Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ
Team Udayavani, Apr 24, 2024, 4:58 PM IST
ಕಳೆದ ತಿಂಗಳು ಒಂದು ಸರಕಾರಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೋದ ಸಂದರ್ಭದಲ್ಲಿ, ಆ ಕಾರ್ಯಕ್ರಮಕ್ಕೆ ಒಬ್ಬ ವ್ಯಕ್ತಿಯನ್ನು ಅತಿಥಿಯಾಗಿ ಕರೆಸಿದ್ದರು. ಆ ಅತಿಥಿ ಯಾರೆಂದರೆ? ಅದೇ ಶಾಲೆಯಲ್ಲಿ ಓದಿದ, ಮುಂದೆ ಉನ್ನತ ವಿದ್ಯಾಭ್ಯಾಸ ಮುಗಿಸಿ ಅರಣ್ಯ ಅಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿದ್ದವರು. ವಾರ್ಷಿಕೋತ್ಸವದ ಆ ವೇದಿಕೆಯಲ್ಲಿ ಎಷ್ಟು ಅದ್ಭುತವಾಗಿ ಮಾತಾಡಿದರು ಎಂದರೆ, ಕೊನೆಯಲ್ಲಿ ಅವರ ಮಾತು ಮುಗಿದ ಅನಂತರ ಅಲ್ಲಿ ನೆರೆದಿದ್ದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದರು.
ತಮ್ಮ ಮಾತಿನ ಆರಂಭದಲ್ಲಿ “ಈಗ ಪರಿಸ್ಥಿತಿ ಹೇಗಿದೆ ಎಂದರೆ, ನಮಗೆ ಸರಕಾರಿ ಹುದ್ದೆಗಳು ಬೇಕು, ಸರಕಾರಿ ಸೌಲಭ್ಯ, ಸವಲತ್ತುಗಳು ಬೇಕು. ಆದರೆ, ಸರಕಾರಿ ಶಾಲೆ ಬೇಡ. ನಾನು ಇದೇ ಶಾಲೆಯಲ್ಲಿ ಓದಿದವನು, ಇದೇ ಪರಿಸರದಲ್ಲಿ ಓಡಾಡಿದವನು. ನನಗೆ ಈ ಶಾಲೆ ಎಲ್ಲವನ್ನು ನೀಡಿತ್ತು. ಈಗ ಈ ದೊಡ್ಡ ವೇದಿಕೆಯಲ್ಲಿ ನಿಂತು ಮಾತಾಡಲು ಕಲಿಸಿದ್ದು ಕೂಡ ಇದೇ ನಾನು ಓದಿದ ಸರಕಾರಿ ಶಾಲೆ’ ಎಂದು ಬಿಟ್ಟರು. ನಿಜ, ಇಂತಹ ಎಷ್ಟೋ ಮಂದಿ ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಹುದ್ದೆಗಳಿಗೆ ಏರಿದ್ದಾರೆ.
ಆದರೆ ವಿಪರ್ಯಾಸವೆಂದರೆ ಇತ್ತೀಚಿಗೆ ಹಲವಾರು ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಹಲವು ಶಾಲೆಗಳು ಪಾಳು ಬಿದ್ದಿವೆ. ಕೆಲವು ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳನ್ನು ಕಾಣಬಹುದು. ಆದರೆ ಕೆಲವು ಸರಕಾರಿ ಶಾಲೆಗಳಲ್ಲಿ ಮಾತ್ರ ದಾಖಲೆಯಷ್ಟು ಮಕ್ಕಳ ದಾಖಲಾತಿಯನ್ನು ಕಾಣಬಹುದು. ಅದು ಎಷ್ಟು ಮಕ್ಕಳೆಂದರೆ ಒಂದೇ ತರಗತಿಗೆ ಎರಡೆರಡು ಸೆಕ್ಷನ್ ಮಾಡುವಷ್ಟು.
ಕಳೆದ ವಾರ ಒಂದು ಸರಕಾರಿ ಶಾಲೆಗೆ ಹೋದಾಗ ಅಲ್ಲಿನ ಶಾಲೆಗೆ ಆಗಷ್ಟೇ ಸುಣ್ಣ ಬಣ್ಣ ಬಳಿದಿದ್ದರು. ನಾನು ಕೇಳಿದೆ, ಇಷ್ಟು ದೊಡ್ಡ ಶಾಲೆಗೆ ಬಣ್ಣ ಮಾಡುವಷ್ಟು ಸರಕಾರಿ ಹಣ ಕೊಡುತ್ತಾ ಎಂದು. “ಅಯ್ಯೋ ಇಲ್ಲ ಸರ್ ಈ ಬಣ್ಣ ಸುಣ್ಣವಾಗಿದ್ದು ನಮ್ಮ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ’ ಎಂದರು. ನಿಜ ಎಷ್ಟೋ ಸರಕಾರಿ ಶಾಲೆಗಳು ಉಳಿದಿದ್ದು ಹಳೆಯ ವಿದ್ಯಾರ್ಥಿಗಳಿಂದ.
