ವಿಧಿ ಲಿಖಿತ ಬದಲಿಸಿದ ಭಾರತ ಭಾಗ್ಯವಿಧಾತ
Team Udayavani, Apr 10, 2021, 4:04 PM IST
ಅದು ಕತ್ತಲೆಯ ಕಾಲ. ಸುತ್ತಲಿನ ಜನರಲ್ಲಿ ಮೌಡ್ಯತೆ ತುಂಬಿ ಜಾತೀಯತೆ ತಾಂಡವವಾಡುತ್ತಿದ್ದ ಕಾಲ. ಕತ್ತಲೆಯ ಕೋಣೆಗೆ ಸಣ್ಣ ಹಣತೆಯಂತೆ, ಏಳು ಬಣ್ಣಗಳ ನಡುವೆ ಶ್ವೇತ ಬಣ್ಣದಂತೆ, ಗ್ರಹಣ ಬಡಿದ ಮನಸ್ಸುಗಳಿಗೆ ಜಾತಕದ ಸೂತಕ ಕಳೆಯುವ ಸಂತನಂತೆ ಭೂಮಿಗೆ ಬಂದ ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್.
ಡಾ| ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಳುತ್ತಲೇ ಬೆಳೆದ ಹೃದಯ ನಮ್ಮದು. ಶ್ರಮ ಎಂದರೇನು? ಬದಲಾವಣೆ ಎಂದರೇನು? ಛಲ ಎಂದರೇನು? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ಅವರ ಹೆಸರೊಂದೇ ಎಂದರೆ ತಪ್ಪಾಗಲಾರದು. ದಾರಿಯೇ ಕಾಣದ ದಿಕ್ಕಿನಲ್ಲಿ ಹೊಸ ಹೆದ್ದಾರಿ ಸೃಷ್ಟಿಸಿದ ಧೀಮಂತ ನಾಯಕ, ಕಾಯಕ ಪ್ರಿಯ ಅಂಬೇಡ್ಕರ್. ನಾವು ನೀವು ಸಾಮಾನ್ಯವಾಗಿ ಅವಕಾಶಗಳು ಕೈ ಚೆಲ್ಲಿದಾಗ ಹತಾಶರಾಗಿ ಬದುಕು ಮುಗಿಯಿತೆಂದು ಕಣ್ಣೀರು ಹಾಕುತ್ತ ಕುಳಿತು ಬಿಡುತ್ತೇವೆ. ಆದರೆ ಬಾಬಾ ಸಾಹೇಬ್ ಅವರ ಜೀವನ ಓದಿ ತಿಳಿದಾಗ ಅವರ ಎದೆಗಾರಿಕೆ, ಜ್ಞಾನ ಪ್ರತಿಯೊಬ್ಬ ಭಾರತೀಯನ ಎದೆಯೊಳಗೆ ಜೀವಂತವಾಗಿರಬೇಕು. ಇಂದು ಅಂತಹ ನಾಯಕರ ಅವಶ್ಯಕತೆ ನಮಗಿದೆ.
ಸಮಾನತೆಯ ಹರಿಕಾರನ ಬೆಳಕು 14ನೇ ಎಪ್ರಿಲ್, 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ರಾಮಜಿ ಸಕಾ³ಲ್ ಮತ್ತು ತಾಯಿ ಭೀಮಾಬಾಯಿ ಅವರ ಮಡಿಲು ತುಂಬಿತು. ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹರ್ ಜಾತಿಯಲ್ಲಿ ಜನಿಸಿದರು. ಜಾತಿಯ ಭೂತ ಜನುಮಕ್ಕೆ ಅಂಟಿ ಬಂದದ್ದು ವಿಧಿ ಲಿಖೀತ.ಬಾಲ್ಯದಿಂದ ಸಾಮಾಜಿಕ ಅವಮಾನ ಎದುರಿಸಿದ್ದು, ನೋವಿನಿಂದ ನೊಂದ ಬಾಲ್ಯದ ಬರೆಗಳು ಇನ್ನೂ ಮಾಸಿಲ್ಲ. ಭಾರತೀಯರ ಎದೆಯ ಮೇಲೆ ಅಚ್ಚಾರಿವೆ. ಈ ಮಹಾನಾಯಕನಿಗೆ ಇದು 130ನೇಯ ಜನುಮ ದಿನ.
