Emotions: ಅರೆಕ್ಷಣದ ಭಾವನೆಗಳಿಗಿಂತ ಬದುಕು ದೊಡ್ಡದು
Team Udayavani, Dec 5, 2024, 3:47 PM IST
ಮನುಷ್ಯನೊಳಗಿನ ಭಾವನೆಗಳು ಹರಿಯುವ ನದಿಯಂತೆ ಸರಾಗವಾಗಿ ಹರಿಯುತ್ತಲೇ ಚಲಿಸುತ್ತಿರುತ್ತವೆ. ಒಮ್ಮೆ ಸಾವಧಾನವಾಗಿ ಹರಿದರೆ, ಏರಿಳಿತಗಳಲ್ಲಿ ಧುಮ್ಮಿಕ್ಕಿ ಮನಸ್ಸಿಗೆ ಆಹ್ಲಾದಕರವಾದ ತೃಪ್ತಿ ನೀಡುತ್ತಾ, ಕ್ಷಣ ಕ್ಷಣಕ್ಕೂ ಬದಲಾಗುತ್ತಾ ನಮ್ಮ ಇಡೀ ಬದುಕನ್ನೇ ಆವರಿಸಿಕೊಂಡು ಬಿಡುತ್ತವೆ.
ಜಗತ್ತಿನಲ್ಲಿ ಬಹುಪಾಲು ಜನರು ಭಾವನೆಗಳನ್ನು ತಮ್ಮ ಬದುಕಿನ ಬಹುದೊಡ್ಡ ಭಾಗವೆಂದು ಪರಿಗಣಿಸಿ ಅರೆಕ್ಷಣ ಖುಷಿ ನೀಡುವ ಭಾವನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಭವಿಷ್ಯದ ಬದುಕನ್ನು ತೀರಾ ನಿರ್ಲಕ್ಷಕ್ಕೆ ತಳ್ಳಿ ಬಿಡುತ್ತಾರೆ. ಜೀವನ ಒಂದು ಒಳಿತು ಕೆಡುಕುಗಳ ಮಿಶ್ರಣ. ಸುಖ-ದುಃಖ, ನೋವು-ನಲಿವು, ಕೋಪ ಅಸೂಯೆಗಳೆಲ್ಲವೂ ಬದುಕಲ್ಲಿ ಪ್ರವೇಶಿಸುತ್ತಾ ಹೋಗುತ್ತವೆ.
ನಮ್ಮೊಳಗೆ ಜನ್ಮ ಪಡೆದು ನಿತ್ಯ ಎದುರುಗೊಳ್ಳುವ ಆ ಕ್ಷಣದ ಭಾವನೆಗಳನ್ನು ಗೌರಾವಿಸುತ್ತಾ, ಉತ್ತಮವಾದ ಭಾವನೆಗಳನ್ನು ಆನಂದಿಸುತ್ತಾ ಬದುಕಿನ ಮಹೋನ್ನತವಾದ ಗುರಿಯ ಕಡೆಗೆ ನಡೆಯುವುದು ಪ್ರತಿಯೊರ್ವರ ಕರ್ತವ್ಯ. ವ್ಯಕ್ತಿಯಲ್ಲಿನ ಭಾವನೆಗಳು ಬರೀ ಆತನ ವ್ಯಕ್ತಿತ್ವವನ್ನು ಅಲ್ಲದೆ ಆತನ ಇಡೀ ಬದುಕಿನ ಪ್ರತಿಬಿಂಬವನ್ನೇ ಚಿತ್ರಿಸುತ್ತವೆ ಎನ್ನುವುದು ಸತ್ಯ.
ಬೇರೆಯವರೊಂದಿಗಿನ ನಮ್ಮ ಮಾತುಗಳು, ನಡುವಳಿಕೆ ಮತ್ತು ವಿಚಾರಗಳು ಇನ್ನೊಬ್ಬರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಮೂಲಕ ಅವರೊಟ್ಟಿಗೆ ಭಾವನಾತ್ಮಕ ಬದುಕನ್ನು ಕಟ್ಟಿಕೊಡುತ್ತವೆ.
ಭಾವನೆಗಳು ಇಲ್ಲದೆ ಬದುಕಬೇಕು ಎನ್ನುವುದು ನನ್ನ ವಾದವಲ್ಲ. ಭಾವನೆಗಳು ಇಲ್ಲದೆ ಈ ಜಗತ್ತಿನಲ್ಲಿ ಬದುಕಬಹುದು ಎನ್ನುವುದಕ್ಕೂ ನನ್ನ ಸಮ್ಮತಿ ಇಲ್ಲ. ಬರೀ ಕಷ್ಟ, ನೋವು ಹತಾಶೆ ಮತ್ತು ಸೋಲುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗ ತಾತ್ಕಾಲಿಕ ಭಾವನೆಗಳಿಗೆ ಆದ್ಯತೆ ಕೊಡುವುದಕ್ಕಿಂತ ಮೊದಲು ಬದುಕಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವುದು ನನ್ನ ಅಭಿಪ್ರಾಯ. ಭಾವನೆಗಳು ಜೀವನದ ಅವಿಭಾಜ್ಯ ಅಂಗ.
