Kannada: ಕನ್ನಡ ಬಳಸಿ ಕಲಿಸಿ ಬೆಳೆಸೋಣ
Team Udayavani, Oct 15, 2023, 3:07 PM IST
ಕನ್ನಡಕ್ಕೆ ಕನ್ನಡಿಗರೇ ಮಾರಕವಾಗಿ ಬದಲಾಗು ತ್ತಿರುವುದು ವಿಷಾದನೀಯ. ಕನ್ನಡಿಗರಾದ ನಾವು ಹೊರ ರಾಜ್ಯದವರಿಗೆ ಕನ್ನಡ ಕಲಿಯುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ಕಲ್ಪಿಸುತ್ತಿಲ್ಲ. ಇಂಗ್ಲಿಷ್, ಹಿಂದಿಯಂತಹ ಭಾಷೆಗಳಿಗೆ ಒತ್ತು ಕೊಟ್ಟು, ಅವರ ಭಾಷೆಯ ಜಾಡನ್ನು ಹಿಡಿದು ವ್ಯವಹರಿಸುವಾಗ ಅವರಲ್ಲಾದರೂ ಕನ್ನಡ ಕಲಿಯಬೇಕೆನ್ನುವ ಮನಸ್ಥಿತಿ ಹೇಗೇ ಬರಬೇಕು? ವ್ಯವಹಾರಕ್ಕೆ ಇಂಗ್ಲಿಷ್ ಅಗತ್ಯ. ಕೆಲವು ಬಾರಿ ಅದರ ಬಳಕೆ ಸಹ ಅನಿವಾರ್ಯತೆ ಇರುವುದರಿಂದ ಅದರ ಕಾರಣ ಒಪ್ಪಬಹುದಾಗಿದೆ. ಆದರೆ ಕನ್ನಡ ಬಳ ಸದೆ, ಹಿಂಜರಿಯುವ ಮನಸ್ಥಿತಿಗೆ ಯಾವ ಕಾರಣವಿದೆ ಎನ್ನುವುದು ಉತ್ತರ ಇಲ್ಲದಿರುವ ಯಕ್ಷ ಪ್ರಶ್ನೆ.
ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಾತ್ರಕ್ಕೆ ಕನ್ನಡಿಗರು ಅಥವಾ ಕನ್ನಡ ಕನ್ನಡ ಎಂದ ಮಾತ್ರಕ್ಕೆ ಕನ್ನಡಿಗರಾಗಲು ಸಾಧ್ಯವಿಲ್ಲ. ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ. ಯಾವ ಭಾಷೆಗೂ ಕಮ್ಮಿಯಿರದ ಕನ್ನಡ ಮಾತನಾಡಲು ಏತಕೆ ಹಿಂಜರಿಕೆ?
ಹೆತ್ತ ತಾಯಿಯನ್ನು, ಈಕೆ ನನ್ನ ತಾಯಿ ಎಂದು ತೋರಿಸಲು ಅವಮಾನ ಇದೆಯೇ? ತಾತ್ಸಾರ ಇದೆಯೇ? ಅಂದಮೇಲೆ ಮಾತೃ ಭಾಷೆಯ ಮೇಲೆ ಏಕೆ ತಾತ್ಸಾರ, ಏಕೆ ಅವಮಾನ?
ಬೇರೆ ಭಾಷೆ ಮಾತಾಡಬೇಡಿ ಹಾಗೂ ಕಲಿಯಬೇಡಿ ಎನ್ನುವುದು ಎಂದಿಗೂ ನನ್ನ ಮಾತಿನ ಅರ್ಥವಲ್ಲ. ಕವಿ ವಾಣಿಯಂತೆ ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪೇನಿಲ್ಲ, ಆದರೆ ಬೇರೆ ಭಾಷೆಗಳು ಕಿಟಕಿಯಾದರೆ, ಕನ್ನಡ ಮನೆಯ ಮುಖ್ಯ ಬಾಗಿಲು ಆಗಿರಲಿ ಎಂದು.
ಹಿಂದೆ ಒಂದು ಮಾತಿತ್ತು… ಎಕ್ಕಡ! ಎನ್ನಡ! ಮದ್ಯೆ ನನ್ನ ಕನ್ನಡ! ಅದೇ ರೀತಿ ಇಂದು ನಮ್ಮ ಬೆಂಗಳೂರು ಬದಲಾಗಿದೆ, ಬದಲಾಗುತ್ತಲೇ ಇದೆ ಎಂದರೆ ಸುಳ್ಳಲ್ಲ. ಇದು ಒಂದು ಕಡೆಯಾದರೆ ಉತ್ತರ ಭಾರತದಲ್ಲಿ ಪ್ರಮುಖ ಭಾಷೆ ಎಂದೇ ಬಿಂಬಿಸಲ್ಪಡುವ ಹಿಂದಿ, ಮುಂದೆ ಕರ್ನಾಟಕದಲ್ಲಿ ರಾಜ್ಯಭಾರ ಮಾಡಿದರೂ ಯಾವ ಆಶ್ಚರ್ಯ ಇಲ್ಲ.
ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಜಾಲತಾಣದಲ್ಲಿ ನಾನು ಬೆಂಗಳೂರಿನಲ್ಲಿ ಇರುತ್ತೇನೆ ಆದರೆ ಕನ್ನಡ ಮಾತನಾಡುವುದಿಲ್ಲ ಎಂದು ಪೋಸ್ಟ್ ಒಂದನ್ನು ಮಾಡಿದ್ದ. ಆ ಪೋಸ್ಟ್‌ಗೆ ಬಂದ ಪರವಾದಿಗಳ ಕಮೆಂಟ್ಸ್ ಅಷ್ಟೇ ಜೋರಾಗಿತ್ತು. ಕೆಲವು ವ್ಯಕ್ತಿಗಳು ಬೆಂಗಳೂರಿನಲ್ಲಿ ಎಲ್ಲರಿಗೂ ಸಮಾನ ಮಾತನಾಡುವ ಹಕ್ಕಿದೆ ಎಂಬ ಸಂವಿಧಾನ ವಿಷಯಗಳನ್ನು ತರುತ್ತಿರುವುದು ಒಂದು ಕಡೆಯಾದರೆ, ಇನ್ನೂ ಕೆಲವರು ಕನ್ನಡ ಪರವಾಗಿ ಕಮೆಂಟ್ಸ್ ಹಾಕುತ್ತಿದ್ದರು. ಅದರಲ್ಲಿ ಒಂದು ಹೀಗಿತ್ತು
ಕರ್ನಾಟಕ ನಿಮಗೆ ಇರಲು ಸ್ಥಳ, ನೀರು, ಆಹಾರದ ಜತೆಗೆ ಕೆಲಸವನ್ನು ನೀಡಿದೆ, ಇಲ್ಲಿನ ಭಾಷೆ ಮಾತಾಡುವುದು ಮುಖ್ಯ ಎನ್ನುವ ಕಮೆಂಟ್‌ಗೆ ಒಬ್ಬ ವ್ಯಕ್ತಿಯು ಕರ್ನಾಟಕದಲ್ಲಿ ಕೆಲಸ ಮಾಡುವಷ್ಟು ಸಮರ್ಥರು ಕಡಿಮೆ ಇರುವುದರಿಂದ ನಮ್ಮ ಅಗತ್ಯವಿದೆ ಎನ್ನುವ ಅಹಂಕಾರದ ಮಾತು ಕನ್ನಡ ಹಾಗೂ ಕರ್ನಾಟಕದ ಭವಿಷ್ಯಕ್ಕೆ ಕನ್ನಡಿ ಹಿಡಿದಂತಿದೆ. ಇದಕ್ಕೆ ಬಹಳಷ್ಟು ಪ್ರತಿರೋಧ ಬಂದಿತ್ತಾದರೂ ಅದರಲ್ಲಿಯೇ ಕೆಲವು ಕನ್ನಡಿಗರು ಶೋಕಿಗಾಗಿ ಕನ್ನಡ ಮರೆತು ಹಿಂದಿ ಮಾತಾಡಲು ಶುರು ಮಾಡಿದ್ದು ವಿಷಾದನೀಯ!
ಪರ ಭಾಷೆ ಕಲಿಯೋಣ, ಜ್ಞಾನಕ್ಕಾಗಿ ಹಾಗೂ ಅವರ ನೆಲಕ್ಕೆ ಹೋದಾಗ ಆ ಸ್ಥಳಕ್ಕೆ ಮತ್ತು ಭಾಷೆಗೆ ನೀಡುವ ಗೌರವಕ್ಕಾಗಿ ಕಲಿಯೋಣ. ಕರ್ನಾಟಕದಲ್ಲಿ ಕನ್ನಡ ಮಾತಾಡಲಿ ಎನ್ನುವುದನ್ನು ಹೇಗೆ ನಿರೀಕ್ಷಿಸುತ್ತೇವೆ ಹಾಗೆಯೇ ಬೇರೆ ರಾಜ್ಯದಲ್ಲಿ ಅಲ್ಲಿಯ ಜನರಿಗೆ ಹಾಗೂ ಭಾಷೆಗೆ ಹೊಂದಿಕೊಳ್ಳುವ ಸಂಸ್ಕಾರ ಇರಬೇಕಾಗಿದೆ. ಬದಲಾಗಿ ಕನ್ನಡ ಮರೆತು ಬೇರೆ ಭಾಷೆ ಮೇಲಿನ ಮೋಹ ಹಾಗೂ ತನಗೆ ಅನ್ಯ ಭಾಷೆ ತಿಳಿದಿದೆ ಎನ್ನುವ ಶೋಕಿಗಾಗಿ ಬೇಡ.
ಕನ್ನಡಿಗರಾದ ನಾವೇ ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡದೆ ಹೋದರೆ, ಹೊರ ರಾಜ್ಯದವರಿಗೆ ಕನ್ನಡ ಕಲಿಯುವ ಮನಸ್ಸಾದರೂ ಎಲ್ಲಿಂದ ಬರಬೇಕು? ಕನ್ನಡವನ್ನು ಉಳಿಸಲು ಬೆಳೆಸಬೇಕೆಂದು ಇಲ್ಲ, ಅದನ್ನು ಮಾಡಲು ನಾನ್ಯಾರು ನೀವ್ಯಾರು? ಕನ್ನಡ ಈಗಾಗಲೇ ಹಬ್ಬಿರುವ ಗಂಧದ ಮರ, ಕಸ್ತೂರಿಯ ಘಮ. ಕನ್ನಡ ಉಳಿಸಿ, ಬೆಳೆಸಿ ಅಲ್ಲ, ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವುದು, ಕಲಿಸುವುದು ಅಗತ್ಯ. ಅದು ನಾವು ಕನ್ನಡಕ್ಕೆ ಮಾಡುವ ಸಹಾಯವಲ್ಲ, ಅದು ಪ್ರತೀ ಕನ್ನಡಿಗನ ಕರ್ತವ್ಯ. ಉಳಿಸಿ-ಬೆಳೆಸಿ ಎನ್ನುವುದರ ಬದಲು, ಬಳಸಿ ಕಲಿಸೋಣ.
- ವಿನಯಾ ಶೆಟ್ಟಿ, ಉಪ್ಪುಂದ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.