UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ
Team Udayavani, Jan 11, 2025, 3:34 PM IST
ಬೆಂಗಳೂರಿನ ಬಿಡುವಿಲ್ಲದ ಜೀವನದ ನಡುವೆ ಮಿಂಚಿನ ವೇಗದಲ್ಲಿ ಬಂದು ಅಷ್ಟೇ ವೇಗದಲ್ಲಿ ಮಾಯವಾಗುವ ರವಿವಾರಕ್ಕಾಗಿ ಬಿಎಂಟಿಸಿ ಬಸ್ ಗಾಗಿ ಕಾಯುವ ಪ್ರಯಾಣಿಕರ ಹಾಗೆ ಕಾಯುತ್ತಿದ್ದೆ. ದಿನಕ್ಕೆ ಓಡಾಡುವ ಎಷ್ಟೋ ವಾಹನಗಳ ಭಾರ ಸಹಿಸುತ್ತಿದ್ದ ನೂರಾರು ರಸ್ತೆಗಳು ಅರ್ಥವಾಗದ ಕಥೆಗಳನ್ನು ಹೇಳುತ್ತಿದ್ದವು. ಈ ಜನ, ಅಂಗಡಿ, ಬಸ್, ರೈಲು ಎಲ್ಲದರಿಂದ ದೂರ ಓಡಿ ಯಾರೂ ಇಲ್ಲದ ಸ್ಥಳಕ್ಕೆ ಹೋಗಬೇಕು ಎಂದು ಮನಸ್ಸು ಒಂದೇ ಸಮನೆ ಹಠ ಹಿಡಿಯಿತು.
ಈ ಬೆಂಗಳೂರಿನ ಅಬ್ಬರದ ವಾತಾವರಣದಿಂದ ಪಾರಾಗಿ ಯಾರ ಓಡಾಟವೂ ಇಲ್ಲದೆ ತನ್ನ ಪಾಡಿಗೆ ತಾನು ಹಾಯಾಗಿ ಮಲಗಿದ್ದ ರಸ್ತೆಯ ಮೇಲೆ ತುಳಿದು ಗುರಿಯಿಲ್ಲದ ತಾಣಕ್ಕೆ ಹೊರಟೆ. ಆಗ ಸಿಕ್ಕಿದ್ದೇ, ಯಾವುದೋ ದಟ್ಟ ಮರಗಳಿಂದ ಆವೃತವಾದ, ಹೆಚ್ಚು ಕಡಿಮೆ ನಿರ್ಜನವಾದ ಪ್ರದೇಶ. ಅರಣ್ಯ ಪ್ರದೇಶಕ್ಕೆ ಸೇರಿದ್ದ ಆ ಜಾಗ, ವೃಕ್ಷೊàಧ್ಯಾನ ಎಂದು ತಿಳಿಯಿತು.
