Fusion Cinema: ಮಂಥನದ ಕಥೆ ಗೊತ್ತಾ?
Team Udayavani, Jun 6, 2024, 12:13 PM IST
ಮಂಥನ್ 1976 ರಲ್ಲಿ ನಿರ್ಮಿಸಿದ ಹಿಂದಿ ಸಿನೆಮಾ. ಯಾರ ಕುರಿತಾಗಿ ಗೊತ್ತೇ? ರೈತರ ಕುರಿತಾಗಿ. ಇನ್ನೂ ಅಚ್ಚರಿಯ ಅಂಶ ಮತ್ತೂಂದಿದೆ. ಇದಕ್ಕೆ ದುಡ್ಡು ಹಾಕಿದವರು ಯಾರೆಂದುಕೊಂಡಿರಿ? ಸ್ವತಃ ರೈತರೇ. ಪವನ್ ಕುಮಾರ್ ಲೂಸಿಯಾ ಸಿನೆಮಾ 2013ರಲ್ಲಿ ಮಾಡಿದಾಗ ಆದ ಮತ್ತೂಂದು ದೊಡ್ಡ ಸುದ್ದಿಯೆಂದರೆ ಕ್ರೌಡ್ ಫಂಡಿಂಗ್‌ನಿಂದ ಸಿನೆಮಾ ಆದದ್ದು ಅಂತ.ನಿಜ. ಆದರೆ 1976ರಲ್ಲೇ ಈ ಮಂಥನ್ ಕ್ರೌಡ್ ಫಂಡಿಂಗ್‌ನಲ್ಲಿ ಆಗಿತ್ತು.
ಗುಜರಾತಿನ ಖೇಡ ಜಿಲ್ಲೆಯ 5 ಲಕ್ಷ ಮಂದಿ ರೈತರು ತಲಾ ಎರಡು ರೂ. ಗಳನ್ನು ಬಂಡವಾಳವಾಗಿ ಹೂಡಿದ್ದರ ಪರಿಣಾಮ ಹತ್ತು ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅದರಲ್ಲಿ ಈ ಸಿನೆಮಾ ನಿರ್ಮಿಸಲಾಯಿತು. ಶ್ಯಾಮ್ ಬೆನಗಲ್ ಇದರ ನಿರ್ದೇಶಕರು. ಆ ಹಳ್ಳಿಯ ಹಾಲಿನ ಉತ್ಪಾದನೆ, ಸ್ವಾವಲಂಬನೆ, ಸಹಕಾರ ಚಳವಳಿ, ವರ್ಗೀಸ್ ಕುರಿಯನ್ ರೂ ಮೂಲಕ ಆದ ಕ್ಷೀರ ಕ್ರಾಂತಿ, ಅಮುಲ್ ಹುಟ್ಟಿದ ಬಗೆ, ಆಣಂದ್ ಎಂಬ ಊರು ಜಗತ್ತಿಗೇ ತಿಳಿದ ಬಗೆ- ಎಲ್ಲವೂ ಸಿನೆಮಾದಲ್ಲಿದೆ.
ಇನ್ನೊಂದು ವಿಶೇಷವಿದೆ. ಈ ಸಿನೆಮಾದಲ್ಲಿ ಕನ್ನಡಿಗರು, ಕರ್ನಾಟಕ ಮೂಲದವರು ಇದ್ದರು. ಶ್ಯಾಮ್ ಬೆನಗಲ್ ಕರ್ನಾಟಕ ಮೂಲದವರು. ಹಾಗೆಯೇ ಇದರ ಪ್ರಮುಖ ಪಾತ್ರದಲ್ಲಿದ್ದ ಗಿರೀಶ್ ಕಾರ್ನಾಡ್, ಅನಂತನಾಗ್ ಕನ್ನಡದ ನಟರು. ಇವರಲ್ಲದೇ ಈ ಚಿತ್ರದಲ್ಲಿ ನಾಸಿರುದ್ದೀನ್ ಷಾ, ಸ್ಮಿತಾ ಪಾಟೀಲ್, ಮೋಹನ ಅಗಾಸೆ, ಅಮರೀಶ್ ಪುರಿ ಎಲ್ಲ ಅಭಿನಯಿಸಿದ್ದರು. ಇದನ್ನು ಚಿತ್ರೀಕರಿಸಿದ್ದು ಗೋವಿಂದ ನಿಹಲಾನಿ ಎನ್ನುವ ಸಿನೆಛಾಯಾಗ್ರಾಹಕರು.
