ಕಣ್ಮನ ಸೆಳೆಯುವ ದ್ವೀಪವಾಸಿ ಕುದ್ರು ಮೂಕಾಂಬಿಕೆ
ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಕೊಲ್ಲೂರಿನ ನಂಟು!
Team Udayavani, Jul 21, 2020, 2:20 PM IST
ಪ್ರಕೃತಿ ಸೌಂದರ್ಯವನ್ನೇ ಹೊದ್ದುಕೊಂಡಿರುವ ಅನೇಕ ಇತಿಹಾಸ ಪ್ರಸಿದ್ಧ ಧಾರ್ಮಿಕ ಸ್ಥಳಗಳು ದೇವರ ನಾಡು ಎಂದೇ ಪ್ರಸಿದ್ಧಿಗೊಂಡಿರುವ ಕೇರಳದಲ್ಲಿವೆ. ಇವುಗಳಲ್ಲಿ ಕಾಞಿಂಗಾಡ್ ಜಿಲ್ಲೆಯ ಕುದ್ರು ಶ್ರೀ ಮೂಕಾಂಬಿಕೆ ಸನ್ನಿಧಿ ಒಂದು.
ಇತಿಹಾಸ ಪ್ರಸಿದ್ಧ ಹೊಸದುರ್ಗ ಕೋಟೆ, ಬೇಕಲ ಕೋಟೆಗಳ ಸಮಾನಾಂತರದಲ್ಲಿ ಉಳಿದುಕೊಂಡಿರುವ ಮತ್ತೂಂದು ಕೋಟೆಯೇ ಚಿತ್ತಾರಿ ಕೋಟೆ. ಪಕ್ಕದಲ್ಲಿ ಪ್ರಶಾಂತವಾಗಿ ಹರಿಯುತ್ತಿರುವ ಚಿತ್ತಾರಿ ಹೊಳೆ, ಹಚ್ಚ ಹಸುರಿನ ಬಯಲು ಸೀಮೆಗೆ ಸ್ವಾಗತ ಬಯಸುವಂತೆ ಓಲಾಡುವ ತೆಂಗಿನಗರಿಗಳ ಪರಿ, ಕಡಲ ಕಿನಾರೆಯ ಅಲೆಗಳ ಭೋರ್ಗರೆತ ಹಾಗೇ ಮುನ್ನೆಡೆದರೆ ನಿಮಗೆ ಮಂಗಳಕರ ಘಂಟಾನಾದ ಕೇಳಿಸುತ್ತದೆ. ಜಲಾವೃತ ದ್ವೀಪ ಪ್ರದೇಶದಲ್ಲಿ ಗುಡಿಗೋಪುರ ಕಾಣುತ್ತದೆ ಹೌದು, ಇದೇ ಕುದ್ರು ಶ್ರೀ ಮೂಕಾಂಬಿಕೆಯ ಸನ್ನಿಧಿ. ಈ ದೇವಿ ಭಕ್ತರ ನೋವು ಮರೆಸಿ ಹರಸುತ್ತಾಳೆ ಎಂಬ ನಂಬಿಕೆ ಆಸ್ತಿಕರಲ್ಲಿ ಹಾಸುಹೊಕ್ಕಾಗಿದೆ. ಶ್ರೀ ಕ್ಷೇತ್ರದ ಐತಿಹ್ಯ ಸುಮಾರು 15ನೇ ಶತಮಾನದಷ್ಟು ಹಳೆಯದು.