ಅಸ್ಪೃಶ್ಯ ಕುಟುಂಬದಲ್ಲಿ ಕಷ್ಟ ಸಹಿಷ್ಣುತೆಯ ದಂಪತಿಗೆ ಭೀಮರಾವ್ 14ನೆಯ ಮಗು. ಆದರೆ 14 ಮಕ್ಕಳಲ್ಲಿ ಬದುಕುಳಿದದ್ದು ಕೇವಲ 5 ಮಂದಿ. ಭೀಮರಾವ್ ಸತಾರಾದಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದರು. ಆದರೆ ಕ್ರೂರ ವಿಧಿ 6ನೇ ವಯಸ್ಸಿನಲ್ಲಿ ಭೀಮರಾವ್ ತಮ್ಮ ತಾಯಿಯನ್ನು ಕಳೆದುಕೊಂಡರು. ಸಂಸಾರ ಬಂಡಿ ಸಾಗಲು ರಾಮಜಿ ಎರಡನೇ ಮದುವೆ ಆದಾಗ ಭೀಮಜಿ ಅವರಿಗೆ ಏನೋ ಸಂಕಟ. ಅವಳು ತನ್ನ ತಾಯಿ ಬಟ್ಟೆ, ಒಡವೆ ಧರಿಸಿದರೆ ಮನಸ್ಸಿನಲ್ಲಿ ನೊಂದುಕೊಳ್ಳುತ್ತಿದ್ದದ್ದು ಹೌದು…ಹೀಗೆ ತಮ್ಮೆಲ್ಲ ಒತ್ತಡ ನೋವುಗಳಲ್ಲಿ ಅವರು ತಮ್ಮ ಭವಿಷ್ಯ ಕಂಡುಕೊಂಡುಕೊಳ್ಳ ಬಯಸಿದ್ದು ಓದಿನಲ್ಲಿ. ಆ ಓದು ಸಹ ಅವರಿಗೆ ಸುಲಭವಾಗಿ ಸಿಗಲಿಲ್ಲ. ಅವರ ಪ್ರತಿಭೆಗೆ ಜಾತಿಯ ಬೇಲಿ ಅಡ್ಡಗೋಡೆಯಾಗಿತ್ತು. ಇಂತಹ ಸಮಯದಲ್ಲಿ ವರವಾಗಿ ನಿಂತದ್ದು ಗುರು ಫೇಂಡೆಸ್ ಅಂಬೇಡ್ಕರ್ ಎಂಬುವರು. ಅವರ ಪ್ರೀತಿ ಕಾಳಜಿ ಭೀಮ್ ಅವರಿಗೆ ದಾರಿ ದೀಪವಾಯಿತು. ಭೀಮರಾವ್ ರಾಮಜಿ ಅಂಬೆವಾಡ್ಕರ್ ಬದಲಾಗಿ ಅಂಬೇಡ್ಕರ್ ಎಂದು ಜಗಕ್ಕೆ ಪರಿಚಯವಾಯಿತು.
ಅಸ್ಪೃಶ್ಯತೆಯ ಭೂತ ಅವರನ್ನು ಮಾಧ್ಯಮಿಕ ಶಿಕ್ಷಣದಲ್ಲೂ ಕಾಡಿತು. ಆದರೆ ಎದೆಗುಂದದೆ 10ನೇ ತರಗತಿಯ ಶಿಕ್ಷಣವನ್ನು ಮುಂಬಯಿಯಲ್ಲಿ ಪೂರೈಸಿದರು. ಅಲ್ಲಿಂದ ಬದುಕಿನಲ್ಲಿ ಮತ್ತೂಂದು ತಿರುವು. ಅವರ ಜೀವನ ಸಂಗಾತಿಯಾಗಿ ರಮಾಬಾಯಿ ಅವರ ಆಗಮನ. ಅನಂತರ ಮತ್ತೆ ವಿದ್ಯಾಭ್ಯಾಸ ಆರಂಭಿಸಿದರು. ಪಿಯುಸಿ ಮತ್ತು ಬಿಎ ಪದವಿ ಪಡೆದರು. ಬರೋಡಾ ಮಹಾರಾಜರಿಂದ ಶಿಷ್ಯವೇತನ ಪಡೆದು ಲಂಡನ್ ಮತ್ತು ಅಮೇರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿದರು. ಹೀಗೆ ಹಗಲು ರಾತ್ರಿ ಓದಿನಲ್ಲಿ ತಲ್ಲೀನರಾಗಿ ತಮ್ಮ ಜ್ಞಾನದ ಹಸಿವು ಇಂಗಿಸಿಕೊಳ್ಳಲು ಸತತ ಶ್ರಮಿಸುತ್ತಾರೆ.
