ವಿಶ್ವ ಪ್ರವಾಸೋದ್ಯಮ ದಿನ: ನಿಮ್ಮ ಚಳಿಗಾಲದ ಪ್ರವಾಸದಲ್ಲಿ ಈ ಸ್ಥಳಗಳು ನಿಮ್ಮ ಪಟ್ಟಿಯಲ್ಲಿರಲಿ
Team Udayavani, Sep 27, 2020, 5:20 PM IST
ಚಳಿಗಾಲದ ಪ್ರವಾಸಕ್ಕೆ ಹೋಗುವವರು ನೋಡಲೇ ಬೇಕಾದ ಸ್ಥಳಗಳಿವು. ಯಾವುದು ಆ ರಮನೀಯ ಸ್ಥಳಗಳು ಇಲ್ಲಿವೆ ಮಾಹಿತಿ.
ಆಕರ್ಷಕ ಸಂಗತಿಗಳ ಸೂರು ಈ ಕೂರ್ಮಗಡ ಊರು: ಬಂಡೆಗಳಿಗೆ ಮುತ್ತಿಕ್ಕಿ ಮತ್ತೆ ಸೋಲನ್ನೊಪ್ಪಿಕೊಂಡು ಹಿಂದಕ್ಕೆ ಹೋಗುವ ಅಲೆಗಳು, ದೂರದಲ್ಲಿ ಕಾಣುವ ದೋಣಿಗಳು, ಕಡಲನ್ನೇ ಮನೆಯನ್ನಾಗಿಸಿಕೊಂಡ ಮೀನುಗಾರರು, ನೀರಿನಿಂದ ಜಿಗಿದು ನೀರೊಳಗೆ ಮರೆಯಾಗುವ ಡಾಲ್ಫಿನ್‌ಗಳು. ಇದು ಕಾರವಾರದ ಕೂರ್ಮಗಡ ದ್ವೀಪದ ಸೊಬಗು.
ಕೂರ್ಮ ಎಂದರೆ ಆಮೆ, ಗಡ ಎಂದರೆ ಗುಡ್ಡ. ಗುಡ್ಡ ಆಮೆಯ ಆಕಾರದಲ್ಲಿ ಇರುವುದರಿಂದ ಈ ದ್ವೀಪ ಪ್ರದೇಶಕ್ಕೆ ಕೂರ್ಮಗಡ ಎನ್ನುವ ಹೆಸರು ಬಂದಿದೆ. ಕೇವಲ ಹೆಸರಿಗಷ್ಟೇ ವಿಶೇಷವಾಗಿ ಉಳಿಯದ ಈ ಕೂರ್ಮಗಡ ಆಕರ್ಷಕ ಸಂಗತಿಗಳಿಗೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಈ ಕೂರ್ಮಗಡ ದ್ವೀಪವನ್ನು ನರಸಿಂಹಗಡವೆಂದೂ ಕರೆಯುತ್ತಾರೆ. ಹಸುರು ವನಗಳ ನಡುವೆ, ಕಲ್ಲು- ಬಂಡೆಗಳೇ ಇರುವ ಕೂರ್ಮಗಡದಲ್ಲಿ ಸಣ್ಣ ನರಸಿಂಹ ದೇವಾಲಯವಿದೆ. ಈ ದ್ವೀಪ ನೂರು ಎಕ್ರೆ ಪ್ರದೇಶಕ್ಕಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿದ್ದು, ಸಾವಿರಾರು ಮೀಟರ್ ಎತ್ತರದಲ್ಲಿದೆ. ದ್ವೀಪವನ್ನು ಹತ್ತಲು ಕಾಲುದಾರಿಯಿದೆ. ಕಲ್ಲು ಬಂಡೆಗಳ ಮಧ್ಯದಲ್ಲಿಯೇ ಈ ದಾರಿಯನ್ನು ನಿರ್ಮಿಸಲಾಗಿದ್ದು, ಸಾವಿರಾರು ಜನರು ಇಲ್ಲಿಗೆ ಪ್ರತಿವರ್ಷ ಭೇಟಿ ನೀಡುತ್ತಾರೆ. ದೋಣಿ ಮೂಲಕವೇ ಸಂಚಾರ ಮಾಡಬೇಕಾಗಿರುವುದರಿಂದ ಒಂದು ಹೊಸ ಅನುಭವನ್ನುಂಟು ಮಾಡುವ ಈ ಕೂರ್ಮಗಡ ದೇವಬಾಗ ಕಡಲತೀರದಿಂದ 5 ಕಿ.ಮೀ. ದೂರ ಹಾಗೂ ಕಾರವಾರ ಬಂದರು ಪ್ರದೇಶದಿಂದ 6 ಕಿ.ಮೀ. ದೂರದಲ್ಲಿದೆ.
