ಶಾಲೆಗೆ ಚಕ್ಕರ್‌ ಹೊಡೆದ ಸಾಹಸಗಾಥೆ


Team Udayavani, Apr 22, 2021, 6:53 PM IST

Value_US_Degree

ದೊಡ್ಡವರಾಗುತ್ತಿದ್ದಂತೆ ಹೊಸ ಹೊಸ ಅನ್ವೇಷಣೆಯತ್ತ ಹೊರಳುವ ಬುದ್ಧಿ ಏನನ್ನೂ ಮಾಡಬಹುದು ಎನ್ನುವ ಹುಂಬತನವನ್ನೂ ಬೆಳೆಸಿಕೊಳ್ಳುತ್ತದೆ.

ಮುಗ್ಧತನ ಪೂರ್ತಿಯಾಗಿ ಅಳಿಯದ, ಅರಿವು ಪೂರ್ತಿಯಾಗಿ ಮೂಡಿರದ ತಪ್ಪು ಸರಿಗಳ ನಡುವಿನ ಪುಟ್ಟ ಎಳೆಯ ಮಧ್ಯ ಜೋಲಾಡುವ ವಯಸ್ಸು ಹನ್ನೆರಡರ ಆಸುಪಾಸಿನದು. ಈ ಸಮಯದಲ್ಲಿ ಅನುಕರಣೆ ಬಹುಬೇಗ ಆಕರ್ಷಿಸಿ ಕಾರ್ಯಪ್ರವೃತ್ತಿಗೆ ಇಳಿಸಿಬಿಡುತ್ತದೆ.

ನಮ್ಮಗಿಂತ ಹಿರಿಯ ವಿದ್ಯಾರ್ಥಿಗಳು ಶಿಕ್ಷಕರ ಕಣ್ಣು ತಪ್ಪಿಸಿ ಚಕ್ಕರ್‌ ಹಾಕುವುದನ್ನು ನೋಡುವಾಗಲೆಲ್ಲ ಭಯ ಬೆರೆತ ಭಂಡತನ ನನ್ನಲ್ಲೂ ಆವರಿಸಿಕೊಳ್ಳುತ್ತಿತ್ತು. ಒಂದಲ್ಲ ಒಂದು ದಿನ ನಾನೂ ಶಾಲೆಗೆ ಚಕ್ಕರ್‌ ಹಾಕಲೇಬೇಕು ಎಂದು ತೀರ್ಮಾನಿಸಿದೆ. ಆ ಹಿರಿಯ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಶಾಲೆಗೆ ಚಕ್ಕರ್‌ ಹೊಡೆಯಲು ಇರುವ ರಹದಾರಿ ಕಂಡುಕೊಂಡೆನಾದದೆರೂ ಅದನ್ನು ಬಳಸಲು ಧೈರ್ಯ ಬಂದದ್ದು ಐದನೇ ತರಗತಿಗೆ ಬಂದ ಮೇಲೆ.

ಐದನೇ ತರಗತಿಯ ಮಧ್ಯಂತರ ದಸರಾ ರಜೆ ಮುಗಿದು ಶಾಲೆ ಆರಂಭಗೊಂಡ ಮೊದಲೆರಡು ದಿನ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದವರು ತಲೆ ಹಾಕಿರಲಿಲ್ಲ. ದಿನನಿತ್ಯ ಶಾಲೆಗೆ ಬರುವುದಕ್ಕೇ ಗೋಳಾಡುತ್ತಿದ್ದ ನಮ್ಮ ಸರಕಾರಿ ಶಾಲೆಯ ಮಕ್ಕಳನ್ನು ಎಳೆ ತರುವುದೇ ಸಾಹಸದ ಕೆಲಸವಾಗಬೇಕಾದರೆ ಇನ್ನು ಈ ಹದಿನೈದು ದಿನಗಳ ದೀರ್ಘ‌ ರಜೆ ಕುಂಭಕರ್ಣನ ನಿದ್ರೆಯ ಅವಧಿಯಂತೆ ಭಾಸವಾಗುತ್ತಿತ್ತು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಾಗ ಪಾಠವೇ ಮಾಡುತ್ತಿರಲಿಲ್ಲ. ಒಂದೆರಡು ತರಗತಿ ಹಿರಿಯ ವಿದ್ಯಾರ್ಥಿಗಳನ್ನ ಒಂದೊಂದು ತರಗತಿಗೆ ಕಳಿಸಿ ಶಿಕ್ಷಕರು ಆಫೀಸ್‌ ರೂಂ ಸೇರುತ್ತಿದ್ದರು. ಆ ಹಿರಿಯ ವಿದ್ಯಾರ್ಥಿಗಳಿಗೋ ತಮ್ಮ ಅಧಿಕಾರ ಚಲಾಯಿಸುವ ಸುಮಯ.

