ಯಡಮೊಗೆ: ಮಗುವಿನ ಮೃತದೇಹ ನದಿಯಲ್ಲಿ ಪತ್ತೆ
Team Udayavani, Jul 13, 2019, 9:46 AM IST
ಸಿದ್ದಾಪುರ/ ಕುಂದಾಪುರ: ಯಡಮೊಗೆ ಗ್ರಾಮದ ಕುಮಿಬೇರು ಎಂಬಲ್ಲಿ ಗುರುವಾರ ಬೆಳಗಿನ ಜಾವ ಅಪರಿಚಿತನಿಂದ ಅಪಹರಣಗೊಂಡಿದ್ದಾಳೆ ಎನ್ನಲಾದ 1.3 ವರ್ಷ ವಯಸ್ಸಿನ ಮಗು ಸಾನ್ವಿಕಾಳ ಮೃತದೇಹ ಶುಕ್ರವಾರ ಬೆಳಗ್ಗೆ ಮನೆಯ ಸಮೀಪದಲ್ಲೇ ಸ್ವಲ್ಪ ದೂರ ನದಿಯಲ್ಲಿ ಪತ್ತೆಯಾಗಿದೆ. ಜತೆಗೆ ಅಪಹರಣ ಎನ್ನಲಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಗುವಿನ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಗುರುವಾರ ಬೆಳಗ್ಗೆ ಕಣ್ಮರೆಯಾಗಿದ್ದ ಯಡಮೊಗೆಯ ಸಂತೋಷ್ ನಾಯ್ಕ -ರೇಖಾ ನಾಯ್ಕ ದಂಪತಿಯ ಪುತ್ರಿ ಸಾನ್ವಿಕಾಳ ಮೃತದೇಹ ಶುಕ್ರವಾರ ಬೆಳಗ್ಗೆ ಮನೆಯ ಸಮೀಪದಿಂದ ಸುಮಾರು 2 ಕಿ.ಮೀ. ದೂರದ ಕುಬಾ ನದಿಯ ಕಲ್ಲು ಗುಂಡಿ ಬಳಿಯ ತಿರುವಿನಲ್ಲಿ ಪತ್ತೆಯಾಗಿದೆ.
ಗುರುವಾರ ದಿನವಿಡೀ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ನದಿಯಲ್ಲಿ ಹುಡುಕಾಡಿದರೂ ಮಗುವಿನ ಬಗ್ಗೆ ಸುಳಿವು ಲಭಿಸಿರಲಿಲ್ಲ. ಸ್ಥಳೀಯ ಯುವಕರು ಈ ಪ್ರಕರಣದ ಬಗ್ಗೆ ಅನುಮಾನಗೊಂಡು ಶುಕ್ರವಾರ ಬೆಳಗ್ಗೆಯಿಂದಲೇ ಪತ್ತೆ ಕಾರ್ಯಾಚರಣೆಗೆ ಇಳಿದಿದ್ದರು. ಸಾನ್ವಿಕಾಳ ಮನೆಯಿಂದ ಹೊಳೆಯ ಬದಿಯಲ್ಲಿ ಹುಡುಕಾಟ ಆರಂಭಿಸಿದ್ದರು.