ಹೋಗೋದು ಹೇಗೆ?
ಕಾರವಾರದ ಬಂದರಿನಿಂದ 6 ಕಿ.ಮೀ., ಕೋಡಿಭಾಗದಿಂದ 2 ಕಿ.ಮೀ. ದೂರದಲ್ಲಿದೆ. ದೇವಭಾಗದಿಂದ ಒಂದು ಕಿಮೀ. ಹಾಗೂ ಕಾರವಾರದ ಅರಬ್ಬೀ ಸಮುದ್ರದಿಂದ 4 ಕಿ.ಮೀ. ದೂರದಲ್ಲಿದೆ. ಪಣಜಿ 100 ಕಿ.ಮೀ., ಬೆಂಗಳೂರು 525 ಕಿ.ಮೀ., ದಾಂಡೇಲಿ 117 ಕಿ.ಮೀ., ಮಂಗಳೂರು 268 ಕಿ.ಮೀ., ಹುಬ್ಬಳಿ 160 ಕಿ.ಮೀ., ಬೆಳಗಾವಿ 167 ಕಿ.ಮೀ. ಕೂರ್ಮಗಡಕ್ಕೆ ಹೋಗಲು ದೋಣಿಯನ್ನೆ ಅವಲಂಬಿಸಬೇಕು.
ವಸತಿ ವ್ಯವಸ್ಥೆ
ಕೂರ್ಮಗಡ ದ್ವೀಪದಿಂದ 5-6 ಕಿಮೀ ದೂರದಲ್ಲಿ ಹೋಟೆಲ್‌ಗಳು, ರೆಸಾರ್ಟ್, ಅತಿಥಿ ಗೃಹಗಳ ಸೌಲಭ್ಯವಿದೆ. ಇನ್ನು ಇಲ್ಲಿನ ಆಸುಪಾಸಿನ ಪ್ರವಾಸೀ ತಾಣಗಳನ್ನು ನೋಡುವುದಾದರೆ. ಕಾರವಾರ ಬೀಚ್, ದೇವಬಾಗ್ ಬೀಚ್, ದುರ್ಗಾದೇವಿ ದೇವಸ್ಥಾನ, ನಾಗನಾಥ್ ದೇವಸ್ಥಾನ, ಗುಡ್ಡ ಹಳ್ಳಿ ತುಡಿ, ಶಿರ್ವೆ ಘಾಟ್, ಕಾಳಿ ಬ್ರಿಡ್ಜ್ ಹಾಗೂ ಇನ್ನೂ ಹಲವಾರು ಪ್ರವಾಸಿ ತಾಣಗಳಿವೆ.
‘ಕ್ವೀನ್ ಆಫ್ ಹಿಲ್ಸ್’ ಬಿರುದಿನ ಕೆಮ್ಮಣ್ಣುಗುಂಡಿ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ಯುತ್ತಮ ನಿಸರ್ಗಧಾಮವೇ ಕೆಮ್ಮಣ್ಣುಗುಂಡಿ. ಈ ಗುಡ್ಡವು ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲನ್ನು ಸುತ್ತುವರಿದಿದೆ. ಕೆಮ್ಮಣ್ಣುಗುಂಡಿಯು ಸುಂದರ ಬೆಟ್ಟಗುಡ್ಡಗಳು, ದಟ್ಟ ಅರಣ್ಯ, ವಿಶಾಲವಾದ ಹಸುರಿನ ಹುಲ್ಲುಹಾಸಲು, ರಮಣೀಯ ನಿಸರ್ಗ ನಿರ್ಮಿತ ಜಲಪಾತಗಳು ಪ್ರವಾಸಿಗರ ಮನ ಸೆಳೆಯುತ್ತವೆ. ಅಲ್ಲಿನ ತಣ್ಣನೆಯ ಗಾಳಿ, ಹಸಿರು, ಪ್ರಶಾಂತ ವಾತಾವರಣ ನಮ್ಮನ್ನೂ ಕೂಡ ಮೌನಿಯಾಗಿಸಿ ಆ ಮೌನವನ್ನು ಅನುಭವಿಸುವಂತೆ ಮಾಡುತ್ತದೆ.
