Tree: ಮಾವು ಬಿತ್ತಿದರೆ ಮಾವು ಬೇವು ಬಿತ್ತಿದರೆ ಬೇವು
Team Udayavani, Feb 26, 2024, 10:03 AM IST
ಒಂದು ಕಥೆಯಲ್ಲಿ ಓದಿದ ನೆನಪು ತರುಣಿಯೊಬ್ಬಳು ಊಟಕ್ಕೆ ಕುಳಿತಿದ್ದಾಗ ಭಿಕ್ಷೆ ಬೇಡುತ್ತ ಬಂದ ಸನ್ಯಾಸಿಯೊಬ್ಬರು ಹಸಿವು ಎಂದು ಅವಳ ಮುಂದೆ ಕೈ ಒಡ್ಡಿದರಂತೆ. ಸಹೃದಯಿಯಾದ ಆ ತರುಣಿ ತನ್ನ ಪಾಲಿನ ಊಟವನ್ನು ಆ ಸನ್ಯಾಸಿಗೆ ನೀಡಿ ಅವರನ್ನ ಸತ್ಕರಿಸಿದಳಂತೆ. ಅಸಲಿಗೆ ಆ ಸನ್ಯಾಸಿ ಒಬ್ಬರು ದೈವೀ ಪುರುಷರಾಗಿದ್ದರು.ಅವಳ ಉಪಚಾರಕ್ಕೆ ಮಾರುವೇಷದಲ್ಲಿದ್ದ ಆ ಸನ್ಯಾಸಿ ಪ್ರಫುಲ್ಲರಾಗಿ ತನ್ನ ನಿಜ ರೂಪವನ್ನ ತೋರಿಸಿ ಅವಳಿಗೆ ವರ ಒಂದನ್ನು ಕೊಟ್ಟು ಆಶೀರ್ವಾದ ಮಾಡಿ ಹೊರಟು ಹೋದರಂತೆ. ಮರುದಿನ ಅದೇ ಜಾಗದಲ್ಲಿ ಮತ್ತೂಬ್ಬಳು ತರುಣಿ ಊಟಕ್ಕೆ ಕುಳಿತಿದ್ದಳಂತೆ. ಅದೇ ಸಮಯಕ್ಕೆ ಹಿಂದಿನ ದಿನ ಮಾರುವೇಷದಲ್ಲಿ ಬಂದಿದ್ದ ಆ ಸನ್ಯಾಸಿ ಅವಳ ಬಳಿಯೂ ಬಂದು ಹಸಿವು ಎಂದು ಕೈ ಒಡ್ಡಿದರಂತೆ. ಆದರೆ ದುರಹಂಕಾರಿಯಾದ ಆ ತರುಣಿ ತನ್ನ ಮುಂದೆ ಭಿಕ್ಷೆ ಬೇಡಿದ ಸನ್ಯಾಸಿಗೆ ಅವಾಚ್ಯ ಶಬ್ದಗಳಿಂದ ಬೈದಳಂತೆ. ಇದರಿಂದ ಕುಪಿತಗೊಂಡ ಆ ಸನ್ಯಾಸಿ ಅವಳಿಗೆ ಬಾಯಿಯೇ ಬಾರದ ಹಾಗೇ ಶಾಪವನ್ನಿತ್ತು ಅಲ್ಲಿಂದ ಹೊರಟು ಹೋದರಂತೆ. ಈ ಸಣ್ಣ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಷ್ಟೇ.ನಾವು ಇತರರಿಗೆ ಏನನ್ನು ನೀಡುತ್ತೇವೋ ಅದೇ ನಮಗೆ ಹಿಂದಿರುಗಿ ಬರುತ್ತದೆ ಎಂದು. ನಾವು ಬೇರೆಯವರಿಗೆ ಒಳ್ಳೆಯದನ್ನ ಬಯಸಿದರೆ ಅದು ಯಾವುದಾದರೊಂದು ರೂಪದಲ್ಲಿ ನಮಗೆ ಹಿಂದಿರುಗಿ ಬರುತ್ತದೆ. ಅದೇ ನಾವು ಇತರರಿಗೆ ಕೆಟ್ಟದನ್ನ ಬಯಸಿದರೆ ಕೆಟ್ಟದ್ದೇ ನಮಗೆ ಆಗುತ್ತದೆ.
