ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ
Team Udayavani, Mar 4, 2021, 3:17 PM IST
ಮಕ್ಕಳಿಲ್ಲವೆಂಬುದು ಕೊರತೆಯ ಕಾರಣವಾಗದೆ, ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆ.
ಪರಿಸರ ಸಂರಕ್ಷಣೆಯೇ ನನ್ನ ಬದುಕಿನ ದಾರಿ. ಆ ದಾರಿಯ ಅರಸಿ ಬರುವ ನಾವಿಕರಿಗೆ ನನ್ನ ಮರಗಳು ಮಂದಹಾಸದ ನಗೆಯೊಂದಿಗೆ ತಂಪನು ಉಣಿಸುತ್ತವೆ. ಮಾಲಿನ್ಯರಹಿತ, ಮನುಷ್ಯ ನಿರ್ಮಿತ ನೈದಿಲೆಯಂತಹ ಸೊಗಸಾದ ಸಾವಿರ ಸಾಲುಗಳ ಪಯಣಕ್ಕೆ ತಿಮ್ಮಕ್ಕನ ಮರಗಳ ನೆರೆಳೇ ನವೀನ.
ಪರಿಸರವೇ ಜೀವನವೆಂದು ಬದುಕುವ ಪರಿಯೇ ನಿರ್ಮಲ. ಸ್ವತ್ಛ ಗಾಳಿ, ತಂಪಾದ ನೆರಳಿನ ವಾತಾವರಣ, ಇವೆಲ್ಲದಕ್ಕೂ ಮಿಗಿಲಾಗಿ ಪರಿಸರವನ್ನು ಪಾಲಿಸಿ-ಪೋಷಿಸಿ, ತನುಮನದಿ ಸಾವಿರ ಸಾಲುಗಳ ಗಿಡಗಳ ತಾಯಾಗಿ, ವೃಕ್ಷಗಳ ಹೆಮ್ಮೆಯ ನಾಯಕಿಯಾಗಿ, ಬದುಕೇ ಹಸುರಿನ ಹೊದಿಕೆಯಾಗಿ, ನಾಗರಿಕ ಸಮಾಜದ ಮಾದರಿಯಾಗಿ, ಎಲೆಮರೆಯ ಕಾಯಿಯಿಂದ ಹೆಮ್ಮರವಾಗಿ ಬೆಳೆದು ಬಂದ ಈ ಮಾತೆಯೇ ಸಾಲುಮರದ ತಿಮ್ಮಕ್ಕ. ಸಾವಿರ ಮುತ್ತುಗಳ ಒಡತಿ.
ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದರು. ಶಿಕ್ಷಣದ ಗಂಧವೇ ತಿಳಿಯದ ಇವರು, ಹೊಟ್ಟೆ ಬಟ್ಟೆಗಾಗಿ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ತಮ್ಮ ದಿನಗಳನ್ನು ಕಳೆದರು. ಸಂದರ್ಭಗಳ ಅಲೆಯಲ್ಲಿ ಪ್ರೀತಿಯ ಚಿಲುಮೆಗೆ ಸಾಕ್ಷಿಯಾಗಿ ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾದರು. ವರ್ಷಗಳು ಉರುಳಿದರೂ ಮಕ್ಕಳಾಗಲಿಲ್ಲ. ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಮೊದಲಿಗೆ ಆಲದ ಮರಗಳನ್ನು ನೆಡುವ ಮೂಲಕ ತಮ್ಮ ಜೀವನದಲ್ಲಿ ಖುಷಿಯನ್ನು ಹುಡುಕಲು ಆರಂಭಿಸಿದರು.
ಆಲದ ಮರಗಳ ಸಾಲೇ ತಿಮ್ಮಕ್ಕರವರ ಪರಿಸರದ ಸುತ್ತಮುತ್ತ ವಿಜೃಂಭಿಸುತ್ತಿದ್ದವು. ಪ್ರತಿಯೊಬ್ಬರಿಗೂ ಪ್ರತೀ ವಿಷಯವೂ ಕಾಮನಬಿಲ್ಲಿನ ಬಣ್ಣದ ಹಾಗೇ ಕಾಣುವ ರೀತಿಯೇ ಬೇರೆ. ತಿಮ್ಮಕ್ಕ ಮತ್ತು ಅವರ ಪತಿಯ ಕಣ್ಣುಗಳು ವಿಶಾಲ ಹೃದಯವೇ ಈ ಬದಲಾವಣೆಗೆ ಕಾರಣವೂ ಹೌದು. ಮೊದಲಿಗೆ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿ ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರದಲ್ಲಿ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿಯಲ್ಲಿ ಒಮ್ಮೆ ಹಾದುಹೋದರೆ ನಮಗೆ ಕಾಣಸಿಗುವುದೇ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು. ಅವರ ಪೋಷಣೆಯಲ್ಲಿ ಹಸನ್ಮುಖೀಗಳಾಗಿ ಬೆಳೆದ ಹಸಿರು ಶಾಲಿನ, ಮುಗಿಲು ಮುಟ್ಟುವ ಅಂಬರ ಸ್ನೇಹಿ ಮಕ್ಕಳು.
