Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
Team Udayavani, Apr 24, 2024, 3:07 PM IST
ಯುಗಾದಿ ಎಂದರೆ ಹೊಸ ವರ್ಷ. ಹೊಸ ಯುಗದ ಆರಂಭ. ಚೈತ್ರ ಮಾಸದ ಪ್ರಾರಂಭದ ದಿನ ಭಾರತೀಯರಿಗೆ ಹೊಸ ವರುಷ.
ಪ್ರತೀ ಮನೆಯಲ್ಲಿ ಸಿಹಿ ಮತ್ತು ಕಹಿ ಬೇವಿನ ಮಿಶ್ರಣದ ಜತೆಗೆ ಪ್ರಾರಂಭವಾಗುವ ಈ ದಿನ ಜೀವನದಲ್ಲಿ ಸಿಹಿ ಕಹಿಯು ಒಂದೆ ಸಮನಾಗಿ ನಮ್ಮ ಬಾಳಿನಲ್ಲಿ ಇರಲಿ ಎಂಬ ಆಶಾಭಾವನೆಯೊಟ್ಟಿಗೆ ಹೊಸ ವರ್ಷವನ್ನು ಪ್ರಾರಂಭಿಸಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಮೊದಲ ಹಬ್ಬವೇ ಯುಗಾದಿ.
ವರ್ಷದ ಮೊದಲ ಹಬ್ಬದ ದಿನ ಈ ವರ್ಷ ಹೇಗಿರುತ್ತದೆ ಎಂದು ಪಂಚಾಂಗವನ್ನು ಓದಿ ತಿಳಿಯುವುದು ರೂಢಿ. ಮುಂಬರುವ ದಿನಗಳ ಲೆಕ್ಕಾಚಾರ ಹಾಗೂ ಒಳಿತು ಕೆಡಕುಗಳ ಆಗು ಹೋಗುಗಳ ನೋಟವನ್ನು ಈ ದಿನ ಪಂಚಾಂಗದಲ್ಲಿ ನೀಡಿರುತ್ತಾರೆ. ಹಾಗಾಗಿ ಪಂಚಾಂಗಕ್ಕೆ ಪೂಜೆ ಮಾಡಿ ಅನಂತರದಲ್ಲಿ ಮನೆಯ ಪ್ರತೀ ಸದಸ್ಯನೂ ಕುಳಿತು ಮನೆಯ ಹಿರಿಯ ವ್ಯಕ್ತಿ ಪಂಚಾಂಗವನ್ನು ಓದುವ ರೂಢಿ ಇದೆ.
ಹೊಸ ವರ್ಷವೆಂದರೆ ಜನವರಿಯ ಹಾಗೆ ಇಲ್ಲಿ ಕುಡಿತ ಕುಣಿತ ಮಸ್ತಿಯಲ್ಲ. ಅಪ್ಪಟ ಸಾಂಪ್ರದಾಯಿಕವಾಗಿ ದಿನದ ಪ್ರಾರಂಭವಾಗುತ್ತದೆ. ಇಲ್ಲಿ ನಾಳೆಯ ಮೇಲಿನ ನಂಬಿಕೆಯಿದೆ, ಬಾಂಧವ್ಯದ ಹೊನಲಿದೆ. ಪ್ರೀತಿಯ ಆಶಯವಿದೆ. ಈ ರೀತಿಯ ದಿನಕ್ಕೆ ಪರಿಸರವೂ ಶೊಭಿಸುವಂತೆ ಹಸುರು ಕಂಗೊಳಿಸುವ ಸಮಯ. ಮಾಮರದಲ್ಲಿ ಕುಳಿತ ಕೋಗಿಲೆಯ ರಾಗ ಕಿವಿ ತಲುಪುವ ಹೊತ್ತು. ಹೂನಗೆಯ ಬೀರಿ ನಿಂತ ಮರದ ಚಿಗುರುಗಳು. ಯಾರಿಗೆ ತಾನೆ ಇದು ಹೊಸದೆಂಬ ಭಾವವನ್ನು ಕೊಡದೇ ಇರವು ಸಾಧ್ಯ?
