UV Fusion: ಹದ್ದು ಮೀರದೆ ಹದ್ದಿನಂತಾಗೋಣ
Team Udayavani, Mar 18, 2024, 3:10 PM IST
ನಾವು ಕಾಣುವ ಜೀವಸಂಕುಲದಲ್ಲಿ ಪ್ರಾಣಿ ಮತ್ತು ಪಕ್ಷಿಗಳೆಂಬ ಎರಡು ಪ್ರಭೇದಗಳಿವೆ. ಜೀವನ ಕ್ರಮ ಹಾಗೂ ವೈವಿಧ್ಯಗಳಲ್ಲಿ ಎರಡೂ ಅನನ್ಯತೆಯನ್ನು ಹೊಂದಿವೆ. ಪ್ರಾಣಿಗಳಲ್ಲಿ ಸಿಂಹ ಬಲಿಷ್ಠವೆನಿಸಿದರೆ, ಪಕ್ಷಿ ಸಂಕುಲದಲ್ಲಿ ಹದ್ದು ತನ್ನ ಮೇರು ಸ್ಥಾನವನ್ನು ಪಡೆದುಕೊಂಡಿದೆ. ನಾವು ಹದ್ದಿನ ಮನಃಸ್ಥಿತಿಯಿಂದ ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು ಮತ್ತು ಯಶಸ್ಸನ್ನು ಸಾಧಿಸಲು ನಮ್ಮ ಸ್ವಂತ ಜೀವನಕ್ಕೆ ಅನ್ವಯಿಸಿಕೊಳ್ಳಬಹುದು. ಆಕಾಶವನ್ನು ಮುಟ್ಟಬಲ್ಲ ಸಾಮರ್ಥ್ಯ ಇರುವ ಪಕ್ಷಿ ಒಂದಿದೆ ಎಂದಾದರೆ ಅದು ಹದ್ದು.
ಹದ್ದು ಒಬ್ಬಂಟಿಯಾಗಿ ಬಾನೆತ್ತರಕ್ಕೆ ಹಾರುತ್ತದೆ. ಯಾವುದೇ ಕಾರಣಕ್ಕೂ ಪಾರಿವಾಳ, ಗಿಳಿ, ಕಾಗೆಗಳ ಜತೆಗಲ್ಲ. ಇದೇ ರೀತಿ ಯಾವುದೇ ಯಶಸ್ಸನ್ನು ಗಳಿಸಬೇಕಾದರೆ ಮೊದಲು ನಮ್ಮ ಮನಃಸ್ಥಿತಿ ಗಟ್ಟಿಯಾಗಿರಬೇಕು. ಸ್ವ-ಪ್ರಯತ್ನ, ಪರಿಶ್ರಮ ಮುಖ್ಯ. ಕಾಲೆಳೆಯುವವರಿಂದ ದೂರವಿದ್ದು, ನಕಾರಾತ್ಮಕ ಮನಃಸ್ಥಿತಿಯವರಿಂದ ಆದಷ್ಟು ಅಂತರವನ್ನು ಕಾಪಾಡಿಕೊಳ್ಳುವುದು ಉತ್ತಮ. ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಲ್ಲೆ ಎನ್ನುವ ಛಾತಿ ನಮ್ಮದಾಗಬೇಕು.
ಹದ್ದು ನಿಖರ ದೃಷ್ಟಿ ಹಾಗೂ ಗುರಿಯನ್ನು ಹೊಂದಿರುತ್ತದೆ. ಸುಮಾರು ಮೂರು ಕಿಲೋ ಮೀಟರ್ ದೂರದ ತನ್ನ ಬೇಟೆಯನ್ನು ನಿಖರವಾಗಿ ಗುರುತಿಸುತ್ತದೆ. ಅದರ ಲೇಸರ್‌ನಂತಹ ಗುರಿ ಬೇಟೆ ಮೇಲೆ ಮಾತ್ರ. ಎಷ್ಟೇ ಕಷ್ಟವಾದರೂ ಎಂತದ್ದೇ ಪರಿಸ್ಥಿತಿ ಇದ್ದರೂ ಇಟ್ಟ ಗುರಿ ತಪ್ಪಿಸಲಾರದು ಈ ಹದ್ದು. ನಾವು ಕೂಡ ಹಿಡಿದ ಕೆಲಸವನ್ನು ಬಿಡದೆ ಸತತ ಪ್ರಯತ್ನದಿಂದ ಹಾಗೂ ಏಕಾಗ್ರತೆಯಿಂದ ನಿಶ್ಚಿತ ಗುರಿಯಡೆಗೆ ಸಾಗುವುದನ್ನು ಈ ಗುಣ ಕಲಿಸಿಕೊಡುತ್ತದೆ.
