Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Team Udayavani, Apr 19, 2024, 12:47 PM IST
ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆ ಆದ ಬಳಿಕ ರಾಮ ನಾಮ ಭಜಕರಿಗೆ ಮತ್ತಷ್ಟು ಸಂತಸ ಬಂದಂತಾಗಿದೆ. ಮಂದಿರ ಉದ್ಘಾಟನೆ ವೇಳೆಯಲ್ಲಿ ಗಜಾನನ ಶರ್ಮ ಅವರ, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಕೂಡ ಬಹಳ ಪ್ರಸಿದ್ಧಿ ಪಡೆದಿತ್ತು. ಇದೇ ಹಾಡಿನ ಎಳೆ ಎಳೆ ವಿವರಣೆ ಮೂಲಕ ರಾಮಾಯಣದ ನಾಟಕಗಳ ಸಾಲಿಗೆ ಹೊಸದೊಂದು ಮೇರು ನಾಟಕ ಸೇರ್ಪಡೆ ಆಗುತ್ತಿದೆ ಎನ್ನುವುದು ನಾಟಕ ಪ್ರಿಯರಿಗೆ ಸಂತಸದ ವಿಚಾರ.
“ಉಟ್ಟ ಸೀರೆಯಲ್ಲಿ ಸೀತೆ ಕಾಣದೆ, ದಿಟ್ಟ ನಡೆಯಲ್ಲಿ ರಾಮ ಕಾಣನೆ, ಹಾರುವ ಹನುಮ ಲಂಕೆಯ ಸೈನ್ಯವ ಬೆಂಕಿಗಾಹುತಿ ಮಾಡದಿಹನೆ’ ಎಂಬ ಸಾಲಿನ ಮೂಲಕ “ಸೀತಾರಾಮ ಚರಿತಾ’ ನಾಟಕ ಆರಂಭವಾಗುವುದು. ರಾಮಾಯಣ ಕತೆ ಈಗಾಗಲೇ ಕೇಳಿದ್ದರೂ ನಾಟಕ ರೂಪದಲ್ಲಿ ಕಣ್ತುಂಬಿಕೊಳ್ಳುವುದು ಒಂದೊಳ್ಳೆ ಅನುಭವ. ವಿಶ್ವ ರಂಗಭೂಮಿ ದಿನ ಅಂಗವಾಗಿ ಉಡುಪಿಯ ರಂಗಭೂಮಿ ಸಂಸ್ಥೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ “ಸೀತಾರಾಮ ಚರಿತಾ’ ನಾಟಕದ ಮೊದಲ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ಸಂಪೂರ್ಣ ರಾಮಾಯಣವನ್ನು ಯಥಾವತ್ ತಿಳಿಸಲಾಗದಿದ್ದರೂ, ಸಮಯ ಹೊಂದಾಣಿಕೆ ಮಾಡಿಕೊಂಡು ರಾಮಾಯಣದ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ಕಟ್ಟಿ ಕೊಡುವ ನೆಲೆಯಲ್ಲಿ ಲೇಖಕರು, ರಂಗ ನಿರ್ದೇಶಕರಾದ ಗಣೇಶ್ ಮಂದಾರ್ತಿ ಅವರ ಪರಿಶ್ರಮ ಎದ್ದು ಕಾಣುತ್ತದೆ.
ಸರಯೂ ನದಿಯ ತೀರದಲ್ಲಿ ಅಯೋಧ್ಯೆಯ ರಾಜದಶರಥ ಮಹಾರಾಜನಿಂದ ಆರಂಭವಾಗಿ, ದಶರಥ ಮಹಾರಾಜನಿಗೆ ರಾಮ ಜನನ, ಅಹಲ್ಯೆ ಶಾಪ ವಿಮೋಚನೆ, ಸೀತಾ ಮಾತೆಯ ಜನನ, ಶಿವಧನುಸ್ಸು ಎತ್ತಿದ ರಾಮ, ಮಂಥರೆಯ ಚಾಡಿ ಮಾತಿಗೆ ಮರುಳಾದ ಕೈಕೇಯಿ, ಭರತನಿಗೆ ಪಟ್ಟ-ರಾಮನಿಗೆ ವನವಾಸ, ವನವಾಸದ ಬಳಿಕ ಅಡವಿಯಲ್ಲಿ ರಾಮ, ಸೀತೆ , ಲಕ್ಷ್ಮಣ ಹೀಗೆ ರಾಮಾಯಣದ ಸೂಕ್ಷ್ಮ ಮತ್ತು ಮುಖ್ಯ ಅಂಶಗಳನ್ನು ಬಿಟ್ಟು ಬಿಡದೆ ತಿಳಿಸಿದ್ದು, ಪ್ರತೀ ಪಾತ್ರಕ್ಕೂ ಜೀವ ತುಂಬುವ ನಟನಾಕಾರರ ಚಾಕಚಕ್ಯತೆ ನಾಟಕ ಪ್ರಿಯರ ಮನಗೆದ್ದಿದೆ.
