Chandrayaan3: ಆಹಾ ಎಂಥಾ ಆ ಕ್ಷಣ…
Team Udayavani, Sep 3, 2023, 12:32 PM IST
ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ!? ಎಂದು ಕುತೂಹಲದಿಂದ ಕೇಳುವ ಮಗುವಿಗೆ, ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ, ಚಂದ್ರ ಮೇಲೆ ಬಂದ ಎಂದು ಲಾಲಿ ಹಾಡುತ್ತ ಮಲಗಿಸುತ್ತಿದ್ದ ಅಮ್ಮಂದಿರು ಇಂದು, “”ನೋಡು ಪುಟ್ಟಾ, ನಿನ್ನ ಚಂದಿರ ಎಲ್ಲೂ ಓಡಿಹೋಗದಂತೆ ಅವನ ಮೇಲೊಂದು ಕಣ್ಣು ಇಡಲು ನಮ್ಮ ದೇಶದ ವಿಜ್ಞಾನಿಗಳು ಎಷ್ಟು ಪರಿಶ್ರಮ ಪಟ್ಟಿದ್ದಾರೆ” ಎನ್ನುತ್ತಿದ್ದರೆ, ಕುತೂಹಲದ ಕಣ್ಣುಗಳಿಂದ ಚಂದ್ರನ ಮೇಲಿಳಿದ ವಿಕ್ರಮನನ್ನು ದಿಟ್ಟಿಸುವ ಮಗುವಿನ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳೆಷ್ಟೋ, ಆಸೆಗಳೆಷ್ಟೋ, ಕನಸುಗಳೆಷ್ಟೋ.
ಜ್ಞಾನಿಗಳು, ವಿಜ್ಞಾನಿಗಳು, ವಿದ್ವಾಂಸರು, ನಾಯಕರು, ನೌಕರರು, ಸಾಮಾನ್ಯರು ಸೇರಿದಂತೆ ಭಾರತದ ಬಹುತೇಕರು ಒಂದೇ ಪ್ರಾರ್ಥನೆಯೊಂದಿಗೆ ಒಟ್ಟಿಗೆ ಕಾಯುತ್ತಿದ್ದದು ಆ ಒಂದು ಕ್ಷಣಕ್ಕಾಗಿ, ಆ ಚಮತ್ಕಾರಕ್ಕಾಗಿ. ಚಂದಾ ಮಾಮಾ ಓಡಿ ಬಾ ಎಂದು ಕರೆಯುವ ಕಾಲ ಕಳೆದು, ಚಂದಿರನೇ ಖುದ್ದಾಗಿ ತನ್ನ ಅಂಗಳವನ್ನು ಭಾರತಕ್ಕಾಗಿ ತೆರೆದಿಟ್ಟಿದ್ದಾನೆ. ಚಂದ್ರಯಾನ-2ರ ವೈಫಲ್ಯದಿಂದ ಚೇತರಿಸಿಕೊಂಡು ಇಸ್ರೋ ಕೈಗೊಂಡ ಚಂದ್ರನೆಡೆಗಿನ ಮೂರನೇ ಯಾನವು ಸಫಲವಾಗಿದ್ದು, ಶಶಿಯ ದಕ್ಷಿಣ ಧ್ರುವದ ಮೇಲಿಳಿದ ಪ್ರಥಮ ರಾಷ್ಟ್ರವಾಗಿ ಭಾರತವು ಹೊರಹೊಮ್ಮಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ವಿಜ್ಞಾನಿಗಳ ವರ್ಷಗಳ ಸತತ ಪ್ರಯತ್ನ ಹಾಗೂ ಪರಿಶ್ರಮದ ಫಲವಾಗಿ ತಲೆಯೆತ್ತಿ ನಿಂತಿದ್ದ ಬಾಹ್ಯಾಕಾಶ ನೌಕೆ ಜಿ.ಎಸ್.ಎಲ್.ವಿ. ಮಾರ್ಕ್-3 ಹೊಗೆಯನ್ನುಗುಳುತ್ತ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿದಾಗ ಕಿಕ್ಕಿರಿದಿದ್ದ ಜನರ ಕೇಕೆ ಕಿವುಡಾಗಿಸುವಂತಿತ್ತು. ಈ ಉಡಾವಣೆಯ ಫಲಿತಾಂಶದ ಸಮಯ ಸಮೀಪಿಸಿದಾಗ ಇದರ ತದ್ವಿರುದ್ಧ, ಎಲ್ಲೆಲ್ಲೂ ಮೌನ.