ಹದ್ದು ಯಾವತ್ತಿಗೂ ಸತ್ತ ಆಹಾರವನ್ನು ಸೇವಿಸುವುದಿಲ್ಲ. ಜೀವಂತ ಇರುವ ಪ್ರಾಣಿಗಳನ್ನು ಬೇಟೆಯಾಡಿಯೇ ತಿನ್ನುತ್ತದೆ. ಆಲಸಿಗುಣ ಅದರದ್ದಲ್ಲ. ಇಲ್ಲಿ ಸತ್ತಿರುವುದು ಭೂತಕಾಲದ್ದು. ಬೇಟೆಯಾಡಿ ತಿನ್ನುವುದು ವರ್ತಮಾನಕ್ಕೆ ಸಂಬಂಧಿಸಿದ್ದು. ಭೂತಕಾಲದ ವಿಚಾರಗಳು ನಮಗಿಂದು ನಗಣ್ಯವಾಗಬೇಕು. ಪ್ರಸ್ತುತ ಮಾತ್ರವೇ ಮುಖ್ಯವಾಗಬೇಕು.
ಹದ್ದಿಗೆ ಬಿರುಗಾಳಿ ಎಂದರೆ ಪರಮ ಸುಖ. ಬೇರೆ ಪಕ್ಷಿಗಳು ಬಿರುಗಾಳಿಗೆ ಹೆದರಿ ತರಗುಟ್ಟಿ ಹೋದರೆ, ಹದ್ದು ಬಿರುಗಾಳಿಯಲ್ಲಿ ತೇಲುತ್ತಾ, ಜೀಕುತ್ತ, ಲಗಾಟಿ ಹಾಕುತ್ತಾ, ಎತ್ತರ ಎತ್ತರಕ್ಕೆ ಹಾರುತ್ತಾ, ಬಿರುಗಾಳಿಗೆ ಎದುರು ನಿಲ್ಲುತ್ತದೆ. ಕಷ್ಟದ ಸಂದರ್ಭದಲ್ಲೂ ಸಿಗುವ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ನಮಗಿದು ಸೂಚಿಸುತ್ತದೆ.
ತಾಯಿ ಹದ್ದು ಯಾವಾಗಲೂ ತನ್ನ ಗೂಡಿನಲ್ಲಿರುವ ಮೃದುವಾದ ಹುಲ್ಲನ್ನು ಹೊರ ತೆಗೆಯುತ್ತಿರುತ್ತದೆ. ಮೆದುತನವಿದ್ದರೆ ತನ್ನ ಮರಿಗಳು ಎಲ್ಲಿ ಆಲಸಿಗಳಾಗುತ್ತವೋ, ಗುಟುಕಿಗೆ ಹಾತೊರೆಯಲಾರವೋ, ರೆಕ್ಕೆ ಬಿಚ್ಚಲಾರವೋ ಎನ್ನುವ ಕಾಳಜಿ. ಸಮತಟ್ಟಾದ ರಸ್ತೆಗಳು ಹೇಗೆ ಉತ್ತಮ ಚಾಲಕನನ್ನು ರೂಪಿಸುವುದಿಲ್ಲವೋ ಹಾಗೆಯೇ ಕಷ್ಟಗಳೇ ಇಲ್ಲದ ಜೀವನ ಸರಿಯಾದ ವ್ಯಕ್ತಿಯನ್ನು ರೂಪಿಸಲಾರವು. ಸಮಸ್ಯೆಗಳನ್ನು ಎದುರಿಸುವುದು ಪ್ರಾರಂಭದಿಂದಲೇ ರೂಢಿ ಆಗಬೇಕು. ಬದುಕು ಯಾವತ್ತೂ ಸುಖದ ಸುಪ್ಪತ್ತಿಗೆ ಅಲ್ಲ.