ಪ್ರಮುಖ ಪಾತ್ರಗಳು (ಪಾತ್ರಧಾರಿಗಳು)
ಸೀತೆ(ಆದ್ಯತಾಭಟ್), ರಾಮ (ಮೊಹಮ್ಮದ್ ಅಶ್ಫಕ್ ಹುಸೇನ್), ದಶರಥ-ರಾವಣ(ಪ್ರದೀಪ್ ಚಂದ್ರ ಕುತ್ಪಾಡಿ), ಲಕ್ಷ್ಮಣ (ಅಕ್ಷಯ್ ಕನ್ನರ್ಪಾಡಿ), ಕುಂಭಕರ್ಣ-ವಿಶ್ವಾಮಿತ್ರ-(ಎಂ.ಎಸ್. ಭಟ್), ವಿಭೀಷಣ-ಗೌತಮ- ವಾಲ್ಮೀಕಿ (ವಿವೇಕಾನಂದ ಎನ್.), ಜಟಾಯು- ಹನುಮಂತ- ಸೂತ್ರಧಾರ- ವಸಿಷ್ಠ (ಕಾರ್ತಿಕ್ ಪ್ರಭು), ಅಹಲ್ಯೆ-ಶೂರ್ಪನಕ್ಕಿ ದೇವತೆ- ಸುಮಿತ್ರೆ 1- ದೇವತೆ (ಶೃತಿ ಕಾಶಿ), ಮಾಯಾರಾವಣ-ಸುಗ್ರೀವ-ಅತಿಕಾಯ-ಅಶ್ವ (ಅಕ್ಷಯ್ ಭಟ್), ವಾಲಿ-ಇಂದ್ರಜಿತು-ಭಾರಧ್ವಾಜ- ಸೂತ್ರಧಾರ (ವಿಶ್ವನಾಥ್ ಕೋಟ್ಯಾನ್), ಕೈಕೇಯಿ-ಊರ್ಮಿಳೆ, ದೇವತೆ (ಅಮೃತಾ ಭಟ್), ಮಂಥರೆ- ಮಂಡೋದರಿ-ಮಾಂಡವಿ-ಸುಮಿತ್ರೆ 2 (ಹರ್ಷಿತಾ), ಅಜ್ಜಿ- ಶಬರಿ-ಕೌಸಲ್ಯೆ (ಸತ್ಯಶ್ರೀ ಗೌತಮ್), ವೆಂಕ-ಮೇಳ- (ರಾಘವ ಬಿ.), ಮೊಮ್ಮಗಳು- ಶ್ರುತಕೀರ್ತಿ-ಮಾಯಾಜಿಂಕೆ-ಚಾರಕ, ಲವ (ಚಂದ್ರಕಾ), ಭರತ-ಸೂತ್ರಧಾರ (ವಾಸುದೇವ ತಿಲಕ್), ಸುಬ್ಬ-ಮೇಳ ( ಶ್ರೀನಿವಾಸ್ ಜೋಶಿ), ಜನಕ-ಪ್ರಹಸ್ತ-ವಾಲ್ಮೀಕಿ (ಸಂಗಮೇಶ್), ಕುಶ (ಅನ್ವಿತಾ ಜಿ. ಮೂರ್ತಿ).