ಈ ಸಿನೆಮಾವೇನೂ ರೂಪುಗೊಂಡಿತು. ಇದರಲ್ಲಿ ಕಮರ್ಷಿಯಲ್ ಎನ್ನುವ ಸಂಗತಿಗಳು ಯಾವುದೂ ಇರಲಿಲ್ಲ. ಯಾರು ಬಂದು ನೋಡುತ್ತಾರೆ ಎಂದುಕೊಂಡಿದ್ದರಂತೆ ಚಿತ್ರ ಮಾಡಿದವರು. ಆದರೆ ಅದು ಬಿಡುಗಡೆಯಾದ ದಿನ ಗುಜರಾತಿನಲ್ಲಿ ಸಿನೆಮಾ ಮಂದಿರಗಳಿಗೆ ರೈತರು ಎತ್ತಿನಗಾಡಿಗಳೆಲ್ಲ ತುಂಬಿಕೊಂಡು ಲಗ್ಗೆ ಇಟ್ಟರಂತೆ. ಸಿನೆಮಾ ಯಶಸ್ವಿಯಾಯಿತು.
ಈಗ ಯಾಕೆ ಇದರ ಪ್ರಸ್ತಾಪವೆಂದರೆ ನ್ಯಾಷನಲ್ ಫಿಲ್ಮ್ ಆಕೈìವ್ಸ್ ಇದನ್ನು ಮರುಮುದ್ರಿಸಿದೆ (ರೆಸ್ಟೋರ್x). ಇತ್ತೀಚೆಗಷ್ಟೇ ಮುಗಿದ ಕಾನ್ ಚಿತ್ರೋತ್ಸವ (ಫ್ರಾನ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಸಿನೆಮಾ ಉತ್ಸವ) ದಲ್ಲಿ ಈ ಹೊಸ ಪ್ರತಿಯನ್ನು ಪ್ರದರ್ಶಿಸಲಾಗಿತ್ತು. ಜೂನ್ ಒಂದು ಮತ್ತು ಎರಡರಂದು (ಶನಿವಾರ -ರವಿವಾರ) ದೇಶದ 50 ನಗರಗಳ 100 ಚಿತ್ರಮಂದಿರಗಳಲ್ಲಿ ಮಂಥನ್ ಮರು ಬಿಡುಗಡೆಯಾಗಿದೆ.
ಪೊನೆಟ್
ಈ ಸಿನೆಮಾ ನೋಡದಿದ್ದರೆ ಕೂಡಲೇ ಹೊರಡಿ. 1996 ರಲ್ಲಿ ರೂಪಿಸಿದ್ದು. ಫ್ರೆಂಚ್ ಭಾಷೆಯ ಸಿನೆಮಾ. ಫ್ರಾನ್ಸ್ ನ ಜಾಕ್ ಡೊಲಿನೊ ಇದರ ನಿರ್ದೇಶಕ. ಸಿನೆಮಾದ ಕಥೆ ಸಂಕೀರ್ಣದ್ದಲ್ಲ; ಬಹಳ ಸರಳವಾದುದು. ಪೊನೆಟ್ ಚಿಕ್ಕ ಹುಡುಗಿ. ಅವಳ ಅಮ್ಮ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾಳೆ. ಅದೇ ಅಪಘಾತದಲ್ಲಿ ಪೊನೆಟ್‌ಳ ಕೈಗೂ ಪೆಟ್ಟಾಗಿದೆ. ಇನ್ನು ಮುಂದೆ ಪೊನೆಟ್ ಅಮ್ಮನಿಲ್ಲ ಎಂಬ ಕೊರಗಿನಿಂದಲೇ ಬದುಕು ಸವೆಸಬೇಕು.
