UV Fusion: ಎಲ್ಲರಿಗೂ ಬದುಕುವ ಹಕ್ಕಿದೆ
Team Udayavani, Sep 18, 2024, 4:09 PM IST
ನಮ್ಮ ಸುತ್ತಮುತ್ತಲಿನ ಪರಿಸರ ತನ್ನೊಡಲಿನಲ್ಲಿ ಅನೇಕ ಪ್ರಾಣಿ ಪಕ್ಷಿ ಜೀವ ಸಂಕುಲವನ್ನು ಸಲಹುತ್ತಿದೆ. ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶಿಷ್ಟ ರಚನೆ, ಲಕ್ಷಣ, ಸ್ವಭಾವ ಗುಣಗಳಿವೆ. ಈ ವಿಭಿನ್ನತೆಯ ಮೇಲೆ ಅವುಗಳ ಜೀವನ ಹಾಗೂ ವರ್ತನೆ ಅವಲಂಭಿತವಾಗಿದೆ. ಮನುಷ್ಯ ಎಲ್ಲ ಪ್ರಾಣಿ ಪಕ್ಷಿಗಳಿಗಿಂತ ಬುದ್ಧಿವಂತ ಹಾಗೂ ಉನ್ನತ ಜೀವನಮಟ್ಟ ಹೊಂದಿದ್ದರೂ ಕೆಲವು ಜೀವಿಗಳಿಗೆ ಅಂಜಿ ಬದುಕುತ್ತಾನೆ. ಇದು ಮಾನವನ ಸಹಜ ಗುಣ ಎಂದೇ ಹೇಳಬಹುದು.
ಬುದ್ಧಿವಂತ ಪ್ರಾಣಿ ಭಯಪಡುವ ಹಲವು ಜೀವಿಗಳ ಪೈಕಿ ಸರ್ಪ ಪ್ರಮುಖವಾಗಿದೆ. ಸರ್ಪಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದ್ದು, ಲಯಕಾರ ಪರಮೇಶ್ವರನ ಪರಮಆಭರಣ ಇದಾಗಿದೆ. ಶಿವನ ಕೊರಳನ್ನು ಅಲಂಕರಿಸಿದ ಹಾವನ್ನು ಪ್ರತ್ಯಕ್ಷವಾಗಿ ಕಂಡೊಡನೆ ಒಂದು ಬಗೆಯ ಭಯ ಹಾಗೂ ಭಕ್ತಿ ಮೂಡುತ್ತದೆ. ಕಲ್ಲಿನ ನಾಗದೇವರನ್ನು ಕಂಡು ಕೈಮುಗಿಯಲು ನೂರಾರು ಮೈಲಿ ಲೆಕ್ಕಿಸದೆ ಬರುವ ಜನರು, ಅದೇ ಜೀವಂತ ಹಾವನ್ನು ಕಂಡೊಡನೆ ಮೈಲುಗಟ್ಟಲೆ ಓಡಿ ಹೋಗುತ್ತಾರೆ ಎಂಬುದೇ ಸತ್ಯ.
ಯಾವ ಜೀವಿಯಾದರು ತನಗೆ ಹಾನಿ ಉಂಟಾಗದೆ ಯಾರ ಮೇಲೂ ದಾಳಿ ಮಾಡುವುದಿಲ್ಲ, ಅದರಂತೆ ಸರ್ಪವು ಕೂಡ. ಆದರೆ ಸಾಮಾನ್ಯವಾಗಿ ಜನರು ತಮ್ಮ ಮೇಲೆ ಹಾವು ದಾಳಿ ಮಾಡುವ ಮೊದಲೇ ಅದಕ್ಕೆ ತೊಂದರೆಯನ್ನು ಉಂಟುಮಾಡುತ್ತಾರೆ. ಅದೇ ಕಲ್ಲಿನ ನಾಗನಮೂರ್ತಿ ಕಂಡರೆ ಹಾಲೆರೆದು ಕೈಮುಗಿದು ನಿಲ್ಲುತ್ತಾರೆ. ಇನ್ನು ನಾಗರ ಪಂಚಮಿ ಹಬ್ಬಕ್ಕಂತು ಮಣ್ಣಿನಲ್ಲಿ ಮೂರ್ತಿಯಾದ ಸರ್ಪವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ.
“”ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ನಾ.
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ನಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ.”
ಎಂಬ ಬಸವಣ್ಣನವರು ಹೇಳಿದ ವಚನ ಇಂತಹ ಸಂದರ್ಭದಲ್ಲಿ ನೆನಪಾಗುತ್ತದೆ. ಜೀವಂತಿಕೆಗೆ ದೊರೆ ಯದ ಗೌರವ ಮೂರ್ತಿಗೆ ತೋರಿದರೆ ಏನು ಫಲ. ವಿಶೇಷವಾಗಿ ನಾಗರ ಪಂಚಮಿ ಹಬ್ಬದಲ್ಲಿ ಭಕ್ತರು ಹುತ್ತಗಳಿಗೆ ಹಾಲನ್ನೆರೆದು, ಹೂವು, ಹಣ್ಣು, ಧೂಪ, ದೀಪಗಳಿಂದ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಕೇವಲ ಒಂದು ದಿನದಕ್ಕೆ ಕಲ್ಲಿನ ನಾಗದೇವರ ಮೇಲೆ ಗೌರವ ಭಕ್ತಿ ತೋರಿದರೆ ಸಾಲದು. ಹಾವುಗಳನ್ನು ಕಂಡಾಗ ಅವುಗಳಿಗೆ ಏನು ತೊಂದರೆ ನೀಡದೆ ಹೋದರೆ ಅದುವೇ ನಿಜವಾದ ಗೌರವ.
ಏಕೆಂದರೆ ಪ್ರತಿಯೊಂದು ಜೀವಸಂಕುಲಗಳಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕು ಭಗವಂತ ನೀಡಿದ್ದಾನೆ. ಅದಕ್ಕೆ ಅಡಚಣೆ ಉಂಟುಮಾಡುವ ನೈತಿಕತೆ ನಮಗಿಲ್ಲ. ಪ್ರತಿಯೊಂದು ಜೀವಿಯನ್ನು ಜೀವಿಸಲು ಬಿಡೋಣ. ನಮ್ಮಿಂದ ಸಾಧ್ಯವಾದರೆ ಸಹಾಯ ಸಹಕಾರ ಮಾಡಬೇಕು ಇಲ್ಲವಾದರೆ ತೊಂದರೆ ಮಾಡದೆ ಸುಮ್ಮನಿರುವುದೇ ಲೇಸು ಮಾನವನಿಂದ ಅದಕ್ಕಿಂತ ದೊಡ್ಡ ಉಪಕಾರ ಮತ್ತೂಂದಿಲ್ಲ.
- ಪೂಜಾ ಹಂದ್ರಾಳ
ಶಿರಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.