ಈ ನೀರವತೆ ಕ್ಷಣಿಕವಾಗಿತ್ತು. ಐದು ಪ್ರದಕ್ಷಿಣೆಯ ಅನಂತರ ಚಂದ್ರನ ಮೇಲ್ಮೆ„ಯನ್ನು ಸೋಕಿದ ವಿಕ್ರಮ್ ಲ್ಯಾಂಡರ್ ತನ್ನ ನಾಲ್ಕು ಕಾಲುಗಳನ್ನು ಭದ್ರವಾಗಿ ಊರಿ ಧೂಳೆಬ್ಬಿಸಿದಾಗ ಕಿವಿಗಡಚಿಕ್ಕುವ ಕರತಾಡನ ಎಲ್ಲೆಲ್ಲೂ ಮೊಳಗಿತ್ತು. ಅಷ್ಟು ಹೊತ್ತು ಮಾಯವಾಗಿದ್ದ ಮುಗುಳ್ನಗು ಎಲ್ಲರ ಮೊಗದಲ್ಲೂ ಮೂಡಿತ್ತು.
ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಚಂದ್ರಯಾನದ ಸಫಲತೆಯನ್ನು ದೃಢೀಕರಿಸಿದ ಮೇಲಂತೂ ಉತ್ಸಾಹದ ಕಟ್ಟೆ ಒಡೆದಿತ್ತು. ವಿದೇಶದಲ್ಲಿದ್ದರೂ ಸ್ವದೇಶದ ಸಾಧನೆಯ ಕ್ಷಣಗಳಿಗೆ ಸಾಕ್ಷಿಯಾದ ಪ್ರಧಾನಿಗಳು ಯೋಜನೆಯ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರನ್ನೂ ಶ್ಲಾ ಸಿದ್ದರು. ದೇಶ ವಿದೇಶಗಳಿಂದ ಅಭಿನಂದನೆಯ ಸಂದೇಶಗಳು ಹರಿದುಬರತೊಡಗಿದವು. ತಾವು ಕೈಯಾರೆ ಕಟ್ಟಿ, ಅಭಿವೃದ್ಧಿಪಡಿಸಿದ ಕೂಸು ಚಂದಿರನ ನೆಲವನ್ನು ಸೋಕಿದಾಗ ಅಲ್ಲಿ ನೆರೆದಿದ್ದವರೆಲ್ಲ ಆ ಕ್ಷಣ ನಿಂತ ನೆಲದಿಂದ ಎರಡಿಂಚು ಮೇಲೆದ್ದಿದ್ದರು ಎಂದರೆ ತಪ್ಪಾಗದು. ಇದೆಲ್ಲ ಒಳಗಿನ ಸಂಭ್ರಮವಾದರೆ, ಹೊರಗಿನ ಚಿತ್ರಣ ಬೇರೆಯೇ ಇತ್ತು.