ಆದರೆ ಪೊನೆಟ್ ಅಮ್ಮ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಯಾರು ಏನು ಹೇಳಿದರೂ ಕೇಳುತ್ತಿಲ್ಲ. ಅಪ್ಪ ಹೇಳುವುಷ್ಟು ಹೇಳಿ ಈಗ ಅವಳ ಚಿಕ್ಕಮ್ಮನಲ್ಲಿ ಬಿಟ್ಟು ಹೋಗಿದ್ದಾನೆ. ಅಮ್ಮ ದೇವರಲ್ಲಿಗೆ ಹೋಗಿದ್ದಾಳೆ ಎಂದರೆ, ನಾನು ಹಾಗಾದರೆ ದೇವರನ್ನೇ ಕೇಳುವೆ ವಾಪಸು ಕಳುಹಿಸಲು. ಹೀಗೆ ಹಠ ಮಾಡುತ್ತಾ ಇರುತ್ತಾಳೆ.
ಅಮ್ಮನನ್ನು ನೆನಪಿಸಿಕೊಂಡು ಒತ್ತರಿಸಿಕೊಂಡು ಅಳುತ್ತಾಳೆ. ಶಾಲೆಗೆ ಕಳುಹಿಸಿದರೆ, ಅಲ್ಲಿಯೂ ಗೆಳೆಯರು ಅಮ್ಮನಿಲ್ಲದವಳು ಅಂದಾಗ ಇವಳಿಗೆ ದುಃಖ ತಡೆದುಕೊಳ್ಳಲಾಗುವುದಿಲ್ಲ. ಒಟ್ಟಿನಲ್ಲಿ ಅಮ್ಮ ಇಲ್ಲ ಎಂದು ಮನಸ್ಸು ಒಪ್ಪುತ್ತಿಲ್ಲ, ಇದ್ದಾಳೆ ಎನ್ನುವುದಕ್ಕೆ ಕಣ್ಣೆದುರು ಸಾಕ್ಷಿಯಿಲ್ಲ.
ಏನೂ ತಿಳಿಯದೇ ಗೊಂದಲಕ್ಕೆ ಸಿಲುಕುವ ಪೊನೆಟ್‌ಗೆ ಅಳುವೊಂದೇ ಜೀವಸಖೀಯ ರೀತಿಯಲ್ಲಾಗುತ್ತದೆ. ಸಾವನ್ನು ಪುಟ್ಟ ಮಗುವಿಗೆ ಮನವರಿಕೆ ಮಾಡುವ ಕಸರತ್ತಿನ ಪ್ರಯತ್ನವೇ ಈ ಸಿನೆಮಾ. ನಿರ್ದೇಶಕನ ಕಲ್ಪನೆ ಒಂದು ಕಡೆಯಲ್ಲಿ ಶ್ರೇಷ್ಠವಾದರೆ, ಪೊನೆಟ್ ಆಗಿ ನಟಿಸಿದ್ದ ವಿಕೋrರಿ ತಿವಿಸೊ ಅವಳ ನಟನೆ ಅದ್ಭುತ. ಅವಳಿಗೆ ಅತ್ಯುತ್ತಮ ನಟನೆಗೆ ಪ್ರಶಸ್ತಿ ಬಂದಿತು.
