ಪ್ಲಾಸ್ಟಿಕ್ ಮುಕ್ತ ಪರಿಸರ ಆಚರಣೆಯಾಗಲಿ
Team Udayavani, Jun 5, 2020, 3:00 PM IST
ಸಾಂದರ್ಭಿಕ ಚಿತ್ರ
ಈಗಾಗಲೇ ಮಳೆಗಾಲ ಆರಂಭವಾಗಿದೆ. ಬರದಿಂದ ಒಣಗಿ ಬಿರುಕು ಬಿಟ್ಟಿದ್ದ ಇಳೆಗೆ ಜೀವಜಲ ಸಿಕ್ಕಂತಾಗಿದೆ. ಒಣಗಿ ವಿವರ್ಣವಾಗಿದ್ದ ಮರಗಳಲ್ಲಿ ಹಸುರು ನಳನಳಿಸುತ್ತಿದೆ. ಅಸಹನೀಯ ಎಂಬಂಥ ಒಣ ಹವೆಯ ಜಾಗವನ್ನೀಗ ತಂಗಾಳಿ ವ್ಯಾಪಿಸಿದೆ. ಬತ್ತಿದ ಕರೆ-ಹಳ್ಳಗಳಲ್ಲಿ ಒರತೆ ಒಸರುತ್ತಿದೆ. ಧೂಳೆಬ್ಬಿಸುತ್ತಿದ್ದ ಮಣ್ಣು ಮಳೆಯ ಸಿಂಚನಕ್ಕೆ ಹಿತವಾದ ಪರಿಮಳವನ್ನು ಬೀರಿ ಆಹ್ಲಾದ ನೀಡುತ್ತಿದೆ. ಇಷ್ಟು ದಿನ ಪ್ರಖರ ಕಿರಣಗಳಿಂದ ಪ್ರಜ್ವಲಿಸುತ್ತಿದ್ದ ಸೂರ್ಯ, ಕರಿಮೋಡದ ಮರೆಯಲ್ಲಿ ಕುಳಿತು ಶಾಂತವಾಗಿದ್ದಾನೆ. ಹೀಗೆ ನಿಸರ್ಗ ರಮಣೀಯತೆಯ ಅಂಗಿತೊಟ್ಟು ಸಂಭ್ರಮಿಸುತ್ತಿರುವಾಗಲೇ ವಿಶ್ವ ಪರಿಸರ ದಿನ ಅಡಿಯಿಟ್ಟಿದೆ.
ಜಗತ್ತಿನಾದ್ಯಂತ ಜೂ. 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕದಲ್ಲೆ ಪ್ರತಿ ವರ್ಷ ಈ ಪರಿಸರ ದಿನವನ್ನು ಜಗತ್ತು ಬರಮಾಡಿಕೊಳ್ಳುತ್ತಿದೆ ಎಂಬುದು ಅಚ್ಚರಿಯಾದರೂ ವಾಸ್ತವ. ದಿನೇದಿನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಓಜೋನ್ ಪದರದಲ್ಲಿ ಹಿಗ್ಗುತ್ತಿರುವ ರಂಧ್ರಗಳು, ಪ್ಲಾಸ್ಟಿಕ್‌ನ ಅವ್ಯಾಹತ ಬಳಕೆ ಮತ್ತು ಅವುಗಳ ಅವೈಜ್ಞಾನಿಕ ವಿಲೇವಾರಿಯಿಂದ ಪರಿಸರ ಸ್ವಚ್ಛತೆ ಬಗೆಗೆ ಬಹುಪಾಲು ಜನರ ದಿವ್ಯ ನಿರ್ಲಕ್ಷ್ಯ.. ಹೀಗೆ ಎಲ್ಲವೂ ಸೇರಿ ಮುಂದಿನ ಪೀಳಿಗೆಗೆ ಸ್ವಚ್ಛ ಗಾಳಿಗೂ ಹಾಹಾಕಾರ ಏಳಬಹುದಾದ ಆತಂಕ ಎದುರಾಗಿದೆ.
ಶುದ್ಧ ನೀರಿನ ಅಭಾವವನ್ನು ಬಹುತೇಕ ಎಲ್ಲ ದೇಶಗಳೂ ಎದುರಿಸುತ್ತಿವೆ. ಪ್ರತಿ ವ್ಯಕ್ತಿಯೂ ತನ್ನ ಉಳಿವಿಗಾಗಿ, ತನ್ನ ಮುಂದಿನ ಪೀಳಿಗೆ ಉಳಿವಿಗೆ ಪರಿಸರ ರಕ್ಷಣೆಯನ್ನು ಆದ್ಯ ಕರ್ತವ್ಯ ಎಂದುಕೊಳ್ಳಬೇಕಿದೆ.
ಜಾಗತಿಕ ತಾಪಮಾನದ ಏರಿಕೆ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ ಕೈಗಾರಿಕೆ, ನಗರಾಭಿವೃದ್ಧಿಯ ಭರಾಟೆ, ಅರಣ್ಯ ನಾಶ, ಸಾಗರ ಮಾಲಿನ್ಯ ಮೊದಲಾದ ಕಾರಣಗಳಿಂದ ದಿನೇದಿನೆ ಪರಿಸರ ನಾಶವಾಗುತ್ತಿದೆ. ಪರಿಸರವನ್ನು ಇಂಥ ಸಮಸ್ಯೆಗಳಿಂದ ರಕ್ಷಿಸುವ ಸಲುವಾಗಿ ಮತ್ತು ಪರಿಸರ ನಾಶದಿಂದಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.
ಪರಿಸರವನ್ನು ಸ್ವಚ್ಛವಾಗಿರಿಸುವುದು, ಹಸುರಿನ ಸಂರಕ್ಷಣೆ, ಪರಿಸರ ಸ್ನೇಹಿ ಜೀವನ ಕ್ರಮ, ಪ್ಲಾಸ್ಟಿಕ್ ಬಳಸದಿರುವುದು, ರಾಸಾಯನಿಕಗಳು ಮತ್ತು ವಿದ್ಯುತ್‌ನ ಮಿತಬಳಕೆಯಿಂದ ಪರಿಸರ ರಕ್ಷಿಸಬಹುದು. ಪ್ರತಿವರ್ಷ ಪ್ರಪಂಚದಲ್ಲಿ 500 ಬಿಲಿಯನ್ ಪ್ಲಾಸ್ಟಿಕ್ ಬ್ಯಾಗನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ಈ ವರ್ಷ ಆಚರಣೆಯಾಗಬೇಕಿದೆ. ಪರಿಸರ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಪ್ರತಿಯೊಬ್ಬರೂ ಪರಿಸರದೊಂದಿಗೆ ಬೆಸೆಯುವುದು ಜನರು ಮತ್ತು ಭೂಮಿಯ ಹಿತದೃಷ್ಟಿಯಿಂದಲೂ ಆಗತ್ಯ ಸಂಗತಿ. ಪರಿಸರದ ಬಗ್ಗೆ ಕಾಳಜಿ ತೋರಿಸುವುದು ಹಂಗಿನ ಕೆಲಸವಲ್ಲ, ಅದು ಜೀವನದ ಭಾಗವಾಗಲಿ.
-ಶ್ರೀನಾಥ ಮರಕುಂಬಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.