Uv Fusion: ಕರಗ – ಕೋಲಾರದ ಧಾರ್ಮಿಕತೆ
Team Udayavani, Oct 15, 2023, 7:45 AM IST
ಚೈತ್ರಮಾಸದ ಹುಣ್ಣಿಮೆ ಎಂದಾಕ್ಷಣ ಆ ಜಗನ್ಮಾತೆ ಯನ್ನು ಭುವಿಗೆ ಕರೆತರುವ ಕಾತರ ಈ ಪ್ರಾಂತ್ಯದ ಜನರಿಗೆ. ಕೋಲಾರ, ತುಮಕೂರು, ಚಿಕ್ಕ ಬಳ್ಳಾಪುರ, ಬೆಂಗಳೂರು ಈ ಭಾಗಗಳಲ್ಲಿ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕರಗ ಎನ್ನುವ ವಿಶಿಷ್ಟ ಧಾರ್ಮಿಕ ಆಚರಣೆ ಇಂದಿಗೂ ರೂಢಿಗತವಾಗಿದೆ.
ಕರಗ ಎಂದರೆ ಅಷ್ಟೇನೂ ಅಪರಿಚಿತವಲ್ಲ, ಬೆಂಗಳೂರು ಕರಗ ವಿಶ್ವವಿಖ್ಯಾತವಾದುದೇ. ಕ ಎಂದರೆ ಕೈಯಿಂದ ಮುಟ್ಟದೇ, ರ ಎಂದರೆ ರುಂಡದ ಮೇಲೆ ಹೊತ್ತು, ಗ ಎಂದರೆ ಗತಿಸುವುದು ಎಂದರ್ಥ. ಇಲ್ಲಿನ ಆಚರಣೆಗಳ ನಿಜಕ್ಕೂ ರೋಮಾಂಚಕಾರಿ. 7-11 ದಿನಗಳ ಈ ಕಾರ್ಯಕ್ರಮದಲ್ಲಿ ದಿನಂಪ್ರತಿ ಹೊಸ ಆಚರಣೆಗಳು ಇರುವುವು. ಕರಗದ ಪೌರಾಣಿಕ ಹಿನ್ನೆಲೆಯ ಕುರಿತು ದೃಷ್ಟಿ ಹರಿಸಿದರೆ, ಪಾಂಡವರು ಕುರುಕ್ಷೇತ್ರ ಯುದ್ಧದ ಬಳಿಕ ಸ್ವರ್ಗಕ್ಕೆ ಹಿಂದಿರುಗುವಾಗ ದ್ರೌಪದಿಯು ತಲೆತಿರುಗಿ ಬೀಳುವಳು.
ಇದನ್ನರಿಯದೆ ಪಾಂಡವರು ಹಾಗೂ ಶ್ರೀ ಕೃಷ್ಣ ಮುಂದೆ ಸಾಗುವರು. ಆಗ ತಿಮಿರಾಸುರ ಎಂಬ ರಾಕ್ಷಸ ದ್ರೌಪದಿಯೊಂದಿಗೆ ಕುಚೇಷ್ಟೆ ಮಾಡವನು. ಕೂಡಲೇ ಆದಿಶಕ್ತಿಯಾದ ದ್ರೌಪದಿಯು ತನ್ನ ಹಣೆಯಿಂದ ಘಂಟೆ ಪೂಜಾರಿ ಗಳನ್ನೂ, ಭುಜಗಳಿಂದ ಖಡ್ಗಧಾರಿಗಳಾದ ವೀರ ಕುಮಾರರನ್ನೂ ಸೃಷ್ಟಿಸಿ ತಿಮಿರಾಸುರನನ್ನು ವಧಿಸಿ, ಹಿಂದಿರುಗುವಾಗ ದ್ರೌಪದಿಯಿಂದಾದ ಮಕ್ಕಳು ಹಿಂದಿ ರುಗಬೇಡವೆಂದು ಮೊರೆಯಿಟ್ಟರು. ಆಗ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಭೂಮಿಗೆ ಬಂದು ನೆಲೆಸಿ ಅನಂತರ ಹಿಂದಿರುಗುವೆನೆಂದು ವಚನ ನೀಡುವಳು. ಆ ಕಾರಣ ಈ ಕರಗ ಮಹೋತ್ಸವವನ್ನು 11 ದಿನ ಸಂಭ್ರಮಿಸುವುದುಂಟು. ಇದರಲ್ಲಿ ಮುಖ್ಯ ಘಟ್ಟ ಹೂ-ಕರಗ.
