Union Budget: ಮಂಡ್ಯ ಜಿಲ್ಲೆಗೆ 5 ವರ್ಷಗಳ ಕೊಡುಗೆ ಶೂನ್ಯ
Team Udayavani, Jan 30, 2024, 5:01 PM IST
ಉದಯವಾಣಿ ಸಮಾಚಾರ
ಮಂಡ್ಯ: ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಬಜೆಟ್ ಜಿಲ್ಲೆಗೆ ನಿರಾಸೆ ತಂದಿದೆ. ಯಾವುದೇ ಪ್ರತ್ಯೇಕ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಸಂಪೂರ್ಣ ಶೂನ್ಯ ಬಜೆಟ್ ಆಗಿತ್ತು. ಆದರೆ, ಈ ಬಾರಿ ಫೆ.1ರಂದು ಮಂಡಿಸುತ್ತಿರುವ ಬಜೆಟ್ ಚುನಾವಣೆ ವರ್ಷವಾಗಿರುವುದರಿಂದ ನಿರೀಕ್ಷೆಯ ಭಾರ ಹೆಚ್ಚಿದೆ.
ದೊಡ್ಡಹಳ್ಳಿಯಂತಾಗಿರುವ ಮಂಡ್ಯ ನಗರಕ್ಕೆ ಕೇಂದ್ರದಿಂದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಿಟ್ಟರೆ ಯಾವುದೇ ಹೊಸ ಯೋಜನೆಗಳನ್ನು ಜಿಲ್ಲೆಗೆ ನೀಡಿಲ್ಲ. ಪ್ರತೀ ಬಜೆಟ್ ನಲ್ಲೂ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ, ಆ ನಿರೀಕ್ಷೆಗಿಂತ
ನಿರಾಸೆಯೇ ಹೆಚ್ಚಾಗಿದೆ. ಹೆದ್ದಾರಿ ನಿರ್ಮಾಣದಿಂದ ಮಂಡ್ಯ ನಗರಕ್ಕೆ ಆರ್ಥಿಕ ಹೊಡೆತ ಬಿದ್ದಿದ್ದು, ಮತ್ತಷ್ಟು
ಅಭಿವೃದ್ಧಿಯಿಂದ ವಂಚಿತವಾಗುವಂತೆ ಮಾಡಿದೆ.
ಸ್ಮಾರ್ಟ್ ಸಿಟಿ ನಿರೀಕ್ಷೆ:ಮಂಡ್ಯ ನಗರವನ್ನು ಸ್ಮಾರ್ಟ್ ಸಿಟಿಗೆ ಸೇರ್ಪಡೆ ಮಾಡುವ ಕುರಿತಂತೆ ಹಲವು ವರ್ಷಗಳಿಂದ ಪ್ರಸ್ತಾವನೆ ಆಗುತ್ತಲೇ ಇದೆ. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಮಂಡ್ಯವನ್ನು ಸ್ಮಾರ್ಟ್ ಸಿಟಿಗೆ ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿ ಮಾಡಲು ಮುಂದಾಗಿಲ್ಲ. ಮಂಡ್ಯ ನಗರವನ್ನು ದೇಶದ ಸ್ಮಾರ್ಟ್ ಸಿಟಿಗಳ ಪಟ್ಟಿಗೆ ಸೇರಿಸುವ ಮೂಲಕ ಅಭಿವೃದ್ಧಿಪಡಿಸಲು ಅನುದಾನ ಘೋಷಿಸಬೇಕಾಗಿದೆ.
ಮುಗಿಯದ ಅಮೃತ್ ಯೋಜನೆ:ನಗರದಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸುವ 125 ಕೋಟಿ ರೂ. ವೆಚ್ಚದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಕಾಮಗಾರಿ ಕುಂಟುತ್ತಿದೆ. 10 ವರ್ಷಗಳೇ ಕಳೆಯುತ್ತಾ ಬಂದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ, ಹೆಚ್ಚುವರಿ ಅನುದಾನ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.
