UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?
Team Udayavani, May 2, 2024, 5:00 PM IST
ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ ಎಂದು ತಿಳಿದವರು ಹೇಳಿರುವ ಮಾತು. ಸ್ವಾರ್ಥವಿಲ್ಲದೆ ಜಗತ್ತು ಓಡೋದಕ್ಕೆ ಸಾಧ್ಯವೇ ಇಲ್ಲ.
ಇಲ್ಲಿ ನಾವು ನಮಗಾಗಿ ಬದುಕಿದ್ದು ಬಾಲ್ಯದಲ್ಲಿ ಮಾತ್ರ. ಆ ಬಾಲ್ಯವೇ ಸುಂದರ. ಅಲ್ಲ ಅಲ್ಲ…! ಬಾಲ್ಯದ ನೆನಪು ಬಲುಸುಂದರ.
ಮುಗ್ಧ ಮನಸ್ಸಿನಲ್ಲಿ ಓಡುತ್ತಿದ್ದ ಕನಸುಗಳು ಹಾಗೂ ಆ ಕನಸುಗಳಿಗೆ ಚಕ್ರ, ರೆಕ್ಕೆ ಕಟ್ಟಿಕೊಂಡು ದೊಡ್ಡವರಾಗುತ್ತಾ ಸ್ವಾರ್ಥದ ಬದುಕಿಗೆ ಪದಾರ್ಪಣೆ ಮಾಡುತ್ತೇವೆ. ದೊಡ್ಡವರಾದ ಮೇಲೆ ಬಾಲ್ಯದ ನೆನಪುಗಳನ್ನು ಮರುಕಳಿಸುತ್ತಾ ಬದುಕುತ್ತೇವೆ. ನಮ್ಮ ನಿತ್ಯ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಹೊಣೆ ಯಾರು ಎಂದು ತಿಳಿಯದೆ ಬದುಕುತ್ತೇವೆ.
ವಿಪರ್ಯಾಸವೇನೆಂದರೆ ಅದಕ್ಕೆ ನಾವೇ ಪ್ರಮುಖ ಕಾರಣರಾಗಿರುತ್ತೇವೆ. ಇಲ್ಲಿ ಯಾರು ನಮ್ಮವರಲ್ಲ, ಪ್ರತಿಯೊಬ್ಬರು ಸಹ ಸ್ವಾರ್ಥ ಅನ್ನೊ ಸಣ್ಣ ಗಾಳಿ ಇಲ್ಲದೆ ನಮಗೆ ಬೆಂಬಲಿತರಲ್ಲ. ಆದರೆ ಅದು ನಮಗೆ ಅರಿವಾಗದು.
ಕೆಲವೊಂದು ವಿಚಾರಗಳು ಸರಿಯಲ್ಲ ತಪ್ಪು ಎಂದು ತಿಳಿದಿದ್ದರೂ ಕೂಡ ಅನಿವಾರ್ಯ ಕಾರಣಗಳಿಂದ ಒಪ್ಪಿಕೊಂಡು ಬದುಕುವುದು ರೂಢಿಯಾಗಿದೆ. ಯಾಕೆಂದರೆ ಬದುಕಿನ ಅನಿವಾರ್ಯತೆ ಅಷ್ಟಿದೆ. ಉಳ್ಳವನು ಎಂದಿಗೂ ಹೇಳಿಕೊಳ್ಳಲಾರ. ಇಲ್ಲದವನು ಎಂದಿಗೂ ಶೋಕಿ ಜೀವನ ನಡೆಸುವುದನ್ನು ಬಿಡಲಾರ. ನಮಗೋಸ್ಕರ ಬದುಕುವುದನ್ನು ಬಿಟ್ಟು ನಾವೇನು ಕಮ್ಮಿ ಅನ್ನೋತರ ಬೇರೆಯವರಿಗೆ ಪೈಪೋಟಿ ನೀಡುತ್ತಾ ತೋರಿಕೆಯ ಬದುಕನ್ನು ಆರಿಸಿಕೋಂಡವರೇ ಹೆಚ್ಚು. ವೀಪರ್ಯಾಸ ಏನು ಅಂದ್ರೇ ಇಲ್ಲಿ ಬ್ರ್ಯಾಂಡ್‌ಗಳಿಗೆ ಇರುವ ಬೆಲೆ ಮನುಷ್ಯನಿಗಿಲ್ಲ.
ಬ್ರ್ಯಾಂಡ್‌ಗಳ ಹಿಂದೆ ಹೋಗುವವರೇ ಹೆಚ್ಚು.
