Karnataka Budget 2024-25; ರಾಜ್ಯದ 8 ಕಡೆ “ಇಂಟಿಗ್ರೇಟೆಡ್ ಟೌನ್‌ಶಿಪ್’ ಅಭಿವೃದ್ಧಿ
ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ವಿವಿಧ ನಗರಗಳನ್ನು ನಿರ್ಮಿಸಲು ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ನಿರ್ಧಾರ
Team Udayavani, Feb 16, 2024, 10:00 PM IST
ವಿಧಾನಸಭೆ: ಬೆಂಗಳೂರು ಮಹಾನಗರದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಸುಸ್ಥಿರವಾದ ಮೂಲಸೌಕರ್ಯವನ್ನು ಒಳಗೊಂಡ ಆಕರ್ಷಕ ನಗರ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರಿಗೆ ಪರ್ಯಾಯವಾಗಿ ವಿವಿಧ ನಗರಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ರಾಜ್ಯದ ಎಂಟು ಕಡೆ “ಇಂಟಿಗ್ರೇಟೆಡ್ ಟೌನ್‌ಶಿಪ್’ ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೆ.ಜಿ.ಎಫ್, ತುಮಕೂರಿನ ವಸಂತನರಸಾಪುರ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ “ಇಂಟಿಗ್ರೇಟೆಡ್ ಟೌನ್‌ಶಿಪ್’ಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗ್ಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆ ಪಡೆಯಲಾಗುವುದು ಎಂದು ಘೋಷಿಸಲಾಗಿದೆ.
ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಿಂಗ್ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.
7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು
ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ಈ ವರ್ಷ 200 ಕೋಟಿ ರೂ. ಒದಗಿಸಿ, 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದೆ.
ಕೇಂದ್ರ ಪುರಸ್ಕೃತ ಸ್ವತ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಪ್ರಸಕ್ತ ವರ್ಷದಲ್ಲಿ ನಮ್ಮ ಜಲ ಮೂಲಗಳನ್ನು ಮಲಿನಗೊಳಿಸುವ ದ್ರವ ತ್ಯಾಜ್ಯಗಳ ಸಂಸ್ಕರಣೆ, ಲೆಗೆಸಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡುವ ಮೂಲಕ ನಗರಗಳಲ್ಲಿ ಸ್ವತ್ಛ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಿದೆ.
ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆ ಜಾರಿ
ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು, ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ತೆರಿಗೆ ಸೋರಿಕೆ ತಡೆಗೆ 3ಡಿ ಡ್ರೋನ್ ತಂತ್ರಜ್ಞಾನ ಬಳಕೆ
ಆಸ್ತಿ ತೆರಿಗೆ ಮತ್ತು ಇನ್ನಿತರೆ ಶುಲ್ಕಗಳ ಪರಿಣಾಮಕಾರಿ ವಸೂಲಿಗೆ ಹಾಗೂ ತೆರಿಗೆ ಸೋರಿಕೆ ತಡೆಗೆ 3ಡಿ ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್ ಮತ್ತು ಮರು ಮೌಲ್ಯಮಾಪನ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ನೇರಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ 24,005 ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ನೇರಪಾವತಿಯಡಿಯಲ್ಲಿ ಬಾಕಿ ಉಳಿದಿರುವ ಪೌರಕಾರ್ಮಿಕರಿಗೂ ಹಂತ ಹಂತವಾಗಿ ಕಾಯಂಗೆ ಕ್ರಮ ಕೈಗೊಳ್ಳಲಿದೆ.
ನಗರ ಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ
ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲಾಗುವುದು. ಜತೆಗೆ ಮೈಸೂರಿನ ಪ್ರಖ್ಯಾತ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಸಮರ್ಪಕ ಹಾಗೂ ಯೋಜಿತ ನಗರೀಕರಣಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಎಲ್ಲಾ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳನ್ನಾಗಿ ಉನ್ನತೀಕರಿಸಲು ಕ್ರಮಕೈಗೊಳ್ಳುವುದನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
-3ಡಿ ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್ ಮತ್ತು ಮರು ಮೌಲ್ಯಮಾಪನ
-ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಪಣ
-ಆಸ್ತಿ ನೋಂದಣಿ ಮತ್ತು ಖಾತಾ ನಮೂದು ಇನ್ನಷ್ಟು ಸರಳೀಕರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.