ದಟ್ಟ ಕಾನನದ ಈ ಪ್ರದೇಶದಲ್ಲಿ ತಂಪಾದ ವಾತಾವರಣ ನಿರೀಕ್ಷಿತ. ಇಲ್ಲಿನ ಸಮೃದ್ಧ ವಾತಾವರಣ ಕಂಡು ಆಗಿನ ಮೈಸೂರು ರಾಜರು ಸಮ್ಮರ್ ಪ್ಯಾಲೇಸ್ ಕಟ್ಟಿಸಿದರು. ಸುತ್ತಲೂ ಲ್ಯಾಂಡ್ ಸ್ಕೇಪ್, ಗಾರ್ಡನ್, ರಸ್ತೆ ಅಭಿವೃದ್ಧಿ ಮತ್ತು ವಸತಿ ವ್ಯವಸ್ಥೆ ಮಾಡಿದರು. ಹಾಗಾಗಿ ಇದಕ್ಕೆ “ಕೃಷ್ಣರಾಜ ಹಿಲ್ಸ್’ ಎಂದು ಕರೆಯುತ್ತಾರೆ. ಪ್ರಸ್ತುತ ತೋಟಗಾರಿಕಾ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕೆಮ್ಮಣ್ಣು ಗುಂಡಿಯನ್ನು “ಕ್ವೀನ್ ಆಫ್ ಹಿಲ್ಸ್’ ಎಂದೂ ಕರೆಯಲಾಗುತ್ತದೆ.
ದಟ್ಟ ಅರಣ್ಯ ಪ್ರದೇಶ, ಬಣ್ಣ ಬಣ್ಣದ ಹೂಗಳ ಉದ್ಯಾನ, ಗುಹೆಗಳು, ಭೂಮಿಗೆ ತಾಕುತ್ತಿವೆಯೇನೋ ಎಂಬಂತೆ ಕಾಣುವ ಮೋಡಗಳು ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಮತ್ತಷ್ಟು ಸಮೃದ್ಧತೆಯನ್ನು ತಂದುಕೊಟ್ಟಿವೆ. ಪಶ್ಚಿಮ ಘಟ್ಟದ ಪರ್ವತ ಸಾಲುಗಳು ಈ ಸ್ಥಳವನ್ನು ಇನ್ನಷ್ಟು ಆಕರ್ಷಣೀಯವಾಗಿಸಿವೆ.
ಸಮುದ್ರ ಮಟ್ಟದಿಂದ 1,434 ಮೀಟರ್ ಎತ್ತರ. ವಾರ್ಷಿಕ 254 ಸೆಂ.ಮೀ. ಮಳೆ ಬೀಳುವ ಈ ತಾಣವನ್ನು ಪುರಾಣದಲ್ಲಿ ಚಂದ್ರದ್ರೋಣ ಪರ್ವತ ಎಂದು ಕರೆಯಲಾಗಿದೆ. ಹಲವು ಮೂಲಿಕೆಗಳು ಇಲ್ಲಿ ದೊರೆಯುತ್ತವೆ. ಕೆಮ್ಮಣ್ಣುಗುಂಡಿಗೆ ಭೇಟಿ ಕೊಟ್ಟರೆ ಅದರ ಆಸುಪಾಸಿನಲ್ಲಿರುವ ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ, ಕಲ್ಲಹಟ್ಟಿ ಜಲಪಾತವನ್ನೂ ನೋಡಬಹುದು. ಈ ಸ್ಥಳಗಳೂ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಇಲ್ಲಿಗೆ ಸಣ್ಣ ಪಿಕ್ನಿಕ್ ಕೈಗೊಳ್ಳಬಹುದು ಅಥವಾ ಟ್ರೆಕ್ಕಿಂಗ್ ಹೋಗಬಹುದು.
ತಲುಪುವುದು ಹೇಗೆ?