ತಿಮ್ಮಕ್ಕನ ಭಾವಗಳಿಗೆ ಬೆಳಕಾದ ಮಕ್ಕಳೇ ಈ ಸಸಿಗಳು. ಇಂದು ಬೆಳೆದಿರುವ ಪರಿಸರದ ಆಶಾಕಿರಣಗಳು. ತಮ್ಮ ಮಕ್ಕಳಾದ ಸಸಿಗಳನ್ನು ನೆಡಲು, ಬೆಳೆಸಲು, ಪೋಷಿಸಲು ತಮ್ಮ ದಿನದ ಆದಾಯವನ್ನೇ ಬಳಸಿದರು. ಮಕ್ಕಳ ಹೊಟ್ಟೆಯೇ ಮೊದಲು ಎಂಬುದು ಯಾವ ತಾಯಿಗೂ ಮಿಗಿಲು. ಹಾಗೆಯೇ ಸಸಿಗಳ ಬಾಯಾರಿಕೆ, ಹಸಿವನ್ನು ತಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರು, ಗೊಬ್ಬರವನ್ನು ತುಂಬಿ ನಾಲ್ಕು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿದರು. ಸಸಿಗಳು ಬೆಳೆಯಲು ನೀರಿನ ಆವಶ್ಯಕತೆಯಿರುವುದರಿಂದ, ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ತಿಮ್ಮಕ್ಕನ ಪ್ರೀತಿಯ ಸಲುಗೆಗೆ ಸಾಕ್ಷಿಯಾಗಿ, ಶ್ರಮದ ಫಲವಾಗಿ ಬರುವ ಮುಂಗಾರಿನ ಹೊತ್ತಿಗೆ ಈ ಎಲ್ಲ ಸಸಿಗಳು ಚಿಗುರಿ ಬೆಳೆದವು.
ಸಾವಿರಾರು ಸಸಿಗಳು, ಗಿಡಮರ ಬಳ್ಳಿಗಳು ತಿಮ್ಮಕ್ಕನ ಹೃದಯ ವೈಶಾಲ್ಯದ ಆಶ್ರಯದಿ ಬೆಳೆದು, ಪರಿಸರ ಸ್ನೇಹಿ ವಾತವರಣ ನಿರ್ಮಿಸಿ, ಹೊಳಪಿನ ದಾರಿಯ ಕಸಿಮಾಡಿದ ಅವರ ತಾಳ್ಮೆಗೆ, ಸಹನೆಗೆ ಭವಿಷ್ಯ ತಂಪಾದ ಗಾಳಿಯಲ್ಲಿ ಮೀಯುತ್ತಿದೆ. ಪರಿಸರ ಮಾಲಿನ್ಯವ ತಡೆಯಲು ಇಂತಹ ಉತ್ತಮ ಪರಿಸರ ಸ್ನೇಹಿ ಕೆಲಸಗಳನ್ನು ಪ್ರತಿಯೊಬ್ಬರೂ ಮಾಡಬೇಕು.
ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರಕಾರವು ವಹಿಸಿಕೊಂಡಿದೆ. ಮಹತ್ತರ ಕಾರ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವರ ಈ ಬಹುಮುಖೀ ಕಾರ್ಯಕ್ಕೆ ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ ನೀಡಿ ಸಮ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್, ಕ್ಯಾಲಿಫೋರ್ನಿ ಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ. ಭಾರತದ ಹಲವಾರು ಕಾಡುಗಳನ್ನು ಉಳಿಸಿ-ಬೆಳೆಸಿ, ಪುನಶ್ಚೇತನಗೊಳಿಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತದೆ.
ಜೀವನದ ಸಂಪೂರ್ಣ ಅವಧಿಯನ್ನು ಸಮಾಜ ಸೇವೆಯ ಕೆಲಸಗಳಲ್ಲಿ ಇಂದಿಗೂ ತೊಡಗಿಸಿಕೊಂಡಿದ್ದಾರೆ. ತಾವು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಆಸ್ಪತ್ರೆಯನ್ನು ಕಟ್ಟುವ ಆಸೆಯನ್ನಿಟ್ಟುಕೊಂಡು, ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂತಹ ಜೀವಿಯ ಬದುಕು ಎಲ್ಲರಿಗೂ ಮಾದರಿಯುತ ವಾಗಿದೆ. ನಮ್ಮ ನೆಲ, ಜಲ, ಪರಿಸರ ಇವುಗಳ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂಬ ಸಾಮಾನ್ಯ ಪ್ರಜ್ಞೆಯ ಸ್ಥಿತಿವಂತರಾದರೆ ತಿಮ್ಮಕ್ಕನಂತಹ ಸಾವಿರ ಸಾವಿರ ಮುತ್ತುಗ ಳೊಂದಿಗೆ ಇಡೀ ಭೂಮಿಯನ್ನು ಹಸುರು ನಿಶಾನೆ ಮಾಡಬಹುದು.
ಅಭಿಷೇಕ್ ಎಂ.ವಿ., ತುಮಕೂರು, ವಿಶ್ವವಿದ್ಯಾನಿಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.