Mangaluru Dasara: ಮಂಗಳೂರು ದಸರಾ ಎಷ್ಟೊಂದು ಸುಂದರ
Team Udayavani, Oct 30, 2024, 5:18 PM IST
ಮಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ನವರಾತ್ರಿ ಉತ್ಸವ ಈಗ ಮಂಗಳೂರು ದಸರಾ ಎಂದೇ ಖ್ಯಾತವಾಗಿದೆ. ಇಲ್ಲಿನ ಜನರು ಸಾಂಪ್ರದಾಯಿಕವಾಗಿ ಆಚರಿಸುವ ಮಾರ್ನೆಮಿಗೆ ಈಗ ದಸರಾ ಹಬ್ಬದ ಸ್ಪರ್ಷ ನೀಡಲಾಗಿದೆ. ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೊಂಕಣಿ ಭಾಷಿಗರಿಗೆ ಇದು ಮನ್ನಮಿ. ಈ ಮಂಗಳೂರು ದಸರಾವನ್ನು ಆರಂಭಿಸಿದ್ದು ಶ್ರೀಯುತ ಬಿ ಆರ್ ಕರ್ಕೇರಾ ಎಂದು ಹೇಳಲಾಗುತ್ತದೆ.
ನಾರಾಯಣ ಗುರುಗಳಿಂದ 1912 ರಲ್ಲಿ ಕಟ್ಟಲ್ಪಟ್ಟ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಕುದ್ರೋಳಿಯ ರಥ ಬೀದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಚಿತ್ತಾಕರ್ಷಕವಾಗಿರುತ್ತದೆ. ದಸರಾದ ಅಂಗವಾಗಿ ದೇವಿಯ ವಿವಿಧ ರೂಪಗಳ ಜತೆಗೆ ಆದಿ ಶಕ್ತಿ, ಗಣಪತಿ, ಶಾರದಾ ದೇವಿಯ ವಿಗ್ರಹದ ಜೊತೆಗೆ ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕುಷ್ಮಾಂಡಾಯಿನಿ , ಸ್ಕಂದ ಮಾತ, ಕಾತ್ಯಾಯಿನಿ, ಕಾಳರಾತ್ರಿ , ಮಹಾಗೌರಿ ಮತ್ತು ಸಿದ್ಧಿದಾತ್ರಿ ಒಂಬತ್ತು ದೇವಿಯರ ವಿಗ್ರಹಗಳನ್ನೂ ಸ್ವರ್ಣ ಕಲಶಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಮಂಗಳೂರಿನ ಶಾರದಾ ದೇವಿಯನ್ನು ವರ್ಣಿಸಲು ಪದಗಳೇ ಸಾಲದು ಕಮಲದಂತಹ ಮುಖ ಕೈಯಲ್ಲಿ ವೀಣೆ ಮೈ ತುಂಬಾ ಬಂಗಾರದ ಶೃಂಗಾರ ತಲೆ ತುಂಬಾ ಹೂವು ಸುಂದರ ಮೂರ್ತಿಯನ್ನು ಕಣ್ಣತುಂಬಾ ನೋಡುವುದೇ ಚೆಂದ.ಸುಮಾರು 13 ಅಡಿ ಎತ್ತರದ 4 ವರ್ಣರಂಜಿತ ಶಿವನ ವಿಗ್ರಹಗಳಿದ್ದು, 100 ಅಡಿ ಎತ್ತರಕ್ಕೆ ನಾಲ್ಕು ಕಡೆಗಳಿಂದ ವಾಟರ್ ಜೆಟ್ನಿಂದ ಚಿಮ್ಮುವ ನೀರು ಶಿವಲಿಂಗದ ಆಕಾರ ಪಡೆದುಕೊಳ್ಳುತ್ತದೆ. ವಿಜಯದಶಮಿಯಂದು ಅದ್ಧೂರಿ ಮೆರವಣಿಗೆ ನಡೆಯುತ್ತದೆ.