ಹೆಣ್ಣು ಹದ್ದು ಸುಖಾ ಸುಮ್ಮನೆ ಗಂಡು ಹದ್ದನ್ನು ನಂಬುವುದಿಲ್ಲ. ಅದರ ಬದ್ಧತೆಯನ್ನು ಪರೀಕ್ಷಿಸುತ್ತದೆ. ಗಂಡು ಹದ್ದಿನ ಬದ್ಧತೆಯನ್ನು ಪರೀಕ್ಷಿಸಲು, ಹೆಣ್ಣು ಹದ್ದು ರೆಂಬೆಯನ್ನು ಹಿಡಿದುಕೊಂಡು ಆಕಾಶದೆತ್ತರಕ್ಕೆ ಹಾರಿ, ಅಲ್ಲಿಂದ ತಾನು ಹಿಡಿದುಕೊಂಡಿರುವ ರೆಂಬೆಯನ್ನು ಬೀಳಿಸಿ ಅದನ್ನು ಹಿಡಿಯಲು ಗಂಡು ಹದ್ದಿಗೆ ಸೂಚಿಸುತ್ತದೆ. ಭೂಮಿಗೆ ರೆಂಬೆ ಬೀಳುವ ಮೊದಲೇ ಗಂಡು ಹದ್ದು ಅದನ್ನು ಹಿಡಿದುಕೊಂಡರೆ ಹೆಣ್ಣು ಹದ್ದು ಆ ಗಂಡು ಹದ್ದನ್ನು ನಂಬುತ್ತದೆ. ಇಲ್ಲವೆಂದರೆ ನೀನೊಂದು ತೀರ ನಾನೊಂದು ತೀರ. ಯಾವುದೇ ವ್ಯಕ್ತಿಯನ್ನು ನಂಬುವುದಕ್ಕಿಂತ ಮುಂಚೆ ಆತನ ಯೋಗ್ಯತೆ, ಕೌಶಲ, ಸಾಮರ್ಥ್ಯಗಳನ್ನು ಮೊದಲೇ ತಿಳಿದಿರಬೇಕಾಗುತ್ತದೆ. ಮೊದಲೇ ನಂಬಿ ಮೋಸ ಹೋಗುವುದು ತರವಲ್ಲ.
ಹೋರಾಡು ಬಿಳ್ವನ್ನಮೊಬ್ಬಂಟಿ ಯಾದೊಡಂ
ಧೀರ ಪಥವನೆ ಬೆದಕು ಸಕಲ ಸಮಯದೊಳ್
ದೂರದಲ್ಲಿ ಗೊಣಗುತ್ತಾ ಬಾಳುವ ಬಾಳ್ಗೆàನು ಬೆಲೆ?
ಹೋರಿ ಸತ್ವವ ಮೆರೆಸು ಮಂಕುತಿಮ್ಮ
ಎನ್ನುವಂತೆ ಹದ್ದಿನ ಮನಸ್ಥಿತಿ ನಮ್ಮ ಯಶಸ್ವಿ ಜೀವನಕ್ಕೆ ಪ್ರಬಲವಾದ ನೀಲನಕ್ಷೆಯನ್ನು ನೀಡುತ್ತದೆ. ನಿಶ್ಚಿತ ಪ್ರಯತ್ನದೊಂದಿಗೆ ವ್ಯಕ್ತಿ ತನ್ನ ಸಂಪೂರ್ಣ ಸಾಮರ್ಥ್ಯಗಳನ್ನು ಹೊರ ಹಾಕಬಹುದು ಮತ್ತು ಸಾಧನೆಯ ಹೊಸ ಎತ್ತರಕ್ಕೆ ಹಾರಬಹುದು.
-ಕೆ.ಟಿ. ಮಲ್ಲಿಕಾರ್ಜುನಯ್ಯ
ಶಿಕ್ಷಕರು ಕಳ್ಳಿಪಾಳ್ಯ, ಕೊರಟಗೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.