UV Fusion: ರೋಮಾಂಚನವೀ ರಸಾಯನ
Team Udayavani, Nov 7, 2023, 8:00 AM IST
ಪುಟಗಟ್ಟಲೇ ಗೀಚಿದ ರಾಸಾಯನಿಕ ಕ್ರಿಯೆಗಳು, ನೇರವಾಗಿ ನೋಡಿದರೂ ತಲೆಕೆಳಗೆ ಮಾಡಿ ನೋಡಿದರೂ ಅರ್ಥವಾಗದ ಬರಹಗಳು. ಬಣ್ಣವೇ ಇಲ್ಲದ ದ್ರಾವಣವೊಂದು ಇನ್ನೊಂದು ದ್ರವದೊಂದಿಗೆ ವರ್ತಿಸಿ ಇದ್ದಕಿದ್ದಂತೆಯೇ ತನ್ನ ಸ್ವಂತ ಬಣ್ಣವನ್ನೇ ಬದಲಾಯಿಸಿಕೊಳ್ಳುವ ಊಸರವಳ್ಳಿಯ ನೆಂಟರು ಹೀಗೆ ಹೇಳಹೋದರೆ ಅನೇಕ ಅಚ್ಚರಿಗಳನ್ನು ತನ್ನೊಳಗಿರಿಸಿದ ಮಹಾಪೂರವೇ ರಸಾಯನಶಾಸ್ತ್ರವೆಂಬ ಕೌತುಕತೆಯ ತಾಣ.
ಅನೇಕರು ಯಾವುದಾದರೂ ಆದೀತೂ ಈ ಕೆಮಿಸ್ಟ್ರಿಯ ಸಹವಾಸವಂತೂ ಬೇಡವೆ ಬೇಡ ಎಂದು ಕುಳಿತುಬಿಡುತ್ತಾರೆ. ಅದಕ್ಕೆ ಮುಖ್ಯ ಕಾರಣವೇ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯದ ನೂರಾರು ರಾಸಾಯನಿಕ ಕ್ರಿಯೆಗಳು. ಅರ್ಥಮಾಡಿಕೊಂಡು ಓದಿದರೆ ಎಲ್ಲವೂ ಸರಳ ಎಂದು ಎಷ್ಟೋ ಬಾರಿ ಉಪನ್ಯಾಸಕರು ಬೊಬ್ಬೆ ಹೊಡೆದರೂ ರಸಾಯನಶಾಸ್ತ್ರವನ್ನು ಹಲವರು ಅಸ್ಪಶ್ಯವೆಂಬಂತೆ ಕಂಡು ಸಮೀಪಕ್ಕೆ ಹೋಗಲೂ ಹೆದರುತ್ತಾರೆ.
ರಸಾಯನಶಾಸ್ತ್ರ ಅದೊಂದು ಮಹಾನ್ ಸಾಗರ ಆ ಸಾಗರದಲ್ಲಿ ಈಜುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅನೇಕ ತಿಮಿಂಗಿಲಗಳು ಯಾವ ಅಲೆಗಳನ್ನೂ ಲೆಕ್ಕಿಸದೆ ನಮ್ಮ ಮುಂದೆಯೇ ಲೀಲಾಜಾಲವಾಗಿ ಅಲೆಯ ಮೇಲೆಯೂ, ಆಳಸಾಗರದಲ್ಲಿಯೂ ಈಜು ಹೊಡೆಯುತ್ತಿರುವುದಂತೂ ಶ್ಲಾಘನೀಯವೇ ಸರಿ.
ಕೆಮಿಸ್ಟ್ರಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣವೆಂದರೆ ಅದು ಪ್ರಯೋಗಶಾಲೆ. ಅದು ರೋಮಾಂಚನ, ವಿಷಯಾಧ್ಯಯನ, ಜಾಗರೂಕತೆ, ಅಚ್ಚರಿ, ಲಘುಹಾಸ್ಯಗಳ ಸಮ್ಮಿಲನದಿಂದ ಕೂಡಿದ ಒಂದು ಸುಂದರ ಕೊಠಡಿ. ಬರೆದು ಬರೆದು ಸುಸ್ತಾದ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಕೆಲವೊಮ್ಮೆ ಪ್ರಯೋಗಶಾಲೆಯ ಕಿಟಕಿಯ ಬಳಿ ಮೆಲ್ಲನೆ ನಾವೇನೋ ಈ ಜಗತ್ತು ಕಂಡು ಕೇಳರಿಯದ ಸಂಶೋಧನೆಯನ್ನು ಮಾಡುತ್ತಿರುವೆವೋ ಎಂಬಂತೆ ಇಣುಕಿನೋಡುವುದುಂಟು! ವಿಜ್ಞಾನ ವಿದ್ಯಾರ್ಥಿಗಳಾದ ನಮಗೇ ಕೆಮಿಸ್ಟ್ರಿ ಎಂಬ ಮಾಯಾಲೋಕದ ಕೆಲವೊಂದು ವಿಸ್ಮಯಗಳು ಅಚ್ಚರಿ ಮೂಡಿಸುವಾಗ ಇತರ ವಿಷಯಗಳನ್ನು ಅಧ್ಯಯನ ಮಾಡುವವರಿಗೆ ಅಚ್ಚರಿಮೂಡಲಾರದೇ?