ದಿ ಕೌ
ಈ ಹೆಸರು ಇಂಗ್ಲಿಷಿನ ಅನುವಾದ. ಗಾವ್ ಅದರ ಮೂಲ ಹೆಸರು. ಇರಾನ್ ದೇಶದ್ದು. ಪರ್ಸಿಯನ್ ಭಾಷೆಯ ಸಿನೆಮಾ 1969ರಲ್ಲಿ ರೂಪಿಸಿದ್ದು. ಕ್ಲಾಸಿಕ್ಸ್ ಗಳಲ್ಲಿ ಇದೂ ಒಂದು. ದರಿಯುಷ್ ಮೆಹ್ರುಜಿ ಇದರ ನಿರ್ದೇಶಕರು. ಗೊಲಾಮ್ ಹೊಸೇನ್ ಸಾಯಿದಿ ಬರೆದದ್ದು. ಯಜ್ಜತೊಲ್ಲ ಯಂತೆಜಾಮಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ. ಇರಾನ್‌ನ ಹೊಸ ಅಲೆಯ ಚಿತ್ರಗಳಿಗೆ ಇದೇ ಬುನಾದಿ.
ಮೆಹೆಸ್ ಹಸನ್ ಒಂದು ದನವನ್ನು ಸಾಕಿರುತ್ತಾನೆ. ಅದೇ ಅವನ ಸರ್ವಸ್ವ. ಒಮ್ಮೆ ಕೆಲದಿನಗಳಿಗಾಗಿ ಅವನು ಊರು ಬಿಡಬೇಕಾದ ಪ್ರಮೇಯ ಬರುತ್ತದೆ. ಹೊರಡುತ್ತಾನೆ. ಈ ಮಧ್ಯೆ ಅವನ ದನ ಸಾಯುತ್ತದೆ. ಮನೆಯವರೂ ಸೇರಿದಂತೆ ಊರಿನವರಿಗೆ ಈ ಘೋರ ಸುದ್ದಿಯನ್ನು ಹೇಗೆ ಹೇಳುವುದು ಹಸನ್‌ಗೆ ಎಂಬ ಚಿಂತೆಯಾಗುತ್ತದೆ. ಅದಕ್ಕಾಗಿ ಹಸನ್ ಬಂದಾಗ ನಿನ್ನ ಹಸು ಓಡಿ ಹೋಯಿತು ಎಂದು ಸುಳ್ಳು ಹೇಳುತ್ತಾರೆ. ಇವನು ಆಘಾತಕ್ಕೊಳಗಾಗುತ್ತಾನೆ.
ದಿನೇದಿನೇ ಹಸುವಿನ ಕೊರಗು ಬಾಧಿಸ ತೊಡಗುತ್ತದೆ. ಕ್ರಮೇಣ ಮತಿಭ್ರಮಣೆಗೆ ಒಳಗಾಗುತ್ತಾನೆ. ತಾನೇ ಆ ಹಸುವೆಂದು ತಿಳಿದುಕೊಂಡು ಹಸುವಿನಂತೆ ವರ್ತಿಸತೊಡಗುತ್ತಾನೆ. ಊರಿನವರು, ಪತ್ನಿ ಎಲ್ಲರೂ ಎಷ್ಟು ಹೇಳಿದರೂ ಹಸನ್‌ಗೆ ಮನವರಿಕೆಯಾಗುವುದಿಲ್ಲ. ಮನುಷ್ಯ ಮತ್ತು ಪ್ರಾಣಿಯೊಂದಿಗಿನ ಬಾಂಧವ್ಯಕ್ಕೆ ಹೆಸರಾದ ಸಿನೆಮಾ. 1971 ರಲ್ಲಿ ವೆನಿಸ್ ಚಿತ್ರೋತ್ಸವದಲ್ಲಿ ವಿಮರ್ಶಕರ ಪ್ರಶಸ್ತಿ ಈ ಸಿನೆಮಾಕ್ಕೆ ಸಿಕ್ಕಿತ್ತು.
– ಅಪ್ರಮೇಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.