Moode: ಮೂಡೆ ಎಂಬ ಬಾಯಿ ಚಪ್ಪರಿಸುವ ತಿಂಡಿ
Team Udayavani, Dec 10, 2024, 5:51 PM IST
ಅದೊಂದು ನಗರದ ಪ್ರತಿಷ್ಠಿತ ಪೇಟೆ, ಟೆಂಪಲ್ ಸ್ಕ್ವೇರ್ ಎಂದೇ ಕರೆಸಿಕೊಳ್ಳುವ ಮಂಗಳೂರಿನ ರಥಬೀದಿ. ದೇವಸ್ಥಾನ, ಪುಸ್ತಕದ ಮಳಿಗೆ, ಕರಿದ ತಿನಿಸುಗಳು, ಹೂವಿನ ಮಾರುಕಟ್ಟೆ ಇವೆಲ್ಲವೂ ಈ ರಸ್ತೆಗೆ ಶೋಭೆಯನ್ನು ನೀಡುವ ಅಂಗಡಿಗಳು. ಇಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕು ಅಂದಿನ ಜೀವನ ಸಾಗಿಸಲು ಬಹು ಸುಲಭ. ಒಬ್ಬರು ಕುಳಿತು ವ್ಯಾಪಾರ ಮಾಡಿದರೆ, ಇನ್ನೊಬ್ಬರು ಅವರಿಗೆ ಅಲ್ಲೇ ಕುಳಿತು ಸಹಕರಿಸುತ್ತಾರೆ. ತಿಂಡಿಗಳೆಂದಾಗ ವಿಶೇಷವಾಗಿ ಇಲ್ಲಿ ನೆನಪಾಗುವುದು ಪ್ರಸಿದ್ದಿ ಪಡೆದ ಇಲ್ಲಿಯ ಮೂಡೆ.
ತುಳುನಾಡಿನಲ್ಲಿ ಅಷ್ಟಮಿ, ಚೌತಿ, ಈದ್, ತೆನೆ ಹಬ್ಬ ಬಂತೆಂದರೆ ಸಾಕು ಈ ಮೂಡೆ-ಕೊಟ್ಟೆಗಳಿಗೆ ಎಲ್ಲಿಲ್ಲದ ಬೇಡಿಕೆ. ಕೆಲವರು ದುಡ್ಡು ಕೊಟ್ಟು ತರಲು ಕಾತುರರಾಗಿದ್ದರೆ, ಇನ್ನು ಕೆಲವರು ಅದನ್ನು ತಯಾರಿಸಲು ಕಾತುರರಾಗಿರುತ್ತಾರೆ.
ಇಡ್ಲಿಯ ಹಿಟ್ಟು ಮೂಡೆ ತಯಾರಿಕೆಗೂ ಬಳಸುವಂತಹದ್ದು. ಅದರ ಜತೆಗೆ ತರಕಾರಿ ಸಾಂಬಾರು, ಚಿಕನ್ ಗ್ರೇವಿ ಅಥವಾ ತೆಂಗಿನಕಾಯಿಯ ಹಾಲು ಹಾಗೂ ಬೆಲ್ಲ ಮಿಶ್ರಿತ ಹಾಲಿನಲ್ಲಿ ತಿನ್ನುವ ರುಚಿ ಯಾವ ಇಡ್ಲಿಯಲ್ಲೂ ಸಿಗಲು ಸಾಧ್ಯವಿಲ್ಲ. ಕಾಡು ಪ್ರದೇಶದಲ್ಲಿ ಸಿಗುವ ಕೇದಗೆ(ಚಾಪೆ ಒಲಿ) ಗಿಡದ ಎಲೆಗಳಿಂದ ಈ ಮೂಡೆಗಳು ತಯಾರಾಗುತ್ತವೆ. ಮೂಡೆಗಳ ತಯಾರಿಕೆಯಲ್ಲಿ ಹಲವಾರು ಪ್ರಕ್ರಿಯೆಗಳಿವೆ. ಮೊದಲು ಎಲೆಗಳನ್ನು ಅವುಗಳ ಮುಳ್ಳುಗಳಿಂದ ಬೇರ್ಪಡಿಸಬೇಕು, ಅನಂತರ ಬೆಂಕಿಯಲ್ಲಿ ಎಲೆಗಳನ್ನು ಬಾಡಿಸಿ, ಸುತ್ತು ತಿರುಗಿಸಿ ಮೂಡೆಯ ಆಕಾರವನ್ನು ನೀಡುತ್ತಾರೆ.