ಬೆಂಗಳೂರಿನಿಂದ ಬರುವವರು ಭದ್ರಾವತಿ ಮಾರ್ಗವಾಗಿ ತರೀಕೆರೆಗೆ ಹೋಗಬೇಕು. ಚಿಕ್ಕಮಗಳೂರಿನಿಂದ ಬೀರೂರು ಮತ್ತು ತರೀಕೆರೆಗೆ ನೇರ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಪ್ರವಾಸ ಕೈಗೊಳ್ಳುವಿರಾದರೆ ಬೀರೂರು ಮಾರ್ಗವಾಗಿ ಲಿಂಗದಹಳ್ಳಿಗೆ ತಲುಪಿ, ಅಲ್ಲಿಂದ 19 ಕಿ.ಮೀ. ಪ್ರಯಾಣ ಬೆಳೆಸಿದರೆ ಕೆಮ್ಮಣ್ಣುಗುಂಡಿ ತಲುಪಬಹುದು.
ಪಶ್ಚಿಮಘಟ್ಟಗಳ ಸಾಲಿನ ಮುಕುಟ ಕೊಡಚಾದ್ರಿ
ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ಸಂಹರಿಸಿದ ಸ್ಥಳ, ಆದಿ ಶಂಕರಾಚಾರ್ಯರು ಧ್ಯಾನಸ್ಥರಾದ ಬೆಟ್ಟ, ಭೂಲೋಕದ ಸ್ವರ್ಗ, ಮಲೆನಾಡಿನ ಹೊನ್ನ ಶಿಖರ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಅಪರೂಪದ ಸ್ಥಳ ಇದು. ವಿರಳ ಪ್ರಾಣಿ – ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಸಹಜ ಸುಂದರವಾದ ಕೊಡಚಾದ್ರಿ ಪರ್ವತಕ್ಕೆ ಕೊಡಚಾದ್ರಿಯೇ ಸಾಟಿ. ಭೂಲೋಕದ ಅಪ್ಸರೆ ಕೊಡಚಾದ್ರಿಯ ಸೌಂದರ್ಯ ಮಳೆಗಾಲದಲ್ಲಿ ಮತ್ತಷ್ಟು ಇಮ್ಮಡಿಯಾಗಿದೆ. ಬೆಟ್ಟವಿಡೀ ಹಬ್ಬಿರುವ ಹಚ್ಚ – ಹಸುರಿನ ಮರ – ಗಿಡಗಳ ಮಧ್ಯೆ ಚಾರಣ ಮಾಡುವುದೇ ಮನಸ್ಸು -ಕಣ್ಣಿಗೆ ಹಬ್ಬ.
ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಕೊಡಚಾದ್ರಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1,343 ಮೀ. ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಪರ್ವತವು ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣ, ಹಸುರು – ಹಸುರಾದ ಪ್ರಕೃತಿ, ಬೆಟ್ಟ, ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಸಣ್ಣ – ಸಣ್ಣ ಜಲಪಾತಗಳಿಂದ ಸೊಬಗು ಮತ್ತಷ್ಟು ಹೆಚ್ಚಿದಂತೆ ಭಾಸವಾಗುತ್ತದೆ.
ಕೆಲಸದ ಒತ್ತಡ, ಮನಸ್ಸಿನ ಜಂಜಾಟ, ದೇಹಯಾಸ ಎಲ್ಲವನ್ನೂ ಮರೆಸುವ ಪ್ರಕೃತಿ ಸೌಂದರ್ಯ ಇಲ್ಲಿದೆ. ಚಾರಣಕ್ಕಿದು ಉತ್ತಮವಾದ ಸ್ಥಳ. ಇದು ಕ್ಲಿಷ್ಟಕರ ಬೆಟ್ಟವಾಗಿದ್ದರೂ, ಇಲ್ಲಿನ ಹಚ್ಚ – ಹಸುರಿನ ಮರ – ಗಿಡಗಳು, ಗಿರಿ- ಶಿಖರಗಳು ಚಳಿಗಾಲದಲ್ಲಂತೂ ತುಂಬಾನೇ ಚೆಂದವಾಗಿ ಕಾಣುತ್ತವೆ. ಸ್ನೇಹಿತರು ಅದರಲ್ಲೂ ಒಂದೇ ಮನಸ್ಥಿತಿಯವರು ಚಾರಣ ಮಾಡಿದರೆ, ತುಂಬಾ ಆನಂದಿಸಬಹುದು.
ಇಲ್ಲಿ ಏನೇನಿದೆ?
- ಶಂಕರಾಚಾರ್ಯರ ಕಲ್ಲಿನ ಮಂಟಪ
- ಸರ್ವಜ್ಞ ಪೀಠವಿದೆ
- ಗಣೇಶನ ಗುಹಾಲಯ
- ಹಿಡ್ಲುಮನೆ ಜಲಪಾತವಿದೆ
- ಮೂಕಾಂಬಿಕಾ ದೇವಿಯ ಮಂದಿರ
- ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ
ಹೋಗುವುದು ಹೇಗೆ?