ಹೆದ್ದಾರಿಯ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು: ತರಾತುರಿಯಲ್ಲಿ ಬೆಂಗಳೂರು- ಮೈಸೂ ರು ಹೆದ್ದಾರಿಯ ಕಾಮಗಾರಿಯನ್ನು ಮಾಡಲಾಗಿತ್ತು. ಆದರೆ ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ಅಲ್ಲಲ್ಲಿ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಅವುಗಳ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಅಲ್ಲದೆ, ಕೆಲವೊಂದು ಕೆಳಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ವನ್ನು ಮೀಸಲಿಡಲಾಗಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಿಲ್ಲ.
ಕೈಗಾರಿಕೆಗಳ ಸ್ಥಾಪನೆಗೆ ಒತ್ತು: ಮಂಡ್ಯ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಹೇಳಿಕೊಳ್ಳುವಂಥ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಇಲ್ಲಿನ ಜನರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳನ್ನು ಅವಲಂಬಿಸಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಗೆ ಹಾಗೂ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹೆದ್ದಾರಿ ನಿರ್ಮಾಣ ವಾಗಿರುವುದರಿಂದ ಕೃಷಿಯೇತರ ಭೂಮಿಯಲ್ಲಿ ಕೈಗಾರಿಕೆಗಳು ಹೆಚ್ಚಾದಂತೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯ ಪ್ರತಿಭಾವಂತ ಯುವಕ-ಯುವಕರಿಗೆ ಉದ್ಯೋಗಗಳು ಸಿಗಲಿದ್ದು, ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದೆ.
ಸಾಕಾರವಾಗದ ಸಾವಯವ ಬೆಲ್ಲ ಉದ್ಯಮ:
ಆತ್ಮನಿರ್ಭರ್ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಮಂಡ್ಯ ಬೆಲ್ಲ ಆಯ್ಕೆ ಮಾಡಲಾಗಿದೆ. ಆದರೆ ಅದನ್ನು ಇನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಉದ್ಯಮವನ್ನಾಗಿ ಮಾಡಲು ಸಬ್ಸಿಡಿ ಸಾಲ ಯೋಜನೆಗೆ ಹಲವು
ತೊಡಕುಗಳಿಂದ ಸಂಪೂರ್ಣವಾಗಿ ಜಾರಿಯಾಗಿಲ್ಲ.
ಆಧುನಿಕ ತಂತ್ರಜ್ಞಾನ ಬಳಕೆಯಿಂದ ಬೆಲ್ಲ ಉದ್ಯಮವನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಪ್ರತಿ ಯೊಂದು ಗ್ರಾಮದಲ್ಲೂ ಆಲೆಮನೆಗಳು ತಲೆ ಎತ್ತಲಿದ್ದು, ಕೈಗಾರಿಕೆಯಂತೆ ಉದ್ಯೋಗಗಳು ಹೆಚ್ಚ ಲಿದೆ. ಅಲ್ಲದೆ, ಗುಣಮಟ್ಟದ ಬೆಲ್ಲಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದ್ದು, ರಫ್ತು ಹೆಚ್ಚಾಗಲಿದೆ.
ಕಬ್ಬಿಗೆ ಉತ್ತೇಜನ ಅಗತ್ಯ: ಜಿಲ್ಲೆಯು ಕೃಷಿ ಪ್ರದಾನವಾಗಿದ್ದು, ಅತಿ ಹೆಚ್ಚು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಭತ್ತ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರನ್ನು ಕೃಷಿಗೆ ಪೋ›ತ್ಸಾಹಿಸಬಹುದಾಗಿದೆ. ಭತ್ತ, ರಾಗಿಗೆ ಬೆಂಬಲ ಬೆಲೆಯಡಿ ಖರೀದಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬೇಕಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನ ಹೆಚ್ಚಿಸಬೇಕಾಗಿದೆ. ಒಂದು ಬೆಳೆ ಬೆಳೆಯಲು ಶ್ರಮ, ಖರ್ಚು ಹೆಚ್ಚಿದೆ. ಅದರ ಆಧಾರದ ಮೇಲೆ ಪೋ›ತ್ಸಾಹಧನ ನಿಗದಿಯಾಗಬೇಕು.