ಒಂದು ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇರುವುದು ಅಲ್ಲಿನ ಶಿಕ್ಷಕರಿಗೆ, ಪೋಷಕರಿಗೆ, ಎಸ್.ಡಿ.ಎಂ.ಸಿ.ಯವರಿಗೆ, ಹಳೆಯ ವಿದ್ಯಾಥಿಗಳಿಗೆ ಮತ್ತು ಆ ಊರಿನ ಗ್ರಾಮಸ್ಥರಿಗೆ. ಉದಾಹರಣೆಗೆ ನಮ್ಮೂರ ವಾರಂಬಳ್ಳಿಯ ಸರಕಾರಿ ಶಾಲೆಯ ಬಗ್ಗೆ ಹೇಳುವೆ. ಸ್ವಲ್ಪ ಹಿಂದೆ ಕೇವಲ 40-50 ಮಕ್ಕಳಿದ್ದರು. ಆದರೆ ಈಗ ಬರೋಬ್ಬರಿ 90 ಮಕ್ಕಳಿದ್ದಾರೆ. ಅಕ್ಕಪಕ್ಕದ ಊರಿನಿಂದ ಕೂಡ ಮಕ್ಕಳನ್ನು ನಮ್ಮ ಶಾಲೆಗೆ ಕಳಿಸುತ್ತಿದ್ದಾರೆ. ವಿದ್ಯಾಭ್ಯಾಸದ ಜತೆಗೆ ಸಾಂಸ್ಕತಿಕ, ಕ್ರೀಡೆಯಲ್ಲೂ ಕೂಡ ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲೂ ಸ್ಪರ್ಧೆ ಮಾಡಿದ್ದಾರೆ. ದಾನಿಗಳ ಸಹಕಾರದಿಂದ, ಹಳೆಯ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಶಿಕ್ಷಣ, ಟಿ.ವಿ. ಮೂಲಕ ಪಾಠ, ಶಾಲೆಯ ಮುಂದೆ ಕೈತೋಟ ಇನ್ನು ಹಲವು ಸೌಲಭ್ಯಗಳು ನಮ್ಮೂರ ಶಾಲೆಯಲ್ಲಿ ಇದೆ.
ಎಷ್ಟೋ ಸ್ವಯಂಸೇವಾ ಸಂಸ್ಥೆಗಳು ಕೂಡ ಸರಕಾರಿ ಶಾಲೆಯ ಉಳಿವಿಗೆ ಪಣ ತೊಟ್ಟಿವೆ. ಉದಾಹರಣೆಗೆ ಕನ್ನಡತಿ ಅನು ಅಕ್ಕ ಎನ್ನುವ ಯುವತಿ ಸಾಲ ಮಾಡಿ ಎಷ್ಟೋ ಸರಕಾರಿ ಶಾಲೆಗಳಿಗೆ ಬಣ್ಣ ಹಚ್ಚಿದ್ದಾರೆ. ಕನ್ನಡ ಮನಸುಗಳು ಎನ್ನುವ ತಂಡ ಕೂಡ ಸಾಕಾಷ್ಟು ಶಾಲೆಗಳನ್ನು ಚಂದಗೊಳಿಸಿದೆ. ಇನ್ನು
ಹಲವು ತಂಡಗಳು, ಹೀಗೆ ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಪಣ ತೊಟ್ಟಿವೆ.
ಕೆಲವು ಶಾಲೆಗಳು ಹಳೆಯ ವಿದ್ಯಾರ್ಥಿಗಳಿರುವ ಒಂದು ವಾಟ್ಸಾಪ್ ಗ್ರೂಪ್ ಅನ್ನು ಮಾಡಿಕೊಂಡು ಆ ಶಾಲೆಯಲ್ಲಿ ಓದಿದ ಹಳೆಯ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಾಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತಿವೆ. ಏನೇ ಇರಲಿ ಸರಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ. ಎಷ್ಟೋ ಶಾಲೆಗಳು ನೂರು ವರ್ಷ ಪೂರೈಸಿವೆ. ಅಂತಹ ಶಾಲೆಗಳು ಶತಮಾನೋತ್ಸವವನ್ನು ಅದ್ಧೂರಿಯಾಗಿ ಮಾಡಿ ಮುಗಿಸಿವೆ. ಈಗ ನಮ್ಮೂರು-ನಿಮ್ಮೂರಿನ ಶಾಲೆಯ ಸರದಿ. ಕೊನೆ ಮಾತು ಸರಕಾರಿ ಶಾಲೆಯ ಶಿಕ್ಷಣ ಹೆಮ್ಮೆಯ ಶಿಕ್ಷಣ.
-ವಿನಾಯಕ ಪ್ರಭು
ವಾರಂಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.