ಮನುಷ್ಯನಿಂದ ಬ್ರ್ಯಾಂಡ್ ಮೌಲ್ಯವೇ ಹೆಚ್ಚು. ಬ್ರ್ಯಾಂಡ್‌ನಿಂದ ಮನುಷ್ಯನ ಮೌಲ್ಯವನ್ನು ಅಳೆಯುವ ಹಂತಕ್ಕೆ ತಲುಪಿದೆ ಜಗತ್ತು. ಯಾಕೆಂದರೆ ಇಲ್ಲಿ ಯಾರು ಕೂಡ ತಮಗೋಸ್ಕರ ಬದುಕುವುದಿಲ್ಲ. ಜೀವನದ ಜಂಜಾಟದಲ್ಲಿ ಬೇರೆಯವರಿಗೆ ಪೈಪೋಟಿ ನೀಡುತ್ತಾ, ಅವರ ಜೀವನ ಶೈಲಿಯನ್ನು ಅನುಕರಣೆ ಮಾಡುವುದರಲ್ಲಿಯೇ ಅರ್ಧ ಜೀವನವನ್ನು ಕಳೆಯುತ್ತೇವೆ. ಜನರಿಗೆ ನಮ್ಮ ಹತ್ರ ಇಲ್ಲ ಅನ್ನೋದಕ್ಕಿಂತ ಇದೆ ಅಂತ ತೋರಿಸಿಕೊಳ್ಳೋದರಲ್ಲೇ ಖುಷಿ ಜಾಸ್ತಿ. ಜೀವನದ ಜಂಜಾಟದಲ್ಲಿ ಕಳೆಯುತ್ತೇವೆ. ಒಮ್ಮೆ ಯೋಚಿಸಿ, ನಾವು ಯಾರಿಗೋಸ್ಕರ ಬದುಕುತ್ತಿದ್ದೇವೆ ಎನ್ನುವುದನ್ನು. ಪ್ರತೀ ವಿಷಯದಲ್ಲೂ ಇನ್ನೊಬ್ಬರನ್ನು ಅಳೆಯುತ್ತಾ ಮಾಪನ ಮಾಡುತ್ತಾ ಜೀವನದ ಅಮೂಲ್ಯ ಸಮಯವನ್ನು
ಯಾಕೆ ವ್ಯಯ ಮಾಡಬೇಕು.
ಯಾರೋ ಒಬ್ಬರು ಏನೋ ಮಾಡಿದರೂ ಅಂದ ಮಾತ್ರಕ್ಕೆ ನಾವು ಅದನ್ನೇ ಮಾಡಬೇಕು ಅನ್ನುವುದರಲ್ಲಿ ಯಾವುದೇ ಅರ್ಥ ಇಲ್ಲ. ಜಗತ್ತು ತುಂಬಾ ವಿಶಾಲವಾಗಿದೆ. ಇಲ್ಲಿ ನಮಗೂ ಅವಕಾಶವಿದೆ. ನಮ್ಮ ಶೈಲಿಯನ್ನು ನಮ್ಮ ರೀತಿಯಲ್ಲಿ ಪ್ರದರ್ಶಿಸೋಣ, ಬೇರೆಯವರನ್ನು ಅನುಕರಣೆ ಮಡುವುದು ಯಾಕೆ. ಪ್ರತೀ ಮನುಷ್ಯನಿಗೂ ಅವನದೇ ಆದ ಶೈಲಿ ಇದೆ ಅದನ್ನು ಬೆಳೆಸೋಣ. ಜೀವಿತಾವಧಿಯ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಾ ಬದುಕೋಣ. ಪ್ರತೀ ದಿನ ಪ್ರತೀ ನಿಮಿಷ ನಮಗಾಗಿ ಬದುಕೋಣ. ಸ್ವಾರ್ಥದ ಬದುಕು ನಮಗೆ ಬೇಡ, ಜವಾಬ್ದಾರಿ ಹೇಗಲೇರಿದ ಮೇಲೆ ನಮ್ಮತನವನ್ನು ಬಿಟ್ಟು ಯಾರೂ ಬದುಕುವುದಿಲ್ಲ. ಹಾಗೆ ಬದುಕುವ ಆವಶ್ಯಕತೆಯೂ ಇಲ್ಲ. ಯಾವಾಗ ನಮಗೋಸ್ಕರ ಬದುಕುತ್ತೇವೆಯೋ ಆಗ ನಮ್ಮತನವನ್ನು ಅಡವಿಟ್ಟು ಬದುಕಬೇಕಾಗಿಲ್ಲಾ. ಬದುಕು ಬಂದಂತೆ ಸ್ವೀಕರಿಸೋಣ.
-ನಿಶ್ಮಿತಾ ಎಚ್. ಗುರುಪ್ರಸಾದ್
ಹಾರ ಮನೆ, ಕೊಕ್ಕಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.