ವಯೋವೃದ್ಧನ ಹಕ್ಕು ಚಲಾಯಿಸಿದ ಮತಗಟ್ಟೆ ಅಧಿಕಾರಿ!
ರಾಜಕೀಯ ಮುಖಂಡರ ಕೆಂಗಣ್ಣಿಗೆ ಗುರಿಯಾದ ಅಧಿಕಾರಿ
Team Udayavani, Apr 24, 2019, 11:43 AM IST
ಕಕ್ಕೇರಾ: ಮತದಾನ ಮಾಡಬೇಕಾದ ವಯೊವೃದ್ಧರೊಬ್ಬರ ಮತದಾನದ ಹಕ್ಕನ್ನು ಮತಗಟ್ಟೆ ಅಧಿಕಾರಿಯೇ ಚಲಾಯಿಸಿದ ಪ್ರಸಂಗ ನಡೆದಿದೆ.
ಸುರಪುರ ತಾಲೂಕು ಕಕ್ಕೇರಾ ಪುರಸಭೆ ವ್ಯಾಪ್ತಿಯ ಬೂದನೂರ ದೊಡ್ಡಿ ಮತಗಟ್ಟೆ ಸಂಖ್ಯೆ 253ರಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ.
ಸಂತೋಷ ಎಂಬಾತ ಮತ್ತೂಬ್ಬರ ಹಕ್ಕು ಚಲಾಯಿಸಿ ಪೇಚಿಗೆ ಸಿಲುಕಿದ ಮತಗಟ್ಟೆ ಅಧಿಕಾರಿ. ಬಸಣ್ಣ ಕಿಲ್ಲಾರಿ ಎಂಬುವವರು ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದಿದ್ದರು. ಸಂಪೂರ್ಣ ವಿವರ ದಾಖಲಿಸಿಕೊಂಡ ನಂತರ ಮತ ಚಲಾಯಿಸಲು ಮತಯಂತ್ರ ಎಲ್ಲಿದೆ ಎಂದು ಬಸಣ್ಣ ಅಧಿಕಾರಿ ಸಂತೋಷ ಅವರನ್ನು ಕೇಳಿದರು. ಸಂತೋಷ ಮತಯಂತ್ರ ತೋರಿಸಿ ದೂರ ಸರಿಯದೇ ಯಂತ್ರದಲ್ಲಿ ಬಟನ್ ಒತ್ತಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಬಳಿಕ ಸಂತೋಷ ಮತ ಚಲಾಯಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಗುಂಡಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಸಂತೋಷ. ಸರಿಯಾಗಿ ಕರ್ತವ್ಯ ನಿಭಾಯಿಸಬೇಕಾದ ಅವರು ಮತ್ತೂಬ್ಬರ ಮತ ಚಲಾಯಿಸಿ ರಾಜಕೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನೊಬ್ಬರ ಮತ ಚಲಾಯಿಸುವುದು ದೇಶದ ಯಾವುದೇ ಕಾನೂನಿನಲ್ಲಿ ಇಲ್ಲ. ಅಲ್ಲದೆ ಒಬ್ಬ ಅಧಿಕಾರಿ ಕರ್ತವ್ಯದಲ್ಲಿ ತನ್ನ ಕೆಲಸ ನಿಭಾಯಿಸಬೇಕು. ಆದರೆ ಅವರು ಕರ್ತವ್ಯ ಲೋಪ ಎಸಗಿರುವುದು ಇಲ್ಲಿನ ವಿವಿಧ ರಾಜಕೀಯ ನಾಯಕರ ಆಕ್ಷೇಪಕ್ಕೆ ಕಾರಣವಾಗಿದೆ.
ಮತಯಂತ್ರ ತೋರಿಸು ಎಂದಿದ್ದು ತಪ್ಪಾಯಿತಾ?: ನನ್ನ ಸ್ವಲ್ಪ ದೃಷ್ಟಿ ಮಂಜ ಆಗಿದ್ದರೂ ಕಾಣಿಸುತ್ತದೆ. ನಾನೇ ನನ್ನ ಮತದಾನದ ಹಕ್ಕು ಚಲಾಯಿಸಲು ಬಂದಿದ್ದೆ. ಆದರೆ ಮತಯಂತ್ರ ಎಲ್ಲಿದೆ ತೋರಿಸು ಎನ್ನುವುದೇ ತಡ ನನಗಿಂತ ಮೊದಲು ಆತನೇ ಬಟನ್ ಒತ್ತಿ ಬಿಟ್ಟ. ಹೀಗಾಗಿ ಮತಯಂತ್ರ ತೋರಿಸು ಎಂದು ಕೇಳಿದ್ದೆ ತಪ್ಪಾಯಿತೆ? ಈಗ ನಾನೇನು ಮಾಡಬೇಕು| ಈ ರೀತಿಯೂ ಅಧಿಕಾರಿಗಳು ರಾಜಕೀಯ ಪಕ್ಷಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಮತದಾರ ಬಸಣ್ಣ ಕಿಲಾರಿ ಆಕ್ರೋಶ ವ್ಯಕ್ತಪಡಿಸಿದರು.
ಇದರ ವಿಡಿಯೋ ವೈರಲ್ ಆಗಿವೆ. ಅದಾಗ್ಯೂ ಇಂತಹ ಅಧಿಕಾರಿ ವಿರುದ್ಧ ಚುನಾವಣಾ ಆಯೋಗ ಯಾವ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಮತದಾರರು.
ಮತ್ತೊಬ್ಬ ಹಕ್ಕು ಚಲಾಯಿಸಿದ ಮತಗಟ್ಟೆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲಸದಿಂದ ತೆಗೆಯಲಾಗುವುದು. ಜೈಲು ಶಿಕ್ಷೆ ಸಹ ವಿಧಿಸಬಹುದ. ವರದಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
•ಡಾ| ವಿ. ಮುನಿರಾಜು,
ಚುನಾವಣಾ ಸಹಾಯಕ ಅಧಿಕಾರಿ ಸುರಪುರ
ಮತ್ತೊಬ್ಬರ ಹಕ್ಕು ಚಲಾಯಿಸಿದ ಮತಗಟ್ಟೆ ಅಧಿಕಾರಿ ವಿರುದ್ಧ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು.
•ಶಿವಪ್ಪ,
ಮತಗಟ್ಟೆ ಅಧ್ಯಕ್ಷಾಧಿಕಾರಿ (253 ಮತಗಟ್ಟೆ ಸಂಖ್ಯೆ)
•ಬಾಲಪ್ಪ ಎಂ. ಕುಪ್ಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.