ಸ್ವಾತಂತ್ರ್ಯ ನಿಜವಾದ ಸಮಾನತೆಯೇ
Team Udayavani, Jul 20, 2021, 3:34 PM IST
ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಸಿದ್ಧಲಿಂಗಯ್ಯನವರ ಬಹು ಪ್ರಸಿದ್ಧ ಬರೆಹದ ಸಾಲುಗಳು ಇಂದಿಗೂ ಜೀವಂತಿಕೆಯಿಂದ ಕೂಡಿವೆ. ಬ್ರಿಟಿಷರಿಂದ ಸ್ವಾತಂತ್ರ್ಯ ನಮಗೆ ದಕ್ಕಿದ್ದರೂ ನಾವು ಸಂಪೂರ್ಣ ಸ್ವತಂತ್ರರಲ್ಲ. ಅದರಲ್ಲೂ ಮಹಿಳೆಯರಿಗೆ ಸ್ವಾತಂತ್ರ್ಯ ಹೆಸರಿಗೆ ಮಾತ್ರ ಸೀಮಿತವೆಂಬಂತಿದೆ. ಕೆಲಸ ಮಾಡೋ ಮಹಿಳೆಯರು ಅಂದರೆ ಅಂಥವರ ಬಗ್ಗೆ ಈ ಸಮಾಜ ಎರಡು ಗುಂಪುಗಳಾಗಿ ಮಾತನಾಡುತ್ತದೆ. ಒಂದು ಗುಂಪು ಅವಳನ್ನು, ಅವಳು ಮಾಡುತ್ತಿರುವ ಕೆಲಸವನ್ನು ಗೌರವಿಸಿ ಆಕೆಯ ಸ್ವಾತಂತ್ರ್ಯಕ್ಕೆ ಬೆಲೆ ಕೊಟ್ಟರೆ ಮತ್ತೂಂದು ಗುಂಪು ಅವಳ ಸ್ವಾತಂತ್ರ್ಯವನ್ನು ಹರಣಮಾಡಿ ಮನೆಗೆ ಸೀಮಿತಗೊಳಿಸುತ್ತದೆ.
ಹೆಣ್ಣಿಗೂ ತನ್ನವರನ್ನು ತಾನೇ ದುಡಿದು ನೋಡಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಹಾಗೇ ಯಾರ ಮುಂದೆಯೂ ಕೈಚಾಚದೆ ತನ್ನ ಜೀವನವನ್ನ ತಾನೇ ರೂಪಿಸಬೇಕೆಂಬ ಸ್ವಾಭಿಮಾನವು ಇರುತ್ತದೆ. ಇಂತಹ ಸ್ವಾಭಿಮಾನವನ್ನು ಕೆಲವರು ಅಹಂಕಾರವೆಂದು ದೂಷಿಸುತ್ತಾರೆ. ಹೆಣ್ಣು ಕೆಲಸ ಮಾಡಲಿಚ್ಛಿಸುವುದು ತಪ್ಪು ಎಂಬ ಭಾವನೆಯನ್ನು ಬಲವಂತವಾಗಿ ಹೇರಿ, ಆಕೆಯನ್ನು ಅಸಹಾಯಕ ಸ್ಥಿತಿಗೆ ತುಳ್ಳುತ್ತಾರೆ. ನೀನು ಮನೆಯಿಂದ ಆಚೆಹೋಗಿ ಹೇಗೆ ಕೆಲಸಮಾಡಬಲ್ಲೆ, ಹೇಗೆ ಒಬ್ಬಳೆ ಇರಬಲ್ಲೆ ಎಂದು ಅವಳ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಬಿಡುತ್ತಾರೆ. ಮುಂದೆ ಅವಳ ಪೋಷಕರು ಆಕೆಗೊಂದು ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ಮುಕ್ತಿಹೊಂದುತ್ತಾರೆ. ಮದುವೆಯಾದ ಅನಂತರ ಗಂಡನ ಮನೆಯ ಜವಾಬ್ದಾರಿಯನ್ನು ಹೊತ್ತು ತನ್ನ ಕೆಲಸಕ್ಕೆ ಸೇರುವ ಆಸೆಯನ್ನ ತನ್ನಲ್ಲೇ ಸಾಯಿಸಿಕೊಂಡು ತನ್ನ ಸ್ವಾತಂತ್ರ್ಯದ ಜತೆ ತನ್ನ ಅಸ್ತಿತ್ವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾಳೆ.
