ಕೈಗಳಿಲ್ಲದೆಯೇ ಆಕಾಶದಲ್ಲಿ ಹಾರುವ ಕಾಕ್ಸ್
Team Udayavani, Jul 17, 2021, 2:58 PM IST
ಹುಟ್ಟು ಎನ್ನುವುದು ದೇವರು ನಮಗೆ ನೀಡಿದ ವರವಾದರೆ, ಆ ವರವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎನ್ನುವುದು ನಮ್ಮ ಕೈಯಲ್ಲಿರುತ್ತದೆ. ಹುಟ್ಟು-ಸಾವು ನಡುವಿನ ಅಂತರವೇ ಈ ಜೀವನ. ಆದರೆ ಜೀವನ ಎನ್ನುವುದು ಎಲ್ಲರ ಬಾಳಲ್ಲಿ ಒಂದೇ ರೀತಿಯಾಗಿಲ್ಲ. ಕೆಲವರು ಮಾನಸಿಕ, ದೈಹಿಕವಾಗಿ ಸದೃಢರಾಗಿ ಹುಟ್ಟಿದರೆ, ಇನ್ನು ಕೆಲವರೂ ದೈಹಿಕ ವೈಕಲ್ಯದಿಂದ ಜನ್ಮ ತಾಳುತ್ತಾರೆ. ಇದು ಅವರಿಗೆ ವರವೇ ಸರಿ. ಏಕೆಂದರೆ ಅಂತವರು ಸಾಮಾನ್ಯರಿಗಿಂತ ಬಹಳಷ್ಟು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಜೀವನದಲ್ಲಿ ಆಗಾಧ ಸಾಧನೆಯನ್ನೂ ಮಾಡಿಬಿಡುತ್ತಾರೆ. ಇಂತಹ ಅದೆಷ್ಟೋ ಉದಾಹರಣೆಗಳನ್ನು ನಾವು ನೀವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ. ಇದಕ್ಕೆ ಸೇರ್ಪಡೆ ಎಂಬಂತೆ ಮತ್ತೂಂದು ಉದಾಹರಣೆಯೇ ಜೆಸ್ಸಿಕಾ ಕಾಕ್ಸ್.
ಈಕೆಗೆ ಎರಡು ಕೈಗಳಿಲ್ಲ, ಆದರೂ ಆಕಾಶದಲ್ಲಿ ಹಾರಾಡುತ್ತಾಳೆ. ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಾಳೆ, ಪಿಯಾನೋ ನುಡಿಸುತ್ತಾಳೆ. ಅಷ್ಟೇ ಅಲ್ಲ ಯಾರಾದರೂ ತಂಟೆಗೆ ಬಂದರೆ ಕರಾಟೆ ಶೈಲಿಯಲ್ಲಿ ಸದೆ ಬಡಿಯುವ ತಾಕತ್ತು ಇವಳಿಗಿದೆ. ಅಂತಹ ಗಟ್ಟಿಗಿತ್ತಿ ಜೆಸ್ಸಿಕಾ ಕಾಕ್ಸ್..
