ಸ್ಟಾರ್ಟ್‌ಅಪ್ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು
Team Udayavani, Mar 23, 2023, 12:30 PM IST
ಕೈಯಲ್ಲೇ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಸುತ್ತಿದರಂತೆ ಎಂಬ ಗಾದೆ ಮಾತನ್ನು ಈ ಚಿತ್ರದ ಕಥಾ ನಾಯಕನಿಗೆ ಖಂಡಿತವಾಗಿ ಅನ್ವರ್ಥವಾಗಿ ಬಳಸಬಹುದು. ಎಷ್ಟೋ ಬಾರಿ ನಮ್ಮ ಆಲೋಚನೆಗಳು ಉತ್ತಮವಾಗಿದ್ದರೂ, ಅತ್ಯುತ್ತಮವೆನಿಸಿಕೊಳ್ಳುವ ಆಲೋಚನೆಗಳನ್ನು ಮಾಡುವುದರಲ್ಲಿ ಮತ್ತು ಕೆಲವು ಅತ್ಯುತ್ತಮ ಆಲೋಚನೆಗಳನ್ನು ಅವಕಾಶವನ್ನಾಗಿ ಬಳಸಿಕೊಳ್ಳುವಲ್ಲಿ ಎಡವುತ್ತೇವೆ. ಅಂತಹದೇ ಮನಸ್ಸಿನ ಬೆಂಗಳೂರಿನ ಮೂವರು ಸ್ನೇಹಿತರು ಹಲವರ ಎಚ್ಚರಿಕೆಯನ್ನು ಮೀರಿ, ಹಲವು ಕನಸು ಕಟ್ಟಿಕೊಂಡು ಸ್ಟಾರ್ಟ್ ಅಪ್ ಕಂಪೆನಿಯೊಂದನ್ನು ಶುರು ಮಾಡಿ ಅನಂತರ ಹಲವು ಸವಾಲುಗಳನ್ನು ಎದುರಿಸಬೇಕಾಗುವುದು ಈ ಚಿತ್ರದ ಕಥಾ ಹಂದರ.
ಬೆಂಗಳೂರು ವಿವಿಧ ಸಂಸ್ಕೃತಿಗಳ ಕಣಜ. ಬೆಂಗಳೂರನ್ನು ಕರ್ನಾಟಕದ ರಾಜಧಾನಿ ಮಾತ್ರವಲ್ಲದೇ ಸ್ಟಾರ್ಟ್‌ಅಪ್‌ಗ್ಳ ರಾಜಧಾನಿ ಎಂದೂ ಕರೆಯಬಹುದು. ಒಂದು ಸ್ಟಾರ್ಟ್ ಅಪ್ ಶುರು ಮಾಡುವುದೆಂದರೆ ಅದು ಸುಲಭದ ಮಾತಲ್ಲ. ಸ್ಟಾರ್ಟ್ ಅಪ್ ಶುರುವಾಗುವ ಮೊದಲೇ ತಮ್ಮ ಕನಸಿನ ಸೌಧದ ಬುನಾದಿಯೆಂಬಂತೆ ಹಲವು ತಿಂಗಳು- ವರ್ಷಗಳ ಅವಿರತ ಕೆಲಸ ಮತ್ತು ಕಂಪೆನಿ ಶುರುವಾದ ಅನಂತರ ಬಿಜಿನೆಸ್‌ನಲ್ಲಿ ಎದುರಾಗಬಹುದಾದ ಏರಿಳಿತಗಳನ್ನು ತಾಳಿದವನು ಬಾಳಿಯಾನು ಎಂಬಂತೆ ಸಂಭಾಳಿಸುವ ಮನಸ್ಥಿತಿಯೂ ತುಂಬಾ ಮುಖ್ಯ. ಈ ಮೇಲಿನ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರಿಯದೇ ಕೆಲವು ಖ್ಯಾತ ಉದ್ಯಮಿಗಳ ಜೀವನದಿಂದ ಪ್ರೇರಿತರಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಮಧ್ಯಮ ವರ್ಗದ ಮೂವರು ಹುಡುಗರು ತಮ್ಮ ಕನಸಿನ ಸ್ಟಾರ್ಟ್ ಅಪ್ ಕಂಪೆನಿ ಶುರು ಮಾಡಲು ಹೋದಾಗ ಹಲವಾರು ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ಹೂಡಿಕೆದಾರರನ್ನು ಹುಡುಕುವಾಗ ಸಂಭವಿಸುವ ಸವಾಲುಗಳು ಮತ್ತು ಗೊಂದಲಗಳು, ಕಾರ್ಪೊರೇಟ್ ಸಂಸ್ಕೃತಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ, ಅಲ್ಲದೇ ಈ ರಂಗದಲ್ಲಿ ನಂಬಿಕೆ ದ್ರೋಹ, ವಂಚನೆ, ಅಪರಾಧವನ್ನೆಸಗುವ ಅನಿವಾರ್ಯತೆ, ಕ್ಷಮಾ ಗುಣ ಮುಂತಾದ ಚಿತ್ರಣಗಳನ್ನು ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.