ಇಂದು ಹೊಸ ವರ್ಷ ಎಂದ ಕೂಡಲೇ ಜನವರಿ 1 ಎಂದು ಕುಣಿದು ಕುಪ್ಪಳಿಸಿ ಎನ್ನುವ ಸಡಗರಗಳಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಿತ್ತಿದ್ದೇವೆ ಆದರೆ ನಿಜವಾಗಿಯೂ ಹೊಸ ವರ್ಷ ಎಂದರೆ ಯಾವುದು? ಅದು ಭೂಮಿ, ಭಾನು ಎಲ್ಲವೂ ಸಂಭ್ರಮಿಸಬೇಕಲ್ಲಾ ಹಬ್ಬವೆಂದು. ಹಬ್ಬದ ಸಡಗರ ನಮ್ಮಲ್ಲಿ ಅಷ್ಟೇ ಅಲ್ಲಾ ಇಡೀ ನಾಡಿನಲ್ಲಿ ಕಾಣುವುದು ಯುಗಾದಿಗೆ ಹಾಗಾಗಿ ಯುಗಾದಿಗೆ ನಾವೆಲ್ಲರೂ ಹೊಸ ವರ್ಷವನ್ನು ಆಚರಿಸುತ್ತೇವೆ.
ಮನುಷ್ಯನ ಜೀವನ ಹೇಗೆ ಹುಟ್ಟಿನಿಂದ ಒಂದೊಂದೇ ಹಂತವನ್ನು ತಲುಪಿ ಮುಂದೆ ಸಾಗುತ್ತದೆಯೋ ಹಾಗೆಯೇ ಪ್ರಕೃತಿಗೆ ಇದು ಒಂದು ರೀತಿಯಲ್ಲಿ ಹುಟ್ಟು. ಹೊಸ ಚಿಗುರುಗಳು ರಾರಾಜಿಸುತ್ತವೆ ಹಾಗೆ ಅದರ ಕಾಲ ಕಳೆದಂತೆ ಅದರ ಜೀವಿತಾವಧಿಯ ಕೊನೆಯನ್ನು ತಲುಪುತ್ತದೆ. ಮತ್ತದೇ ಹಾದಿ ಇದು ಈ ಹಾದಿಯಲ್ಲಿ ಪ್ರಕೃತಿಯು ಕಂಗೊಳಿಸೋ ಕಾಲಕ್ಕೆ ಹೊಸ ವರ್ಷವನ್ನು ಆಚರಿಸುವ ಪದ್ದತಿ ಭಾರತೀಯರದ್ದು.
ಹಬ್ಬದ ಆಚರಣೆಯ ಹುಮ್ಮಸ್ಸು ಎಲ್ಲರಲ್ಲಿಯೂ ಇದೆ. ಆದರೆ ಈ ವರ್ಷ ಬರದ ಪರಿಣಾಮ ಹಬ್ಬ ಎಲ್ಲೋ ಸಣ್ಣ ಪ್ರಮಾಣದಲ್ಲಿ ಸಪ್ಪೆಯಾಗಿದೆ. ಎಲೆಲ್ಲೂ ನೀರಿಗಾಗಿ ದೇವರನ್ನು ಮೊರೆಯಿಡುತ್ತಿದ್ದೇವೆ. ಬಿಸಿಲ ಧಗೆಯನ್ನು ತಂಪಾಗಿಸು ಎಂದು ಕೋರಿಕೊಳ್ಳುತ್ತಿದ್ದೇವೆ. ಈ ವರ್ಷದ ಹಬ್ಬ ಸುಖ, ಶಾಂತಿ ನೆಮ್ಮದಿಯ ಜತೆಗೆ ಸುಡುಬಿಸಿಲಿನಿಂದ ರಕ್ಷಣೆಯನ್ನು ಬೇಡುತ್ತಿದ್ದೇವೆ. ಎಲ್ಲರ ಆಸೆಯನ್ನು ದೇವರು ಪೂರ್ಣಗೊಳಿಸಲಿ. ಎಲ್ಲವನ್ನೂ ದೇವರು ಕರುಣಿಸಿ ಈ ವರ್ಷದ ಹಬ್ಬವೂ ವಿಜೃಂಬಣೆಯಿಂದ ನಡೆಯುವಂತಾಗಲಿ ಎಂಬ ಆಶಯ.
-ದಿವ್ಯಶ್ರೀ ಹೆಗಡೆ
ಎಸ್‌ಡಿಎಂ ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.