ಹೀಗೆ ತಯಾರಾದ ಮೂಡೆ ಮಾಡಲು ಬೇಕಾದ ಕೊಟ್ಟೆಗಳು ಮಾರುಕಟ್ಟೆಯಲ್ಲಿ ನಲ್ವತ್ತರಿಂದ ನೂರು ರೂಪಾಯಿಯ ವರೆಗೂ ಮಾರಾಟ ಮಾಡಲಾಗುತ್ತದೆ. ಹಬ್ಬಗಳ ಹಾಗೂ ಬೇಡಿಕೆಗೆ ಅನುಸಾರವಾಗಿ ಇವುಗಳ ಬೆಲೆಯೂ ಬದಲಾವಣೆಯಾಗುತ್ತದೆ.
ಮೃದುವಾಗಿರುವ ಮೂಡೆಗಳನ್ನು ತಿನ್ನುವ ಖುಷಿಯೇ ಬೇರೆ. ಎರಡು ಮೂರು ದಿನಗಳವರೆಗೂ ಹಬೆಯಲ್ಲಿ ಬೇಯಿಸಿ ತಿಂದರೂ ಇದರ ರುಚಿ ಬದಲಾಗುವುದಿಲ್ಲ, ರುಚಿ ದುಪ್ಪಟ್ಟಾದಂತೆ ಭಾಸವಾಗುತ್ತದೆ.
ಮಳೆಗಾಲದಲ್ಲಿ ಈ ಎಲೆಗಳನ್ನು ಆಯ್ದುಕೊಳ್ಳುವುದು ಅಸಾಧ್ಯ ಹಾಗೂ ಎಲೆಯಲ್ಲಿರುವ ತೇವಾಂಶದಿಂದಾಗಿ ಇದನ್ನು ಸರಿಯಾದ ರೀತಿಯಲ್ಲಿ ಬಾಡಿಸುವುದು ದೊಡ್ಡ ಸವಾಲು ಎಂದು ವ್ಯಾಪಾರಿಗಳು ಹೇಳುತ್ತಾರೆ.
ಹಾಗೆಯೇ ಹಬ್ಬ ಹರಿ ದಿನಗಳಲ್ಲಿ ಹಳ್ಳಿಯ ಅಜ್ಜಿಯರು ಹೆಂಗಸರು ಕೇದಗೆ(ಚಾಪೆ ಒಲಿ) ಎಲೆಗಳನ್ನು ಹುಡುಕಲು ಕಾಡಿಗೆ ಹೋಗುತ್ತಾರೆ. ಸುತ್ತಮುತ್ತಲಿನ ಮನೆಗಳ ಹೆಂಗಸರು ಸೇರಿ ಒಬ್ಬರ ಅಂಗಳದಲ್ಲಿ ಕುಳಿತು ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಾ ಮೂಡೆಗಳನ್ನು ತಯಾರಿಸುತ್ತಾರೆ. ಹಳ್ಳಿಯಲ್ಲಿನ ಆ ದಿನಗಳು ಬಹಳ ಅಮೂಲ್ಯ ಹಾಗೂ ಸುಂದರವಾಗಿದ್ದವು. ಅದು ಸಮುದಾಯದ ಬಾಂಧವ್ಯವನ್ನು ಬಲಪಡಿಸಿದ ದಿನಗಳು ಮತ್ತು ಹಂಚಿದ ಅನುಭವಗಳು ಸಂಬಂಧಗಳನ್ನು ಗಟ್ಟಿ ಮಾಡಿದೆ ಎಂದರೂ ತಪ್ಪಾಗಲಾರದು.
ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಿದ್ಧ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿನ ಸಂತೋಷ ಮತ್ತು ಅಲ್ಲಿ ಬೆಸೆಯುತ್ತಿದ್ದ ಸಂಬಂಧ ಸಂಪರ್ಕಗಳನ್ನು ಈಗಿನ ಜನರು ಮರೆಯುತ್ತಿದ್ದಾರೆ.
ಸನ ಶೇಖ್ ಮುಬಿನ್
ಸಂತ ಅಲೋಶಿಯಸ್ ಪರಿಗಣಿತ ವಿವಿ,
ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.