ಹೊಂಗೆ, ತೇಗ, ನಾಗ ಸಂಪಿಗೆ, ಆಲದ ಮರ ಸೇರಿಂದರೆ ಹಲವಾರು ವೃಕ್ಷಗಳಿಂದ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ಕಾಣುವ ಹಾವಿನ ದೊಡ್ಡ ದೊಡ್ಡ ಹುತ್ತಗಳು. ನಡುವೆ ಹತ್ತಿರದಲ್ಲಿಯೇ ಇವೆಯೇನೋ ಎಂಬಂತೆ ಎಲ್ಲೋ ದೂರದಿಂದ ಕೂಗುವ ನವಿಲುಗಳು. ಸಿಟಿಯಿಂದ ದೂರವಿದ್ದುಕೊಂಡು ತಪಸ್ಸಿನಲ್ಲಿ ಮುಳುಗಿದ ಮೌನಿ ಸ್ಥಳವನ್ನು ನೋಡಿ ಮನಸ್ಸು ಶಾಂತಿಯ ಧಾಮವಾಯಿತು. ಇಷ್ಟು ಸೌಮ್ಯವಾದ, ಗುಪ್ತವಾದ ಸ್ಥಳವು ಸರಕಾರದ ಅಭಿವೃದ್ಧಿ ಯೋಜನೆಗಳ ಕಣ್ಣಿಗೆ ಬೀಳದೇ, ಯಾವ ಜನರಿಗೂ ಗೋಚರಿಸದೇ, ಹಾಗೆಯೇ ಗುಟ್ಟಾಗಿರಲಿ ಎಂದು ದೇವರಲ್ಲಿ ಬೇಡಿಕೊಂಡೆ. ಶರತ್ ಕಾಲವಾದುದ್ದರಿಂದ ಎಲೆಗಳೆಲ್ಲ ಉದುರುತ್ತಿದವು. ಚಳಿಯಲ್ಲಿ ಏನಾದರೂ ತಿನ್ನಲು ಸಿಗಬಹುದೇ ಎಂದು ಅಕ್ಕ ಪಕ್ಕದಲ್ಲಿ ಹುಡುಕಾಡಿದಾಗ ಕಣ್ಣಿಗೆ ಕಂಡಿದ್ದು ಟೀ ಸ್ಟಾಲ್.
ಟೀ ಸ್ಟಾಲ್ ಸಮೀಪ ಹೋಗಿ ಅದರ ಹೆಸರು ಕಂಡು ಆಶ್ಚರ್ಯಗೊಂಡು ಅದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಕುತೂಹಲ ಮೂಡಿತು. ಇದೇನು ಸರ್ ಜಿಂದಾಲ್ ಟೀ ಸ್ಟಾಲ್ ಎಂದು ಹೆಸರಿಟ್ಟಿದೀರಿ.. ಏನು ಇದರ ವಿಶೇಷ?’ ಎಂದು ಕುತೂಹಲ ತಡೆಯಲಾರದೆ ಕೇಳಿಯೇ ಬಿಟ್ಟೆ. ಅವನು ಉತ್ತರ ಹೇಳಲು ತೀರಾ ಉತ್ಸುಕನಾದಂತೆ ತೋರಿದರೂ, ಮೊದಲು ನೀವೆಲ್ಲಾ ನಮ್ಮವರೇ ತಾನೇ?!” ಎಂದು ಕೇಳಿದ. ಆತ ಯಾವ ಯೋಚನೆಯ ಮೂಲವಿಟ್ಟುಕೊಂಡು ಹೀಗೆ ಕೇಳª ಅನ್ನೋದು ನನಗೆ ತಿಳಿಯಲ್ಲಿಲ್ಲ. ಭಾಷೆಯ ಮೇಲೋ, ಜಾತಿಯ ಮೇಲೋ, ದೇಶದ ಮೇಲೋ, ಪಕ್ಷದ ಮೇಲೋ ಯಾವ ಆಧಾರದ ಮೇಲೆ ನಮ್ಮನ್ನು ತಮ್ಮವರು ಎಂದುಕೊಳ್ಳುತ್ತಾನೆ ಎಂದು ತಿಳಿಯಲಿಲ್ಲ. ಸುಮ್ಮನೆ ಹೂ ಎಂದೇ.
ಹಾಗಾದ್ರೆ ಕೇಳಿ, ಅದೊಂದು ಕಥೆ…ಎನ್ನುತ್ತಾ ಹೇಳತೊಡಗಿದ.