ಕೊಲ್ಲೂರಿನಿಂದ ಜೀಪ್‌ಗ್ಳು ಬಾಡಿಗೆ ಮಾಡುತ್ತಿದ್ದು, ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದ ವರೆಗೆ ಹೋಗುತ್ತವೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ರಸ್ತೆಯ ಮೂಲಕ ಸಂಚರಿಸಬೇಕು. ಕಾರು, ಬೈಕ್ ಇತ್ಯಾದಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಚಾರಣ ಮಾಡುವುದಾದರೆ ಹೋಗಿ ಬರಲು ಸುಮಾರು 18 ಕಿ.ಮೀ. ಅಂತರವಿದೆ.
ಚಾರಣಿಗರು ಅಲ್ಲೇ ಉಳಿದುಕೊಳ್ಳುವುದಾದರೆ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರಗಳಲ್ಲಿ ಮುಂಗಡ ಅನುಮತಿ ಪಡೆಯಬೇಕು. ಜೀಪ್‌ಗ್ಳು ರಾತ್ರಿ ಹೊತ್ತು ಅಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿಯಿಲ್ಲ. ಆದರೆ ಜೀಪ್‌ನಲ್ಲಿ ಹೋದವರು ಅಲ್ಲಿ ಉಳಿದುಕೊಂಡು, ಮರುದಿನ ಬರಬಹುದು. ಹೋಗಿ ಬರುವುದಾದರೆ ಬೆಳಗ್ಗೆ 6ರಿಂದ ಸಂಜೆ 6.30ರವರೆಗೆ ಮಾತ್ರ ಅನುಮತಿಯಿದೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಊಟದ ವ್ಯವಸ್ಥೆಯೂ ಇದೆ.
ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ
ಎತ್ತ ನೋಡಿದರೂ ಹಾಲ್ನೊರೆಯಂತೆ ಮುತ್ತಿಡುವ ಮಂಜಿನ ಮುಸುಕು ಜತೆಗೆ ಬೀಸುವ ತಣ್ಣನೆಯ ಗಾಳಿ ವಾಹ್, ಇನ್ನೇನು ಎರಡು ಹೆಜ್ಜೆ ಮುಂದಿಟ್ಟರೆ ಆಗಸವೇ ಕೈಯಿಂದ ಮುಟ್ಟುತ್ತೇವೇನೋ ಎಂತಹ ಅನುಭವ, ಹೌದು ನಾನೀಗ ಹೇಳಲು ಹೊರಟಿರುವುದು ಕಾಫಿ ನಾಡು ಎಂದು ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಬೆಟ್ಟದ ಬಗ್ಗೆ.
ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 6,330 ಅಡಿಗಳಷ್ಟು ಎತ್ತರದಲ್ಲಿದೆ ಆದುದರಿಂದ ಚಾರಣಿಗರಿಗೆ ಹೇಳಿಮಾಡಿಸಿದ ಸ್ಥಳವಾಗಿದೆ . ಬೆಟ್ಟದ ಬುಡದಲ್ಲಿನಿಂತು ಮೇಲೆ ನೋಡಿದರೆ ಮೋಡಗಳು ಗಿರಿಶಿಖರವನ್ನು ಆವರಿಸಿಕೊಂಡಂತೆ ಅನುಭವವಾಗುತ್ತದೆ. ಒಂದೊಮ್ಮೆ ಬೆಟ್ಟದ ತುದಿ ಕಂಡರೆ ತಕ್ಷಣ ಮಾಯವಾಗುತ್ತದೆ.
ಪ್ರವಾಸಿಗರ ಸ್ವರ್ಗ ಎಂದೇ ಪ್ರತೀತಿ ಪಡೆದಿರುವ ಚಿಕ್ಕಮಗಳೂರು ಆಕರ್ಷಣೀಯ ಪ್ರೇಕ್ಷಣೀಯ ಸ್ಥಳಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಮಂಜಿನ ಹನಿಗಳ ನಡುವಿನ ಚಿತ್ತಾರ, ಚುಮುಚುಮು ಚಳಿಯಲ್ಲಿ ಮಳೆಯ ಸಿಂಚನ ಹಾಗೂ ರಮಣೀಯವಾದ ಸೌಂದರ್ಯ ಇವೆಲ್ಲವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು, ಮಳೆ ಹಾಗೂ ಚಳಿಗಾಲದಲ್ಲಿ ಇಲ್ಲಿನ ಜನಜಾತ್ರೆಯಿಂದ ತುಂಬಿರುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಶಾಂತವಾಗುವುದರಲ್ಲಿ ಎರಡು ಮಾತಿಲ್ಲ.
