ಬನ್ನಿ ಪುಸ್ತಕ ಓದೋಣ..!
Team Udayavani, Jul 21, 2020, 1:53 PM IST
ಸಾಂದರ್ಭಿಕ ಚಿತ್ರ
ನಿಶ್ಶಬ್ಧ ವಾತಾವರಣ, ಓರಣವಾಗಿಟ್ಟ ಪುಸ್ತಕಗಳು, ಹೊಸ-ಹಳೆಯ ಪುಸ್ತಕಗಳಿಂದ ಹೊರ ಸೂಸುವ ವಿಭಿನ್ನ ವಾಸನೆ, ಪಿಸು ಮಾತನಾಡಿದರೂ ರೇಗಾಡುವ ಗ್ರಂಥಪಾಲಕರು. ಹೀಗೆ ಸಾಲು ಸಾಲು ಚಿತ್ರಣ ಕಂಡು ಬಂದಾಗ ನಮಗೆ ನೆನಪಾಗುವುದು ಗ್ರಂಥಾಲಯಗಳು. ಹೊಸ ವಿಚಾರ ತಿಳಿಯುವ, ಓದಿನಿಂದ ಅರಿವು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ನಾವು ಗ್ರಂಥಾಲಯಕ್ಕೆ ತೆರಳುತ್ತೇವೆ. ವಾಸ್ತವ ಜಗತ್ತಿನಿಂದ ಮರೆಯಾಗಿ ಪುಸ್ತಕಗಳ ಸಾಂಗತ್ಯದೊಂದಿಗೆ ಸಮಯ ಸವೆಸುವುದೊಂದು ದಿವ್ಯ ಅನುಭವ!
ಕಾಲೇಜು ಗ್ರಂಥಾಲಯಗಳು ಕಾಲೇಜಿನ ಕೀರ್ತಿಗೊಂದು ಗರಿ ಸಿಕ್ಕಿಸಿದಂತೆ. ಈ ಹಿಂದೆ ಯಾವುದೇ ಮನೋರಂಜನೆ ಮಾಧ್ಯಮಗಳು ಇಲ್ಲದ ಕಾಲದಲ್ಲಿ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಧನಾತ್ಮಕವಾಗಿಯೇ ಇತ್ತು. ತಮ್ಮ ಬಿಡುವಿನ ಸಮಯದ ಸದ್ಬಳಕೆಗೆ ಅನೇಕ ಯುವ ಜನರು ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದರು. ದಿಗ್ಗಜ ಕವಿಗಳಿಂದ ಸ್ಫೂರ್ತಿ ಪಡೆದು ಅವರ ಬರಹಗಳ ಜಾಡು ಹಿಡಿದು ಗ್ರಂಥಾಲಯಗಳಿಗೆ ಬರುವವರಿದ್ದರು. ಆದರೆ ಇಂದು ಕೈಯ್ಯಲ್ಲಿ ಹಿಡಿದಿರುವ “ಮೊಬೈಲ್’ ಎಂಬ ಮಾಯೆಯಿಂದ ಬಾಹ್ಯ ಪ್ರಪಂಚವನ್ನೇ ಮರೆಯುವ ಪರಿಸ್ಥಿತಿ ಬಂದೊದಗಿದೆ. ಸಾಮಾಜಿಕ ಜಾಲತಾಣಗಳನ್ನು ತಮ್ಮ ಸರ್ವಸ್ವವೆಂದು ಬಗೆದಿರುವ ವ್ಯಸನಯುಕ್ತ ಮನಸ್ಸುಗಳು ಹಳ್ಳ ಹಿಡಿದಿವೆ. ಶ್ರೇಷ್ಟ ಲೇಖಕರ ಅದ್ವಿತೀಯ ಪುಸ್ತಕಗಳು ಗ್ರಂಥಾಲದ ಕೋಣೆಗಳಲ್ಲಿ ಗೆದ್ದಲು ತಿನ್ನುತ್ತಿವೆ..!