ಅಲ್ಲಿ ಬಣ್ಣದ ಕೊಡೆಗಳು, ಹುಲಿವೇಷ- ಕುಣಿತ, ಚೆಂಡೆ ವಾದನ, ಡೊಳ್ಳು, ಟಾಬ್ಲ್ಯೂ, ಯಕ್ಷಗಾನ ವೇಷಧಾರಿಗಳು, ಜತೆಗೆ ಇತರ ಸ್ಥಳೀಯ ಸಾಂಪ್ರದಾಯಕ ಕಲಾ ಪ್ರಕಾರಗಳು ಗಮನ ಸೆಳೆಯುತ್ತವೆ. ಬಳಿಕ ದೇವಾಲಯದ ಆವರಣದಲ್ಲಿರುವ ಪುಷ್ಕರಿಣಿ ಕೊಳದಲ್ಲಿ ನವದುರ್ಗೆಯರು ಮತ್ತು ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ.
ಮಂಗಳೂರೆಂಬ ಹೆಸರು ಬರಲು ಕಾರಣವಾದ ಮಂಗಳದೇವಿ ದೇವಾಲಯದ ಸನ್ನಿಧಿಯಲ್ಲೂ ಸಾಂಪ್ರದಾಯಕ ನವರಾತ್ರಿ ಆಚರಣೆ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾನವಮಿ, ಅಂದರೆ ಒಂಭತ್ತನೇ ದಿನದಂದು ನಡೆಯುವ ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ವರ್ಣರಂಜಿತ ದೀಪಗಳು, ಸ್ತಬ್ಧಚಿತ್ರಗಳಿಂದ ರಥೋತ್ಸವ ಗಮನ ಸೆಳೆಯುತ್ತದೆ.
ಕಾರ್ ಸ್ಟ್ರೀಟ್ ನ ಶ್ರೀ ವೆಂಕಟ್ರಮಣ ದೇವಾಲಯದಲ್ಲಿ ನವರಾತ್ರಿಯ ಸಮಯದಲ್ಲಿ ಶಾರದೋತ್ಸವ ನಡೆಯುತ್ತದೆ. ಶಾರದಾ ದೇವಿಯ ವಿಗ್ರಹವನ್ನು ಕಾರ್ ಸ್ಟ್ರೀಟ್ ನ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠದ ಆವರಣದಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ದಿ ಗ್ರೇಟ್ ದರ್ಬಾರ್ ಬೀಡಿ ವರ್ಕರ್ಸ್, ಬಂದರಿನಿಂದ ಭವ್ಯ ಮೆರವಣಿಗೆಯಲ್ಲಿ ತರಲಾಗುತ್ತದೆ. ಕೊನೆಗೆ ಮೆರವಣಿಗೆಯ ನಂತರ ದೇವಾಲಯದ ಸರೋವರದಲ್ಲಿ ವಿಗ್ರಹ ವಿಸರ್ಜಿಸಲಾಗುತ್ತದೆ. ಇದು ನವದುರ್ಗೆಯರನ್ನು, ಗಣೇಶನನ್ನು, ವಿಶೇಷವಾಗಿ ಶಾರದಾ ದೇವಿಯನ್ನು ಬೀಳ್ಕೊಡುವ ಭಾವನಾತ್ಮಕ ಸನ್ನಿವೇಷ.
ಪಿಲಿನಾಲಿಕೆ ಮಂಗಳೂರು ದಸರಾದ ಮತ್ತೂಂದು ಆಕರ್ಷಣೆ. ಇದು ಸಾಂಪ್ರದಾಯಕ ಹುಲಿವೇಷ, ಅದ್ದೂರಿಯಾಗಿ ನಡೆಯುತ್ತದೆ. ವಿವಿಧ ತಂಡಗಳು ಡ್ರಮ್ ಬೀಟ್ ಸರಿಯಾಗಿ ಕುಣಿಯುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತುತ್ತವೆ. ಅಲ್ಲಲ್ಲಿ ಪ್ರದರ್ಶನವೂ ಇರುತ್ತದೆ. ಶಾರದಾ ದೇವಿಯನ್ನು ಗೌರವಿಸಲು ಪಿಲಿನಲಿಕೆ ನಡೆಸಲಾಗುತ್ತದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳ ಸಮ್ಮಿಶ್ರಣ.
ಕವನ
ವಿವಿ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.