ಮಾತಾಡಿದರೆ ಸಾಕು ಬೆತ್ತ ಹಿಡಿದು ಅಂಗೈಗೆ ಒಂದೇಟು ಕೊಡಲೇಬೇಕು. ಸರಿಯಾಗಿ ಪಾಠವೂ ನಡೆಯದ, ಬಹಳಷ್ಟು ಸ್ನೇಹಿತರೂ ಬರದ ಈ ಉಸಿರುಗಟ್ಟಿಸುವ ಕ್ಲಾಸಿನಿಂದ ಪಾರಾದರೆ ಸಾಕು ಎನ್ನುವ ಆಲೋಚನೆ ಬರುತ್ತಿತ್ತು.

ಅಂದೂ ಸಹ ಹಾಗೇ ಆಗಿ ಇಂಟರ್ವೆಲ್‌ ವೇಳೆಗೆ ನನ್ನ ಬೇಸರವೂ ಹೆಚ್ಚಾಗಿ ನನ್ನಿಬ್ಬರು ಸ್ನೇಹಿತೆಯರ ಮುಂದೆ ಶಾಲೆಗೆ ಚಕ್ಕರ್‌ ಹಾಕುವ ದುಷ್ಟ ಉಪಾಯವನ್ನು ಬಿಚ್ಚಿಟ್ಟೆ. ಇದನ್ನು ಕೇಳಿಯೇ ಹಾವು ಕಂಡವರಂತೆ ಗಾಬರಿಯಾದ ಅವರ ಮನ ಒಲಿಸಲು, ಧೈರ್ಯ ತುಂಬಲು ನನ್ನ ಪುಟ್ಟ ತಲೆಯಲ್ಲಿದ್ದ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಗಿ ಬಂತು.

ಊಟ ಆದ ಕೂಡಲೇ ಹೊರಟು ಬಿಡುವ ಸಂಚು ಹೂಡಿದ್ದಾಯ್ತು. ಅವರಿಬ್ಬರಿಗೆ ಇನ್ನು ಗೊಂದಲವಿತ್ತು. ತಮ್ಮ ನಿರ್ಧಾರವನ್ನು ಪುನರ್‌ ವಿಮರ್ಶಿಸಿಕೊಳ್ಳುತಿದ್ದರೆಂದು ಕಾಣುತ್ತದೆ. ಅದರಲ್ಲೂ ಕೊಂಚ ಪುಕ್ಕಲು ಸ್ವಭಾವದವಳಾದ ಯಾಸ್ಮಿನ್‌ ತನ್ನ ಸ್ವಂತ ನಿರ್ಧಾರದಂತೆ ಅಲ್ಲದೇ ನಮ್ಮ ಒತ್ತಾಯಕ್ಕೂ, ಸ್ನೇಹ ಕಳೆದುಕೊಂಡುಬಿಡುವ ಭಯಕ್ಕೂ ಹೂಂ ಗುಟ್ಟಿದ್ದಳು. ಅಂತೂ ಊಟ ಆದ ಕೂಡಲೇ ಪಾಠಿಚೀಲವನ್ನು ಯಾರಿಗೂ ಕಾಣದಂತೆ ಲಂಗದಲ್ಲಿ ಅಡಗಿಸಿಕೊಂಡು, ಶಾಲೆಯ ಒಂದು ಬದಿಯಲ್ಲಿದ್ದ ಕಾಂಪೌಂಡಿನ ಹತ್ತಿರ ಹೋದೆವು. ಕಟ್ಟಡಗಳನ್ನು ಕಟ್ಟಿ ಹೆಚ್ಚಿಗೆ ಉಳಿದ ಕಲ್ಲುಗಳನ್ನು ಕ್ರಮವಾಗಿ ಮೆಟ್ಟಿಲಿನಂತೆ ಕಾಂಪೌಂಡಿಗೆ ತಾಕಿಸಿ ಪೇರಿಸಿಟ್ಟಿದ್ದರು.