ಇಲ್ಲಿ ಈ ಆಚರಣೆಯನ್ನು ವಹಿ°ಕುಲ ಕ್ಷತ್ರಿಯ ಅಥವಾ ತಿಗಳ ಸಮಾಜದವರು ಆಚರಿಸಿದರೂ ಇದು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತ
ವಾಗಿದೆ. ಈ ಆಚರಣೆಗಾಗಿ ಆರು ತಿಂಗಳ ಮುಂಚೆಯೇ ಕರಗ ಪೂಜಾರಿ, ಘಂಟೆ ಪೂಜಾರಿ, ಗಣಾಚಾರಿ ಹಾಗೂ ವೀರಕುಮಾರರನ್ನು ಆಯ್ಕೆ ಮಾಡಲಾಗುತ್ತದೆ. ಅವರು ಗರಡಿ ಮನೆಯಲ್ಲಿ ತಾಲೀಮು ನಡೆಸಿ, ಶಿಸ್ತಿನ ಆಹಾರ ಪದ್ಧತಿಯನ್ನು ಪಾಲಿಸುತ್ತಾರೆ ಹಾಗೂ ಕರಗದ 15 ದಿನಗಳ ಮುಂಚಿತವಾಗಿ ಇವರೆಲ್ಲರೂ ತಮ್ಮ ಮನೆಯವರೊಂದಿಗೆ ಎಲ್ಲ ರೀತಿಯ ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಅತಿ ಮುಖ್ಯವಾಗಿ ಕರಗ ಹೊರುವ ಕರಗ ಪೂಜಾರಿಯ ಹೆಂಡತಿಯು ಅವಳ ತಾಳಿ, ಬಳೆ, ಕಾಲುಂಗುರ, ಹೂ ಹಾಗೂ ಕುಂಕುಮಗಳನ್ನು ತನ್ನ ಗಂಡನಿಗೆ ನೀಡಿ ವೈಧವ್ಯವನ್ನು ಪಾಲಿಸುತ್ತಾಳೆ.
ಅಲ್ಲದೆ, ಅವಳು ಆಚರಣೆ ಮುಗಿಯುವವರೆಗೆ ನೆಲ್ಲು ಅಥವಾ ಭತ್ತವನ್ನು ಕೈಯಿಂದ ಕುಟ್ಟಿ ಅಕ್ಕಿಯನ್ನಾಗಿ ಮಾಡಿ ಆಚರಣೆಯ ಕೊನೇ ದಿನ ಅದರಿಂದ ಮಾಡಿದ ಖಾದ್ಯವನ್ನು ನೈವೇದ್ಯವಾಗಿ ಇಡುವಳು. ಜತೆಗೆ ಉತ್ಸವ ಮುಗಿಯುವವರೆಗೆ ತನ್ನ ಗಂಡನನ್ನು ನೋಡುವಂತಿಲ್ಲ.
ಕರಗದ ಹಿಂದಿನ ದಿನ ಮಂತ್ರಘೋಷಗಳೊಂದಿಗೆ ದ್ರೌಪದಿ ದೇವಾಲಯದ ಬಾವಿಯೊಳಗಿಂದ ಮಣ್ಣಿನ ಮಡಿಕೆಗಳನ್ನು ಹೊರತೆಗೆದು, ಅದರಲ್ಲಿ ನೀರು ತುಂಬಿ ಮಲ್ಲಿಗೆ ಹೂಗಳಿಂದ ಅಲಂಕರಿಸಿ, ಪ್ರಕೃತಿ-ಪುರುಷನ ಸಂಕೇತವಾಗಿ ಹಳದಿ ಸೀರೆಯನುಟ್ಟು ಸ್ತ್ರೀ ವೇಷ
ಧಾರಿಯಾಗಿ, ಬಳೆ ಬಲಜಿಗ/ ಬಳೆಗಾರ ಸಮುದಾಯದವರಿಂದ ಕಪ್ಪು ಬೆಳೆ ತೊಡಗಿಸಿಕೊಂಡು ದೇವಾಲಯಕ್ಕೆ ಬರುವ ಕರಗದ ಪೂಜಾರಿ ತನ್ನ ಕೈಯಿಂದ ಮುಟ್ಟದೇ ತನ್ನ ರುಂಡದ ಮೇಲೆ ಕರಗವನ್ನು ಹೊತ್ತು “ಗೋವಿಂದಾ ಗೋವಿಂದಾ’ ಎಂಬ ಘೋಷಗಳೊಂದಿಗೆ ಗರ್ಭ ಗುಡಿಯಿಂದ ಹೊರಬರುವರು. ಈ ಆಚರಣೆಯ ಪ್ರಮುಖ ಆಕರ್ಷಣೆ ಕರಗ ದ್ರೌಪದಿ ದೇವಾಲಯದಿಂದ ಹೊರಬಂದ ಬಳಿಕ ಸಮೀಪದ ದರ್ಗಾಗಳಿಗೆ ಕಡ್ಡಾಯವಾಗಿ ಭೇಟಿ ನೀಡುತ್ತದೆ.