ಕ್ರಿ.ಶ 1499 ರಿಂದ 1763ರ ತನಕ ಕನ್ನಡ ಪ್ರದೇಶವನ್ನು ಆಳಿಕೊಂಡಿದ ಕೆಳದಿಯ ರಾಜರು ತಮ್ಮ ಸಾಮ್ರಾಜ್ಯವನ್ನು ಉತ್ತರದ ಗೋವಾದಿಂದ ದಕ್ಷಿಣದ ತ್ರಿಕಲ್ಪುರ ದವರೆಗೆ ವಿಸ್ತರಿಸಿದ್ದರು. ಇವುಗಳಲ್ಲಿ ಹೊಸದುರ್ಗ ಕೋಟೆ, ಬೇಕಲಕೋಟೆ, ಚಂದ್ರಗಿರಿ ಕೋಟೆ ಹಾಗೂ ಚಿತ್ತಾರಿ ಕೋಟೆ ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ಐತಿಹಾಸಿಕ ಹಿರಿಮೆಯಾಗಿವೆ. ಇಕ್ಕೇರಿ ಅರಸರ ಆರಾಧ್ಯಮೂರ್ತಿ ಶಿವನಾಗಿದ್ದರೂ ಕುಟುಂಬ ವ್ಯವಸ್ಥೆಯಿಂದಾಗಿ ಈ ಮನೆತನಗಳಲ್ಲಿ ಶಿವಶಕ್ತಿಯೆನಿಸಿದ ಶ್ರೀ ಮೂಕಾಂಬಿಕೆ, ಮಲ್ಲಿಕಾರ್ಜುನ, ಆಂಜನೇಯನನ್ನು ಕುಲದೇವರಾಗಿ ಆರಾಧಿಸಲಾಗುತ್ತಿತ್ತು. ಈ ಪುಣ್ಯಭೂಮಿಯಲ್ಲಿ ಶ್ರೀ ಮೂಕಾಂಬಿಕೆ ಮಾತೆ ನೆಲೆ ನಿಂತ ಬಗ್ಗೆ ಒಂದು ಪೌರಾಣಿಕ ಕತೆಯೇ ಇದೆ.
ದೇವಸ್ಥಾನದ ಮಾರ್ಗಮಧ್ಯದಲ್ಲಿ ಅಳಿವೆ ಬಾಗಿಲು ಎದುರಾದರೂ ಮೂಕಾಂಬಿಕೆಯ ದಿವ್ಯಶಕ್ತಿಯಿಂದಾಗಿ ಅದು ದೂರ ಸರಿದು ನಿಂತಿದೆ ಎಂಬ ನಂಬಿಕೆ. ಈ ಮೂಲಕ ಶ್ರೀ ಮೂಕಾಂಬಿಕಾ ದೇವಿ ಕುದ್ರು ಕುಟುಂಬದವರ ಕುಲದೇವತೆ ಎನಿಸಿದಳು. ಅದೇ ಕಾರಣಕ್ಕೆ ಈ ಭೂಮಿ ಕುದ್ರು ದೇಗುಲ ಎಂದು ಪ್ರಸಿದ್ಧಿ ಪಡೆಯುವಂತಾಯಿತು. ಮೂಕಾಂಬಿಕಾ ದೇವಿಯ ದೇವಸ್ಥಾನ ಕರ್ನಾಟಕದ ದೇವಾಲಯಗಳನ್ನು ಹೋಲುವುದು ಇನ್ನೊಂದು ವಿಶೇಷ.
ಕೊಲ್ಲೂರಿಗೂ ಕುದ್ರುವಿಗೂ ಇದೆ ಸಂಬಂಧ!