ಹೀಗಾಗಿ ಈ ಕಡೆಯಿಂದ ಕಾಂಪೌಂಡ್‌ ಹತ್ತುವುದು ಸುಲಭವಾದರೂ ಆ ಕಡೆ ಮಾತ್ರ ಅನಾಮತ್ತಾಗಿ ಐದಾರು ಅಡಿ ಕೆಳಗೆ ಜಿಗಿಯಬೇಕಿತ್ತು. ಮೆಟ್ಟಿಲ ಪಕ್ಕದಲ್ಲೇ ದೊಡ್ಡದಾದ ಚರಂಡಿ ಬಾಯಿ ತೆರೆದು ಮಲಗಿತ್ತಾದ್ದರಿಂದ ಅದರಲ್ಲಿ ಬೀಳುವ ಭಯವೇ ಹಿಂದೇಟು ಹಾಕಿಸುವಂತಿತ್ತು. ನಮ್ಮ ಮೂವರಲ್ಲಿ ರಶ್ಮಿ ದಪ್ಪ ಇದ್ದುದರಿಂದ ಮೊದಲು ಅವಳೇ ಇಳಿಯಬೇಕು ಎಂದು ಸಮಾಲೋಚಿಸಿಯಾಗಿತ್ತು. ಅದರಂತೆ ಮೊದಲು ಅವಳು ಕಾಂಪೌಂಡಿನಿಂದ ಸರಿಯಾದ ಸ್ಥಳದಲ್ಲಿ ಅನಾಯಾಸವಾಗಿ ಜಿಗಿದದ್ದರಿಂದ ನಮ್ಮ ಅನುಮಾನಗಳು, ಭಯಗಳೆಲ್ಲ ಕರಗಿ ಪುಟ್ಟದೊಂದು ಹರ್ಷ ಮನೆ ಮಾಡಿತ್ತು.

ಅವಳೆಡೆಗೆ ನಮ್ಮ ಮೂರು ಜನರ ಪಾಠಿಚೀಲ ಎಸೆದೆ. ಅವಳು ಒಂದು ಬದಿಗಿಟ್ಟು ಸರಿದು ನಿಂತಳು. ಅನಂತರ ಸರದಿ ಯಾಸ್ಮಿನಳದ್ದು. ಅವಳು ಮೊದಲೇ ಪುಕ್ಕಲು, ಕೋಲಿನಷ್ಟು ತೆಳ್ಳಗಿನ ಶರೀರ. ಮೇಲಾಗಿ ಇಷ್ಟವಿಲ್ಲದೇ ಕೈಜೋಡಿಸಿದ್ದರಿಂದ ಅವಳನ್ನು ಕೊನೆಗೆ ಬಿಟ್ಟರೆ ಕೆಳಗೆ ಜಿಗಿಯದೇ ಹಿಂತಿರುಗಿ ಕ್ಲಾಸಿಗೆ ಹೋಗಿಬಿಟ್ಟರೆ ಎಂಬ ಭಯ ನಮಗೆ. ಹೀಗಾಗಿ ಅವಳನ್ನು ನಂಬುವಂತಿರಲಿಲ್ಲ. ಅವಳ ಸರದಿ ಬಂದದ್ದೇ ಭಯದಿಂದ ಸಣ್ಣಗೆ ನಡುಗುತ್ತಿದ್ದಳು. ನಾವಿಬ್ಬರು ಎಷ್ಟು ಧೈರ್ಯಕೊಟ್ಟರೂ ಕೆಳಗೆ ಇಳಿಯಲೊಲ್ಲಳು. ನಮಗೋ ಆದಷ್ಟು ಬೇಗ ಪಾರಾಗಬೇಕು. ನನ್ನ ಸಹನೆ ಕರಗಿ ಅವಳ ಮೇಲೆ ಕೋಪ ಬಂದು ನಾನೇ ದೂಡಿ ಬಿಡಲೇ ಎಂಬ ಭಯಂಕರ ಆಲೋಚನೆ ಬಂದು ಕೈಗೆತ್ತಿಕೊಳ್ಳುವ ಮೊದಲೇ ಅವಳು ಕೊಸರುತ್ತಲೇ ಹಾರಿದಳು. ಎಡವಟ್ಟಾದ್ದೇ ಅಲ್ಲಿ.

