ಮೊದಲ ಮಹಾಯುದ್ಧದಲ್ಲಿ ಕಾಲಾಳು ಪಡೆಯ ಮೂಲಕ ಯುದ್ಧದಲ್ಲಿ ಪಾಲ್ಗೊಂಡ ಕೂರ್ಗ್ ರೆಜಿಮೆಂಟ್
Team Udayavani, Nov 4, 2020, 4:33 PM IST
ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತಿದೆ. ಹೆತ್ತ ನೆಲದ ಸೇವೆಗಾಗಿ ನೆತ್ತರು ಚೆಲ್ಲಿ ದುಡಿದ ವೀರ ಯೋಧರು ಅನೇಕ.
ತನ್ನ ನೆಲದಾದ್ಯಂತ ಇಂತಹ ಕಲಿಯೋಧರಿಗೆ ಜನ್ಮನೀಡಿದ ಭೂಮಿ ಕೊಡಗು. ಅತುಲ್ಯ ಸೌಂದರ್ಯ, ಅಗಣಿತ ಸಂಸ್ಕೃತಿಯ ಈ ನೆಲದ ಹೆಸರಲ್ಲೇ, ಬ್ರಿಟಿಷರ ಕಾಲದಿಂದಲೂ ಇಲ್ಲಿನದೇ ಯೋಧರ ರೆಜಿಮೆಂಟ್ ಇದ್ದುದು ಆಶ್ಚರ್ಯವೇನಲ್ಲ. ಅದುವೇ ‘ಕೂರ್ಗ್ ರೆಜಿಮೆಂಟ್’.
1767ರಲ್ಲಿ ಸ್ಥಾಪಿತವಾದ ಈ ರೆಜಿಮೆಂಟ್‌ನ್ನು 15ನೇ ಬೆಟಾಲಿಯನ್ ಕೋಸ್ಟ್ ಸಿಪಾಯಿಸ್ ಎಂದು ಕರೆಯುತ್ತಿದ್ದರು. ಪ್ರಾರಂಭದಲ್ಲಿ ಬ್ರಿಟಿಷ್ ಭಾರತೀಯ ಸೇನಾಪಡೆಯಲ್ಲಿ ಇದು ಸಕ್ರಿಯವಾಗಿದ್ದು, 1901ರ ವರೆಗೆ ಇದನ್ನು “71ನೇ ಮದ್ರಾಸ್ ಇನ್ ಫೆಂಟ್ರಿ’ ಎಂದು ಕರೆಯಲಾಗುತ್ತಿತ್ತು.
1902ರ ವರೆಗೆ ತೆಲುಗು, ತಮಿಳರಿಗೆ ಮಾತ್ರ ಈ ವಿಭಾಗದಲ್ಲಿ ಸೇವೆ ಸಲ್ಲಿಸಲು ಅವಕಾಶವಿದ್ದು, ಅನಂತರ ಕೊಡವರ ಶೌರ್ಯ ಗುರುತಿಸಿ ಯೋಧರಾಗಿ ನೇಮಿಸಿ “ಕೂರ್ಗ್ ರೆಜಿಮೆಂಟ್’ನ್ನು ಕಟ್ಟಲಾಯಿತು.
ಕೆಂಪು ಫೆಝ್ ಟೋಪಿ ಪರಿಚಯ
1903ರಲ್ಲಿ ಈ ವಿಭಾಗವನ್ನು “71ನೇ ಕೂರ್ಗ್ ರೈಫಲ್ಸ್’ ಎನ್ನುತ್ತಿದ್ದರು. ಪ್ರಾರಂಭದಲ್ಲಿ ಸೇನಾ ಸಮವಸ್ತ್ರ ಬ್ರಿಟಿಷ್ ಮಾದರಿಯನ್ನೇ ಅನುಸರಿಸಿದರೂ ಅನಂತರ ಈ ವಿಭಾಗಕ್ಕೆ ಸೀಮಿತವಾದ ವಿಶಿಷ್ಟ ಕಡು ಹಸುರು ಬಣ್ಣದ ಸಮವಸ್ತ್ರವನ್ನು ನೀಡಲಾಯಿತು. ಜತೆಗೆ ಮೊಟ್ಟ ಮೊದಲ ಬಾರಿಗೆ “ಕೆಂಪು ಫೆಝ್’ ಟೋಪಿಯನ್ನು ಸೇನೆಯಲ್ಲಿ ಧರಿಸಲು ಕೊಟ್ಟದ್ದು ಆ ಕಾಲಕ್ಕೆ ವಿರಳಾತಿವಿರಳ.
