UV Fusion: ಮರೆವು
Team Udayavani, Aug 31, 2024, 2:50 PM IST
ಮನುಜನ ಬದುಕಿನ ವಿವಿಧ ಹಂತಗಳಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಕೆಲವೊಂದು ಘಟನೆಗಳು ಸಿಹಿ ಅನುಭವಗಳನ್ನು ನೀಡಿ ಮನಸ್ಸನ್ನು ಉಲ್ಲಸಿತಗೊಳಿಸಿದರೆ, ಇನ್ನೂ ಕೆಲವು ಘಟನೆಗಳು ಕಹಿ ಅನುಭವವನ್ನು ನೀಡಿ ನಮ್ಮ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ. ಇಂತಹ ಹೃದಯಕ್ಕೆ ಪದೇ ಪದೇ ಚುಚ್ಚಿ ವೇದನೆ ಕೊಡುವ ಕಹಿನೆನಪುಗಳು ಮನದ ಪುಟದಿಂದ ಮರೆಯಾಗಬೇಕು.ಅದಾಗಲೇ ಮರೆವು ಎನ್ನುವುದೊಂದು ವರವಾಗಿ ಪರಿಣಮಿಸುವುದು.
ಇಂತಹ ಸಂದರ್ಭದಲ್ಲಿ ಮರೆವು ಎನ್ನುವುದೊಂದು ಇರದಿದ್ದರೆ ಆ ವ್ಯಕ್ತಿ ಬದುಕಿನಲ್ಲಿ ಸಂಭವಿಸಿದ ಕಹಿ ಘಟನೆಯಿಂದ ಹೊರಬರಲಾಗದೆ ಪ್ರತಿದಿನ, ಪ್ರತಿಕ್ಷಣ ನರಳಿ ನರಳಿ ಮನೋವ್ಯಾಕುಲತೆ ಹೊಂದಿ ಮನೋರೋಗಿಯಾಗುವ ಸಂಭವವೂ ಇರುತ್ತದೆ. ಪ್ರಾಪಂಚಿಕ ಜಗತ್ತಿನ ಯಾವುದೇ ವಸ್ತು, ಸಂಬಂಧಗಳ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ತನ್ನೊಳಗೇ ಒಂಟಿತನವನ್ನು ಅನುಭವಿಸಿ ಉಸಿರಿದ್ದರೂ ಹೆಣದಂತೆ ಬದುಕುವ ದೊಡ್ಡ ದುರಂತವು ಮರೆವು ಎನ್ನುವ ವರ ವೊಂದರಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದು.
ತನ್ನ ಕರುಳಕುಡಿಯೊಂದು ತನ್ನ ಕಣ್ಣೆದುರೇ ಇಹಲೋಕ ತ್ಯಜಿಸಿದಾಗ ಆ ತಾಯಿ ಹೃದಯ ಪಟ್ಟ ವೇದನೆ ಮರೆವು ಎನ್ನುವ ಮದ್ದಿನಿಂದ ಕಡಿಮೆಯಾಗುತ್ತದೆ. ತನ್ನ ಕೈ ಹಿಡಿದವನ, ಹತ್ತಿರದ ಸಂಬಂಧಿಕರ ಸಾಂತ್ವನದ ಮಾತುಗಳಿಂದ ಮನದ ನೋವು ಮರೆಯಾಗುತ್ತದೆ. ಇಲ್ಲದಿದ್ದರೆ ಆ ಕಹಿ ನೆನಪು ಮತ್ತೆ ಮತ್ತೇ ನೋವಿನ ಮುಳ್ಳಿನಂತೆ ಹೃದಯವನ್ನು ಹಿಂಡುವಾಗ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಮನಸ್ಸು ತಲುಪಿರುತ್ತದೆ.
ಇಲ್ಲಿ ಮರೆವು ಎನ್ನುವ ವರದಿಂದ ಅಮೂಲ್ಯವಾದ ಜೀವವೊಂದು ಬಾಳಿ ಬದುಕುತ್ತದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗೆ ಆ ಘಳಿಗೆಯಲ್ಲಿ ಒಮ್ಮೆ ಮನಸ್ಸಲ್ಲಿ ಬೇಸರ ಮೂಡಿದರೂ,ಮರೆವಿನಿಂದ ಆ ವಿದ್ಯಾರ್ಥಿ ತನ್ನಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಮತ್ತೇ ಎಲ್ಲ ವಿದ್ಯಾರ್ಥಿಗಳಂತೆ ಸಹಜ ಬಾಳು ನಡೆಸಲು ಸಾಧ್ಯವಾಗುತ್ತದೆ.ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಂತೂ ಈ ಮರೆವು ಬಹುದೊಡ್ಡ ವರವಾಗಿ,ಆಪತ್ಭಾಂಧವನಾಗಿ ತೋರುತ್ತದೆ.
