UV Fusion: ಸಾಗುತಿಹೆ ದೂರ ದೂರ…..
Team Udayavani, Dec 12, 2023, 7:45 AM IST
ಯಾರು ಕೂಡ ಬೇಕೂಂತ ದೂರ ಸರಿಯೋದಿಲ್ಲ. ಕೆಲವರಿಗೆ ಕೆಲವು ಕಾರಣಗಳಿರುತ್ತೆ, ಆದರೆ ಕಾರಣಾನೇ ಇಲ್ಲದೆ ದೂರ ಸರಿಯುವುದೆಷ್ಟು ಸರಿ ನೀವೇ ಹೇಳಿ?
ಬದುಕಿನ ಪಥದಲ್ಲಿ ನಿಮ್ಮ ಕನಸೆಲ್ಲ ನನಸಾಗಿಸಲು, ನನಸೆಲ್ಲವೂ ಸೊಗಸಾಗಿಸಲು. ನಿಮ್ಮ ಕಷ್ಟ ಸುಖಗಳಲ್ಲಿ ಎಂದೆಂದು ಆಸರೆಯಾಗಿರಲು ಬಯಸಿದ್ದೆ. ಆದರೆ ನೀವೂ… ಯಾಕೆ ನನ್ನಿಂದ ದೂರವಾಗುತ್ತಿದ್ದಿರಾ? ನನ್ನಿಂದ ಏನಾದರು ತಪ್ಪಾಗಿದ್ಯಾ? ಅಂತ ಹಲವು ಬಾರಿ ಕೇಳಿದೆ ಉತ್ತರವಿಲ್ಲ, ಪ್ರಶ್ನೆಯೇ ಎಲ್ಲ. ನಾನು ನಿಮ್ಮನ್ನ ಪ್ರೀತಿಯಿಂದ ಕಂಡದ್ದೆ ತಪ್ಪಾ?
ನಾನು ನಿಮ್ಮಂತೆ ಸೌಮ್ಯ ಸ್ವಭಾವದವಳಾಗಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಅಂತೆಲ್ಲಾ ಅಂದುಕೊಂಡು ನಿಮ್ಮದೇ ದಾರಿಯಲ್ಲಿ ನಡೆದು ಸಾಗುತ್ತಿರಬೇಕಾದ್ರೆ ನೀವು ಯಾಕೆ ನನ್ನಿಂದ ದೂರವಗುತ್ತಿದ್ದಿರಾಂತ ತಿಳಿಯುತ್ತಿಲ್ಲ. ಹೇಳಿಬಿಡಿ ಯಾಕ್ ಹಿಂಗೆ?
ಮೊದಲಿದ್ದ ಪ್ರೀತಿ ಮರೆಯಾಗಿದೆ. ಯಾರೋ ಮೂರನೇ ವ್ಯಕ್ತಿಯನ್ನು ನೋಡಿದ ಹಾಗೆ ನೋಡುತ್ತೀರಿ. ಅಪ್ಪಾ ಆ ನಿಮ್ಮ ಪ್ರೀತಿ ಎಲ್ಲಿ ಹೋಯಿತು? ಮನೆಗೆ ಬಂದ್ರೆ ಮಾತಿಲ್ಲ, ಕಥೆಯಿಲ್ಲ ಮನೆಯವರು ಅವರವರ ಪಾಡಿಗಿರುತ್ತೀರಿ. ನಗು ಮುಖದಿಂದ ಮಾತಾಡುವವರೇ ಇಲ್ಲ. ಯಾಕಾದ್ರು ಮನೆಗೆ ಹೋದೆನೋ ಅನ್ನೊ ಭಾವನೆ ನನಗೆ.
ಅಪ್ಪಾ ನಾನು ಹೇಗೆ, ಏನು ಅಂತ ನಿಮಗೆ ಚೆನ್ನಾಗಿ ಗೊತ್ತು. ಅದ್ರು ನನ್ನ ಯಾಕೆ ಅರ್ಥನೇ ಮಾಡಿಕೊಳ್ಳುತ್ತಿಲ್ಲ? ನಾನು ನಿಮ್ಮನ್ನ ನೋಡಿ ಬೆಳೆದವಳು, ನಾನು ಯಾವತ್ತು ನಿಮ್ಮನ್ನ ತಲೆ ತಗ್ಗಿಸುವ ಹಾಗೆ ಮಾಡಲ್ಲ. ಮಾಡಿದ್ರೆ ನಿಮ್ಮ ಹೆಸರು ಹೇಳಲ್ಲ. ನಿಮ್ಮ ಮಗಳು ನಾನು, ಒಂದು ವೇಳೆ ನಡೆದು ಬಂದ ರೀತಿಯಲ್ಲಿ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳುತ್ತೇನೆ. ಯಾಕೆ ಹೀಗೆ ಎಲುÅ? ತಪ್ಪಾಯಿತು ತಿದ್ದಿಕೊಳ್ಳುತ್ತೇವೆ ಅಂತ ಹೇಳಿದವರು ಮುಂದೆ ತಪ್ಪು ಮಾಡಲ್ಲ ಅನ್ನುತ್ತೀರಲ್ಲ, ಅದನ್ನು ಯಾಕೆ ಕಾರ್ಯ ರೂಪಕ್ಕೆ ತರುವುದಿಲ್ಲ?