ಕೊಡಗಿನ ಕತ್ತಿಗಳ ಚಿಹ್ನೆ
ಮೊದಲ ಮಹಾಯುದ್ಧದ ಅನಂತರ ಈ ರೆಜಿಮೆಂಟ್ ಉಳಿಸಲು ಸಾಕಷ್ಟು ಪ್ರಯತ್ನಗಳಾದವು. ಆದರೆ ಸೈನಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ರೆಜಿಮೆಂಟ್ ಉಳಿಯಲಿಲ್ಲ. 1942ರಲ್ಲಿ “ಕೂರ್ಗ್ ಬೆಟಾಲಿಯನ್ ಕಟ್ಟಲಾಯಿತು. ಈ ಬೆಟಾಲಿಯನ್ ನ ಬ್ಯಾಡ್ಜ್ನಲ್ಲಿ ಕೊಡಗಿನ ಕತ್ತಿಗಳ ಚಿಹ್ನೆ ಹಾಕಲಾಗಿದ್ದು, ಅದನ್ನು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. 1946ರಲ್ಲಿ ಈ ವಿಭಾಗ ವನ್ನು “37ನೇ ಕೂರ್ಗ್ ಆ್ಯಂಡ್ – ಟ್ಯಾಂಕ್ ರೆಜಿಮೆಂಟ್ ಯುನಿಟ್’ ಎಂದು ಕರೆಯ ಲಾಯಿತು. ಇಂದು ಅದು “ರೆಜಿಮೆಂಟ್ ಆಫ್ ಆರ್ಟಿಲರಿ’ಯ ಭಾಗವಾಗಿದೆ.
ಹೆಮ್ಮೆಯ ಪಡೆ
ಇತಿಹಾಸ ಪ್ರಸಿದ್ಧ, “3ನೇ ಆಂಗ್ಲೋ ಮೈಸೂರು ಯುದ್ಧ’ದಲ್ಲಿ ಪಾಲ್ಗೊಂಡು, ಟಿಪ್ಪು ಸುಲ್ತಾನನ ವಿರುದ್ಧ ಬ್ರಿಟಿಷರ ಪರವಾಗಿ ಹೋರಾಡಿ ಯಶಗಳಿಸಿದ ಕೀರ್ತಿ “ಕೂರ್ಗ್ ರೆಜಿಮೆಂಟ್’ ಗೆ ಇದೆ. ಜತೆಗೆ ಮೊದಲ ಮಹಾಯುದ್ಧದ ಕಾಲದಲ್ಲಿ ಕಾಲಾಳು ಪಡೆಯ ಮೂಲಕ ಪ್ರಪಂಚದ ರಾಜಕೀಯ ಇತಿಹಾಸದ ನಿರ್ಣಾಯಕ ಯುದ್ಧದಲ್ಲಿ ಪಾಲ್ಗೊಂಡ ಹೆಮ್ಮೆ ಈ ಪಡೆಗಿದೆ.
ಪ್ರಸಿದ್ಧ ಸೇನಾ ನಾಯಕರನ್ನು ಕೊಟ್ಟ ನಾಡು (ಸೈನಿಕರ ಜಿಲ್ಲೆ)
ಕೊಡವರು ಶೌರ್ಯ ಬಹಳ ಮೆಚ್ಚತಕ್ಕದ್ದು. ಒಂದೊಮ್ಮೆ ಕೊಡಗನ್ನು “ಜನರಲ್‌ಗಳ ನೆಲ’ ಎನ್ನುತ್ತಿದ್ದು, ಇಲ್ಲಿನ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರವರಂತವರ ಮುತ್ಸದ್ಧಿತನ ಇಂದಿಗೂ ಅಜರಾಮರ. ಅದರಂತೆ, ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ಶೌರ್ಯಚಕ್ರ ಪ್ರಶಸ್ತಿಗೆ ಭಾಜನರಾದ ಎಚ್.ಎನ್. ಮಹೇಶ್ ಕೂಡ ಇದೇ ನೆಲದವರಾಗಿದ್ದು “ನಿರ್ಭೀತಿ ಮತ್ತು ಅದಮ್ಯ ಇಚ್ಛಾಶಕ್ತಿಯುಳ್ಳ ಸೈನಿಕ’ ಎಂದು ಮೆಚ್ಚಿಗೆ ಪಡೆಯುವ ಮೂಲಕ ಕೊಡಗಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.
ಬ್ರಿಟಿಷರು ಕೂರ್ಗ್ ರೈಫಲ್ಸ್ ಅನ್ನು ಕಟ್ಟಿದರೆ, ಅಂದಿನ ಪ್ರಧಾನಿ ದೇವೇಗೌಡರು ಕೂರ್ಗ್ ರೆಜಿಮೆಂಟ್‌ನ್ನು ಮರು ರೂಪಿಸಿದರು. ಹೆಚ್ಚಿನ ಜನರನ್ನು ಸೇನೆಗಾಗಿ ಕಳುಹಿಸಿದ ಪ್ರತಿಷ್ಠೆ ಕೊಡಗಿನ ನೆಲಕ್ಕಿದೆ ಎಂಬುದು ಹೆಮ್ಮೆಯ ವಿಷಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.