ಬುಕ್‌ಟಾಕ್: ಯು. ಆರ್. ಅನಂತ ಮೂರ್ತಿ ಅವರ ಭಾರತೀಪುರ
Team Udayavani, Apr 1, 2021, 6:25 PM IST
ಮಲೆನಾಡಿನ ಜಮೀನುದಾರ ವಂಶದ ಜಗನ್ನಾಥ ಲಂಡನ್‌ನಲ್ಲಿ ಓದಿ ಬಂದವನು. ತನ್ನ ಊರಿನ ವಾಸ್ತವತೆಯನ್ನು ಅರಿತು ಈ ದೇಶದ ದಲಿತರ, ಕೆಳಜಾತಿಯವರ ಮೇಲೆ ನಡೆದ ಶೋಷಣೆಯನ್ನು ಗ್ರಹಿಸಿ ತಾನು ಇದಕ್ಕೇನಾದರೂ ಮಾಡಲೇಬೇಕೆಂದು ಕ್ರಾಂತಿಯ ಆಸೆ ಮೂಡಿಸಿಕೊಂಡವನು.
ಅದಕ್ಕಾಗಿ ಆತ ಬದಲಾವಣೆಗಳನ್ನು ತರುವ ಕಾರ್ಯಗಳನ್ನು ಆರಂಭಿಸುವಲ್ಲಿಂದ ಭಾರತೀಪುರ ಹಂತಹಂತವಾಗಿ ಓದುಗರಿಗೆ ತೆರೆದುಕೊಳ್ಳುತ್ತಾ ಸಾಗುತ್ತದೆ.
ಊರಿನಲ್ಲಿ ಆಚರಿಸಲ್ಪಡುತ್ತಿದ್ದ ಅಸ್ಪೃಶ್ಯತೆ, ಜಾತಿ ತಾರತಮ್ಯ, ಮೊದಲಾದವುಗಳನ್ನು ಅನಾಚಾರಗಳೆಂದು ತಿಳಿದು, ಹೊಲೆಯರ ಉದ್ಧಾರವಾಗದೇ ಈ ಊರು ಚಲಿಸುವುದಿಲ್ಲ. ಇಲ್ಲಿನ ಬ್ರಾಹ್ಮಣಶಾಹೀ ಪರಿಸರದ ಮುಕ್ತಾಯವಾಗದೇ ಏನೂ ಹೊಸತು ಹುಟ್ಟುವುದಿಲ್ಲವೆಂದು ಭಾವಿಸಿ ಭಾರತೀಪುರದಲ್ಲಿ ಮಂಜುನಾಥನ ಸನ್ನಿಧಿಗೆ ಹೊಲೆಯರನ್ನು ಪ್ರವೇಶಿಸುವ ಕನಸ್ಸನ್ನು ಜಗನ್ನಾಥ ಕಾಣುತ್ತಾನೆ.
ಅವರಿಗೆ ಅಕ್ಷರಾಭ್ಯಾಸ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಎಷ್ಟೇ ತಾನು ಅವರನ್ನು ಹತ್ತಿರವಾಗಿಸಿಕೊಳ್ಳಲು ಪ್ರಯತ್ನಿಸಿದರೂ ಪರಂಪರಾಗತವಾಗಿ ಬಂದ ಕಟ್ಟುಪಾಡುಗಳಿಂದ ಆಚೆ ಬರಲು ಅವರು ಹೆಣಗುತ್ತಾರೆಂದರೆ ಅದೆಷ್ಟು ಆಳವಾಗಿ ಮೌಡ್ಯವನ್ನು ಬಿತ್ತಲಾಗಿದೆಯೆಂಬುದನ್ನು ಪರಾಮರ್ಷಿಸುತ್ತಾನೆ. ದೇವರ ಮೇಲಿನ ನಂಬಿಕೆ ಕಳೆದುಕೊಳ್ಳದೇ ಈ ಜನ ಮುಂದೆ ಬರುವುದಿಲ್ಲವೆಂಬ ಭಾವನೆ ಜಗನ್ನಾಥನದ್ದಾಗಿದ್ದೂ ಆತ ನಿರೀಶ್ವರವಾದಿಯಾಗಿದ್ದುಕೊಂಡು ಹೊಲೆಯರನ್ನು ಮಂದಿರ ಪ್ರವೇಶಕ್ಕೆ ಕರೆ ಕೊಡುವುದು ವಿರೋಧಾಭಾಸಕ್ಕೆ ಒಳಗಾದರೂ ಅದು ಸಮಾನತೆಯ ಹಾದಿಯಲ್ಲಿ ಔಚಿತ್ಯಪೂರ್ಣವಾದದ್ದೇ ಆಗುತ್ತದೆ.
ಸಾಲಿಗ್ರಾಮವನ್ನು ತಾನಾಗಿಯೇ ತಂದೊಡ್ಡಿದರೂ ಹೊಲೆಯರು ಮುಟ್ಟುವುದಿಲ್ಲವೆಂಬ ಸತ್ಯ ಕಂಡು ಖನ್ನನಾಗುವ ಜಗನ್ನಾಥ ಆಳವಾಗಿ ಬೇರೂರಿದ ಈ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಎಷ್ಟು ಜಟಿಲವಾದ್ದು ಎಂಬುದನ್ನು ಮನಗಾಣುತ್ತಾನೆ. ಹೊಲೆಯರಲ್ಲಿ ಭೂತರಾಯನ ನಂಬಿಕೆ ಉಳಿಸುವ ಸಲುವಾಗಿಯೇ ನಡೆಸುವ ಮಸಲತ್ತುಗಳು ಹೇಗೆ ಅವರನ್ನು ದಾಸ್ಯದ ನೆರಳಲ್ಲೇ ಬದುಕುವಂತೆ ಮಾಡುತ್ತದೆಯೆಂಬುದರ ಚಿತ್ರಣವನ್ನು ನೀಡುತ್ತಾರೆ.