ಸಹಜವಾಗಿ ನಮ್ಮೊಳಗೆ ಹುಟ್ಟುವ ಭಾವನೆಗಳಿಗೆ ಆದ್ಯತೆ ಕೊಡುವುದರೊಟ್ಟಿಗೆ ಬದುಕಲ್ಲಿ ಯಾವುದು ತೀರಾ ಮುಖ್ಯ ಎನ್ನುವ ಸಾಮಾನ್ಯ ಪ್ರಜ್ಞೆಯೊಂದನ್ನು ನಾವು ಬೆಳಸಿಕೊಳ್ಳಬೇಕು. ಭಾವನೆಗಳು ಬಂದಂತೆ ಬದುಕು ಸಾಗಿಸುವುದು ಸಾಧ್ಯವಿಲ್ಲ. ನಮ್ಮದೇ ಆದ ಜವಾಬ್ದಾರಿ ಮತ್ತು ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಂಧಿಯಾಗಿರುವ ನಾವುಗಳು ಒಂದು ಘಳಿಗೆಯ ಸುಖಕ್ಕೆ ನಮ್ಮ ಬದುಕನ್ನೇ ಸಂಕಷ್ಟಕ್ಕೆ ತಳ್ಳುವುದಕ್ಕೆ ಯಾರಿಗೂ ಇಷ್ಟ ಇರುವುದಿಲ್ಲ.
ಆಯಾ ಸಮಯಕ್ಕೆ ಹುಟ್ಟುವ ಭಾವನೆಗಳು ಬದುಕನ್ನು ಹೆಚ್ಚು ಉಲ್ಲಾಸಭರಿತವಾಗಿ ಇರಿಸಬಹುದು ಆದರೆ ಬದುಕಿಗೆ ಬಹು ಮುಖ್ಯವಾದ ಜವಾಬ್ದಾರಿಗಳನ್ನು ಕಡೆಗಣಿಸಿ ಪ್ರೀತಿ, ಪ್ರೇಮ, ಮೋಹದ ಭಾವನೆಗಳಿಗೆ ಮಾರುಹೋದರೆ ಬದುಕು ನಿಯಂತ್ರಣ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ತೀರಾ ಅವಶ್ಯ ಇರುವಷ್ಟುಗಳಿಗೆ ಮಾನ್ಯತೆ ಕೊಟ್ಟು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಬದುಕಿನ ದಾರಿಯನ್ನು ಆಯ್ಕೆಮಾಡಿಕೊಳ್ಳುವುದು ಜಾಣ್ಮೆಯ ನಡೆ.
ಬದುಕನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಎಲ್ಲವನ್ನು ಒಂದೇ ತೆಕ್ಕೆಯಲ್ಲಿ ಹೊತ್ತುಕೊಂಡು ನಡೆಯುತ್ತೇವೆ ಎನ್ನುವುದು ಶುದ್ಧ ಮೂರ್ಖತನ. ಮಧ್ಯಮ ವರ್ಗದವರಿಗಂತೂ ಸಾಧ್ಯವೇ ಇಲ್ಲ. ಹಾಗೇನಾದರೂ ಸಾಹಸಕ್ಕೆ ಪ್ರಯತ್ನಿಸಿದರೆ ನಡುದಾರಿಯಲ್ಲಿ ಬದುಕನ್ನು ಭಾರಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಮನುಷ್ಯ ಒಮ್ಮೆ ಭಾವನೆಗಳಲ್ಲಿ ಕಳೆದು ಹೋದರೆ ವಾಸ್ತವಿಕ ಜಗತ್ತಿನ ಜಂಜಾಟಗಳಿಂದ ಮುಕ್ತರಾಗಿ ತಮ್ಮದೇಯಾದ ವೈಯಕ್ತಿಕ ಬದುಕನ್ನು ಬದುಕಲು ಪ್ರಾರಂಭಿಸಿಬಿಡುತ್ತಾನೆ. ಭಾವನೆಗಳಲ್ಲಿ ಬದುಕಿಗೆ ಶಕ್ತಿ ತುಂಬಬಲ್ಲ ಒಳ್ಳೆಯ ಭಾವನೆಗೆಗಳು ಸಹ ಇವೆ ಅವುಗಳನ್ನು ಹೆಕ್ಕಿ ತೆಗೆದು ಮುನ್ನಲೆಗೆ ತರಬೇಕು. ಒಮ್ಮೊಮ್ಮೆ ಒಳ್ಳೆಯ ಭಾವನೆಗಳು ಮನುಷ್ಯನನ್ನು ಏನನ್ನಾದರೂ ಸಾಧಿಸಲು ಕೆರಳಿಸುತ್ತವೆ, ಬದುಕಿಗೆ ಪ್ರರೇಪಿಸುತ್ತವೆ ಮತ್ತು ಬದುಕನ್ನು ಗಟ್ಟಿಗೊಳಿಸುತ್ತವೆ. ಅವು ಖಂಡಿತ ಬದುಕಿಗೆ ಮೆಟ್ಟಿಲು ಆಗಬಲ್ಲವು.