ಇನ್ನು ಪ್ರೇಮವೈಫಲ್ಯ ಹೊಂದಿದ ಪ್ರೇಮಿಗಳ ಪಾಲಿಗಂತೂ ಮರೆವು ಆಪ್ತರಕ್ಷಕ,ಆತ್ಮೀಯ ಗೆಳೆಯ,ಜೀವರಕ್ಷಕ ಮದ್ದು!. ಕೆಲವೊಂದು ಬಾರಿ ಪ್ರೀತಿಯಿಂದ ವಂಚಿತರಾದ ಪ್ರೇಮಿಗಳು ಅದಾಗಲೇ ತಮ್ಮಲ್ಲಿರುವ ಹಣ,ಅಂತಸ್ತು,ಒಡವೆ,ಗೌರವ,ಪ್ರೀತಿ ತುಂಬಿದ ಪುಟ್ಟ ಹೃದಯ ಎಲ್ಲವನ್ನೂ ಕಳೆದುಕೊಂಡಿರುತ್ತಾರೆ.
ಕೆಲವೊಮ್ಮೆ ಬಹಳ ಅಮೂಲ್ಯವಾದ ಮಾನವನ್ನೇ ಕಳೆದುಕೊಂಡಿರುತ್ತಾರೆ. ಇಂತಹ ಬಹು ಸೂಕ್ಷ್ಮವಾದ ಸನ್ನಿವೇಶದಲ್ಲಿ ಮರೆವು ಎನ್ನುವುದೊಂದು ಇರದಿದ್ದರೆ ಆ ಪ್ರೇಮಿಗಳು ಭಾವಚಿತ್ರವಾಗಿ ಗೋಡೆಯ ಮೇಲೆ ನಗುತ್ತಿರುತ್ತಿದ್ದರು. ಇಲ್ಲದಿದ್ದರೆ ಭಗ್ನಪ್ರೇಮಿಯಾಗಿ ಅರೆಹುಚ್ಚರಂತೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅಥವಾ ಜೀವನಪರ್ಯಂತ ಪ್ರೇಮಿಯ ನೆನಪಲ್ಲೇ ಒಂಟಿಬಾಳು ಬದುಕುತ್ತಿದ್ದರು. ಇಂತಹ ಘಟನೆಗಳು ನಡೆಯುವುದೇ ಇಲ್ಲವೆಂದಲ್ಲ.ಆದರೆ ಇವುಗಳು ಘಟಿಸುವ ಪ್ರಮಾಣ ಬಹಳವೇ ಕಡಿಮೆ. ಇಂತಹ ಸಂದರ್ಭಗಳಲ್ಲೆಲ್ಲಾ ಮರೆವು ನಿಜವಾಗಿಯೂ ವರವೇ ಹೌದು!. ಆ ಪ್ರೇಮ ವಂಚಿತ ಪ್ರೇಮಿಗಳು ಮರೆವಿನ ಸಹಾಯದಿಂದ ಬೇರೆ ಬಾಳಸಂಗಾತಿಯನ್ನು ಆರಿಸಿ ಸುಗಮವಾಗಿ ಸಂಸಾರ ನೌಕೆಯನ್ನು ದಡ ಸೇರಿಸುತ್ತಾರೆ.
ಕೆಲವೊಮ್ಮೆ ತಮ್ಮ ಬದುಕಿನ ಜತೆಗಾರರಾದ ಗಂಡ ಅಥವಾ ಹೆಂಡತಿ ಅಕಾಲಿಕ ಮರಣವನ್ನಪ್ಪಿದಾಗ ಕೆಲವರಂತೂ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಘಾತ ಹೊಂದಿ ಮಾನಸಿಕವಾಗಿ ಪಾತಾಳಕ್ಕೆ ಕುಸಿದು ಬೀಳುತ್ತಾರೆ. ಅವರನ್ನೆಲ್ಲಾ ಆ ಮಾನಸಿಕ ಖನ್ನತೆಯಿಂದ ಹೊರಗೆ ತಂದು, ಅವರಲ್ಲಿಯೂ ಬದುಕುವ ಛಲ, ಉತ್ಸಾಹ ತುಂಬುವುದೇ ಈ ಮರೆವು ಎಂಬ ದಿವ್ಯ ಔಷಧ.
