UV Fusion: ಜ್ಞಾನಂ ಸರ್ವತ್ರ ಸಾಧನಂ
Team Udayavani, Nov 3, 2024, 1:09 PM IST
ಪುರಾತನ ಕಾಲದಿಂದ ಶುರುವಾಗಿ ಇಂದಿನ ಆಧುನಿಕ ಯುಗದ ತನಕವೂ ಅಧಿಕಾರವೆನ್ನುವುದು ಮನುಷ್ಯ ಜೀವಿಯನ್ನು ತನಗಿಷ್ಟವಾದಂತೆ ಕುಣಿಸುತ್ತಾ ಬಂದಿದೆ. ಪುರಾಣದಲ್ಲಿ ಸತ್ಯವಂತರ ಬಳಿಯಿದ್ದ ಅಧಿಕಾರ ಕಾಲಕ್ರಮೇಣ ಸೇನಾಬಲದವರ ಕೈಗೆ ಸೇರಿತು. ಯಾರ ಬಳಿ ಅತಿಹೆಚ್ಚು ಸೈನ್ಯ ಬಲವಿದೆಯೋ ಅವರೇ ಅಧಿಪತ್ಯ ಸಾಧಿಸುತ್ತಿದ್ದರು. ಅನಂತರದ ದಿನಮಾನದಲ್ಲಿ ಅಧಿಕಾರವೆನ್ನುವುದು ಹಣವಂತರ ಕೈ ಸೇರಿ ಕುರುಡು ಕಾಂಚಾಣ ಕುಣಿಯುತ್ತಲಿತ್ತೋ ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ ಎನ್ನುವ ದ.ರಾ. ಬೇಂದ್ರೆಯವರ ಸಾಲಿನ ಸಾರಾಂಶದಂತೆ ರಾರಾಜಿಸುತಿತ್ತು. ಅದರೆ ಇಂದಿನ ಆಧುನಿಕ ಯುಗದಲ್ಲಿ ಇವೆರಲ್ಲದರಿಂದಲೂ ಕೈತಪ್ಪಿ ಅಧಿಕಾರ ಎನ್ನುವುದು ಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿಯ ಜತೆ ತನ್ನ ಸ್ನೇಹವನ್ನು ಬೆಳೆಸಿದ್ದು, ಈ ತ್ರಿಮೂರ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿಯಿರುವ ವ್ಯಕ್ತಿಯೂ ಇವುಗಳನ್ನು ಬಳಸಿಕೊಂಡು ಇಡೀ ಪ್ರಪಂಚವನ್ನೇ ಆಳುತ್ತಾನೆ ಹಾಗೂ ತನ್ನದೇ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುತ್ತಿದ್ದಾನೆ.
ಜ್ಞಾನವು ಯಾವಾಗಲೂ ಶಕ್ತಿಯೊಂದಿಗೆ ಬರುವುದಿಲ್ಲ. ಜ್ಞಾನವು ಯಾವುದೋ ಒಂದು ನಿರ್ದಿಷ್ಟ ವಿಷಯದ ಬಗೆಗಿನ ಮಾಹಿತಿಯ ಸ್ಪಷ್ಟ ಅರಿವು ಮತ್ತು ತಿಳುವಳಿಕೆಯ ಮೂಲದಿಂದ ಬರುತ್ತದೆ. ಪ್ರತಿ ವ್ಯಕ್ತಿಯೂ ಇದನ್ನು ಅನುಭವ ಅಥವಾ ಅಧ್ಯಯನದಿಂದ ಪಡೆಯುತ್ತಾನೆ. ಹೇಗೆ ನೀರಿನ ಸಣ್ಣ ಹನಿಗಳು ಸೇರಿ ಕೊನೆಯದಾಗಿ ಸಮುದ್ರವಾಗುತ್ತದೋ ಹಾಗೆಯೇ ವ್ಯಕ್ತಿಯು ಕೆಲವೊಂದು ವಿಷಯವನ್ನು ಹಿರಿಯರಿಂದ ಕಲಿತು, ಕೆಲವೊಂದನ್ನು ಶಾಸ್ತ್ರ-ಗ್ರಂಥಗಳಿಂದ ಕಲಿತು, ಕೆಲವೊಂದನ್ನು ಮಾಡುವುದನ್ನು ನೋಡಿ ಕಲಿತು ಇನ್ನೂ ಕೆಲವು ವಿಷಯಗಳನ್ನು ತನ್ನ ಸ್ವಂತ ಬುದ್ಧಿಯಿಂದ ಗ್ರಹಿಸಿ ಜ್ಞಾನವನ್ನು ಸಂಪಾದಿಸಿ ಜ್ಞಾನಸಾಗರದಿಂದ ಸರ್ವಜ್ಞನಾಗುತ್ತಾನೆ. ಮನುಷ್ಯನು ತಾನು ಗಳಿಸಿರುವ ಜ್ಞಾನವನ್ನು ಸರಿಯಾದ ದಿಕ್ಕಿನಲ್ಲಿ ಸರಿಯಾದ ಸಮಯದಲ್ಲಿ ಬಳಸಿದಾಗ ಮಾತ್ರ ಶಕ್ತಿಶಾಲಿಯಾಗುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಜ್ಞಾನದಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವನ ಜ್ಞಾನಕ್ಕೆ, ಬುದ್ಧಿವಂತಿಕೆಗೆ ಒಂದು ಅರ್ಥ ಸಿಗುತ್ತದೆ.
ಜ್ಞಾನವು ಮನುಷ್ಯನಿಗೆ ಆಲೋಚನಾ ಕೌಶಲವನ್ನು ಹೆಚ್ಚಿಸುತ್ತದೆ ಹಾಗೂ ಅಭಿಪ್ರಾಯವನ್ನು ರೂಪಿಸಲು ಅಥವಾ ಚಿಂತನೆಯ ಮಾರ್ಗವನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶನವಾಗಿರುತ್ತದೆ. ಜ್ಞಾನವು ಮನುಷ್ಯನಿಗೆ ಪ್ರತಿಯೊಂದು ಪ್ರತಿಕೂಲತೆಯ ಸಂದರ್ಭವನ್ನು ಧೈರ್ಯವಾಗಿ ಎದುರಿಸಲು ಮತ್ತು ಸಮಯೋಚಿತ ಪರಿಹಾರ ಕಂಡು ಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸ್ಪಷ್ಟವಾದ ಜ್ಞಾನದಿಂದ ವ್ಯಕಿಯು ಸಂಪನ್ಮೂಲವಾಗಿ ಸುಧಾರಿಸುವುದರ ಜತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೆಯೇ ದೇಶದ ಪ್ರತಿಯೊಬ್ಬ ನಾಗರಿಕರು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದಾಗ ರಾಷ್ಟ್ರವು ನಿಜವಾದ ಪ್ರಜಾಪ್ರಭುತ್ವವನ್ನು ಹೊಂದುತ್ತದೆ ಮತ್ತು ವಿಶ್ವ ಗುರುವಾಗಿ ಗುರುತಿಸಲ್ಪಡುತ್ತದೆ.
-ಪ್ರಸಾದ್ ಆಚಾರ್ಯ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.