ಮನೆಯೇ ಪಾಠಶಾಲೆ; ಹೆತ್ತವರೇ ಶಿಕ್ಷಕರು
Team Udayavani, Jun 22, 2021, 9:00 AM IST
![ಮನೆಯೇ ಪಾಠಶಾಲೆ; ಹೆತ್ತವರೇ ಶಿಕ್ಷಕರು](https://www.udayavani.com/wp-content/uploads/2021/06/Untitled-3-8-620x372.jpg)
![ಮನೆಯೇ ಪಾಠಶಾಲೆ; ಹೆತ್ತವರೇ ಶಿಕ್ಷಕರು](https://www.udayavani.com/wp-content/uploads/2021/06/Untitled-3-8-620x372.jpg)
ಇಂದು ಇಡೀ ಜಗತ್ತೇ ಒಂದು ರೀತಿಯಲ್ಲಿ ತಲ್ಲಣದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಮಹಾಮಾರಿ ಕೊರೊನಾ ವೈರಾಣು ಇಡೀ ಮನುಕುಲವನ್ನೇ ದಿಗುಲುಬಡಿಸಿದೆ. ಕಳೆದ ಒಂದು ವರ್ಷದಿಂದ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ಎಲ್ಲ ಕ್ಷೇತ್ರಗಳು ಕೊರೊನಾ ಹೊಡೆತಕ್ಕೆ ನಲುಗಿ ಹೋಗಿವೆ. ಅದರಲ್ಲೂ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಬಹುತೇಕ ಮಕ್ಕಳಿಗೆ ಬಾಗಿಲು ಮುಚ್ಚಿದಂತಾಗಿದೆ.
ಶಿಕ್ಷಣ ಇಲಾಖೆಯ ಆದೇಶದಂತೆ ಇಡೀ ಶಿಕ್ಷಕ ವರ್ಗ ತಮಗಿರುವ ಇತಿಮಿತಿಯಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಿವೆ. ಕೆಲವು ತಿಂಗಳುಗಳ ಕಾಲ ವಿದ್ಯಾಗಮ ಯೋಜನೆಯಡಿಯಲ್ಲಿ ಆನ್‌ಲೈನ್ ಶಿಕ್ಷಣ, ದೂರದರ್ಶನದಲ್ಲಿ ಸಂವೇದ ತರಗತಿಗಳು, ಕೆಲವು ತಿಂಗಳು ಭೌತಿಕ ತರಗತಿಗಳು – ಹೀಗೆ ವಿವಿಧ ಬಗೆಯಲ್ಲಿ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಕಲಿಕೆ ನಿರಂತರವಾಗಿ ನಡೆಯುತ್ತಿದೆ. ಆದರೆ ಮತ್ತೆ ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆ ಆಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಯ ಶಿಕ್ಷಣ ನಿರಂತರವಾಗಿ ಇಲ್ಲದೇ ಇರುವುದರಿಂದ ಮನೆಯಲ್ಲಿಯೇ ಶಿಕ್ಷಣ ನೀಡುವ ಸಂದರ್ಭ ಹೆತ್ತವರಿಗೆ ಬಂದೊದಗಿದೆ.
ಅದರಲ್ಲೂ ಹಳ್ಳಿಯ ಕನ್ನಡ ಮಾಧ್ಯಮದ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಕಾರಣ ಇಲ್ಲಿಗೆ ಬರುವ ಮಕ್ಕಳ ಬಹುತೇಕ ಹೆತ್ತವರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹೀಗಾಗಿ ಇಂಥ ಮಕ್ಕಳು ಇಂದು ವಿವಿಧ ಚಟಗಳಿಗೆ ಒಳಗಾಗಿ ದಿಕ್ಕುತಪ್ಪುತ್ತಿರುವ ಸಂದರ್ಭಗಳು ಹೆಚ್ಚುತ್ತಿವೆ. ಇನ್ನು ಆಂಗ್ಲ ಮಾಧ್ಯಮದ ಮಕ್ಕಳು ಮೊಬೈಲ್ ಗೀಳಿಗೆ ಹೆಚ್ಚು ಒಳಗಾಗಿರುವುದರಿಂದ ಮಾನಸಿಕ ಖನ್ನತೆಗೆ ಒಳಗಾಗುವಂಥದ್ದನ್ನು ನೋಡುತ್ತಿದ್ದೇವೆ.
ಆದ್ದರಿಂದ ಈ ಸಮಯದಲ್ಲಿ ಎಲ್ಲ ಪೋಷಕರ ಜವಾಬ್ದಾರಿ ತುಂಬಾ ಇದೆ. ಮನೆಯೇ ಮೊದಲ ಪಾಠಶಾಲೆ ಎನ್ನುವ ಗಾದೆಮಾತಿನಂತೆ ಸದ್ಯದ ಸಂದರ್ಭದಲ್ಲಿ ಮನೆಯಲ್ಲಿರುವ ಎಲ್ಲ ಹಿರಿಯರು ಮಕ್ಕಳಿಗೆ ಒಂದಿಷ್ಟು ಜೀವನ ಮೌಲ್ಯಗಳನ್ನು ತಿಳಿಸುವ ಅಗತ್ಯವಿದೆ.