ಅವಳು ಭಯದಿಂದ ಸರಿಯಾದ ಜಾಗದಲ್ಲಿ ಜಿಗಿಯದಿದ್ದರಿಂದ ಸೆಲೂನಿನ ಹೆಸರು ಬರೆದಿದ್ದ ಕಬ್ಬಿಣದ ಬೋರ್ಡಿನ ಒಂದು ತುದಿಗೆ ಅವಳ ಅಂಗಿಯ ತೋಳು ಸಿಲುಕಿ ಅಕ್ಷರಶಃ ಬಾವುಲಿಯಂತೆ ನೇತಾಡುತಿದ್ದಳು. ನಮ್ಮಿಬ್ಬರ ಜಂಘಾಬಲವೇ ಹುಡುಗಿ ಹೋಯ್ತು. ರಶ್ಮಿ ನಮ್ಮಿಬ್ಬರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಬಹುದಿತ್ತಾದರೂ ಮಿತ್ರ ದ್ರೋಹ ಮಾಡದೇ ಕಂಗಾಲಾಗಿ ನಿಂತೇ ಇದ್ದಳು. ನನಗೆ ಕೆಳಗೆ ಇಳಿಯುವಂತೆಯೂ ಇಲ್ಲ, ಪಾಠಿಚೀಲ ಇಲ್ಲದ್ದರಿಂದ ಶಾಲೆಗೂ ಹೋಗುವಂತಿಲ್ಲ. ಅಲ್ಲದೇ ಯಾರಾದರೂ ನೋಡಿ ಶಿಕ್ಷಕರಿಗೆ ಹೇಳಿದರೆ ಮೊದಲು ಅವರ ಕೈಗೆ ಸಿಗುತಿದ್ದವಳು ನಾನೇ.