ವಿಧವೆಯಾದವಳು ಕೆಲಸಕ್ಕೆ ಸೇರಿ ತನ್ನ ಜೀವನವನ್ನು ತಾನೇ ಯಾರ ಸಹಾಯವನ್ನು ಪಡೆಯದೆ ನಡೆಸುತ್ತಿದ್ದರೆ ಅಂತಹವನ್ನು ನಮ್ಮ ಸಮಾಜ ನೋಡುವ ರೀತಿ ಬೇರೆಯೇ ಆಗಿರುತ್ತದೆ. ತನ್ನ ಜೀವನ ಹೇಗಿರಬೇಕೆಂದು ನಿರ್ಧಾರ ಮಾಡುವ ಸ್ವಾತಂತ್ರ್ಯ ಆಕೆಗಿದೆ ಎಂದು ಯಾರು ಯೋಚಿಸುವುದೇ ಇಲ್ಲ. ಅವಳ ತಂದೆಯ ಮನೆಯವರನ್ನು ಅಥವಾ ಅವಳ ಗಂಡನ ಮನೆಯವರನ್ನು ಅವಲಂಬಿತವಾಗಿ ಜೀವನ ನಡೆಸಬೇಕೆಂದು ನಮ್ಮ ಸಮಾಜ ಸ್ವಯಂ ಘೋಷಿಸಿಬಿಡುತ್ತದೆ. ಇವುಗಳನೆಲ್ಲಾ ಧಿಕ್ಕರಿಸಿ ಹೆಣ್ಣು ಸ್ವತಂತ್ರಳಾಗ ಬಯಸಿದರೆ ಆಕೆಗೆ ಬೇರೆಯದೇ ಪಟ್ಟಿ ಕಟ್ಟಿ ತನ್ನ ಕಟುನುಡಿಗಳಿಂದ ಹಿಂಸಿಸಿಬಿಡುತ್ತದೆ ಈ ಸಮಾಜ.
ಹಾಗಾದರೆ ಸಂವಿಧಾನ ಎಲ್ಲರಿಗೂ ಸಮಾನವಾಗಿ ಕೊಟ್ಟ ಸ್ವಾತಂತ್ರ್ಯದ ಹಕ್ಕು ಬರೀ ಗಂಡಸರಿಗೆ ಮಾತ್ರ ಸೀಮಿತವೇ ಅಥವಾ ಹೆಣ್ಣು ಈ ಹಕ್ಕಿಂದ ವಂಚಿತಳೇ? ಕಾಲ ಬದಲಾಗುತ್ತಿದೆ. ಹಳೇ ಬೇರಲ್ಲಿ ಹೊಸ ಚಿಗುರು ಚಿಗುರಲೇಬೇಕು. ಆದರೆ ಮನುಷ್ಯ ತನ್ನ ಆಲೋಚನೆಗಳನ್ನ ಈ ವಿಷಯದಲ್ಲಿ ಬದಲಾಯಿಸಿ ಕೊಳ್ಳುತ್ತಿಲ್ಲ, ಅದಕ್ಕೆ ಏನೋ ಚಿಗುರು ಚಿಗುರುವ ಮುನ್ನವೇ ಚಿವುಟುತ್ತಿದ್ದಾನೆ. ಇನ್ನೂ ಸಹ ಹೆಣ್ಣು ಎಂದರೆ ಕೇವಲ ಮನೆ ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಮನಃಸ್ಥಿತಿ ಬದಲಾಯಿಸುತ್ತಿಲ್ಲ. ಗಂಡು ಮಾತ್ರ ಕೆಲಸಕ್ಕೆ ಸೀಮಿತ, ಹೆಣ್ಣಲ್ಲ ಎನ್ನುವ ಮನಃಸ್ಥಿತಿ ಬದಲಾಗಬೇಕು. ಎಲ್ಲಿಯವರೆಗೆ ಈ ವಿಷಯದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಗಲಾರದು.
ಹರ್ಷಿತಾ ಎಂ.
ಮಾನಸಗಂಗೋತ್ರಿ, ಮೈಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.