Mangaluru: ನಮ್ಮ ಕುಡ್ಲ ಎಷ್ಟು ಚಂದ ಮಾರ್ರೆ
Team Udayavani, Mar 9, 2024, 8:00 AM IST
ದೇಶದಲ್ಲಿ ಸುಮಾರು ಊರುಗಳುಂಟು. ಎಲ್ಲದಕ್ಕೂ ಅದ್ರದ್ದೇ ಆದ ಒಂದೊಂದ್ ಹೆಸ್ರು ಕೂಡ ಉಂಟು. ಆದ್ರೆ ಹತ್ತಾರು ಹೆಸ್ರಿರೋ ಒಂದೇ ಊರು ಯಾವು ಗೊತ್ತಾ? ಅದೇ ನಮ್ಮ ಕುಡ್ಲ ಮಾರ್ರೆ. ಬೇರೆ ಬೇರೆ ಭಾಷಿಗರು ನಮ್ಮೂರನ್ನು ಬೇರೆ ಬೇರೆ ಹೆಸ್ರಲ್ಲಿ ಕರೀತಾರೆ. ಕನ್ನಡದಲ್ಲಿ ಮಂಗಳೂರು, ಇಂಗ್ಲಿಷ್ ನಲ್ಲಿ ಮಾಂಗ್ಲೂರ್, ತುಳುವಿನಲ್ಲಿ ಕುಡ್ಲ, ಮಲಯಾಳಂನಲ್ಲಿ ಮಂಗಳಪುರಂ, ಕೊಂಕಣಿಯಲ್ಲಿ ಕೊಡಿಯಾಲ್, ಬ್ಯಾರಿ ಭಾಷೆಯಲ್ಲಿ ಮೈಕಾಲ ಹೀಗೆ ಹಲವು ನಾಮಧೇಯಗಳಿಂದ ಕರೆಸಿಕೊಳ್ಳುವ ನಮ್ಮೂರು ಮಂಗಳೂರು.
ಪರಶುರಾಮನ ಸೃಷ್ಟಿಯ ಈ ಪುಣ್ಯಭೂಮಿಯಲ್ಲಿ ಹುಟ್ಲಿಕ್ಕೆ ಪುಣ್ಯ ಮಾಡಿರ್ಬೇಕು ಅಂತ ಎಷ್ಟೋ ಬಾರಿ ನಮ್ಮ ಅಜ್ಜ ಅಜ್ಜಿಯಂದಿರು ಮಾತನಾಡಿಕೊಂದದ್ದನ್ನು ನಾವೆಲ್ಲಾ ಕೇಳಿಸಿಕೊಂಡಿರ್ಬೋದು. ಯಾಕೆ ಪುಣ್ಯ ಮಾಡಿಬೇಕು ಅಂತ ಹೇಳ್ತಾರೆ ಅಂದ್ರೆ ನಮ್ಮೀ ಊರಿನಲ್ಲಿ ಇಲ್ಲದಿರುವುದು ಏನೂ ಇಲ್ಲ.
ಹಚ್ಚ ಹಸುರಿನ ಸೊಂಪಾದ ಪರಿಸರ, ಶುದ್ಧವಾದ ಗಾಳಿ, ನೀರು, ಸ್ವತ್ಛಂದವಾದ ವಾತಾವರಣ, ಭೋರ್ಗರೆವ ಕಡಲು, ಬಂದರು, ಯಕ್ಷಗಾನ, ದೈವಾರಾಧನೆ, ರುಚಿಯಾದ ಆರೋಗ್ಯಕರ ತಿನಿಸುಗಳು, ದೇವಸ್ಥಾನಗಳು, ಎಲ್ಲಕ್ಕಿಂತ ಹೆಚ್ಚಾಗಿ ಜನರ ನಡುವೆ ಇರುವ ಆ ಬಾಂಧವ್ಯ. ಈ ಊರಿನಲ್ಲಿ ಮಾತಿಗೇನೂ ಬರ ಇಲ್ಲ.
