ. ಆದರೆ, 2021ಕ್ಕೂ ಪಟ್ಟಿ ಅಂತಿಮವಾಗಿಲ್ಲ. 2015-16ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಿದ್ದ ಯೋಜನೆಯೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮೂಲೆಗುಂಪಾಗಿದೆ.
ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗುವ ನಗರ ಆಶ್ರಯ ಸಮಿತಿಗೆ ಅರ್ಹರನ್ನು ಹುಡುಕುವುದೇ ದೊಡ್ಡ ಸವಾಲು ಎಂಬಂತಾಗಿದೆ. ನಗರ ಪ್ರದೇಶದಲ್ಲಿ ವಾಸವಿದ್ದರೂ ಸ್ವಂತಕ್ಕೊಂದು ಜಾಗ ಹೊಂದಿಲ್ಲದ ಬಡವರಿಂದ 6 ವರ್ಷದ ಹಿಂದೆಯೇ ಅರ್ಜಿ ಆಹ್ವಾನಿಸಲಾಗಿತ್ತು. ತಮ್ಮ ದಾಖಲೆಯೊಂದಿಗೆ ನಿಗದಿತ ಅರ್ಜಿಗಳನ್ನು ತುಂಬಿದ ನಿವೇಶನ ರಹಿತರು ಜಾಗದ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ.
ಶಾಸಕರು ಬದಲಾಗುತ್ತಿದ್ದಂತೆ ನಗರ ಆಶ್ರಯ ಸಮಿತಿಯ ಅಧ್ಯಕ್ಷರು ಬದಲಾಗುತ್ತಾರೆ. ಹಾಗೆ, ಪಟ್ಟಿ ಪರಿಷ್ಕರಣೆಯೂ ಮುಂದುವರಿಯುತ್ತದೆ. ಇದರ ಪರಿಣಾಮ ಅರ್ಹರನ್ನು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಪಾಸಾಗಲು ನಗರಸಭೆ ಮತ್ತೂಮ್ಮೆ ಸಮೀಕ್ಷೆಯ ಮೊರೆ ಹೋಗಿದೆ.
ಇದನ್ನೂ ಓದಿ:ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆ ಏರಿಕೆ, ನಿಫ್ಟಿ ಸಾರ್ವಕಾಲಿಕ ದಾಖಲೆ
ಏನಿದು ವ್ಯಸನ?: ಮಾರ್ಚ್ 3, 2018ರಂದು ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ವಾಜಪೇಯಿ ನಗರ ವಸತಿ ಯೋಜನೆಗೆ ಸಂಬಂಧಿ ಸಿ ಚರ್ಚಿಸಿ, ಕೆಲವು ಮಾರ್ಪಾಡಿಗೆ ಸೂಚಿಸಲಾಗಿತ್ತು. ಅಲ್ಲಿಗೆ 3,336 ಅರ್ಜಿ ಸಲ್ಲಿಕೆಯಾಗಿದ್ದರೆ, 1,813 ಫಲಾನುಭವಿಗಳು ಅರ್ಹವೆಂದು ಹೇಳಲಾಗಿತ್ತು. ಸೆಪ್ಟೆಂಬರ್ 29, 2018ರ ಸಭೆಯಲ್ಲಿ ಮತ್ತೆ ಅರ್ಜಿ ಆಹ್ವಾನಿಸಿ, ಮರುಸಮೀಕ್ಷೆ
ನಡೆಸಲು ಸೂಚಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.
