Budget 2024-25; ವಸತಿ ರಹಿತರ ಸಂಖ್ಯೆ ಗುರುತಿಸಲು ಸರ್ಕಾರದಿಂದ ಸಮೀಕ್ಷೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,18,359 ಮನೆ ನಿರ್ಮಿಸಲು ಕ್ರಮ
Team Udayavani, Feb 16, 2024, 9:00 PM IST
ಬೆಂಗಳೂರು: ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ವಸತಿ ರಹಿತರ ಸಂಖ್ಯೆ ಗುರುತಿಸಲು ಸಮೀಕ್ಷೆಗೆ ಮುಂದಾಗಿದೆ ಎಂದು ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಗಡ ಪತ್ರದಲ್ಲಿ ಸಮೀಕ್ಷೆ ವಿಷಯ ಪ್ರಸ್ತಾಪಿಸಲಾಗಿದೆ. ಜತೆಗೆ ವಸತಿ ಸೆಸ್ ಮತ್ತು ವಿವಿಧ ಶಾಸನ ಬದ್ಧ ಶುಲ್ಕಗಳನ್ನು ವಿಧಿಸುವ ಮೂಲಕ ಸಂಪನ್ಮೂಲ ಕ್ರೊಢೀಕರಿಸಿ “ಕರ್ನಾಟಕ ಆಫರ್ಡ್‌ಬಲ್ ಹೌಸಿಂಗ್ ಫಂಡ್ (ಕೆಎಎಚ್‌ಎಫ್) ಸ್ಥಾಪನೆ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳಗೇರಿ ಸೆಸ್ ದರ ಪರಿಷ್ಕರಣೆ ಮಾಡಲಿದೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಸೃಷ್ಟಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿದ್ದು ತಿಳಿಸಿದ್ದಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,18,359 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಫಲಾನುಭವಿಗಳು ಬಡ ಕುಟುಂಬದವರಾಗಿದ್ದು, ತಮ್ಮ ಪಾಲಿನ ವಂತಿಗೆ 5 ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರವೇ ಫಲಾನುಭವಿಗಳು ಪಾವತಿಸಬೇಕಾದ ವಂತಿಗೆಯನ್ನು ಒಂದು ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ, ಹೆಚ್ಚುವರಿ ನಾಲ್ಕು ಲಕ್ಷ ರೂ.ವರೆಗಿನ ಫಲಾನುಭವಿ ವಂತಿಗೆಯನ್ನು ಭರಿಸಲಿದೆ. ಶೀಘ್ರವೇ 48,796 ಮನೆಗಳನ್ನು ಪೂರ್ಣಗೊಳಿಸಿ ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ ಎಂದು ಸಿಎಂ ಹೇಳಿದ್ದಾರೆ.
ಡೆವಲಪರ್‌ಗಳಿಗೆ 40 ಕೋಟಿ ರೂ. ದಂಡ
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ದಕ್ಷತೆ ಹೆಚ್ಚಿಸಲು ಹಾಗೂ ಮನೆ ಖರೀದಿದಾರರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು , 2023-24 ನೇ ಸಾಲಿನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಡೆವಲಪರ್‌ಗಳಿಗೆ 40 ಕೋಟಿ ರೂ. ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ದಕ್ಷ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಯ ಮೂಲಕ ಜನರ ಹಿತರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.