ನೋಡಿ, ಆಗ ನಮ್ಮ ತಾತ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಇದ್ದಿದ್ದು ಕಾಶ್ಮೀರದಲ್ಲಿ. ಸೈನಿಕನಾಗಿದ್ದ ಅವನು ಪಾಕಿಸ್ತಾನದ ವಿರುದ್ಧ ಹೋರಾಡಿ ಬಂದವನು. ನಾನು ಚಿಕ್ಕವನಿದ್ದಾಗ ಆತ ಮನೆಗೆ ಬಂದಾಗ ಅವನ ಬಾಯಿಂದ ಅನೇಕ ಕಥೆಗಳನ್ನು ಕೇಳುತ್ತಿದ್ದೆ. ಮಿಲಿಟರಿನಲ್ಲಿ ಅವರ ಗುಂಪಿನಲ್ಲಿ ಸೈನಿಕರೇನಾದರೂ ನಿರುತ್ಸಾಹಿಗಳಾದರೆ, ಅವರಿಗೆ ಹೊಸ ಹುರುಪು ತುಂಬಲು ಜೈ ಹಿಂದ್, ಜೈ ಹಿಂದ್ ಎಂಬ ಘೋಷವಾಕ್ಯ ಕೂಗುತ್ತಿದ್ದರಂತೆ. ನಾನೂ ಅಷ್ಟೇ, ಯಾರಾದರೂ ಸೈನಿಕರನ್ನು ನೋಡಿದರೆ ಜೈ ಹಿಂದ್ ಎಂದು ಹೇಳುತ್ತಿದ್ದೆ.
ಇದಿಷ್ಟೇ ಅಲ್ಲದೆ, ಜಿಂದಾ ಎಂದರೆ ಹಿಂದಿನಲ್ಲಿ ಜೀವಿಸುವುದು. ಮನುಷ್ಯ ಬರೀ ಬದುಕುವುದನ್ನಷ್ಟೇ ಅಲ್ಲ, ಪ್ರತೀ ಕ್ಷಣವನ್ನೂ ಜೀವಿಸುವುದನ್ನು ಕಲೀಬೇಕು. ಅದಿಕ್ಕೆ ನನಗೆ ಜಿಂದಾ ಎನ್ನುವ ಪದ ಇಷ್ಟ. ಲಾಸ್ಟ್ ನಲ್ಲಿ ಲ ಎನ್ನುವ ಅಕ್ಷರ ಸುಮ್ಮನೆ ಹೆಸರಿಗೆ ಇಟ್ಟಿದ್ದು. ಎಲ್ಲ ಸೇರಿ ಜಿಂದಾಲ್. ಎಲ್ಲಾರೂ ಇದನ್ನು ಜಿಂದಾಲ್ ಕಂಪೆನಿ ಎಂತಲೋ, ಅಥವಾ ವ್ಯಾಪಾರಿಯ ಹೆಸರೋ ಎಂದುಕೊಳ್ಳುತ್ತಾರೆ, ಆದರೆ ಅದಲ್ಲ. ನಿಜವಾದ ಅರ್ಥ ಇದು ಎಂದು ಹೇಳಿದ. ಅವನ ಮಾತನ್ನೇ ಉಳಿದ ಗಿರಾಕಿಗಳು ಕುತೂಹಲದಿಂದ ಕೇಳುತ್ತಿದ್ದರು.
ಅಷ್ಟರಲ್ಲಿ ಬಿಸಿ ಬಿಸಿ ಚಹಾ ಕೂಡ ಬಂತು. ನಾನು ಚಹಾ ಕುಡಿದು, ಹಣ ಕೊಡಲು ಹೋದೆ. ಅವನು ಬೇಡ ಬಿಡಿ, ಮುಂದಿನ ಬಾರಿ ಬಂದಾಗ ಕೊಡಿ ಎಂದು ಹೇಳಿದ. ನನಗೆ ಏನು ಹೇಳಬೇಕು ತಿಳಿಯಲಿಲ್ಲ. “ಜೈ ಹಿಂದ್’ಎಂದು ಹೆಮ್ಮೆಯ ಸ್ವರದಲ್ಲಿ ಹೇಳಿದೆ. ಆ ಸಂಜೆಯ ನಸುಗತ್ತಲಲ್ಲಿ ಅವನ ಕಣ್ಣುಗಳಲ್ಲಿ ಮಿಂಚು ಹೊಳೆದಿದ್ದು ಕಾಣಿಸಿತು.
-ವೇದಾ ವಾತ್ಸಲ್ಯ
ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.