ಮಳೆ ಹಾಗೂ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಿಗುವ ಅನುಭವವೇ ಬೇರೆ ಹಾಗಾಗಿ ಸಾಕಷ್ಟು ಪ್ರವಾಸಿಗರು, ಚಾರಣಿಗರು ಹೆಚ್ಚು ಈ ಸಮಯದಲ್ಲಿಯೇ ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನೂ ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು , ಅನಂತರದ 300ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕು. ಇದರಲ್ಲಿ ಸಿಗುವ ರೋಚಕ ಅನುಭವ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಬಲವಾಗಿ ಬೀಸುವ ಗಾಳಿ ಅವುಗಳನ್ನು ಸೀಳಿಕೊಂಡು ಮುನ್ನುಗುವ ಅನುಭವ ಅನ್ಯೂಹ, ಭಯದ ಜತೆಗೆ ಬೆಟ್ಟದ ತುದಿ ತಲುಪಬೇಕು ಎನ್ನುವ ಛಲ, ಇವೆಲ್ಲವನ್ನು ದಾಟಿ ಬೆಟ್ಟದ ತುದಿಗೆ ತಲುಪಿದಾಗ ಸಿಗುವುದೇ ಶ್ರೀಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ದೇವಾಲಯದ ಆವರಣದಲ್ಲಿ ಬಂದು ನಿಂತಾಗಲೂ ಕಿವಿಯಲ್ಲಿ ಗುಯ್ ಎನ್ನುವ ಗಾಳಿಯ ನಿನಾದ ಹೊರಹೊಮ್ಮುತ್ತಿರುತ್ತದೆ.
ಈ ನಿಸರ್ಗದ ವಿಸ್ಮಯದ ಅನುಭವ ನಿಮಗೂ ಆಗಬೇಕು ಎಂದಾದರೆ ಈ ಗಿರಿಶಿಖರಕ್ಕೆ ಒಮ್ಮೆಯಾದರೂ ಭೇಟಿ ನೀಡಿ.
ಮಂಜಿನ ಹನಿಗಳ ನಡುವೆ ಮುಂಜಾನೆಯ ಸ್ವಾದವನ್ನು ಉಣ ಬಡಿಸುವ ನಂದಿ ಬೆಟ್ಟ
ಕತ್ತಲೆ ಸರಿದು ಕೊಂಚ ಕೊಂಚವೇ ಬೆಳಕು ಹರಿಯುವ ಸಮಯ, ಮುಂಜಾನೆಯನ್ನು ಸ್ವಾಗತಿಸುತ್ತಾ ಹಕ್ಕಿಗಳು ಮಾಡುವ ಕಲರವ, ಎಲೆಗಳ ಮೇಲೆ ಬಿದ್ದ ಇಬ್ಬನಿ, ಬೆಟ್ಟವನ್ನೇ ಬಿಗಿದಪ್ಪಿಕೊಂಡ ಮಂಜು, ಮೈಸೋಕುವ ತಂಗಾಳಿ ಪ್ರಕೃತಿಯ ಮಡಿಲಿನಲ್ಲಿ ಮಲಗಲು ಬಯಸುವ ಮನಸ್ಸುಗಳಿಗೆ ಇವಿಷ್ಟು ಸಾಕು. ಇಂತಹ ಸುಂದರ ತಾಣ ಚಿಕ್ಕಬಳ್ಳಾಪುರದ ನಂದಿ ಬೆಟ್ಟ.