ಮಂಗ್ಳೂರ್ ನವ್ರು ಮಾತಾಡ್ಲಿಕ್ಕೆ ಭಾರೀ ಹುಷಾರು ಅಂತ ಬೇರೆ ಊರಿನವ್ರು ಹೇಳ್ಳೋದನ್ನು ನಾವು ಗಮನಿಸಿರಬೋದು. ಇಲ್ಲಿ ಮಾತನಾಡ್ಲಿಕ್ಕೆ ಪರಿಚಯಸ್ತರೇ ಆಗಬೇಕೆಂದಿಲ್ಲ. ಬೇರೆ ಊರಿನಿಂದ ಬಂದೋರು ಒಂದು ಚಿಕ್ಕ ನಗು ಬೀರಿದ್ರೆ ಸಾಕು ಮುಂದೆ ಮಾತಿನ ಮಳೆಯೇ ಸುರಿದುಬಿಡ್ತದೆ. ಬೇರೆ ಊರಿಗೆ ಹೋದ್ರೂ ನಮ್ಮ ಮಾತುಗಳನ್ನು ಆಲಿಸಿದವ್ರು “ಒಹ್ ನೀವು ಮಂಗ್ಳೂರಿನವ್ರಾ’ ಎಂದು ತಟ್ಟನೆ ಕೇಳಿ ಬಿಡ್ತಾರೆ.
ಇನ್ನು ನಮ್ಮೂರಿನ ಆಹಾರ. ಬೇರೆ ಯಾವುದೇ ಊರಿಗೆ ಹೋದ್ರು ಕುಡ್ಲದ ಜನ ಮಿಸ್ ಮಾಡ್ಕೊಳ್ಳೋದು ಅಂದ್ರೆ ಇಲ್ಲಿನ ಫುಡ್ ಒಂದೇ. ಯಾರೇ ಇಲ್ಲಿಗೆ ಬಂದ್ರೂ ಎಲ್ರೂ ನಮ್ಮ ಫುಡ್ ಗೆ ಅಡ್ಜಸ್ಟ್ ಆಗೋವಷ್ಟು ಒಳ್ಳೆ ಊಟ ನಮ್ಮೂರಿದ್ದು. ಒಮ್ಮೆ ಇಲ್ಲಿನ ಊಟ ಮಾಡಿದ್ರೆ ಸಾಕು ಮತ್ತೆ ಬೇರೆ ಊರಿನ ಊಟಕ್ಕೆ ಒಗ್ಗಿಕೊಳ್ಳುವುದು ನಾಲಿಗೆಗೆ ಕೊಂಚ ಕಷ್ಟವಾಗಬೋದು. ಇಲ್ಲಿನ ಊಟ ರುಚಿಯಿರುವುದಷ್ಟೇ ಅಲ್ಲ ದೇಹಕ್ಕೆ ಆರೋಗ್ಯಕರವೂ ಹೌದು. ಕುಚ್ಚಲಕ್ಕಿ ಅನ್ನಕ್ಕೆ ತೆಳಿ ಬೆರೆಸಿ, ಬದಿಯಲ್ಲಿ ಮಾವಿನ ಮಿಡಿ ಉಪ್ಪಿನಕಾಯಿ, ತೋಟದಲ್ಲಿ ಫ್ರೆಶ್ ಆಗಿ ಸಿಗೋ ಒಂದೆಲಗದ ಚಟ್ನಿ, ಬಸಳೆ ಸೊಪ್ಪಿನ ಸಾರು, ಬದಿಯಲ್ಲಿ ಒಂದೆರಡು ಗಾಂಧಾರಿ ಮೆಣಸು, ಹುಳಿಯಾದ ಮಜ್ಜಿಗೆ ಎಲ್ಲವನ್ನೂ ಬೆರೆಸಿಕೊಂಡು ಊಟ ಮಾಡಿದ್ರೆ ಆಹಾ !!ಸ್ವರ್ಗ.
ನಾವ್ ಎಷ್ಟೇ ಒಳ್ಳೆ ಊಟ ಮಾಡ್ಲಿ, ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಬಗೆ ಬಗೆ ಭಕ್ಷ್ಯಗಳನ್ನು ಸೇವಿಸಿ ಮನೆಗ್ ಬಂದು ಒಂದು ಬಟ್ಲು ಗಂಜಿ ಊಟಕ್ಕೇ ಸ್ವಲ್ಪ ಉಪ್ಪು ಹಾಕಿ ಸುರ್ ಅಂತ ಕುಡಿದ್ರೇನೇ ಮನಸ್ಸಿಗೆ ನೆಮ್ಮದಿ. ಇತ್ತೀಚಿನ ಸುಡು ಸುಡು ಬಿಸಿಲಿಗಂತೂ ಗಂಜಿ ಊಟ ಮತ್ತೆ ಮಜ್ಜಿಗೆ ನೀರೇ ಎಲ್ಲರ ಪ್ರಿಯ ಆಹಾರ. ಮಂಗಳೂರಿನ ಫೇಮಸ್ ಫುಡ್ ಅಂದ್ರೆ ಗೋಳಿಬಜೆ, ಬನ್ಸ್, ನೀರ್ ದೋಸೆ, ಕೋರಿ ರೊಟ್ಟಿ, ಮೀನ್ ಸಾರು ಇತ್ಯಾದಿ. ಇನ್ನೊಂದು ಊರಿಗೆ ಕೆಲಸಕ್ಕೆಂದು ಹೋಗೋರು ಇವುಗಳನ್ನೆಲ್ಲಾ ಸ್ವಲ್ಪ ಸ್ವಲ್ಪ ಕಟ್ಟಿಕೊಂಡೇ ಹೋಗ್ತಾರೆ.
ನನ್ನ ಸ್ನೇಹಿತೆಯೊಬ್ಬಳು ದೂರದೂರಿನಲ್ಲಿ ಕೆಲಸದಲ್ಲಿದ್ದಳು. ಹೀಗೆ ಕಾಲ್ ಮಾಡಿದಾಗ ಹೇಗೆ ಆಗ್ತಿದೆ ಕೆಲ್ಸ ಎಲ್ಲ ಅಂತ ಕೇಳಿದ್ದೆ. ಅವಳ ಉತ್ತರ ಕೇಳಿ ಒಂದು ಕ್ಷಣ ಬೆರಗಾಗಿಬಿಟ್ಟೆ. ನನಗೆ ಅಲ್ಲಿನ ಫುಡ್ ಸೆಟ್ ಆಗ್ಲಿಲ್ಲ ಹಾಗೆ ಕೆಲ್ಸ ಬಿಟ್ಟು ಬಂದೆ, ಎಷ್ಟಾದ್ರೂ ನಮ್ಮೂರಿನ ಫುಡ್ಡೆ ಬೆಸ್ಟ್ ಅಂತ ಅಂದ್ಲು.
ಇನ್ನು ಮಂಗಳೂರಿನ ಜನರ ಬಾಂಧವ್ಯ ಮುತ್ತಿನಂಥದ್ದು. ಹೋಟೆಲಿಗೆ ಊಟಕ್ಕಂತ ಹೋದ್ರೆ ವೇಟರ್ ಅಂತ ಕೂಗೋ ಬದ್ಲು ದನಿ ಅಥವಾ ಅಣ್ಣಾ ಅಂತ ಕರೀತೇವೆ. ಅಂಗಡಿಯಲ್ಲಿ ಅಥವಾ ಹೋಟೆಲ್‌ನಲ್ಲಿ ಬಿಲ್ ಕೊಟ್ಟು ಹೋಗೋವಾಗ ಬರೋಡ , ಬರ್ಪೆ ಅನ್ನೊ ಮಾತುಗಳು ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಪ್ರತಿಯೊಬ್ಬನನ್ನೂ ಗೌರವದಿಂದ ಕಾಣುವ ಊರು ನಮ್ಮದು. ಒಬ್ಬ ವ್ಯಕ್ತಿ ಒಮ್ಮೆ ಪರಿಚಯ ಆದ್ರೆ ಸಾಕು ಆಮೇಲೆ ಅವ್ರನ್ನು ಕಾಣಾ¤ ಇದ್ದಂತೆ ಹೊ ದನಿ ಎಂಚ ಉಲ್ಲರ್‌ಣ್ಣಾ/ಅಕ್ಕಾ ಸೌಖ್ಯನಾ ಅಂತ ಮಾತಾಡಿಸ್ತಾರೆ. ಹಾಗೇ ಊರಿನ ಫೇಮಸ್ ಅಂಗಡಿಗಳಿಗೆ ಒಂದೊಂದು ಹೆಸ್ರು. ಭಟ್ರೆನ ಅಂಗಡಿ, ಶೆಟ್ರ ಅಂಗಡಿ, ಸಾಯಿಬೆರ್ ಅಂಗಡಿ ಹೀಗೆ. ಸಂಜೆ ಆಗ್ತಾ ಇದ್ದಂತೆ ವಯಸ್ಕರು ಬಂದು ಅಂಗಡಿ ಜಗಲಿಯಲ್ಲಿ ಕುಳಿತು ಹರಟೆ ಹೊಡೆಯೋದು ಅಭ್ಯಾಸ. ಅವರ ಮಾತಿಗೆ ಕಿವಿಯಾಲಿಸಿದ್ರೆ ಕೆಲ ವಿಷಯದ ಜ್ಞಾನ ತನ್ನಿಂತಾನೇ ಮೆದುಳನ್ನು ಸೇರಿಬಿಡುತ್ತದೆ.