ಯಾಸ್ಮಿನ್‌ ಒಂದೇ ಸಮ ಅಳಲು ಶುರು ಮಾಡಿದಳು. ಕ್ರಮೇಣ ಅವಳ ಅಳು ಜೋರಾಗಿ ಒಳಗಿರುವ ಸಲೂನಿನವನಿಗೆ ಅದು ಕೇಳಿ ಹೊರ ಬಂದ. ನೇತಾಡುತ್ತಿರುವ ಅವಳ ಸ್ಥಿತಿ ನೋಡಿ ಅವನಿಗೆ ಅಳಬೇಕೋ ನಗಬೇಕೊ ಗೊತ್ತಾಗಿರಲಿಕ್ಕಿಲ್ಲ. ಒಟ್ಟಾರೆ ಆ ಮನುಷ್ಯ ಅವಳನ್ನು ಬೋರ್ಡಿನ ತುದಿಯಿಂದ ಮುಕ್ತಗೊಳಿಸಿದ. ಅವರಿಬ್ಬರೂ ಭಯದಿಂದ ನಡುಗುತ್ತಿದ್ದರು. ನನಗಂತೂ ಇನ್ನೂ ಗೊಂದಲ. ಕೆಳಗೆ ಹಾರಲು ಆ ವ್ಯಕ್ತಿ ಇದ್ದಾನೆ. ವಾಪಸ್ಸು ಹೋಗುವ ಮನಸ್ಸಿಲ್ಲ. ನನ್ನ ಗೊಂದಲ ಅರಿತವನಂತೆ ಸಣ್ಣಗೆ ನಗೆ ಹರಿಸಿ ನನ್ನನ್ನು ಅವನೇ ಕೆಳಗಿಳಿಸಿದ. ಈಗ ಭಯ ಇದದ್ದು ನಮ್ಮ ಮೂವರನ್ನೂ ಶಾಲೆಗೆ ಎಳೆದುಕೊಂಡು ಹೋಗಿ ಒಂದು ಗತಿ ಕಾಣಿಸುತ್ತಾನೆಂದು. ನಾವು ಒಬ್ಬರ ಮುಖ ಒಬ್ಬರು ನೋಡಲೂ ಭಯವಾಗಿ ಅಪರಾಧಿಗಳಂತೆ ತಲೆಕೆಳಹಾಕಿ ನಿಂತೆವು. ಆ ವ್ಯಕ್ತಿ ನಮ್ಮ ಊಹೆಗೂ ನಿಲುಕದಂತೆ ಇನ್ನೊಮ್ಮೆ ಹೀಗೆಲ್ಲ ಮಾಡಬೇಡಿ. ಆ ಕಡೆ ಚರಂಡಿಯಲ್ಲಿ ಬಿದ್ದರೆ ಕೈಕಾಲು ಉಳಿಯಲಿಕ್ಕಿಲ್ಲ ಎಂದು ತೀರಾ ಸಾವಧಾನವಾಗಿ ಏನೂ ನಡೆದೇ ಇಲ್ಲ, ನಮ್ಮದು
ಅಸಲಿಗೆ ತಪ್ಪೇ ಇಲ್ಲ ಎನ್ನುವಂತೆ ಹೇಳಿ ಸಲೂನಿನ ಒಳ ಹೊಕ್ಕ.

ನಮ್ಮ ಮೂರೂ ಜನಕ್ಕೂ ಆದ ಹಿಗ್ಗು ಅಷ್ಟಿಷ್ಟಲ್ಲ. ಅಳುಬುರುಕಿ ಯಾಸ್ಮಿನ್‌ ಕೂಡ ತರಚಿ ಗಾಯವಾದ ನೋವನ್ನೂ ಮರೆತು ಆರಾಮವಾಗಿದ್ದಳು. ಅಲ್ಲಿಂದ ನಮ್ಮ ಸಾಹಸಕ್ಕೆ ನಾವೇ ಮೆಚ್ಚುತ್ತ ಮನೆ ಸೇರಿ ನಿರಾಳವಾದೆವಾದರೂ ಮಾರನೇ ದಿನ ಶಾಲೆಗೆ ಹೋದ ಕೂಡಲೇ, ಕ್ಲಾಸ್‌ ಟೀಚರ್‌ ಮೂರು ಜನಕ್ಕೆ ಬೆತ್ತದ ರುಚಿ ಕಾಣಿಸಿಯೇ ಒಳಬಿಟ್ಟದ್ದು. ನಾವು ಕಣ್ಣು ಮುಚ್ಚಿ ಹಾಲು ಕುಡಿದರೂ ತರಗತಿಯಿಂದ ಹೊರ ಹೋದದ್ದನ್ನು ನೋಡಿದ ಯಾರೋ ಚಾಡಿ ಹೇಳಿಯಾಗಿತ್ತು.

ಕವಿತಾ ಭಟ್‌, ಹೊನ್ನಾವರ

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.