ಮಾವು ಬಿತ್ತಿದರೆ ಮಾವು. ಬೇವು ಬಿತ್ತಿದರೆ ಬೇವು.! ಬೇವಿನ ಬೀಜ ಬಿತ್ತಿ ಮಾವನ್ನ ಪಡೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇತರರಿಗೆ ಕೆಡುಕನ್ನ ಬಯಸಿ ದೇವರ ಮುಂದೆ ನಿಂತು ಭಕ್ತಿಯಿಂದ ಕೈ ಮುಗಿದು ಬೇಡಿಕೊಂಡರೆ ನಮಗೆ ಒಳಿತಾಗುವುದಿಲ್ಲ.
ಕರ್ಮ ಹಿಂದಿರುಗುತ್ತದೆ ಎಂಬ ಮಾತಿದೆ. ಅದು ಇಂದಿಗೂ ಅಕ್ಷರಶಃ ನಿಜ. ನಮ್ಮನ್ನ ಯಾವುದು ಬಿಟ್ಟು ಹೋದರೂ ನಮ್ಮ ಕರ್ಮಫಲ ನಮ್ಮನ್ನ ಎಂದಿಗೂ ಬಿಟ್ಟು ಹೋಗುವುದಿಲ್ಲ. ಕೆಲವೊಂದು ಬಾರಿ ಸಿಟ್ಟು ಬಂದಾಗ ಹಾಳಾಗಿ ಹೋಗಲಿ ಎಂದು ನಾವು ಶಪಿಸುವುದಿದೆ. ಆದರೆ ನಮ್ಮನ್ನು ಕೂಡ ನಮ್ಮ ಹಿಂದೆ ಬೇರೆ ಯಾರೋ ಅವರು ಹಾಳಾಗಿ ಹೋಗಲಿ ಎಂದು ಶಪಿಸುತ್ತಾರೆ ಎನ್ನುವುದನ್ನ ನಾವು ಯಾವತ್ತೂ ಮರೆಯುವ ಹಾಗಿಲ್ಲ.
ಜೀವನ ಮೂರುದಿನದ ಬಾಳ ಸಂತೆ. ಈ ಮೂರು ದಿನಗಳಲ್ಲಿ ನಾವು ಹೇಗೆ ಬದುಕಿದ್ವಿ ಅನ್ನುವುದಕ್ಕಿಂತ ನಾವು ಹೇಗೆ ಇತರರೊಂದಿಗೆ ಬದುಕು ನಡೆಸಿದ್ವಿ ಅನ್ನುವುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಬದುಕಿನ ಕೊನೆಯ ಘಟ್ಟದಲ್ಲಿ ನಮ್ಮ ಜತೆ ಹಣ, ಅಧಿಕಾರ, ಸಂಬಂಧ, ಜನ ಬೆಂಬಲ ಆಸ್ತಿ ಪಾಸ್ತಿ ಯಾವುದು ಬರುವುದಿಲ್ಲ. ಇದಾವುದನ್ನೂ ನಾವು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಜತೆ ಕೊನೆಯ ಕ್ಷಣದ ವರೆಗೂ ಬರುವುದು ಇತರರಿಗೆ ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಅಂದರೆ ನಮ್ಮ ಪಾಪ ಪುಣ್ಯಗಳ ಲೆಕ್ಕಾಚಾರ. ಇದನ್ನ ಅರಿತು ಮಾನವ ಕುಲ ಬದುಕಿದರೆ ಎಲ್ಲವೂ ಸುಖಮಯ.
-ಸುಸ್ಮಿತಾ ಕೆ.ಎನ್.
ಅನಂತಾಡಿ ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.