ಇಲ್ಲಿ ಪ್ರತಿ ಪಾತ್ರಕ್ಕೆ ಕೂಡ ಕಲಾವಿದರು ಜೀವ ತುಂಬಿದ್ದಾರೆ. ಮೊಹಮ್ಮದ್ ಅಶ್ಫಕ್ ಹುಸೇನ್ ಅವರು ರಾಮನ ಪಾತ್ರದಲ್ಲಿ ಸ್ಪಷ್ಟ ಉಚ್ಚಾರಣೆ, ನಿರರ್ಗಳ ಮಾತುಗಾರಿಕೆಯಿಂದ ಹೆಚ್ಚು ಗಮನ ಸೆಳೆದಿದರು. ದಶರಥ ಹಾಗೂ ರಾವಣನ ಎರಡು ಪಾತ್ರವನ್ನು ಪ್ರದೀಪ್ ಚಂದ್ರ ಕುತ್ಪಾಡಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಶ್ರೇಷ್ಠ ರಂಗಕರ್ಮಿ ಆಗಿರುವ ಅವರ ನಟನಾ ಕೌಶಲ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ನಾಟಕವೂ ಸಮಯದ ವಿಚಾರದಲ್ಲಿ ಸ್ವಲ್ಪ ಮಿತಿ ಕಾಯ್ದುಕೊಂಡಿದ್ದರೆ ಇನ್ನೂ ಉತ್ತಮವಾಗಿತ್ತು ಎಂಬ ಅಭಿಪ್ರಾಯವೂ ಪ್ರೇಕ್ಷಕ ವರ್ಗದಿಂದ ಬಂದರೂ, ಮೂರು ತಾಸು ಪ್ರೇಕ್ಷಕರ ಮನಸ್ಸನ್ನು ಕೇಂದ್ರಿಕರಿಸುವ ನೆಲೆಯಲ್ಲಿ ಇಡೀ ನಾಟಕ ತಂಡ ಯಶಸ್ವಿ ಆಗಿದೆ.
ವಿಭಿನ್ನ ವೇಷ-ಭೂಷಣಗಳು
ಈ ನಾಟಕದಲ್ಲಿ ವೇಷಗಳು ವಿಭಿನ್ನವಾಗಿದೆ. ಪ್ರಥ್ವೀಶ್ ಪರ್ಕಳ ಅವರ ಕಲಾ ಕೌಶಲ ವೇಷ ಭೂಷಣದ ಮೂಲಕ ಅರಿಯುವಂತಿದೆ. ರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಕಲಾವಿದರಿಗೆ ಹಲವು ಪಾತ್ರಗಳಿದ್ದು ವಿಭಿನ್ನವಾಗಿ ಕಾಣಲೆಂದು ವಸ್ತ್ರ ವಿನ್ಯಾಸವನ್ನು ಪುರಾಣಕ್ಕಿಂತ ದೂರ ಹಳ್ಳಿ ಸೊಗಡಿಗೆ ಹತ್ತಿರ ಎಂಬಂತೆ ಶೃತಿ ಕಾಶಿ, ಶ್ರೀ ಕಲ್ಯಾಣಿ ಅವರಿಂದ ವಿನ್ಯಾಸಿಸಲ್ಪಟ್ಟಿದೆ. ಹಿನ್ನೆಲೆ ಗಾಯನ ಕಿವಿಗೆ ಇಂಪು ನೀಡುವ ಜತೆಗೆ ನಾಟಕದ ಸಂದರ್ಭಕ್ಕೆ ಅನುಸಾರವಾಗಿ ಒಮ್ಮೆ ಅಬ್ಬರ, ಇನ್ನೊಮ್ಮೆ ಸೌಮ್ಯ ರೂಪದಲ್ಲಿ ಪ್ರೇಕ್ಷಕನ ಗಮನ ಕದಲಿಸದಂತೆ ಹಿಡಿದಿಡುವ ನೆಲೆಯಲ್ಲಿ ಬಹಳ ಅದ್ಭುತವಾಗಿತ್ತು. ಈ ನೆಲೆಯಲ್ಲಿ ಗಣೇಶ್ ಮಂದಾರ್ತಿ, ಗೀತಂ ಗಿರೀಶ್, ದೇವದಾಸ್ ರಾವ್ ಕೊಡ್ಲಿ, ಶ್ರೀ ಕಲ್ಯಾಣಿ, ಅನ್ವಿತಾ ಜಿ.ಮೂರ್ತಿ, ಸಂದೀಪ್ ಶೆಟ್ಟಿಗಾರ್, ವಾಸುದೇವ ತಿಲಕ್ ಅವರ ಪ್ರಯತ್ನ ಸಾರ್ಥಕವೆನಿಸುತ್ತದೆ. ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಪ್ರಥ್ವಿ ಕೆ. ಮತ್ತು ನಿತೀನ್ ಅವರು ಅನೇಕ ಪಾತ್ರಗಳ ನಟನಾ ಸಾಮರ್ಥ್ಯ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಉಳಿದಂತೆ ರಂಗಪರಿಕರದ ಮೂಲಕ ಪೌರಾಣಿಕ ಸ್ಪರ್ಷ ನೀಡುವ ನೆಲೆಯಲ್ಲಿ ಸಾತ್ವಿಕ್ ನೆಲ್ಲಿ ತೀರ್ಥ, ಬಿ. ಆರ್.ವೆಂಕಟರಮಣ ಐತಾಳ್, ಸೋಮನಾಥ್ ಚಿಟ್ಪಾಡಿ, ಮಿಥುನ್ ಹಾಗೂ ಪ್ರಭಾಕರ್ ಸೌಂಡ್ಸ್ ಇನ್ನಿತರ ಅನೇಕರ ಅನೇಕ ದಿನದ ಪರಿಶ್ರಮಕ್ಕೆ ಇದೊಂದು ಸೂಕ್ತ ವೇದಿಕೆಯಾಯಿತು.