ಎಂಎಸ್‌ಪಿ ನಿಗದಿ ಮಾಡಬೇಕು: ರೈತರು ಬೆಳೆದಿರುವ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಮಾಡಬೇಕು. ಅದನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಬರ ಆವರಿಸಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗುವ ಭೀತಿ ಕಾಡುತ್ತಿದೆ.
ಮಳವಳ್ಳಿ ರೈಲು ಬರುವುದು ಯಾವಾಗ?: ಬೆಂಗಳೂರು-ಕನಕಪುರ-ಮಳ್ಳವಳ್ಳಿ-ಕೊಳ್ಳೇಗಾಲಕ್ಕೆ ರೈಲು ಸಂಚಾರ ಮಾಡಲು ಕಳೆದ 15 ವರ್ಷಗಳಿಂದ ಯುಪಿಎ ಸರ್ಕಾರದಲ್ಲೇ ಬಜೆಟ್‌ನಲ್ಲಿ ಘೋಷಿಸಿ ಕೋಟ್ಯಂತರ ರೂ. ಅನುದಾನ ಮೀಸಲಿಡಲಾಗಿತ್ತು.
ಆದರೆ ಇದುವರೆಗೂ ಆ ಯೋಜನೆ ಸಾಕಾರವಾಗಿಲ್ಲ. ಪ್ರಸ್ತುತ ಇರುವ ಕೇಂದ್ರ ಸರ್ಕಾರವೂ ಇತ್ತ ಗಮನಹರಿಸಿಲ್ಲ. ಈ ಬಾರಿಯಾದರೂ ಯೋಜನೆ ಕಾಯಕಲ್ಪ ಸಿಗುವ ನಿರೀಕ್ಷೆ ಇದೆ.
ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆಯೇ?:
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ
ಇಳಿಸಬೇಕು. ಪೆಟ್ರೋಲ್, ಡಿಸೇಲ್ ದರಗಳ ಇಳಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಇಳಿಯಲಿದೆ. ಇದರಿಂದ ಜನರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚುವಂತೆ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಜನಸಾಮಾನ್ಯರ ಕೈಗೆಟುವಂತೆ ಮಾಡಬೇಕು. ಆಹಾರ ಭದ್ರತೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಪೋ›ತ್ಸಾಹ ನೀಡಬೇಕು. ಬಜೆಟ್
ನಲ್ಲಿ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ ನಿರೀಕ್ಷೆಗಳು
*ಹೆದ್ದಾರಿಯ ಅಪಘಾತದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 100 ಬೆಡ್ ಗಳ ಟ್ರಾಮಾಕೇರ್ ಸೆಂಟರ್ ಘೋಷಣೆ.
*ಟನ್ ಕಬ್ಬಿಗೆ ಎಸ್‌ಎಪಿ ಘೋಷಿಸಬೇಕು.
*ಬೆಂಗಳೂರು-ಕನಕಪುರ-ಮಳ್ಳವಳ್ಳಿ-ಕೊಳ್ಳೇಗಾಲ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನಿರೀಕ್ಷೆ
*ಮಂಡ್ಯ ನಗರದ ದಕ್ಷಿಣ ಭಾಗದಲ್ಲೂ ಬೈಪಾಸ್ ರಸ್ತೆ ನಿರ್ಮಾಣ
* ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಯೋಜನೆಗಳ ಘೋಷಣೆ
*ಹೆದ್ದಾರಿ ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸಬೇಕು.
*ಹೊಸ ಕೈಗಾರಿಕೆಗಳ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.