1983ರಲ್ಲಿ ಜನಿಸಿದ ಜೆಸ್ಸಿಕಾ ಕಾಕ್ಸ್ ಹುಟ್ಟುತ್ತಲೇ ಎರಡೂ ಕೈಗಳಿಲ್ಲದ ಅಂಗವಿಕಲೆಯಾಗಿ ಜನಿಸಿದಳು. ದಿನಗಳು ಕಳೆದಂತೆ ತನಗೆ ಕೈಗಳಿಲ್ಲ ಎಂಬ ನೋವನ್ನಾಗಲಿ, ತಾನು ಅಸಹಾಯಕಳು ಎಂಬ ಭಾವನೆಯಾಗಲಿ ಅವಳಿಗೆ ಬರಲೇ ಇಲ್ಲ. ತನ್ನ ಅಂಗವಿಕಲತೆಯನ್ನೇ ಸವಾಲಾಗಿಸಿಕೊಂಡಳು. ಯುಎಸ್‌ನಲ್ಲಿ ವಾಣಿಜ್ಯೇತರ ಪೈಲಟ್‌ಗಳಲ್ಲಿ ಕೇವಲ ಶೇ.6 ರಷ್ಟು ಮಾತ್ರ ಮಹಿಳೆಯರು. ಅದರಲ್ಲಿ ಕಾಕ್ಸ್ ಕೂಡ ಓರ್ವಳು. ಆದರೆ ಎರಡೂ ಕೈಗಳಿಲ್ಲದಿರುವುದೇ ಅವಳನ್ನು ಎದ್ದು ಕಾಣುವಂತೆ ಮಾಡಿತು. ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾಕ್ಸ್ ವಿಶ್ವದ ಸಮರ್ಥ ಪೈಲಟ್‌ಗಳ ಸಾಲಿನಲ್ಲಿ ನಿಂತ ಕಥೆ ನಮಗೆಲ್ಲರಿಗೂ ಸ್ಫೂರ್ತಿಯಾದುದು. ಎರಡು ಕೈಗಳಿಲ್ಲದ ಮಹಿಳೆ ಇಷ್ಟು ದೊಡ್ಡ ಸಾಧನೆ ಮಾಡಿದಳಾ ಎಂದು ಆಶ್ವರ್ಯ ಪಡುವಂತಹದ್ದು. ಆದರೆ ಈ ಸಾಧನೆಗೆ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವೆಗಳೆಲ್ಲವನ್ನೂ ಮೆಟ್ಟಿ ನಿಂತು ಆಕೆ ಜಗತ್ತಿನ ಮುಂದೆ ಸಾಧಕಿಯಾಗಿ ನಿಂತಿರುವುದು ನಮ್ಮನ್ನು ಒಮ್ಮೆ ಭಾವುಕರನ್ನಾಗಿಸುತ್ತದೆ.
ಜೆಸ್ಸಿಕಾ ತನ್ನ ಪಾದಗಳನ್ನೇ ಕೈಗಳನ್ನಾಗಿ ಹೇಗೆ ಬಳಸಬೇಕೆಂಬ ಬಗ್ಗೆ ಆಲೋಚನೆಯನ್ನು ಆಕೆ ಚಿಕ್ಕನಿಂದಲೇ ಮಾಡತೊಡಗಿದ್ದಳು. ಇದಕ್ಕೆ ಆಕೆ ಸತತ ಪ್ರಯತ್ನಪಟ್ಟಳು ಕೂಡ. ಹನ್ನೊಂದು ವರ್ಷಗಳ ಬಳಿಕ ಆಕೆ ಪ್ರಾಸ್ಥೆಟಿಕ್ ತೋಳುಗಳನ್ನು ಧರಿಸಿದ ಬಳಿಕ “ನಿಜವಾದ ಜೆಸ್ಸಿಕಾ’ ಆದಳು. ಆಗ ಆಕೆಯಲ್ಲೊಂದು ಹುಮ್ಮಸ್ಸು, ಉತ್ಸಾಹ ಚಿಗುರೊಡೆಯಿತು. ಅದೆಷ್ಟಂದರೆ ಆಕಾಶದಲ್ಲಿ ಹಾರಾಡುವಷ್ಟು.
ಗುರು ಗಳನ್ನು ಅರಸಿ :
ಈ ನಡುವೆ ಜೆಸ್ಸಿಕಾಳಿಗೆ ತಾನು ಪೈಲಟ್ ಆಗಬೇಕಾದರೆ ಸೂಕ್ತ ಮಾರ್ಗದರ್ಶಕರು, ಗುರುಗಳನ್ನು ಹುಡುಕುವುದು ಅಗತ್ಯವಾಗಿತ್ತು. ಪೈಲಟ್ ಆಗಬೇಕಾದರೆ ವೃತ್ತಿ ಕೌಶಲ, ತಂತ್ರಜ್ಞಾನ, ಸವಾಲು ಎದುರಿಸುವಿಕೆಯ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಇವುಗಳನ್ನು ಕಲಿಸಿಕೊಡುವ ಗುರುಗಳನ್ನು ಕೂಡ ಆಕೆ ನಿರೀಕ್ಷಿಸಿದ್ದಳು. ಆದರೆ ಈಕೆಗೆ ಕೈಗಳಿಲ್ಲ ಎಂಬ ಕಾರಣಕ್ಕೆ ಹಲವರು ಈಕೆಗೆ ಕಲಿಸಲು ಹಿಂದೆ ಸರಿಯುತ್ತಿದ್ದರು. ಸತತ ಪ್ರಯತ್ನ ಪಟ್ಟ ಮೇಲೆ ಗುರುವೊಬ್ಬರು ಸಿಕ್ಕರು. ಇವರ ಮಾರ್ಗದರ್ಶನವನ್ನು ಅರ್ಹ ವಿದ್ಯಾರ್ಥಿಯಂತೆ ಕಲಿತು 2008ರಲ್ಲಿ ಈಕೆ ಮೊದಲ ಬಾರಿಗೆ ಏಕವ್ಯಕ್ತಿಯಾಗಿ ಹಾರಾಟ ನಡೆಸಬಲ್ಲ ವಿಮಾನದ ಪೈಲಟ್ ಆದಳು. ಆಕೆಯ ಕನಸು ಅಂದು ನನಸಾಗಿತ್ತು.