ಗ್ರಂಥಾಲಯಗಳಿಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಪಠ್ಯ ಸಂಬಂಧಿತ ಪುಸ್ತಕಗಳಿಗೆ ಎಡತಾಕುತ್ತಿರುತ್ತಾರೆ. ನಿರ್ದಿಷ್ಟ ವಿಷಯಗಳಿಗೆ ತಮ್ಮ ಮನಸನ್ನು ಸೀಮಿತಗೊಳಿಸಿ ವಿಶಾಲ ಮನೋಭಾವನೆಯನ್ನು ಅವಗಣಿಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನ ಹಾಗೂ ಸಾಹಿತ್ಯಾಧಾರಿತ ಕೃತಿಗಳ ಮೌಲ್ಯವು ಇಂಥ ಅವಗಣನೆಯಿಂದ ದಿನೇ ದಿನೇ ಕುಸಿಯುತ್ತಿದೆ. ಕಾಲೇಜಿಗೆ ಬರುವ ಮೂಲ ಉದ್ದೇಶವೇ ಅತ್ಯುತ್ತಮ ಅಂಕ ಗಳಿಸಲು ಎಂಬ ಮೂಲ ಮನೋಭಾವದಿಂದ ಗ್ರಂಥಾಲಯದ ಸಂಪೂರ್ಣ ಲಾಭ ಪಡೆಯಲು ಎಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.
ಈ ಆಧುನಿಕ ಯುಗದಲ್ಲಿ ಮೊಬೈಲ್‌ನಲ್ಲಿ ಎಲ್ಲ ಸಿಗುವಾಗ ಗ್ರಂಥಾಲಯಗಳಿಗೆ ಏಕೆ ಹೋಗಬೇಕು? ಎಂಬ ಸಿದ್ಧ ಉತ್ತರ ಅನೇಕರಿಂದ ವ್ಯಕ್ತವಾಗುತ್ತದೆ. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕ ಕೈಯ್ಯಲ್ಲಿ ಹಿಡಿದು ಓದುವಾಗ ಸಿಗುವ ನೈಜ ಅನುಭವ ಮೊಬೈಲ್ ಅಥವಾ ಅಂತರ್ಜಾಲದಲ್ಲಿ ಓದುವಾಗ ಸಿಗುವುದಿಲ್ಲ. ಗ್ರಂಥಾಲಯದ ಒಳಗಿರುವ ಪ್ರಶಾಂತ ಹಾಗೂ ಏಕಾಂತ ವಾತಾವರಣವು ಓದುಗರಿಗೆ ಹೇಳಿ ಮಾಡಿಸಿದ ಜಾಗ ಎಂದು ಹೇಳಬಹುದು. ಯಾರ ಕಾಟವೂ ಇಲ್ಲದೇ ಗಂಟೆಗಳ ಕಾಲ ನಿರಂತರವಾಗಿ ಓದಬಹುದು.
ಡಿಜಿಟಲೀಕರಣದ ಛಾಯೆಯಿಂದ ಗ್ರಂಥಾಲಯಗಳಿಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಗ್ರಂಥಾಲಯದ ಸಮಗ್ರ ಬಳಕೆಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾಹಿತಿ ಕಾರ್ಯಾಗಾರ ನಡೆಯಬೇಕು. ಬೀದಿ ನಾಟಕ ಹಾಗೂ ಕಿರು ಚಿತ್ರಗಳನ್ನು ನಿರ್ಮಿಸಿ ಜ್ಞಾನದೇಗುಲಗಳ ಸಂಪೂರ್ಣ ಬಳಕೆ ಹೆಚ್ಚಿಸಬೇಕು. ಪ್ರತಿಯೊಬ್ಬರಲ್ಲೂ ಸುಪ್ತ ಪ್ರಜ್ಞೆಯಲ್ಲಿರುವ ಓದುಗನನ್ನು ಜಾಗೃತ ಮಾಡಬೇಕು. ಕಾಲೇಜು ಕ್ಯಾಂಪಸ್‌ನಿಂದ ಸಾಹಿತ್ಯಾಸಕ್ತರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದಾಗಲೇ ನಮ್ಮ ಸಾಹಿತ್ಯ ರಂಗಕ್ಕೂ ಉತ್ತಮ ಕೊಡುಗೆ ನೀಡಿದಂತಾಗುತ್ತದೆ.
ಸುದೀಪ್ ಶೆಟ್ಟಿ , ಪೇರಮೊಗ್ರು, ಮಂಗಳಗಂಗೋತ್ರಿ ವಿ.ವಿ., ಮಂಗಳೂರು (ಪ್ರವಾಸೋದ್ಯಮ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.