ಕಾನೂರು ಹೆಗ್ಗಡತಿ ಸಿನೆಮಾದೊಳಗೊಂದು ನೋಟ
Team Udayavani, Nov 6, 2020, 6:20 PM IST
ಕಲಾತ್ಮಕ ಚಿತ್ರಗಳನ್ನು ನೋಡುವ ಪ್ರೇಕ್ಷಕ ವರ್ಗದ ಸಂಖ್ಯೆ ಪ್ರಸ್ತುತ ಕಾಲಘಟ್ಟದಲ್ಲಿ ಕಡಿಮೆಯಾಗಿದ್ದರೂ, ಬಹಳಷ್ಟು ಕಲಾತ್ಮಕ ಸಿನಿಮಾಗಳು ತಮ್ಮ ವಿಭಿನ್ನತೆಯಿಂದ ಜನ ಮಾನಸಗಳಲ್ಲಿ ಹೊಸ ಛಾಪನ್ನು ಮೂಡಿಸುತ್ತವೆ.
ಅಂತಹ ಕಲಾತ್ಮಕ ಚಿತ್ರಗಳ ಅಭಿಮಾನಿಗಳ ಪೈಕಿ ನಾನೂ ಒಬ್ಬಳು.
ಕನ್ನಡದಲ್ಲಿ ಕಾದಂಬರಿಯಾಧಾರಿತ ಚಲನಚಿತ್ರಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿವೆ. ಕುವೆಂಪು, ಶಿವರಾಮ ಕಾರಂತರು, ಸಾಯಿಸುತೆ ಹೀಗೆ ಹತ್ತು ಹಲವಾರು ಬರಹಗಾರರ ಪ್ರಮುಖ ಕಾದಂಬರಿಗಳು ಚಲ ನಚಿತ್ರಗಳಾಗಿ ಮೂಡಿಬಂದಾಗ ಅವರ ಕಾದಂಬರಿಗಳ ಕಥೆಗಳು ನಿಜವಾಗಿಯೂ ಕಣ್ಣ ಮುಂದೆಯೇ ನಡೆದ ಹಾಗೆ ಭಾಸವಾಗುತ್ತದೆ. ಕಾರಣ ಅಲ್ಲಿರುವ ಪ್ರಾದೇಶಿಕತೆಯ ಸೊಗಡು.
ಈ ನೆಲೆಯಲ್ಲಿ ನಾನು ಇತ್ತೀಚೆಗೆ ನೋಡಿದ ಸಿನೆಮಾ ಕುವೆಂಪು ಅವರ “ಕಾನೂರು ಹೆಗ್ಗಡತಿ’. ಬಹಳಷ್ಟು ಬಾರಿ ನೋಡಿದಂತಹ ಸಿನೆಮಾ. ಹಲವು ಸಲ ಈ ಸಿನೆಮಾ ನೋಡುವುದಕ್ಕೂ ಒಂದು ಕಾರಣವಿದೆ. ಸುಮಾರು 150 ಪಾತ್ರಗಳಿದ್ದು, ಬರೋಬ್ಬರಿ 700 ಪುಟಗಳ ಕಾದಂಬರಿಯ ಉಪಕಥೆಗಳನ್ನು ಕೂಡ ಒಟ್ಟು ಸೇರಿಸಿಕೊಂಡು ಎರಡರಿಂದ ಮೂರು ಗಂಟೆಯ ಒಂದು ಚಿತ್ರ ನಿರ್ಮಿಸಿರುವುದು.
ಕಾನೂರು ಹೆಗ್ಗಡತಿ ಸಿನೆಮಾದ ವಿಶೇಷವೆಂದರೆ ಓರ್ವ ಜ್ಞಾನಪೀಠ ಪುರಸ್ಕೃತರ ಕಾದಂಬರಿಯಾಧಾರಿತ ಸಿನೆಮಾವನ್ನ ಇನ್ನೊರ್ವ ಜ್ಞಾನಪೀಠ ಪುರಸ್ಕೃತ ಲೇಖಕ ನಿರ್ದೇಶಿಸಿರುವುದು. ಖ್ಯಾತ ರಂಗಕರ್ಮಿ ಗಿರೀಶ್ ಕಾರ್ನಾಡರೇ ಈ ಸಿನೆಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸಿದರಲ್ಲದೇ ಮುಖ್ಯಪಾತ್ರವಾದ ಚಂದ್ರೇಗೌಡನ ಪಾತ್ರವನ್ನೂ ತಾವೇ ನಿಭಾಯಿಸಿದ್ದಾರೆ. 1999ರಲ್ಲಿ ತೆರೆಕಂಡ ಚಿತ್ರ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆ ದು ಕೊಂಡಿದೆ. ಖ್ಯಾತ ನಟಿ ತಾರಾ ಅವರಿಗೆ ಬೆಸ್ ಫಿಲ್ಮ… ಫೇರ್ ನಟಿ ಪ್ರಶಸ್ತಿಯ ಗರಿ ಮೂಡಿಸಿದ ಸಿನೆಮಾ.