ಸಾಮಾನ್ಯವಾಗಿ ಈ ಭಾಗದಲ್ಲಿ ಕರಗ ರಾತ್ರಿ ಒಂಬತ್ತರ ಬಳಿಕ ಚಾಲನೆ ಪಡೆಯುವುದು ಹಾಗೂ ಕರಗದ ಪೂಜಾರಿಯು ತಲೆಮೇಲೆ ಕರಗ, ಬಲಗೈಯಲ್ಲಿ ಬಾಕು ಹಾಗೂ ಎಡಗೈಯಲ್ಲಿ ಮಂತ್ರದಂಡವನ್ನು ಹಿಡಿದು ವಿವಿಧ ಭಂಗಿಗಳಲ್ಲಿ ನೃತ್ಯ ಮಾಡುತ್ತಾ, ಸೂರ್ಯೋದಯ ಆಗುವವರೆಗೆ ಇಡೀ ನಗರಾದ್ಯಂತ ದೇವಾಲಯ, ದರ್ಗಾ, ಮಸೀದಿ, ಚರ್ಚ್ ಹಾಗೂ ಮನೆಗಳಿಗೆ ಬರೀ ಕಾಲಿನಲ್ಲಿ ಸುತ್ತುವರು. ಈ ಸಂದರ್ಭದಲ್ಲಿ ಕರಗದ ಪೂಜಾರಿ ಉಪವಾಸ ಆಚರಣೆಯಲ್ಲಿರುತ್ತಾರೆ. ಅವರ ಮೇಲೆ ಆದಿಶಕ್ತಿ ಸ್ವರೂಪಿಣಿ ಆದ ದ್ರೌಪದಿಯೇ ಸ್ವಯಂ ಆವಾಹನೆಯಾಗಿರುವಳು ಎಂಬುದು ಕರಗದ ಪಾವಿತ್ರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಕರಗದ ತೂಕ ಸರಿಸುಮಾರು 20-25 ಕೆ.ಜಿ. ವರೆಗೂ ಇರುತ್ತದೆ. ವೀರಕುಮಾರರು ಕರಗದ ಮುಂದೆ ಉನ್ಮಾದರಾಗಿ ದಿಕ್-ಡಿ ದಿಕ್-ಡಿ ಎಂದು ಕತ್ತಿಗಳಿಂದ ತಮ್ಮ ಬರಿಯ ಎದೆಯ ಮೇಲೆ ಹೊಡೆದುಕೊಂಡು ತಮ್ಮನ್ನು ಬಿಟ್ಟು ಹೋಗದಂತೆ ಜಗನ್ಮಾತೆಯಲ್ಲಿ ಮೊರೆಯಿಡುವರು. ಭಕ್ತರು ಕರಗದ ಮೇಲೆ ಮಲ್ಲಿಗೆ ಹೂಚೆಲ್ಲಿ ಇಷ್ಟಾರ್ಥಗಳನ್ನು ಹರಸಿಕೊಳ್ಳುವರು. ಚಿಕ್ಕ ಮಕ್ಕಳನ್ನು ಕೆಳಗೆ ಹಾಕಿ, ಅವರನ್ನು ಕರಗದಮ್ಮನಿಂದ ದಾಟಿಸಿದರೆ ಗ್ರಹಬಾಧೆ ದೂರವಾಗುವುದೆಂಬ ನಂಬಿಕೆಯಿದೆ. ಕೆಲವು ಭಕ್ತರು ಕರಗಕ್ಕೆ ಮಡಿಲಕ್ಕಿ ತುಂಬುವುದು ಈ ಆಚರಣೆ ಮತ್ತೂಂದು ವಿಶೇಷ. ಹಿಂದೆ ಕೆಲವೊಮ್ಮೆ ಆಯತಪ್ಪಿ ಕರಗ ಬಿದ್ದರೆ ಕರಗದ ಪೂಜಾರಿಯ ರುಂಡ ಕತ್ತರಿಸುವ ಪದ್ಧತಿಯಿತ್ತು.