ನನಗಿನ್ನೂ ನೆನಪಿದೆ. ಪದವಿ ಪೂರ್ವ ತರಗತಿಯಲ್ಲಿರುವಾಗ ಕೆಮಿಸ್ಟ್ರಿ ಪ್ರಯೋಗಶಾಲೆಯಲ್ಲಿ ನಮ್ಮ ಪ್ರಯೋಗಗಳು ಮುಗಿದ ಬಳಿಕ ಒಂದು ಹುಚ್ಚು ಆಸಕ್ತಿ ನನ್ನಲ್ಲಿತ್ತು . ಅದೇನೆಂದರೆ ಒಂದು ಪ್ರನಾಳಕ್ಕೆ ಅನೇಕ ರಸಾಯನಿಕಗಳನ್ನು ಹಾಕಿ ಏನಾಗಬಹುದು ಯಾವ ಬದಲಾವಣೆಯಾಗಬಹುದು, ಹೊಗೆ ಏನಾದರೂ ಬರಬಹುದೇ, ಅಥವಾ ಸಿಡಿಯಬಹುದೇ ಎಂದು ರಾಸಾಯನಿಕ ಕ್ರಾಂತಿಯನ್ನು ಮಾಡುವ ಹುಚ್ಚು ಹಂಬಲ. ಆದರೆ ಯಾವಾಗ ನನ್ನ ಸಹಪಾಠಿಯೊಬ್ಬನ ಕಣ್ಣಿಗೆ ಕಾದ ಪ್ರಬಲ ಸಲ್ಫ್ಯೂರಿಕ್ ಆಮ್ಲದ ಬಿಂದು ಸಿಡಿದು ಹೆಚ್ಚು ಕಡಿಮೆ ಎರಡರಿಂದ ಮೂರು ತಿಂಗಳು ಅವನನ್ನು ಮನೆಯಲ್ಲಿಯೇ ಕೂರುವಂತೆ ಮಾಡಿತೋ ಅಂದೇ ಹುಚ್ಚಾಟಗಳಿಗೆ ಇದು ಸೂಕ್ತ ಜಾಗವಲ್ಲ ಎಂಬುದನ್ನು ತಿಳಿದು ಎಷ್ಟಿದೆಯೋ ಅಷ್ಟನ್ನು ಮುಗಿಸಿ ತೆಪ್ಪಗೆ ಪ್ರಯೋಗ ಶಾಲೆಯಿಂದ ಹೊರಡುತ್ತಿದ್ದೆ. ಎಷ್ಟೇ ಜಾಗರೂಕರಾಗಿದ್ದರೂ ಕೂಡ ಕೆಲವೊಮ್ಮೆ ಅಚಾತುರ್ಯಗಳು ನಡೆದೇ ನಡೆಯುತ್ತವೆ. ಆದರೆ ಎಲ್ಲವೂ ತೀರಾ ಅಪಾಯಕಾರಿ ಏನೂ ಅಲ್ಲ.
ಕೆಲವೊಮ್ಮೆ ಕೆಲವೊಂದು ವಿಷಯಗಳು ಗಾಬರಿ ಹುಟ್ಟಿಸಿದರೂ ನಮ್ಮ ದೇಹದ ಮೇಲೆ ಗಂಭೀರವಾದ ಪರಿಣಾಮವನ್ನೇನೂ ಉಂಟುಮಾಡಲಾರದು. ಕೆಲ ದಿನಗಳ ಹಿಂದೆಯಷ್ಟೇ ಪಿಕ್ರಿಕ್ ಆಮ್ಲ ಎಂಬ ರಾಸಾಯನಿಕದ ಒಂದೆರಡು ಹನಿಗಳು ಅಚಾನಕ್ಕಾಗಿ ನನ್ನ ಅಂಗೈಯ ಮೇಲೆ ಬಿದ್ದವು. ಎಷ್ಟೇ ತೊಳೆದರೂ ಆ ರಾಸಾಯನಿಕದ ಗಾಢ ಹಳದಿ ಬಣ್ಣ ಮಾಸಲೇ ಇಲ್ಲ. ದಿನ ಒಂದಾಯಿತು ಎರಡಾಯಿತು ಆ ಬಣ್ಣ ನನ್ನ ಕೈಯನ್ನು ಬಿಟ್ಟು ಹೋಗಲು ಸರ್ವಥಾ ಕೇಳಲಿಲ್ಲ!