ವಿಕ್ರಮ್ ರೋವರ್ ಚಂದ್ರನ ಅಂಗಳಕ್ಕಿಳಿಯುವ ಸಂದರ್ಭವನ್ನು ಬೆಂಗಳೂರಿನಲ್ಲಿ ಸಾವಿರಾರು ಮಂದಿ ಒಟ್ಟಿಗೆ ವೀಕ್ಷಿಸಿದರು. ಕೆಲವರು ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜ ಮತ್ತು ಇಸ್ರೋದ ಲೋಗೋ ಚಿತ್ರಿಸಿಕೊಂಡಿದ್ದರೆ, ಹಲವರ ಕೈಯಲ್ಲಿ ತ್ರಿವರ್ಣ ಧ್ವಜವಿತ್ತು. ತಮಿಳುನಾಡಿನ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಒಂದೆಡೆ ಸೇರಿ ಇಸ್ರೋದ ನೇರಪ್ರಸಾರವನ್ನು ವೀಕ್ಷಿಸಿದರು. ಪ್ರಯಾಗರಾಜದಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ಈ ಯಶಸ್ಸನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಇದಕ್ಕೆ ಪುಷ್ಟಿ ಕೊಡುವಂತೆ ಹಲವೆಡೆ ಚಂದ್ರಯಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನಗಳನ್ನು ಏರ್ಪಡಿಸಿ ಜನಸಾಮಾನ್ಯರಿಗೆ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಕೈಗೊಳ್ಳಲಾಗಿತ್ತು.
ಅಮುಲ್ ತನ್ನ ಜಾಹಿರಾತಿಗೂ ಚಂದ್ರಯಾನದ ಸಿಹಿ ಬೆರೆಸಿದರೆ, ಗೂಗಲ್ ತನ್ನ ಡೂಡಲ್ ಬದಲಾಯಿಸಿ ಸಂಭ್ರಮಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ರಷ್ಯಾದ ಅಧ್ಯಕ್ಷ ವಾಲ್ಡಿಮಿರ್ ಪುಟಿನ್, ಯು.ಎ.ಇ.ಯ ಶೇಕ್ ಮೊಹಮ್ಮದ್, ಬಾಂಗ್ಲಾದ ಪ್ರಧಾನಿ ಶೇಕ್ ಹಸೀನಾ, ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ಬಹುಕಡೆಗಳಿಂದ ಶುಭಹಾರೈಕೆಗಳು ಹರಿದುಬಂದಿದೆ. ಪಕ್ಕದ ಪಾಕಿಸ್ಥಾನವೂ ಭಾರತದ ಸಾಧನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ ಹಾಗೂ ವಿಚಿತ್ರ.
ಇದು ಕಥೆಯ ಕೊನೆಯಲ್ಲ. ಇಲ್ಲಿಂದಲೇ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಅಂಗಳದಲ್ಲಿ ನಿಂತು ನೋಡಿದರೆ ಅಂಗೈ ಅಗಲ ಕಾಣುವ ಚಂದ್ರನ ಅಗಾಧವಾದ ಅಂಗಳದಲ್ಲಿ ಅನೇಕ ಸಂಶೋಧನೆಗಳು ಬಾಕಿ ಇವೆ. ಗೂಡಿನಿಂದ ಹೊರಬಂದ ಪ್ರಗ್ಯಾನ್ ರೋವರ್ ಚಂದಿರನ ನೆಲದಲ್ಲಿ ರಾಷ್ಟ್ರದ ಲಾಂಛನ ಮತ್ತು ಇಸ್ರೋದ ಚಿಹ್ನೆಯನ್ನು ಅಚ್ಚೊತ್ತಿದೆ. ಜತೆಗಿರುವ ಉಪಕರಣಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತ ಕಾರ್ಯಸನ್ನದ್ಧವಾಗುತ್ತಿವೆ. ತನ್ನ ಸಹೋದರನ ನೆಲದಿಂದ ಬರಲಿರುವ ರೋಚಕ ಮಾಹಿತಿಗಳಿಗಾಗಿ ಇತ್ತ ಭೂರಮೆ ಕಾಯುತ್ತಿದ್ದಾಳೆ.
-ಮೈತ್ರಿ ಎಸ್. ಅಶ್ವತ್ಥಪುರ,
ಸಂತ ಅಲೋಶಿಯಸ್ ಕಾಲೇಜು,
ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.