ಬಹುಮುಖ ಪ್ರತಿಭೆ ಕಾಕ್ಸ್ :
ಜೆಸ್ಸಿಕಾ ಕಾಕ್ಸ್ ಕೇವಲ ಪೈಲಟ್ ಮಾತ್ರವಲ್ಲ. ಆಕೆ ಬಹುಮುಖ ಪ್ರತಿಭೆ. ಮಹಿಳೆಯರ ಪರವಾಗಿ ಹೋರಾಟ ಮಾಡುವ ಹೋರಾಟಗಾರ್ತಿ. ಅಷ್ಟೇ ಅಲ್ಲದೇ ವೃತ್ತಿ ನಿರತ ವಕೀಲೆ. ಲೇಖಕಿ, ವಾಗ್ಮಿ, ಶಿಕ್ಷಣ ತಜ್ಞೆ, ಕರಾಟೆ ಪಟು. ಅಂಗವಿಕಲರ ಪರ ಹೋರಾಟಗಾರ್ತಿ. ಗುಡ್‌ವಿಲ್ ನ ರಾಯಭಾರಿಯಾಗಿರುವ ಇವರು ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾದಾದ್ಯಂತ ಪ್ರವಾಸ ಮಾಡಿದ್ದಾರೆ. ಇವರು ಸ್ವತಃ ಲೇಖಕರಾಗಿ ಮೂರಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
ಇದು ಅವಳ ಜೀವನದ ಆರಂಭ :ಪ್ರಾಸ್ಥೆಟಿಕ್ ತೋಳುಗಳು ಬಂದ ಬಳಿಕ ಆಕೆ ಪೈಲಟ್ ಆಗಬೇಕು ಎಂದು ದೃಢ ನಿರ್ಧಾರ ಮಾಡಿದಳು. ಪೈಲಟ್ ಆದರೆ ನೀಲಾಕಾಶದಲ್ಲಿ ಸ್ವತಂತ್ರ ಹಕ್ಕಿಯಂತೆ ಹಾರಾಡಬಹುದು ಎಂಬುದು ಆಕೆಯ ನಂಬಿಕೆ. ಇದಕ್ಕೆ ಸಾಕಷ್ಟು ಪ್ರಯತ್ನ ಕೂಡ ಮಾಡಿದ್ದಳು. 10 ವರ್ಷದವಳಿದ್ದಾಗ ಟೇ ಕ್ವಾನ್ ಡೋವನ್ನು ಪ್ರಾರಂಭಿಸಿದಳು ಮತ್ತು 14ನೇ ವಯಸ್ಸಿನಲ್ಲಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಅನ್ನು ಸಂಪಾದಿಸಿದಳು. ಕಾಲೇಜು ಶಿಕ್ಷಣದ ಬಳಿಕ ಕಾಕ್ಸ್ ಅಭ್ಯಾಸವನ್ನು ಮುಂದುವರಿಸಿದಳು. ಮತ್ತು ಪ್ಯಾಟ್ರಿಕ್ ಚೇಂಬರ್ಲೇನನ್ನು ಭೇಟಿಯಾದಳು. ಮುಂದೆ 2012 ರಲ್ಲಿ ಆತನನ್ನೇ ಕಾಕ್ಸ್ ಮದುವೆಯಾದಳು.
