ಬದುಕು ಬಯಕೆಗಳ ಬಯಲು ರಂಗಮಂದಿರ
Team Udayavani, Jun 27, 2020, 9:30 AM IST
ನಾನು ಹೈಸ್ಕೂಲ್‌ಗೆ ಹೋಗುವಾಗ ಪ್ರತಿನಿತ್ಯ ಮನೆಯಿಂದ ಒಂದು ಕಿ.ಮೀ . ದೂರದ ಬಸ್ ನಿಲ್ದಾಣದ ತನಕ ನಡೆದುಕೊಂಡು ಹೋಗಿ ಅನಂತರ ಅಲ್ಲಿ ಸಿಗುವ ಎಕ್ಸ್‌ಪ್ರೆಸ್ ಬಸ್‌ಗೆ ಕೈ ಚಾಚಿ, ಕಂಡಕ್ಟರ್ ಕೈಗೆ ಎರಡು ರೂ. ಇತ್ತವನು ಟಿಕೆಟ್‌ನ್ನು ಅಪೇಕ್ಷಿಸದೆ ಬಾಗಿಲಲ್ಲಿ ಜೋತುಬಿದ್ದಿದ್ದೆ. ಶಾಲೆಯನ್ನು ತಲುಪುವ ತವಕದಲ್ಲಿದ್ದ ನನಗೆ ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಸಂಭ್ರಮ ಕೂಡ. ಅಂದೇ ಮೊಟ್ಟಮೊದಲ ಬಾರಿಗೆ ನನಗೆ ಬಸ್‌ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಹುಟ್ಟಿತ್ತು. ಅದಕ್ಕೂ ಮೊದಲಿನ ಬಯಕೆಗಳೆಲ್ಲ ಇದರ ಮುಂದೆ ಕ್ಷುಲ್ಲಕವೆನಿಸುವಷ್ಟು ಅಗಾಧ ಸೆಳೆತವನ್ನು ಹುಟ್ಟುಹಾಕಿತ್ತು ಆ ಕೆಲಸ. ಬಸ್‌ನಲ್ಲಿದ್ದಷ್ಟು ಹೊತ್ತು ಕ್ಲೀನರ್- ಕಂಡಕ್ಟರ್- ಡ್ರೈವರ್‌ಗಳ ಹಾವ-ಭಾವಗಳನ್ನು ನೋಡುವುದರಲ್ಲಿ ತಲ್ಲೀನನಾಗುತ್ತಿದ್ದೆ. ಬರುಬರುತ್ತಾ ಬಸ್‌ನ ಸೆಳೆತವನ್ನು ಮೀರಿಸುವಂತೆ ಕಾಡಿದ್ದು ಸುದ್ದಿವಾಹಿನಿಗಳು.
ಆ ಕಾಲದಲ್ಲಿ ಸುದ್ದಿವಾಹಿನಿಗಳು ಹೇಳುವುದೆಲ್ಲವನ್ನೂ ನಂಬಲಾಗುತ್ತಿತ್ತು. ಮತ್ತು ಸಮಾಜದ ಅನ್ಯಾಯಗಳನ್ನೆಲ್ಲ ಒಧ್ದೋಡಿಸಲೆಂದೇ ಸುದ್ದಿವಾಹಿನಿಗಳು ಮತ್ತು ಅದರಲ್ಲಿ ಕಾರ್ಯನಿರ್ವಹಿಸುವ ನಿರೂಪಕರು ಅವತರಿಸಿದರೆಂದು ಭಾವಿಸಲಾಗಿತ್ತು. ಆದ್ದರಿಂದ ನನಗೆ ಹೈಸ್ಕೂಲು ಮುಗಿಸುವ ವೇಳೆಗಾಗಲೇ ಸುದ್ದಿವಾಹಿನಿಗಳೆಡೆಗೆ ಅತೀವ ಸೆಳೆತ ಉಂಟಾಗಿ ನಾನು ಪತ್ರಕರ್ತನಾಗಲೇಬೇಕೆಂದು ನಿರ್ಧರಿಸಿಬಿಟ್ಟಿದ್ದೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿದ ಘಟನೆಗಳು ಸಂಭವಿಸುತ್ತವೆ. ಅಂತೆಯೇ ಎಸೆ ಸೆಲ್ಸಿ ಫಲಿತಾಂಶ ಬರಲು ಕೆಲವೇ ದಿನಗಳು ಬಾಕಿಯಿರುವಾಗ ನಮ್ಮ ಮನೆಗೆ ಭೇಟಿಯಿತ್ತ ವೈದ್ಯರೊಬ್ಬರು ನಾನು ಪಶುವೈದ್ಯನಾಗಲು ಅರ್ಹ ಮತ್ತು ಆ ಕ್ಷೇತ್ರಕ್ಕೆ ಬಹುಬೇಡಿಕೆ ಇದೆಯೆಂದು ಹೊಸ ಆಸೆಯೊಂದನ್ನು ಬಿತ್ತಿ ಹೋದರು. ಅಲ್ಲಿಯ ತನಕ ನಾಯಿ, ಬೆಕ್ಕು, ದನ, ಕರುಗಳನ್ನು ಮುದ್ದಾಡುವುದರಲ್ಲಿ ಖುಷಿ ಕಾಣುತ್ತಿದ್ದ ನಾನು ಪಶುವೈದ್ಯನಾಗುವ ಮೂಲಕ ಅವುಗಳ ಸೇವೆಯನ್ನೂ ಮಾಡಿ ಸಾರ್ಥಕ್ಯ ಕಾಣಬೇಕೆಂದು ಬಯಸಿ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಪಾಠ ಪ್ರವಚನ ಶುರುವಾದ ಕೆಲವೇ ದಿನಗಳಲ್ಲಿ ವಿಜ್ಞಾನ ವಿಷಯದ ಆಳ, ಅಗಲ ನನ್ನನ್ನು ದಿಗ್ಭ್ರಾಂತನನ್ನಾಗಿಸಿತ್ತು. ಅಲ್ಲಿಗೆ ಪಶುವೈದ್ಯನಾಗುವ ಆಸೆಯೂ ಮಂಕಾಯಿತು. ಪತ್ರಕರ್ತನಾಗಬೇಕೆಂಬ ನನ್ನ ಆಸೆ ಮತ್ತೆ ಚಿಗುರೊಡೆದು ಡಿಗ್ರಿಯಲ್ಲಿ ಪತ್ರಿಕೋದ್ಯಮದ ಹಾದಿ ಹಿಡಿಯಲು ಕಾರಣವಾಯಿತು.
ಈಗ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇನ್ನೇನು ಕೆಲಸ ಹಿಡಿಯಬೇಕೆಂಬ ಹೊತ್ತಿನಲ್ಲಿ ಇಷ್ಟು ವರ್ಷಗಳ ಆಸೆಗೆ ಅಡ್ಡಗಾಲು ಎಂಬಂತೆ ಕೋವಿಡ್ ಎದುರಾಗಿ ಕೂತಿದೆ. ಇಷ್ಟು ವರ್ಷಗಳ ಕಾಲ ಓದು, ಶಾಲಾಕಾಲೇಜು ಎಂಬ ನೆಪದಲ್ಲಿ ಊರಿನಿಂದ ದೂರವಿದ್ದ ನಾನು ಮೂರು ತಿಂಗಳುಗಳಿಂದ ಸತತವಾಗಿ ಮನೆಯಲ್ಲಿರುವುದರಿಂದ ವಾತಾವರಣ ನಿಧಾನಕ್ಕೆ ನನ್ನನ್ನು ಮತ್ತೆ ಊರಿನವನನ್ನಾಗಿಸಿಕೊಳ್ಳುತ್ತಿದೆ ಎಂಬ ಭಾವ ಕಾಡಲಾರಂಭಿಸಿದೆ. ಇದೇ ಪರಿಸ್ಥಿತಿ ಇನ್ನೊಂದೆರೆಡು ತಿಂಗಳು ಮುಂದುವರಿದರೆ ಮತ್ತೆ ನನ್ನ ಬಯಕೆ ಬದಲಾಗಲಿದೆಯೇ? ಕೃಷಿ, ಊರ ಹಸುರು, ನೆಮ್ಮದಿ, ಖುಷಿ ನನ್ನನ್ನು ಇಲ್ಲೇ ಇರುವಂತೆ ಪ್ರೇರೇಪಿಸಲಿದೆಯೇ? ನನಗಂತೂ ತಿಳಿಯದು. ಬದುಕು ಬಯಕೆಗಳ ಬಯಲು ರಂಗಮಂದಿರ ವಿದ್ದಂತೆ. ಇಲ್ಲಿ ಎಲ್ಲವುಗಳಿಗೂ ಮುಕ್ತ ಅವಕಾಶ. ನೀವೇನಂತೀರಿ?
ಸ್ಕಂದ ಆಗುಂಬೆ , ಎಸ್ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.