ಕಾದಂಬರಿ ಓದಿದ ವ್ಯಕ್ತಿಗೆ ಸಿನೆಮಾ ನೋಡುವಾಗ ಕಥೆಯ ಲಹರಿ ಸಿಗುವುದು ಮುಖ್ಯವಾಗುತ್ತದೆ. “ಕಾನೂರು ಹೆಗ್ಗಡತಿ’ ಸಿನೆಮಾವು ಅಂತಹ ಕೊಂಡಿಯನ್ನು ಹೊಂದಿದ್ದು ಕಾದಂಬರಿಯ ಪ್ರತಿ ವಿಷಯ ವಸ್ತುಗಳನ್ನು ಚೊಕ್ಕವಾಗಿ ಪೋಣಿಸಲಾಗಿದೆ. ಮಲೆನಾಡಿನ ಸುಂದರ ಪ್ರಕೃತಿಯ ಸೊಬಗು, 18ನೇ ಶತಮಾನದ ಜನರ ಬದುಕಿನ ಅಂದ ಚಂದ, ಸ್ವಾತಂತ್ರ್ಯಸಂಗ್ರಾಮದ ಪರಿಣಾಮಗಳು, ಜಮೀನಾªರಿ ಪದ್ಧತಿ, ಮಹಿಳೆಯರ ಶೋಷಣೆ, ಪುರುಷ ಪ್ರಧಾನ ಸಮಾಜ, ಜಾತಿ ಪದ್ಧತಿ ಹೀಗೆ ಆ ಕಾಲಕ್ಕೆ ವಸ್ತು ಚಿತ್ರಣವನ್ನು ತೆರೆದಿಡುತ್ತದೆ.
ಬಹುಶಃ ಮಲೆನಾಡಿಗರಿಗೆ ಕಾನೂರು ಹೆಗ್ಗಡತಿ ಸಿನಿಮಾದಲ್ಲಿ ಬರುವಂತಹ ಪರಿಸರವು ಚಿರ ಪರಿಚಿತವಾಗಿರಬಹುದು. ಅದೇ ಸಿನೆಮಾವನ್ನು ಮಲೆನಾಡಿನ ಪರಿಚಯವೇ ಇಲ್ಲದ ಪ್ರೇಕ್ಷಕರು ನೋಡಿದಾಗ ಹೊಸ ಅನುಭವ ನೀಡಬಹುದು. ಕಥೆಯಲ್ಲಿ ಬರುವ ಮುಖ್ಯ ಸ್ತ್ರೀಪಾತ್ರಗಳ ತೊಳಲಾಟ ಯಾವ ರೀತಿಯದ್ದು ಎಂಬುದನ್ನು ಕಾದಂಬರಿಯಲ್ಲಿ ಅಕ್ಷರಗಳ ಮೂಲಕ ವಿವರಿಸಬಹುದಷ್ಟೆ ಆದರೆ ಸಿನೆಮಾದ ಮೂಲಕ ಹೆಂಗಳೆಯರ ಮುಖದ ಹಾವ ಭಾವಗಳೇ ಅವರ ನಿತ್ಯದ ಜಂಜಾಟವನ್ನು ತೋರಿಸುತ್ತದೆ.
ಬಹುಶಃ ದೀರ್ಘ ಕಾದಂಬರಿಯನ್ನು ಓದುವುದರಲ್ಲಿ ತಾಳ್ಮೆಯ ಪರೀಕ್ಷೆಯೂ ನಡೆಯುತ್ತದೆ. ಸಿನೆಮಾದ ಮೂಲಕ ಕಾನೂರು ಹೆಗ್ಗಡತಿ ಕಾದಂಬರಿ ಕಥೆಯ ಒಟ್ಟು ಸಾರಾಂಶವನ್ನು ಅಲ್ಪ ಸಮಯದಲ್ಲೇ ಪಡೆದುಕೊಳ್ಳಬಹುದು. ಸಿನೆಮಾದ ಒಂದೆರಡು ಸನ್ನಿವೇಶಗಳು ನೈಜ ಕಾದಂಬರಿ ಕಥೆಗಿಂತ ಕೊಂಚ ಭಿನ್ನವಾಗಿದ್ದರೂ, ಕಥೆಯ ಸ್ವಾದ ನಮ್ಮದಾಗಿಸಲು ಚಿತ್ರವನ್ನು ನೋಡಬಹುದು.
ದುರ್ಗಾ ಭಟ್ ಬೊಳ್ಳುರೋಡಿ, ಆಳ್ವಾಸ್ ಕಾಲೇಜು, ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.