ಮೊಳಕೆಯೊಡೆದ ಉತ್ಸಾಹ :
ಜೆಸ್ಸಿಕಾ ಅವರು ಒಮ್ಮೆ ರೋಟರಿ ಕಾರ್ಯಕ್ರಮ ವೊಂದಕ್ಕೆ ಭಾಷಣ ನೀಡಲು ಹೋಗಿದ್ದರು. ಬಳಿಕ ಕಾರ್ಯಕ್ರಮದಲ್ಲಿ ರಾಬಿನ್ ಸ್ಟೋಡಾರ್ಡ್ ಎಂಬವ ವರು ಫ್ಲೈಟ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದರು. ಪೈಲಟ್ ಆಗಬೇಕೆಂಬ ಆಸೆ ಹೊತ್ತಿದ್ದ ಜೆಸ್ಸಿಕಾಳಿಗೆ ಇದು ಅವಕಾಶ ನೀಡಿದಂತಿತ್ತು. ಹೂಂ ಅಂದಳು. ಇಲ್ಲಿಂದಲೇ ಅವಳ ಪೈಲಟ್‌ನ ಪ್ರಯಾಣ ಆರಂಭವಾಯಿತು.
ಸಣ್ಣ ಪ್ರಯಾಣ, ದೊಡ್ಡ ಉತ್ಸಾಹ :
ಜೆಸ್ಸಿಕಾ ತಾನು ಮೊದಲ ವಿಮಾನ ಪ್ರಯಾಣ ಮಾಡಿದ್ದು ಮೆಕ್ಸಿಕೋ ಪ್ರವಾಸದಲ್ಲಿ. ಅಲ್ಲಿ ಆಕೆಗೆ ಮೊದಲಿಗೆ ವಿಮಾನ ಚಲಾಯಿಸಲು ಅವಕಾಶ ನೀಡಲಾಯಿತು. ಆಕೆ ಮೊದಲು ತನ್ನ ಕಾಲುಗಳನ್ನು ಎಂಜಿನ್‌ಗಳ ಮೇಲೆ ಇಟ್ಟಾಗ ಅದರ ಸ್ಪರ್ಶ ಆಕೆಯಲ್ಲಿ ತನ್ನ ದೇಹದ ಭಾಗಗಳ ಜೀವಂತಿಕೆಯನ್ನು ತೋರಿತು. ಎರಡು ಕೈಗಳಿಲ್ಲದಿದ್ದರೂ ನನಗೆ ಬೇರೆ ಯಾವುದೇ ಅಂಗ ಬಳಸಿ ನಾನು ಪೈಲಟ್ ಆಗಬಲ್ಲೇ ಎಂದು ಆಗಲೇ ನಿರ್ಧರಿಸಿದಳು. ಕನಸನ್ನು ಮುಂದುವರಿಸಿದಳು.
ಒಟ್ಟಾರೆ ಸಾಧಿಸಬೇಕು ಎನ್ನುವ ಛಲ ಇದ್ದರೆ ಎಂತಹ ಕಷ್ಟಗಳೇ ಇರಲಿ, ಅಡೆತಡೆಗಳೇ ಬರಲಿ ಎಲ್ಲವನ್ನೂ ಬದಿಗೊತ್ತಿ ಮುಂದೆ ಸಾಗಬೇಕು ಎನ್ನುವುದಕ್ಕೆ ಜೆಸ್ಸಿಕಾ ಕಾಕ್ಸ್ ಉದಾಹರಣೆಯಾಗಿದ್ದಾರೆ. ಎರಡೂ ಕೈಗಳಿಲ್ಲದಿದ್ದರೂ ಪೈಲಟ್ ಆಗಿ ಮಾದರಿಯಾದ ಇವರನ್ನು ನೋಡಿದರೆ ದೈಹಿಕವಾಗಿ ಎಲ್ಲ ರೀತಿಯಲ್ಲೂ ಸದೃಢರಾದ ನಾವುಗಳು ಏನು ಮಾಡಿದ್ದೇವೆ, ಏನು ಮಾಡುತ್ತಿದ್ದೇವೆ ಮತ್ತು ಮುಂದೆ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡದೆ ಇರದು.
ಪೂರ್ಣಿಮಾ ಹಿರೇಮಠ
ಅಕ್ಕಮಹಾದೇವಿ ವಿವಿ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.