ಪ್ರಶಾಂತತೆ ಹಾಗೂ ಏಕಾಂತದಲ್ಲಿ ಕಾಲ ಕಳೆಯ ಬಯಸುವವರಿಗೆ ಹೇಳಿ ಮಾಡಿಸಿದ ಜಾಗ ಚಿಕ್ಕಬಳ್ಳಾಪುರದಲ್ಲಿರುವ ನಂದಿ ಹಿಲ್ಸ…. ಇಲ್ಲಿನ ಸೌಂದರ್ಯವನ್ನು ನೋಡಬೇಕಾದರೆ ಬೆಳಗ್ಗಿನ ಜಾವ 5ರಿಂದ 6 ಗಂಟೆಯೊಳಗಾಗಿ ಅಲ್ಲಿರಬೇಕು. ಅಲ್ಲಿನ ಗೇಟ್ ಓಪನ್ ಆಗುವುದು 6 ಗಂಟೆಗೆ. ರಾತ್ರಿ ಹತ್ತು ಗಂಟೆಯವರೆಗೆ ನಂದಿಹಿಲ್ಸ್ ತೆರೆದಿರುತ್ತದೆ. ಮುಂಜಾನೆಯ ಮಂಜಿನಲ್ಲಿ ಅಲ್ಲಿನ ರಮಣೀಯ ದೃಶ್ಯ ಕಣ್ಣಿಗೂ, ಮನಸ್ಸಿಗೂ ಖುಷಿ ನೀಡುತ್ತದೆ.
ಕಾರಿನಲ್ಲಿ ಹೋಗುವ ಬದಲು ಬೈಕ್ ರೈಡ್, ಸೈಕಲ್ ರೈಡ್ ಅಥವಾ ದಟ್ಟವಾಗಿ ಹರಡಿರುವ ಮಂಜಿಗೆ ಮೈಯೊಡ್ಡಿ ಕಾಲ್ನಡಿಗೆಯಲ್ಲೇ ಹೋದರೆ ಅವಿಸ್ಮರಣೀಯ ಅನುಭವವನ್ನು ಸವಿಯಬಹುದು. ಫೋಟೋಗ್ರಾಫಿ, ಚಾರಣ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸ್ಥಳ ಈ ನಂದಿ ಹಿಲ್ಸ್.
ಮಂಜನ್ನೇ ಹೊದ್ದು ಮಲಗಿರುವ ಬೆಟ್ಟದ ನಡುವಿನಿಂದ ಮೆಲ್ಲನೆ ಉದಯಿಸುವ ರವಿಯನ್ನು ಸ್ವಾಗತಿಸುವ ಆ ಕ್ಷಣ ಹೊಸ ಅನುಭವವನ್ನು ನೀಡುತ್ತದೆ. ಹಚ್ಚಹಸುರಿನ ನಡುವೆ ಉದಿಸಿದ ಸೂರ್ಯನ ಕಿರಣಗಳು ಮೈ ಸ್ಪರ್ಶಿಸಿದಾಗ ಅದೇನೋ ಆನಂದ ಭಾವ ಆಗುತ್ತದೆ. ಅದರೊಂದಿಗೆ ಮರಗಳ ಎಲೆಯಿಂದ ಹನಿ ಹನಿಯಾಗಿ ಭೂಮಿ ಸೇರುವ ನೀರಿನ ಬಿಂದುಗಳಿಗೆ ಮುಖ ಕೊಟ್ಟು ನಿಂತಾಗ ಮನಸ್ಸಿಗೆ ಹಿತ ಎನಿಸುತ್ತದೆ.
ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು
- ಜರಮದಗು ಫಾಲ್ಸ್
- ಟಿಪ್ಪು ಪಾಯಿಂಟ್ (ಟಿಪ್ಪು ಡ್ರಾಪ್)
- ಬ್ರಹ್ಮಾಶ್ರಮ
- ಭೋಗ ನಂದೀಶ್ವರ ದೇವಾಲಯ
- ನಂದಿ ಹಿಲ್ಸ್ ಗುಹೆ
- ಚನ್ನಗಿರಿ ಹಿಲ್ಸ್
- ಯೋಗ ನಂದೀಶ್ವರ ಸ್ವಾಮಿ ದೇವಸ್ಥಾನ
- ಗಣೇಶ ದೇವಸ್ಥಾನ
ರೂಟ್ ಮ್ಯಾಪ್
ಬೆಂಗಳೂರಿನಿಂದ ನಂದಿ ಹಿಲ್ಸ್‌ಗೆ ಒಟ್ಟು 61.1 ಕಿ.ಮೀ. ಆದರೆ ಅಲ್ಲಿಗೆ ನೇರ ಬಸ್ ಇಲ್ಲ. ಚಿಕ್ಕಬಳ್ಳಾಪುರಕ್ಕೆ ತೆರಳಿ ಅಲ್ಲಿಂದ ಬೇರೆ ಬಸ್ ಹಿಡಿಯಬೇಕು. ಕೆಲವೊಂದು ಬಸ್‌ಗಳು ನಂದಿ ಹಿಲ್ಸ್‌ನ ದ್ವಾರದ ವರೆಗೆ ಹೋಗುತ್ತವೆ. ಇನ್ನುಳಿದವು ನಂದಿ ಹಿಲ್ಸ… ಸಿಗ್ನಲ್ ಬಳಿ ಇಳಿಸುತ್ತವೆೆ. ಅಲ್ಲಿಂದ ನಂದಿಹಿಲ್ಸ… ದ್ವಾರಕ್ಕೆ ರಿಕ್ಷಾದಲ್ಲಿ ಹೋಗಬೇಕು (8 ಕಿ.ಮೀ.) ಉತ್ತಮ ಅನುಭವಕ್ಕಾಗಿ ಬೈಕ್‌ಮಲ್ಲಿ ತೆರಳುವುದು ಸೂಕ್ತ. ಅಲ್ಲೇ ಸುತ್ತಮುತ್ತ ಹೊಟೇಲ್‌ಗಳಿರುವ ಕಾರಣ ಆಹಾರ ಒಯ್ಯಬೇಕಾದ ಅಗತ್ಯವೇನೂ ಇಲ್ಲ. ಆದರೆ ದಾಹ ನೀಗಿಸಿಕೊಳ್ಳಲು ಶುದ್ಧ ನೀರಿನ ಬಾಟಲ್‌ಗಳು ನಿಮ್ಮ ಜತೆ ಇರಲಿ.
ಭಾರತದ ಸ್ಕಾಟ್ ಲೆಂಡ್ ಕೊಡಗು
ಕೊಡಗು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುತ್ತದೆ. ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ ಲೆಂಡ್ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸುರು ಗಿರಿವನಗಳ ಸಿರಿವಂತ ಜಿಲ್ಲೇ. ತುಂಬಿ ಹರಿಯುವ ತೊರೆಗಳು, ದಟ್ಟ ಕಾನನ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು ಅವುಗಳ ನಡುವೆ ಮಧ್ಯೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.
ಸುಂದರ ವಾತಾವರಣ, ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ. ಕೆಲವು ಮಂದಿ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದರೆ ಮತ್ತೆ ಕೆಲವರು ಚಾರಣಕ್ಕಾಗಿಯೇ ಬರುತ್ತಾರೆ. ಇಂತಹ ಪ್ರಕೃತಿ ರಮಣೀಯ, ಸಮೃದ್ಧ ಹಸಿರಿನ ನಾಡಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿದ್ದು, ಚಳಿಗಾಳದಲ್ಲಿ ಪ್ರವಾಸಕ್ಕೆ ತೆರಳಬೇಕು ಎಂದುಕೊಂಡವರಿಗೆ ಕೂರ್ಗ್ ಸೂಕ್ತ ತಾಣ.
ಇನ್ನೂ ಇಲ್ಲಿನ ರಾಜ್ಯದ ಜಲಪಾತಗಳ ಪೈಕಿ ಕೊಡಗಿನ ಅಬ್ಬಿ ಜಲಪಾತ ಕೂಡ ಆಕರ್ಷಣೀಯ ಒಂದಾಗಿದ್ದು, ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ಈ ಜಲಪಾತವಿದ್ದು, ಏಲಕ್ಕಿ, ಕಾಫಿ ಕಾಡಿನೊಳಗೆ ಹಕ್ಕಿಗಳ ಕಲರವದ ಮಧ್ಯೆ ಭೋರ್ಗರೆಯುವ ಈ ಜಲಪಾತ ಪ್ರವಾಸಿಗರ ಮನಕ್ಕೆ ಮುದ ನೀಡುತ್ತದೆ. ಜಲಪಾತದ ವಿಶೇಷವೆಂದರೆ ಬೇಸಗೆಯಲ್ಲೂ ಈ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಕೇವಲ ಪ್ರವಾಸಿಗರಿಗೆ ಮಾತ್ರವಲ್ಲದೇ ಚಿತ್ರರಂಗಕ್ಕೂ ಅಬ್ಬಿ ಜಲಪಾತ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಇಲ್ಲಿ ಸಾಕಷ್ಟು ಚಿತ್ರೀಕರಣಗಳು ನಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.