ವೃದ್ಧಾಪ್ಯದಲ್ಲಿ ಕೆಲವರು ತಮಗೆ ಎಷ್ಟೇ ಬೇಡ ಬೇಡವೆಂದರೂ ವೃದ್ಧಾಶ್ರಮದ ಬಾಗಿಲುಗಳು ಅವರನ್ನು ಸ್ವಾಗತಿಸುತ್ತಿರುತ್ತದೆ. ಜೀವನದ ಕೊನೆಗಾಲವನ್ನು ತಮ್ಮ ಮಕ್ಕಳ ಜೊತೆಗೆ ಕಳೆಯಬೇಕಾದವರು ಅನಾಥರಂತೆ ವೃದ್ಧಾಶ್ರಮದಲ್ಲಿ ಕಳೆಯಬೇಕಾದ ಸಂದರ್ಭಗಳು ಕೆಲವರಿಗೆ ಎದುರಾಗುತ್ತದೆ. ಈ ಹಿರಿಯ ಚೇತನಗಳಿಗೆ ತಮ್ಮ ಕರುಳಕುಡಿಗಳಿಂದಲೇ ತಮಗೆದುರಾದ ಈ ಆಘಾತವನ್ನು ಅರಗಿಸಿಕೊಳ್ಳಲು ಮರೆವು ಎಂಬುವುದು ನೀರಿನಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಂತೆ ಭಾಸವಾಗುತ್ತದೆ.
ಇವರಿಗೆ ತಮ್ಮ ಪಯಣದ ಕೊನೆಯ ದಿನಗಳನ್ನಾದರೂ ಅಲ್ಪಸ್ವಲ್ಪ ಖುಷಿಯಿಂದ ಬದುಕಲು ಮರೆವು ಸಂಜೀವಿನಿಯಾಗಿ ಪರಿಣಮಿಸುತ್ತದೆ. ಹೀಗೆ ಬದುಕಿನ ಹಲವು ಮಜಲುಗಳ ಕಹಿ ನೆನಪನ್ನು ಮರೆಯಾಗಿಸಿ,ಬಾಡಿದ ಮೊಗದಲ್ಲಿ ನಗು ಅರಳಿಸಿ,ಮುದುಡಿದ ಮನಕ್ಕೆ ಚೇತನವಾಗಿ ಮರೆವು ಎನ್ನುವುದೊಂದು ವರವಾಗಿ ಬರುತ್ತದೆ.ಕಾಲಕ್ಕೆ ಎಲ್ಲವನ್ನೂ ಮರೆಸುವ ಅದ್ಭುತ ಶಕ್ತಿ ಇದೆ.
ಕಾಲ ಸರಿದಂತೆ ಬೇಡವಾದ ವಿಚಾರಗಳನ್ನು ಮನಸ್ಸಿನಿಂದ ಕಿತ್ತೂಗೆದು,ಅಮೂಲ್ಯವಾದ ಬದುಕನ್ನು ಸುಂದರವಾಗಿಸೋಣ.ಪ್ರತಿಕ್ಷಣವನ್ನು ಖುಷಿಯಿಂದ ಅನುಭವಿಸಿ,ಎಲ್ಲೆಡೆಯೂ ಖುಷಿಯನ್ನೇ ಹಂಚೋಣ. ಚಿಂತೆಯ ಕರಿನೆರಳನ್ನು ಮನದ ಪರದೆಯಿಂದ ಸರಿಸಿ,ಬದುಕಿಗೆ ಹೊಸ ಬಣ್ಣ ಬಳಿಯುವ ಈ ಮರೆವು ಎನ್ನುವ ವರಕ್ಕೆ ಧನ್ಯವಾದಗಳನ್ನು ಸಲ್ಲಿಸೋಣ.
-ವಿಜಯಲಕ್ಷ್ಮೀ ನಾಯ್ಕ
ಬಿಳಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.