ಮಹಿಳಾ ಸಶಕ್ತೀಕರಣ, ಮಕ್ಕಳ ಶಿಕ್ಷಣ, ಜಾತ್ಯತೀತ ರಾಷ್ಟ್ರದ ಕನಸು ಹೀಗೆ ಸಾವಿರ ಸಾಮಾಜಿಕ ಕನಸುಗಳನ್ನು ನನಸು ಮಾಡುವಲ್ಲಿ ಅಂಬೇಡ್ಕರ್ ಪಾತ್ರ ದೊಡ್ಡದು.ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನವನ್ನಾಗಿಸಿದ ಸಂವಿಧಾನ ಶಿಲ್ಪಿಗೆ ನಾವು ತಲೆ ಬಾಗಲೇಬೇಕು. ಆಧುನಿಕ ಭಾರತದ ನಿರ್ಮಾಪಕ, ಭಾರತದ ನಂದಾದೀಪ ಡಿಸೆಂಬರ್ 6, 1956ರಲ್ಲಿ ಕೊನೆಯುಸಿರೆಳೆದರು.
ಸಾಧಿಸುವ ಛಲ ಎದೆಯಲ್ಲಿರಲಿ…
ತಮ್ಮ ಶ್ರಮದಿಂದ, ಕಾಯಕದಿಂದ ಹಣೆಬರಹ ಬದಲಿಸಿಕೊಂಡ ಭಾರತ ಭಾಗ್ಯ ವಿಧಾತ ಅಂಬೇಡ್ಕರ್ ಇಂದು ಮತ್ತೆ ಯುವಕರ ಎದೆಯಲ್ಲಿ ಜನಿಸಬೇಕಿದೆ. ಮರುಭೂಮಿಯಲ್ಲಿ ನೀರು ಹುಡುಕಿದಂತೆ ಅವಕಾಶಗಳೇ ಇಲ್ಲದ ದಾರಿಯಲ್ಲಿ ತನ್ನ ಜ್ಞಾನದಿಂದ ಜಗತ್ತಿಗೆ ಪ್ರಕಾಶಮಾನವಾಗಿ ಕಂಡ ಭೀಮಜಿ ಅವರ ಜೀವನ ನಮಗೆಲ್ಲ ಮಾರ್ಗದರ್ಶಿಯಾಗಬೇಕಿದೆ. ಇಂದು ಎಲ್ಲೋ ಕಳೆದು ಹೋದ ಜಗತ್ತಿಗೆ ಮತ್ತೆ ಓದಿನ ದಾರಿ ತೋರಬೇಕಿದೆ.
ಬೆಳಕಲ್ಲೂ ಕತ್ತಲೆಯ ಜೀವನ ಮಾಡುವವರಿಗೆ ಕತ್ತಲಲ್ಲಿ ಸಾಧಿಸಿದವನ ಕಥೆಯೊಮ್ಮೆ ಹೇಳಬೇಕಿದೆ. ಸಮಯ ಸಾಧಕನ ಸೊತ್ತು ವಿನಃ ಹಗಲುಗನಸಲ್ಲಿ ಮಾರು ಹೋಗುವವನದಲ್ಲ ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಎಲ್ಲರಿಗೂ ಇದೆ. ಕಾಲೆಳೆಯುವವ ಸದಾ ಕಾಲ ಕೆಳಗೆ ಇರುತ್ತಾನೆ. ಸಾಧಿಸುವ ಛಲ ಎದೆಯಲಿದ್ದರೆ ಪ್ರತಿ ಮನ ಮನದಲ್ಲೂ ಅಂಬೇಡ್ಕರ್ ಜನಿಸುತ್ತಾರೆ ಎಂದರೆ ತಪ್ಪಾಗದು.
ಜಯಶ್ರೀ ವಾಲಿಶಟ್ಟರ್, ಕೊಪ್ಪಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.