ಅರ್ಜಿದಾರರ ಸಂಖ್ಯೆ 5,826ಕ್ಕೆ ಏರಿಕೆಯಾದ ಮೇಲೆ ಅದರಲ್ಲಿ ಅರ್ಹರನ್ನು ಶೋಧಿಸಲು ಮತ್ತೆ ದುರ್ಬೀನು ಹಿಡಿದು ಹೊರಡಲಾಗುತ್ತಿದೆ. ವಾಜಪೇಯಿ ನಗರ ವಸತಿ ಯೋಜನೆಯಡಿ 600 ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು ಮುಂದಾದ ಸರಕಾರದ ಯೋಜನೆ, ಮತ್ತೆ ಪರೀಕ್ಷೆಗೆ ಒಳಪಟ್ಟಿದೆ. ಇದೀಗ ನಗರಸಭೆ ಸಿಬ್ಬಂದಿ ಅರ್ಜಿದಾರರ ವಿಳಾಸಕ್ಕೆ ತೆರಳಿ ಅವರನ್ನು ಅರ್ಹ-ಅನರ್ಹರೆಂದು ಪತ್ತೆ ಹಚ್ಚಲು ಆರಂಭಿಸಿದ್ದಾರೆ.
ಸರಕಾರದ ಬೊಕ್ಕಸಕ್ಕೆ ಹೊರೆ: ಆಯಾ ವರ್ಷ ಇಲ್ಲವೇ ತಾಂತ್ರಿಕ, ಆಡಳಿತಾತ್ಮಕ ತೊಡಕುಗಳಿದ್ದರೆ ಮುಂದಿನ ವರ್ಷಕ್ಕಾದರೂ ಪರಿಹರಿಸಿಕೊಳ್ಳಬೇಕು. ಆದರೆ, ನಗರದಲ್ಲಿ ವಸತಿ ಕಲ್ಪಿಸುವ ಯೋಜನೆಗೆ ಅಂತಹ ಯೋಗ ಕೂಡಿಬಂದಿಲ್ಲ. ಬಪ್ಪೂರು ರಸ್ತೆಯಲ್ಲಿ ವಸತಿ ಯೋಜನೆಗಾಗಿ ಸರಕಾರದಿಂದ 18.12 ಎಕರೆ ಜಮೀನು ಖರೀದಿಸಲಾಗಿದೆ. ಕನಕದಾಸ ಕಾಲೇಜ್ ಸಮೀಪದಲ್ಲಿ 11 ಎಕರೆ ಜಮೀನು ಖರೀದಿಸಲಾಗಿದೆ. ನಗರದ ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದಲೇ ಈ ಎಲ್ಲ ಜಮೀನುಗಳಿಗೆ ಮಾರುಕಟ್ಟೆ ದರ ಆಧರಿಸಿ ಸರಕಾರದಿಂದ ಖರೀದಿಸಲಾಗಿದೆ. ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಖರ್ಚು ಬಿದ್ದಿದೆ. ಅದರ ಪ್ರಯೋಜನ ಜನರಿಗೆ ತಲುಪಿಲ್ಲ.
ಬೇಕಾದಷ್ಟು ಸರಕಾರಿ ಸುಪರ್ದಿಯಲ್ಲಿರುವ ಜಮೀನು ಲಭ್ಯವಿದೆ. ಅರ್ಹರನ್ನು ಗುರುತಿಸಿ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಮಾತ್ರ ಕಬ್ಬಿಣದ ಕಡಲೆಯಾಗಿದೆ. ಆಂತರಿಕವಾಗಿ ಏರ್ಪಟ್ಟಿರುವ ರಾಜಕೀಯ ಸಂಘರ್ಷವೇ ಈ ವಿಳಂಬ ನೀತಿಗೆ
ಕಾರಣವೆಂಬ ಮಾತು ಕೇಳಿಬಂದರೂ ನಗರಸಭೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ಹೊಸದಾಗಿ ಅರ್ಜಿ ಹಾಕುವುದಕ್ಕೆ ಅವಕಾಶವಿಲ್ಲ; ಹಾಕಿರುವ ಹಳೇ ಅರ್ಜಿಗಳನ್ನು ಇತ್ಯರ್ಥಪಡಿಸುವುದಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎನ್ನುವುದೇ ನಿರಾಶ್ರಿತರ ಪ್ರಶ್ನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.