ಇನ್ನೇನು ಇದು ಶಾಶ್ವತವಾಗಿ ನನ್ನ ಕೈಯಲ್ಲೇ ಉಳಿಯಬಹುದೇ ಎಂದು ಒಮ್ಮೆ ಯೋಚಿಸುತ್ತಿರುವಾಗಲೇ ಒಂದೆರಡು ದಿನಗಳಲ್ಲಿ ಆಮ್ಲ ಬಿದ್ದ ಜಾಗದ ಚರ್ಮ ಬಣ್ಣಸಮೇತವಾಗಿ ಎದ್ದುಹೋಗಿ ಹೊಸ ಚರ್ಮ ಕೈಯ ಭಾಗವನ್ನು ಹೊದ್ದುಕೊಂಡಿತು. ಈ ರೀತಿಯ ತರಲೆ ಬುದ್ಧಿಯೂ ಕೆಲವು ರಾಸಾಯನಿಕಗಳಿಗಿದೆ!
ಪ್ರಯೋಗಗಳನ್ನು ಉದಾಸೀನತೆಯಿಂದ ಮಾಡದೇ ಅನುಭವಿಸುತ್ತಾ ಅದರಿಂದ ಉಂಟಾಗುವ ಬದಲಾವಣೆಗಳನ್ನು ಕಂಡು ಖುಷಿಪಡಬೇಕು ಎಂದು ಪ್ರತಿನಿತ್ಯವೂ ಉಪನ್ಯಾಸಕರೊಬ್ಬರು ಹೇಳುತ್ತಲೇ ಇರುತ್ತಾರೆ. ಅದು ಅಕ್ಷರಶಃ ಸತ್ಯವೂ ಹೌದು. ನಾವು ಸರಿಯಾದ ಗಮನವಹಿಸಿ ಪ್ರಯೋಗಗಳನ್ನು ಮಾಡುತ್ತಾ ಹೋದಂತೆ ಕೆಲವೊಂದು ಸನ್ನಿವೇಷಗಳಲ್ಲಿ ಉಂಟಾಗುವ ಬದಲಾವಣೆಗಳು ಸಹಜವಾಗಿ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ.
ಪ್ರಯೋಗಗಳನ್ನು ಮಾಡುವಾಗ ಸ್ವಲ್ಪ ಮೈಮರೆತರೂ ಏನಾದರೊಂದು ಅಚಾತುರ್ಯ ನಡೆದಿರುತ್ತದೆ. ಪ್ರಯೋಗಶಾಲೆಯಲ್ಲಿ ನಡೆಯುವ ಅವಾಂತರಗಳನ್ನು ಹೇಳಲು ಹೊರಟರೆ ಅದೊಂದು ದೀರ್ಘ ಕಾದಂಬರಿಯೇ ಆಗಬಹುದು. ಕಾದಂಬರಿಗೆ ಒಪ್ಪುವ ಪಾತ್ರಗಳೂ ಅಲ್ಲಿ ಬಹಳಷ್ಟು ಸಿಗುತ್ತವೆ. ರಸಾಯನಶಾಸ್ತ್ರವೆಂಬ ಜಗತ್ತಿನಲ್ಲಿ ಹೊರಳುತ್ತಿರುವ ಪುಟ್ಟ ಹುಳು ನಾನು. ಅದರ ಆಳ ಅಗಲ ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ಆದರೆ ರಸಾಯನಶಾಸ್ತ್ರದ ರಸಪಾಕದ ಅಲ್ಪ ಸವಿಯುಂಡ ತೃಪ್ತಿ ನನಗಿದೆ.
-ವಿಕಾಸ್ ರಾಜ್
ವಿ.ವಿ. ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
Sandalwood: ಕುಡ್ಲ ನಮ್ದು ಊರು!: ಇದು ಕರಾವಳಿ ತಂಡದ ಹೊಸ ಕನಸು
Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.