ಇಲ್ಲಿನ ಮತ್ತೂಂದು ಆಕರ್ಷಣೆಯೆಂದರೆ ನವರಾತ್ರಿ ಮಹೋತ್ಸವ. ಬೇರೆಡೆ ಒಂಬತ್ತು ದಿನಗಳ ಉತ್ಸವವಿದ್ದರೆ ಈ ದೇಗುಲದಲ್ಲಿ ಹನ್ನೊಂದು ದಿನಗಳ ನವರಾತ್ರಿ ಉತ್ಸವವಿದೆ. ಈ ಆಚರಣೆಗೂ ಒಂದು ಐತಿಹ್ಯವಿದೆ. ಕೊಲ್ಲೂರಿನಲ್ಲಿ ನವರಾತ್ರಿ ಉತ್ಸವ ಮುಕ್ತಾಯಗೊಂಡ ದಿನವೇ ಕುದ್ರುವಿನಲ್ಲಿ ಕೊನೆಯ ಪೂಜೆ ನಡೆಯುತ್ತದೆ. ಕೊಲ್ಲೂರಿನ ಮೂಕಾಂಬಿಕೆ ಬಳಿಕ ಕುದ್ರುವಿಗೆ ಆಗಮಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಶ್ರೀ ಮೂಕಾಂಬಿಕೆ ದೇಗುಲವು ಧರ್ಮಕ್ಷೇತ್ರವಾಗಿ ಧಾರ್ಮಿಕತೆಯನ್ನು ಉಳಿಸಿ ಬೆಳೆಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಈ ದೇಗುಲವು ಅದೆಷ್ಟೋ ವರ್ಷಗಳ ಬಳಿಕ ಜೀರ್ಣೋದ್ಧಾರ ಹೊಂದುವಂತಾಗಿ ಬ್ರಹ್ಮಕಲಶದ ಸಂಭ್ರಮವನ್ನು ಎದುರು ನೋಡುತ್ತಿದೆ. ಪುರಾತನ ದೇವಾಲಯಗಳಲ್ಲಿ ಒಂದು.
ದಾರಿ ಹೇಗೆ?
ಮಂಗಳೂರಿನಿಂದ ಕುದ್ರು ಮೂಕಾಂಬಿಕಾ ದೇವಾಲಯ ಸುಮಾರು 1.45 ಗಂಟೆ ದೂರ ಅಂದರೆ ಸುಮಾರು 73 ಕಿ.ಮೀ. ದೂರದಲ್ಲಿದೆ. ಕಾಸರಗೋಡು ಮುಖಾಂತರ ಕುದ್ರು ತಲುಪಲು ಸಾಕಷ್ಟು ಬಸ್‌ಗಳಿವೆ. ಕಾಸರಗೋಡಿನಿಂದ ಕುದ್ರು ಸುಮಾರು 21 ಕಿ.ಮೀ. ದೂರದಲ್ಲಿದೆ. ವಾಯುಮಾರ್ಗವಾಗಿ ಸಾಗುವವರಿಗೆ ಮಂಗಳೂರು ವಿಮಾನ ನಿಲ್ದಾಣವೇ ಹತ್ತಿರ. ಕಣ್ಣೂರು ವಿಮಾನ ನಿಲ್ದಾಣದಿಂದ ಕ್ಷೇತ್ರಕ್ಕೆ ಸುಮಾರು 2.15 ಗಂಟೆಯ ದಾರಿ. ಮಂಗಳೂರಿನಿಂದ ಕುದ್ರು ಮೂಕಾಂಬಿಕಾ ದೇವಾಲಯ ಸುಮಾರು 1.45 ಗಂಟೆ ದೂರ ಅಂದರೆ ಸುಮಾರು 73 ಕಿ.ಮೀ. ದೂರದಲ್ಲಿದೆ. ಕಾಸರಗೋಡು ಮುಖಾಂತರ ಕುದ್ರು ತಲುಪಲು ಸಾಕಷ್ಟು ಬಸ್‌ಗಳಿವೆ. ಕಾಸರಗೋಡಿನಿಂದ ಕುದ್ರು ಸುಮಾರು 21 ಕಿ.ಮೀ. ದೂರದಲ್ಲಿದೆ. ವಾಯುಮಾರ್ಗವಾಗಿ ಸಾಗುವವರಿಗೆ ಮಂಗಳೂರು ವಿಮಾನ ನಿಲ್ದಾಣವೇ ಹತ್ತಿರ. ಕಣ್ಣೂರು ವಿಮಾನ ನಿಲ್ದಾಣದಿಂದ ಕ್ಷೇತ್ರಕ್ಕೆ ಸುಮಾರು 2.15 ಗಂಟೆಯ ದಾರಿ.
ಸ್ಫೂರ್ತಿ ಕಮಲ್ ಪಿ. ಎಸ್. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.