ತರಗತಿಯ ಪಾಠ ಪ್ರವಚನ, ಅಭ್ಯಾಸದ ಜತೆಗೆ ಬದುಕಿನ ಪಾಠವನ್ನು ಹೇಳಿಕೊಡುವ ಹೊಣೆ ಈಗ ಹೆತ್ತವರ ಹೆಗಲಿಗೇರಿದೆ. ಅನೇಕ ತಂದೆ ತಾಯಿ ತುಂಬಾ ಕಷ್ಟಪಟ್ಟು ಜೀವನ ಸಾಗಿಸಿ ಈಗ ಕುಳಿತುಣ್ಣುವ ಸ್ಥಿತಿಗೆ ತಲುಪಿರುತ್ತಾರೆ. ಬಹಳಷ್ಟು ತಂದೆ ತಾಯಿ ಯೋಚನೆ ಮಾಡುವ ರೀತಿ ಹೇಗಿದೆ ಎಂದರೆ ನಾವು ಚಿಕ್ಕವರಿದ್ದಾಗ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನಮ್ಮ ಮಕ್ಕಳು ಕಷ್ಟಪಡೋದು ಬೇಡ ಎನ್ನುವ ಅತಿಯಾದ ಪ್ರೀತಿಯ ಧೋರಣೆಯನ್ನು ಹೊಂದಿರುತ್ತಾರೆ. ಇಲ್ಲೇ ತಂದೆ ತಾಯಿ ತಪ್ಪು ಮಾಡೋದು!
ತಮ್ಮ ಮಕ್ಕಳಿಗೆ ಏನು ಬೇಕೋ ಅದನ್ನು ಕೊಟ್ಟು ಬೆಳೆಸೋದು ತಪ್ಪಲ್ಲ. ಆದರೆ ಅವರಿಗೆ ಬದುಕಿನ ವಿಧಾನ ಅರ್ಥವಾಗದಂತೆ ಬೆಳೆಸೋದು ತಪ್ಪು. ತಮ್ಮ ಮಗ ಅಥವಾ ಮಗಳು ಸುಖವಾಗಿ ಇರಬೇಕೋ ಅನ್ನುವ ಕಾರಣಕ್ಕಾಗಿ ಅವರಿಗೆ ಕಷ್ಟಕಾರ್ಪಣ್ಯದ ಅರಿವೇ ಇಲ್ಲದೆ ಬೆಳೆಸಲು ಮುಂದಾಗುತ್ತಾರೆ.
ಮಕ್ಕಳಿಗೆ ಮಿತಿಮೀರಿದ ಸೌಲಭ್ಯಗಳನ್ನು ಕೊಟ್ಟು ಕೊನೆಗೆ ಓದಿನಲ್ಲಿ ವಿಫಲರಾದಾಗ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಪಠ್ಯದ ಜತೆಗೆ ಬೇರೆ ಬೇರೆ ಕ್ರಿಯೆಯಲ್ಲಿ ತೊಡುಗುವಂತೆ ಮಾಡಬೇಕು. ನಿಮಗೆ ಇದುವರೆಗೂ ತಿಳಿದಿರುವ ಅನುಭವ ಹಾಗೂ ಕಲಿಕೆಗಳನ್ನು ಮಕ್ಕಳೊಂದಿಗೆ ಧನಾತ್ಮಕವಾಗಿ ಹಂಚಿಕೊಳ್ಳಿ.
ಜನಪದ ಆಟಗಳು, ಪೌರಾಣಿಕ, ಸಾಹಿತ್ಯಿಕ, ಐತಿಹಾಸಿಕ, ಜನಪದ ಕಥೆಗಳು, ಚಿತ್ರಕಲೆ, ವಿವಿಧ ವಚನಕಾರರಿಗೆ ಸಂಬಂಧಿಸಿದ ಪುಸ್ತಕಗಳು, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಇರುವ ವೈಜ್ಞಾನಿಕ ಲೇಖನಗಳು, ದಿನಪತ್ರಿಕೆಯಲ್ಲಿ ಬರುವ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಮಾಹಿತಿ – ಹೀಗೆ ವಿವಿಧ ಬಗೆಯಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಸಾಧ್ಯವಾದಷ್ಟು ಪ್ರಯತ್ನಿಸಿ. ಇದರಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಮೇಲಾಗಿರುವ ಮನೋಧೋರಣೆಗಳು ಬದಲಾಗಿ ಕಲಿಕೆಯಲ್ಲಿ ನಿರಂತರತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ.
ಗಿರಿಜಾಶಂಕರ್ ಜಿ.ಎಸ್.
ಇಡೇಹಳ್ಳಿ,ಚಿತ್ರದುರ್ಗ