ದಿನಗಳು ಸಾಗುತ್ತಿದ್ದಂತೆ ದೂರವಾಗುತ್ತಿದ್ದೀರ ನನ್ನಿಂದ ಕುಶಲವೇ ಕ್ಷಮವೇ ಎಂದು ಕೇಳ್ಳೋರಿಲ್ಲ. ಜೊತೇಲಿ ಯಾರಿದ್ರು ಕೂಡ ಮನೆಯವರಿದ್ದಂತೆ ಆಗೊಲ್ಲ ಅಲ್ವ? ಮೌನದಲ್ಲಿ ಕೊಲ್ಲುವುದಕ್ಕಿಂತ ಮಾತಿನಲ್ಲೇ ಹೇಳಿಬಿಡಿ ಕಾರಣವೇನು ಅಂತ. ಒಂದು ವೇಳೆ ನಾನು ಹೆಣ್ಣು ಅನ್ನೋ ಕಾರಣಕ್ಕಾಗಿ ನನ್ನನ್ನ ದೂರ ಮಾಡುತ್ತಿರುವಿರ? ಹೆಣ್ಣು ಅಂತಾದರೆ ತುಂಬಾ ಜವಾಬ್ದಾರಿಗಳಿವೆ.
ಶಿಕ್ಷಣ ಕೊಡಿಸಬೇಕು, ಮದುವೆ ಮಾಡಬೇಕು, ಖರ್ಚುಗಳ ರಹದಾರಿ ಅಂತಾನಾ? ಈ ಕಾರಣಕ್ಕಾಗಿ ನನ್ನೊಂದಿಗೆ ಮಾತುನಾಡುತ್ತಿಲ್ವ? ಅದೇ ಕಾರಣವಾಗಿದ್ರೆ ಕೇಳಿ, ನಾನು ಎಂದಿಗೂ ನಿಮ್ಮ ಆದಾಯದ ಮೂಲವಾಗಿರುತ್ತೆನೆಯೇ ಹೊರತು, ನಿಮ್ಮ ಜೇಬಿನ ಕತ್ತರಿ ಆಗುವವಳ್ಳಲ್ಲ ನಾನು. ನನಗೆ ನಿಮ್ಮ ಆಸ್ತಿ ಹಣ ಯಾವುದೂ ಬೇಡ. ನಿಮ್ಮ ಪ್ರೀತಿಯೊಂದೇ ಸಾಕು. ಈಗಾಗಲೇ ಸ್ವಾವಲಂಬನೆಯ ದಾರಿ ತುಳಿದಿದ್ದೇನೆ. ನನ್ನ ಸಂಪಾದನೆ, ನನ್ನ ಖರ್ಚು ಎಂಬ ತತ್ತ್ವಕ್ಕೆ ಅಂಟಿಕೊಡವಳು ನಾನು.
ಇವುಗಳನ್ನೆಲ್ಲಾ ಮೀರಿಯೂ, ನಾನು ನಿಮಗೆ ಬೇಡದ ವಸ್ತುವಾಗಿದ್ರೆ, ನೀವು ನನ್ನನ್ನು ಬಿಟ್ಟು ಖುಷಿಯಿಂದ ಇರುತ್ತೀರಿ ಅಂತಾದ್ರೆ ದೂರವೇ ಇದ್ದುಬಿಡುತ್ತೆನೆ. ಬಹುಶಃ ಇದೇ ಎಲ್ಲದಕ್ಕು ಉತ್ತರ. ನನ್ನ ನೋವು ದು:ಖ ನನಗಿರಲಿ ಸಂತೋಷ ಮಾತ್ರ ನಿಮಗಿರಲಿ.
ಅಪರೂಪಕ್ಕೆ ಬಸ್‌ನಲ್ಲಿ ಟ್ರಾವೆಲ್ ಮಾಡ್ತಿರೋವಾಗ ಮಾತು ಕಿವಿಗೆ ನಾಟಿತು. ಹಾಗೇ ಒಬ್ಬ ಹೆಣ್ಣುಮಗಳ ಮನದ ಮಾತಿಗೆ ಅಕ್ಷರದ ರೂಪ ತಳೆಯಿತು!!
-ಶ್ರೀಪ್ರಿಯ ಉಡುಪ
ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.