ಸುಮಾರು 2 ಕಿ.ಮೀ.ಗೂ ಹೆಚ್ಚು ದೂರ ಹೊಳೆಯ ಬದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಕಲ್ಲುಗುಂಡಿ ಬಳಿ ನದಿಯ ತಿರುವಿನಲ್ಲಿ ಗಿಡಗಳ ಮಧ್ಯೆ ಸಿಲುಕಿಕೊಂಡಿದ್ದ ಮಗುವಿನ ಮೃತ ದೇಹ ಪತ್ತೆಯಾಯಿತು. ಕೂಡಲೇ ಯುವಕರು ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಮೃತದೇಹದ ಮಹಜರು ನಡೆಸಿ, ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ರಾತ್ರಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಪ್ರಕರಣದ ಬಗ್ಗೆ ಅನುಮಾನ
ರಾತ್ರಿ ತನ್ನ ಜತೆಯಲ್ಲಿ ಮಲಗಿದ್ದ ಇಬ್ಬರು ಪುಟ್ಟಮಕ್ಕಳ ಪೈಕಿ ಹೆಣ್ಣು ಮಗುವನ್ನು ಗುರುವಾರ ಬೆಳಗ್ಗಿನ ಜಾವ ಮುಸುಕುಧಾರಿ ಅಪರಿಚಿತನೊಬ್ಬ ಅಪಹರಿಸಿದ್ದಾನೆ ಎನ್ನುವ ಮಗುವಿನ ತಾಯಿಯ ಹೇಳಿಕೆಗೂ ಮಗುವಿನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಕ್ಕೂ ಸಾಮ್ಯತೆ ಬರದ ಕಾರಣ ಪ್ರಕರಣದ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಕೌಟುಂಬಿಕ ಸಮಸ್ಯೆ ಯಿಂದಾಗಿ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದರೇ ಎಂದು ಶಂಕಿಸಲಾಗಿದೆ.
ಮನೋರೋಗ ತಜ್ಞರಿಂದ ತಪಾಸಣೆ
ಪೊಲೀಸರು ಮಗುವಿನ ತಾಯಿ ರೇಖಾ ನಾಯ್ಕ ಅವರ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಹೊಂದಿದ್ದು, ರೇಖಾ ಅವರನ್ನು
ಶುಕ್ರವಾರ ಮನೋರೋಗ ತಜ್ಞರಿಂದ ತಪಾಸಣೆಗೆ ಒಳಪಡಿಸಲಾಯಿತು.
ತಪಾಸಣೆಯಲ್ಲಿ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಗುರುವಾರ ಎಸ್ಪಿ ನಿಶಾ ಜೇಮ್ಸ್ ಸ್ಥಳದಲ್ಲೇ ಇದ್ದು, ಘಟನೆ ಕುರಿತು ಗಮನಹರಿಸಿದ್ದರು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಶಂಕರನಾರಾಯಣ, ಅಮಾಸೆಬೈಲು, ಕಂಡೂರು, ಕುಂದಾಪುರ ಠಾಣೆಯ ಎಸ್‌ಐಗಳು ಸ್ಥಳದಲ್ಲಿದ್ದರು.
ಮುಂದಿನ ನಡೆಯೇನು?
ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ, ಮುಂದಿನ ತನಿಖೆಯನ್ನು ಕೈಕೊಳ್ಳಲಾಗುವುದು. ಈ ಹಂತದಲ್ಲಿ ನಾವು ತಾಯಿ ಸಹಿತ ಕುಟುಂಬ ವರ್ಗದವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ. ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಈವರೆಗೆ ಮಗು ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ದಾಖಲಿಸಿಕೊಳ್ಳಲಾಗಿದೆ. ಆದರೆ ಮಗುವಿನ ಸಾವಿನ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಶನಿವಾರದ ಅನಂತರವಷ್ಟೇ ಈ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಲಾಗುವುದು ಎನ್ನುವುದಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಚಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ.
ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನ?
ಪೊಲೀಸರಿಗೂ ತಾಯಿಯ ಹೇಳಿಕೆ ಮತ್ತು ವರ್ತನೆಯ ಬಗ್ಗೆ ಸಂಶಯ ಉಂಟಾಗಿದ್ದು, ಗುರುವಾರ ರಾತ್ರಿಯೇ ಶಂಕರನಾರಾಯಣ ಠಾಣೆಗೆ ಕರೆಯಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆಕೆಯಿಂದ ಮಹತ್ವದ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ವಿಚಾರಣೆ ಶುಕ್ರವಾರವೂ ಮುಂದುವರಿದಿದ್ದು, ತಾನು ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿರುವುದಾಗಿ ಆಕೆ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ. ಈ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.