ಬ್ರಾಹ್ಮಣನಾಗಿದ್ದೂ ಕೆಳವರ್ಗದವರ ದನಿಯಾಗುವಾಗ ಎದುರಿಸುವ ನಿಕೃಷ್ಟವನ್ನು ತಲೆ ಮೇಲೆ ಹೊತ್ತು ಮುನ್ನಡೆಯುವ ಜಗನ್ನಾಥನ ನಿರ್ಧಾರ ಅಚಲವಾದದ್ದು. ಅದರ ಫಲವಾಗಿಯೇ ಕೊನೆಗೂ ಕೆಳಜಾತಿಯವರನ್ನು ಮಂಜುನಾಥನ ದೇವಾಲಯವನ್ನು ಪ್ರವೇಶಿಸುವಂತೆ ಮಾಡುವಲ್ಲಿ ಸಫಲನಾಗುತ್ತಾನೆ. ಆದರೆ ಗಣೇಶ ಭಟ್ಟನ ಚರಿತ್ರೆ ಇಲ್ಲಿ ಇನ್ನೂ ಮುಖ್ಯವಾಗುತ್ತದೆ. ಕಾರಣ ಬ್ರಾಹ್ಮಣ ಪುರೋಹಿತನ ಮಗನಾಗಿ ಆತನ ನಾಸ್ತಿಕ ವಿಚಾರಗಳೂ, ಸಂಪ್ರದಾಯದ ಕಟ್ಟೆಯೊಳಗಿನ ಮೌಡ್ಯಗಳು ಆತನನ್ನು ಹೇಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತೆಂಬುದು ಹಲವಾರು ಪ್ರಾತ್ಯಕ್ಷಿಕ ಉದಾಹರಣೆಗಳ ಅಭಿವ್ಯಕ್ತಿಯಾಗುತ್ತದೆ. ಜನ ಹೇಗೆ ಅಷ್ಟು ಸುಲಭವಾಗಿ ಮಂಜುನಾಥ ಸ್ವಾಮಿಯ ವಿಗ್ರಹ ಕಾಣೆಯಾದದ್ದು ಭೂತರಾಯನ ಕ್ರಿಯೆಯೆಂದು ನಂಬಿದರೆಂಬುದು ಜಗನ್ನಾಥನಿಗೆ ದ್ವಂದ್ವವಾಗಿ ಈ ಭಾರತೀಪುರದ/ಭಾರತೀಯ ಜನರ ಮನಸ್ಥಿತಿಯನ್ನು ಬದಲಾಯಿಸುವುದು ಅಷ್ಟು ಸುಲಭದ್ದಲ್ಲವೆನ್ನುವಲ್ಲಿಗೆ ಕಾದಂಬರಿ ಮುಗಿಯುತ್ತದೆ.
ದಕ್ಕಬೇಕಾದ್ದನ್ನು ದಕ್ಕಿಸಿಕೊಳ್ಳುವಂತೆ ಮಾಡಲು ಕೆಳವರ್ಗದವರನ್ನು ಬಂಡಾಯವೇಳಿಸುವ ರೊಚ್ಚಿಗೆ ಬೀಳುವಂತೆ ಮಾಡುವ ಜಗನ್ನಾಥನ ಪ್ರಯತ್ನವನ್ನು ಮಟ್ಟಹಾಕುವ ಶಕ್ತಿಗಳು ಹೇಗೆ ಈ ವ್ಯವಸ್ಥೆಯನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂಬುದರ ಚಿತ್ರಣವನ್ನು ಲೇಖಕರು ಓದುಗರಿಗೆ ನೀಡುತ್ತಾರೆ.
ಗಾಂಧಿ,ಲೋಹಿಯಾ ವಿಚಾರಗಳಿಂದ ಪ್ರಭಾವಿತನಾದ ಜಗನ್ನಾಥನ ಮುಖಾಂತರ ಅಭಿವ್ಯಕ್ತಿಸಿದ ಕಥಾನಕವು ಲೇಖಕರ ಸಮಾಜವಾದದ ದೃಷ್ಟಿಕೋನವನ್ನೂ ಓದುಗನಿಗೆ ತಲುಪಿಸುವಲ್ಲಿ ಅನಂತಮೂರ್ತಿಯವರು ಗೆದ್ದಿದ್ದಾರೆ. ಎಷ್ಟು ಬೇಕೋ ಅಷ್ಟು ಮಾತ್ರ ವಿಷಯಗಳನ್ನು ಪ್ರತಿಪಾದಿಸುವ ಮೂಲಕ ಎಲ್ಲಿಯೂ ಎಳೆದಂತೆನಿಸದೇ, ಭಾಷೆಯೂ ಅಷ್ಟೇ ಹಿಡಿತದಿಂದ ಒಂದು ಸಶಕ್ತ ಕಾದಂಬರಿಯಾಗಿ ಭಾರತೀಪುರ ನಮ್ಮೆದುರಿಗಿದೆ. ಜಾತಿಯ ಆಳ ಅರಿಯುವ ಪ್ರಯತ್ನದಲ್ಲಿ ನಮಗಿದೊಂದು ಬಹುಮುಖ್ಯವಾದ ಕಾದಂಬರಿಯೆನಿಸುತ್ತದೆ.
ರತೀಶ ಹೆಬ್ಟಾರ, ಶಾರದಾ ವಿಲಾಸ ಕಾಲೇಜು ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.