ಏನನ್ನೋ ಸಾಧಿಸುತ್ತೇನೆ ಎನ್ನುವ ಹಠಕ್ಕೆ ಬಿದ್ದು ನಿತ್ಯ ಕಷ್ಟ ಪಡುವ ಜೀವಕ್ಕೆ ಅವು ಸ್ಫೂರ್ತಿಯಾಗುತ್ತವೆ. ನಮ್ಮ ಬದುಕು ನಮ್ಮ ಇಷ್ಟದಂತೆ ಬದುಕುತ್ತೇವೆ ಎನ್ನುವ ಒಂದು ವರ್ಗದ ಜನರಿದ್ದಾರೆ. ಯಾರು ಹೇಗೆ ಬೇಕಾದರೂ ಬದುಕಬಹುದು ಆದರೆ ಯಾರ ನೆರವಿಲ್ಲದೆ ಬದುಕಿಗೆ ದಾರಿಯೊಂದನ್ನು ಖಚಿತ ಪಡಿಸಿಕೊಳ್ಳಲು ಸಿದ್ಧರಾದವರು ಮನಸ್ಸಿಚ್ಚೆಯಂತೆ ನಡೆಯುವುದು ಅಪಾಯಕಾರಿ. ಕಷ್ಟಗಳಿಗೆ ವಿರುದ್ಧವಾಗಿ ನಿಲ್ಲುವುದರ ಜತೆಗೆ ನಂಬಿದವರಿಗೆ ಆಸರೆಯಾಗಲು ಅರೆಕ್ಷಣದ ಆಸೆಗಳನ್ನು ಬಲಿ ಕೊಡಬೇಕು.
“ಒಬ್ಬ ವ್ಯಕ್ತಿಯು ಯಾವುದೇ ಭಾವನೆಯನ್ನು ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ’ ಎನ್ನುವ ಸದ್ಗುರು ಅವರ ಮಾತು ಸತ್ಯ ಅನಿಸುತ್ತದೆ. ಭಾವನೆಗಳು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇದ್ದಾಗ ಬದುಕಿನ ಹಾಗು-ಹೋಗುಗಳ ನಡುವೆಯೂ ಭಾವನೆಗಳು ಬದುಕನ್ನು ಸುಂದರಗೊಳಿಸುತ್ತವೆ ಮತ್ತು ಬದುಕಿನ ಪಯಣಕ್ಕೆ ಮೆರಗು ನೀಡುತ್ತವೆ. ಆದರೆ ಅರೆಕ್ಷಣದ ಭಾವನೆಗಳು ಆ ಸಮಯಕ್ಕೆ ರುಚಿಸಬಹುದು ಆದರೆ ಬದುಕಿಗೆ ಕಹಿಯಾದ ಅನುಭವವನ್ನು ಪರಿಚಯಿಸುತ್ತವೆ ಹಾಗೂ ಭವಿಷ್ಯತ್ತಿನ ಬದುಕಿನ ಅವಕಾಶಗಳನ್ನು ನಾಶಗೋಳಿಸುತ್ತವೆ.
ಅದನ್ನು ಅರಿತುಕೊಂಡು ನಡೆಯುವುದರ ಜತೆಗೆ ನಮ್ಮೊಳಗೆ ತುಂಬಿರುವ ಋಣಾತ್ಮಕ ವಿಚಾರಗಳನ್ನು ಮೆದುಳಿನಿಂದ ಕಿತ್ತೂಗೆದು ಧನಾತ್ಮಕವಾದ ಸಂಗತಿಗಳೊಂದಿಗೆ ನಡೆಯಬೇಕು. ಅಲ್ಪ ಪ್ರಮಾಣದ ಬದುಕಿನಲ್ಲಿ ಅರೆಘಳಿಗೆಯ ದರ್ದುಗಳನ್ನು ಕೊಡವಿ ಭವಿಷ್ಯದ ಕನಸುಗಳನ್ನು ಆಲಂಗಿಸುತ್ತಾ ನಾಳೆಯ ಬೆಳಕಿನೆಡೆಗೆ ಭರವಸೆಯಿಂದ ನಡೆಯಲು ಸನ್ನದ್ಧರಾಗಬೇಕು. ಮುಖ್ಯವಾಗಿ ಅರೆಕ್ಷಣದ ಭಾವನೆಗಳಿಗಿಂತ ಬದುಕು ದೊಡ್ಡದು ಎಂದು ತಿಳಿದು ಬದುಕಬೇಕು.
ಹುಸೇನಸಾಬ ವಣಗೇರಿ
ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.