ಚಿತ್ರದ ಬಿಜಿಎಮ್ ಮತ್ತು ಕೆಲವು ಹಾಡುಗಳು ಗುನುಗುವಂತಿವೆ. ಅದ್ಭುತ ಛಾಯಗ್ರಹಣ ಈ ಚಿತ್ರಕ್ಕೊಂದು ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಆದರೆ ಚಿತ್ರದ ವೇಗ ಹೆಚ್ಚಿರಬೇಕಿತ್ತು ಮತ್ತು ಚಿತ್ರದ ವೇಗಕ್ಕೆ ತಡೆಯೊಡ್ಡುವ ಹಲವು ದೃಶ್ಯಗಳನ್ನು, ಕೆಲವು ಪ್ರಮುಖ ದೃಶ್ಯಗಳಲ್ಲಿ ಚಿತ್ರದ ಪಾತ್ರಗಳ ಮನಃಪರಿವರ್ತನೆಗೆ ಇನ್ನೂ ಹೆಚ್ಚು ಸೂಕ್ತವಾದ ಕಾರಣ ಬೇಕಿತ್ತು ಎಂದು ಅಲ್ಲಲ್ಲಿ ಅನ್ನಿಸುತ್ತದೆ. ಇಂತಹ ಕೆಲವೇ ಕೆಲವು ಸಣ್ಣ ಪುಟ್ಟ ನ್ಯೂನತೆಗಳಿದ್ದರೂ ಕುತೂಹಲದಿಂದ ಕಥಾ ಹಂದರವು ಸಾಗುತ್ತದೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಇಂತಹ ವಿಭಿನ್ನ ವಿಷಯವನ್ನಿಟ್ಟುಕೊಂಡ ನಿರ್ದೇಶಕ ಪ್ರದೀಪ್ ಶಾಸ್ತ್ರೀಯವರು ಕನ್ನಡಕ್ಕೊಬ್ಬ ಅತ್ಯುತ್ತಮ ನಿರ್ದೇಶಕನಾಗಬಲ್ಲರು ಎಂಬ ಭರವಸೆಯನ್ನು ಹುಟ್ಟಿಸಿದ್ದಾರೆ.
ಇನ್ನು ಈ ಚಿತ್ರದ ನಾಯಕರಾಗಿ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಮಧುಸೂದನ್ ಗೋವಿಂದ್ ತಮ್ಮ ನೈಜ ನಟನೆಯಿಂದ ಭರವಸೆಯ ನಟನಾಗಿ ಗಮನ ಸೆಳೆದಿದ್ದಾರೆ. ಮತ್ತು ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್, ರಮೇಶ್ ಭಟ್, ಮಂದೀಪ್ ರಾಯ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಹಿಮಾಂಶಿ ವರ್ಮಾ, ಶಂಕರ್ ಮೂರ್ತಿ, ಪುನೀತ್, ವಿನೀತ್ ತಮ್ಮ ಮಾಗಿದ ನಟನೆಯಿಂದ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಲಯಾಳ ಸ್ನೇಹಿತನಾಗಿ ನಟಿಸಿರುವ ವಂಶಿರ್ಧ ಅವರ ಹಾಸ್ಯ ನಟನೆ ಅತ್ಯುತ್ತಮವಾಗಿದೆ.
ಒಟ್ಟಿನಲ್ಲಿ ಈ ಚಿತ್ರವನ್ನು ಒಮ್ಮೆ ಕುಟುಂಬದೊಂದಿಗೆ ಕುಳಿತು ವೀಕೆಂಡ್‌ನಲ್ಲಿ ನೋಡಬಹುದು. ಸ್ಟಾರ್ಟ್ ಅಪ್ ಶುರು ಮಾಡಬೇಕೆಂಬ ಕನಸು ಹೊತ್ತ ಅನೇಕರಿಗೆ ಸ್ಫೂರ್ತಿಯಾಗಬಲ್ಲ ಈ ಚಿತ್ರವು ತಮ್ಮನ್ನೂ ಒಬ್ಬ ಉದ್ದಿಮೆದಾರನನ್ನಾಗಲು ಮತ್ತು ಆ ನಿಟ್ಟಿನಲ್ಲಿ ಸರಿಯಾದ ಮಾರ್ಗದಲ್ಲಿ ಹೆಜ್ಜೆ ಹಾಕಲು ಪ್ರೇರೇಪಿಸಬಹುದು.
– ಅನುರಾಗ್ ಗೌಡ ಬಿ. ಆರ್.
ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.