ಖುಷಿ ನೀಡುವ ಸಾಲುಗಳು
ಮಂಥರೆ ಬಳಿ ಬಂದ ದಶರಥನ ಕಿರಿಯ ರಾಣಿ ಕೈಕೇಯಿಯನ್ನು, “ಮುಳುಗಿದ್ದಾತನ ಜೀವಕ್ಕೆ ಮೊಸಳೆ ತಬ್ಬುವಂತೆ’ ಎಂದು ಹೋಲಿಕೆ ಮಾಡಿದ್ದು, “ಬಂಗಾರದ ಜಿಂಕೆ ಚಿಕ್ಕದಲ್ಲ, ಸೀತವ್ವನ ಆಸೆ ಚಿಕ್ಕದಲ್ಲ’, “ಬೆಂಕಿಯಲ್ಲಿ ಬೆಂದು ಬೆಳದಿಂಗಳಾದಳು’ ಹೀಗೆ ನಾನಾ ಹೊಲಿಕೆ ಪ್ರಕಾರಗಳ ಅತ್ಯದ್ಭುತ ಸಾಲು ಪ್ರೇಕ್ಷಕರ ಮನದಾಳಕ್ಕೆ ತಲುಪಿದೆ. ಕೊನೆಗೆ ರಾಮನಿಂದ ರಾವಣ ಸಂಹಾರ ಆಗುವಾಗ ಪ್ರಸ್ತುತ ಜಗತ್ತಿನಲ್ಲಿಯೂ ರಾಮ ರಾವಣರಿಹರು. ಆಯ್ಕೆ ನಿಮ್ಮ ಇಚ್ಛೆಗೆ ಬಿಟ್ಟದ್ದು ಎಂಬಂತೆ ಸೀತಾ ಮಾತೆಯ ದಿಟ್ಟ ನಡೆಯನ್ನು ಸಹ ತಿಳಿಸಲಾಗಿದೆ. ಹೆಣ್ಣಿನ ಬಗ್ಗೆ ಅಂಜುವ ಸಮಾಜಕ್ಕೆ ಈ ನಾಟಕದ ಕೊನೆ ಭಾಗದ ಮೂಲಕ ಒಳ್ಳೆಯ ಸಂದೇಶ ರವಾನಿಸಲಾಗಿದೆ.
ಪೂರ್ತಿ ನಾಟಕ ಮುಗಿದ ಬಳಿಕ ಕಲಾವಿದರನ್ನು ಹಾಗೂ ನಾಟಕ ರಚನಾಕಾರರನ್ನು ಪ್ರೇಕ್ಷಕರು ಪ್ರತ್ಯೇಕವಾಗಿ ಭೇಟಿ ಮಾಡಿದಾಗ ತಮಗಾದ ಅನುಭವ, ಸಂತಸ ಹಂಚಿಕೊಂಡಿದ್ದಾರೆ. ಪ್ರೇಕ್ಷಕರ ಈ ಪ್ರೋತ್ಸಾಹ ಗಣೇಶ್ ಮಂದಾರ್ತಿ ಅವರಿಗೆ ಇನ್ನಷ್ಟು ಹೊಸ ಪ್ರಯತ್ನಕ್ಕೆ ಸ್ಫೂರ್ತಿ ಆಗಲಿದೆ.
-ರಾಧಿಕಾ
ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.