ಆದರೆ ಈಗ ಪೂಜಾರಿಯ ಕೂದಲನ್ನು ಕತ್ತರಿಸಿ, ಅವರು ಸತ್ತರೆಂದು ಘೋಷಿಸಿ, ಅವರನ್ನು ಕರಗದ ಆಚರಣೆ ಗಳಿಂದ ದೂರ ಇಡುವರು. ಈ ಕರಗವು ಪಂಜಿನ ಬೆಳಕು, ಘಂಟೆಯ ನಾದ ಹಾಗೂ ದ್ರೌಪದಿ ಸಮೇತ ಪಾಂಡವರ ರಥವನ್ನು ಹಿಂಬಾಲಿಸುವುದು ಈಗಲೂ ವಾಡಿಕೆಯಲ್ಲಿದೆ. ಕರಗದ ಬಳಿಕದ ದಿನ ಅಗ್ನಿಕುಂಡ ಪ್ರವೇಶ ಹಾಗೂ ವಸಂತೋತ್ಸವ ಇರುತ್ತದೆ. ಇಲ್ಲಿ ಕರಗದ ಪೂಜಾರಿಯನ್ನು ಒಳಗೊಂಡಂತೆ ಅಗ್ನಿಕುಂಡ ಪ್ರವೇಶಿಸುವರು ಹಾಗೂ ವೀರಕುಮಾರರಲ್ಲಿ ಒಬ್ಬರ ಮೇಲೆ ಪೋತರಾಜನ ಆವಾಹನೆಯಾಗಿ ಕುರಿಯನ್ನು ಬರಿ ಹಲ್ಲಿನಲ್ಲಿ ಕಚ್ಚಿ, ರಕ್ತವನ್ನು ಕುಡಿದು ಕರಗ ಮಹೋತ್ಸವದ ವಿಜಯದ ಸಂಕೇತವಾಗಿ ವಸಂತೋತ್ಸವಕ್ಕೆ ಚಾಲನೆ ನೀಡುವರು. ಇಲ್ಲಿ ಕರಗದ ಪೂಜಾರಿ ತನ್ನ ತಲೆಯ ಮೇಲೆ ಒನಕೆಯನ್ನು ಹಿಡಿದು ಅದರ ತುದಿಯಲ್ಲಿ ನೀರು ತುಂಬಿದ ಬಿಂದಿಗೆಯಿಂದ ನಾಟ್ಯ ಮಾಡುತ್ತಾ ಬಿಂದಿಗೆಯ ನೀರನ್ನೆಲ್ಲ ಹೊರಚೆಲ್ಲುವರು. ಇದನ್ನು ಒನಕೆ ಕರಗ ಎಂತಲೂ ಕರೆಯುವುದುಂಟು. ಅನಂತರ ಕೊನೆಯ ಹಂತವಾಗಿ ಕರಗ ಮಹೋತ್ಸವದಲ್ಲಿ ಪಾಲ್ಗೊಂಡವರೆಲ್ಲರೂ ನೀರಿನ ಓಕುಳಿ ಆಡಿ ಸಂಭ್ರಮಿಸುವರು. ಬಳಿಕ ದೇವಾಲಯದ ಧ್ವಜವನ್ನು ಕೆಳಗಿಳಿಸುವ ಮೂಲಕ ಕರಗ ಮಹೋತ್ಸವಕ್ಕೆ ಅಧಿಕೃತ ತೆರೆ ಎಳೆಯುವರು.
ಕರಗ ಕೇವಲ ಆಚರಣೆಯಾಗಿಲ್ಲ, ಇದೊಂದು ಧಾರ್ಮಿಕ ಸೌಹಾರ್ದದ ಸಂಕೇತವಾಗಿದೆ. ಇಂತಹ ಆಚರಣೆಗಳು ಐತಿಹ್ಯವಾಗಿ ಹಾಗೂ ಮುಂದಿನ ಪೀಳಿಗೆಗೆ ಆದರ್ಶಮೂಲವಾಗಿ ಸಾಗುತ್ತಿರಬೇಕು.
-ಪವಿತ್ರಾ,
ಕೋಲಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.