ದೈವಾರಾಧನೆ ತುಳುನಾಡಿನ ಪ್ರಮುಖ ನಂಬಿಕೆ. ಇಲ್ಲಿನ ಜನ ದೇವ್ರನ್ನು ಎಷ್ಟು ನಂಬುತ್ತಾರೋ ಅದಕ್ಕಿಂತ ಹೆಚ್ಚು ದೈವವನ್ನು ನಂಬುತ್ತಾರೆ. ಕೇಳಿದ್ದನ್ನು ಒಂದು ವೇಳೆ ದೇವರು ದಯಪಾಲಿಸದಿದ್ದರೂ ದೈವ ಕೊಟ್ಟೆ ತೀರುತ್ತದೆ ಎನ್ನುವುದು ತುಳುನಾಡಿನ ಜನರ ದೃಢನಂಬಿಕೆ. ಪ್ರಾಣಿಗಳಿಗೆ ಅನಾರೋಗ್ಯವಾದರೂ ದೈವವನ್ನು ಬೇಡಿಕೊಂಡು ಹರಕೆ ಹೇಳಿಕೊಳ್ಳುತ್ತಾರೆ. ಅದು ನೆರವೇರಿದ ಬಳಿಕ ದೈವಕ್ಕೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸುತ್ತಾರೆ. ಕೋಲ, ನೇಮ, ಅಗೇಲು, ತಂಬಿಲ ಇವೆÇÉಾ ತುಳುನಾಡಿನ ಭೂತಾರಾಧನೆಯ ವಿಧಗಳು. ಗ್ರಾಮದ ಜನರು ಸಮಸ್ಯೆಗಳಿಗೆ ರಕ್ಷಣೆಯನ್ನು ಕೋರಲು ನೇಮವನ್ನು ಮಾಡುತ್ತಾರೆ. ಆಚರಣೆಯ ಸಮಯದಲ್ಲಿ ನೃತ್ಯ ಮಾಡುವ ವ್ಯಕ್ತಿಯ ಮೇಲೆ ಸ್ವತಃ ದೈವವೇ ಆವಾಹನೆಗೊಂಡು ನೃತ್ಯ ಮಾಡುತ್ತದೆ ಮತ್ತು ನಂಬಿ ಬಂದವರ ಕಷ್ಟಗಳನ್ನೆಲ್ಲಾ ದೂರ ಮಾಡುತ್ತಾನೆ ಎನ್ನುವ ನಂಬಿಕೆ ಇದರಲ್ಲಿದೆ. ಏನೇ ಕಷ್ಟ ಬಂದ್ರೂ ತುಳುನಾಡಿನ ಜನರ ಬಾಯಲ್ಲಿ ಮೊದಲಿಗೆ ಬರೋದು ಅಪ್ಪೆ ಕಾಪುಲೆ, ಅಜ್ಜಾ ಈರೆ ಕಾಪೊಡು ಎಂಬುವುದು. ಹಾಗಾಗಿ ಮಂಗಳೂರಿನ ದೈವಾರಾಧನೆಗೆ ಸರಿಸಾಟಿ ಬೇರೊಂದಿಲ್ಲ.
ಮಂಗಳೂರಿನ ಬಗ್ಗೆ ಮಾತಾಡ್ಲಿಕೆ ಪದಗಳೇ ಸಾಲದು. ಒಬ್ರ ಬೆಲೆ ಅವ್ರು ಇಲೆª ಇರೋವಾಗ್ಲೆà ಗೊತ್ತಾಗೋದು ಅನ್ನೋ ಮಾತಿನಂತೆ ನಾವು ಬೇರೆ ಪ್ರದೇಶಕ್ಕೆ ಹೋದಾಗ್ಲೆà ಗೊತ್ತಾಗೋದು ನಮ್ಮೂರಿನ ವಿಶೇಷತೆ, ಪ್ರಾಮುಖ್ಯತೆ ಎಂಥದ್ದು ಅಂತ. ಅಷ್ಟೊಂದು ವಿಚಾರಗಳು, ಆಚರಣೆಗಳು, ಆಕರ್ಷಣೆಗಳು ಇಲ್ಲಿವೆ. ಕಡಲ ತೀರದಲ್ಲಿ ಹೋಗಿ ಕುಳಿತರೆ ಭೋರ್ಗರೆವ ಆ ಸದ್ದಿಗೆ ಮನಸ್ಸು ತಿಳಿಯಾಗಿ ಬಿಡುತ್ತದೆ. ಹಚ್ಚ ಹಸುರಿನಿಂದ ಕೂಡಿದ ತೋಟಕ್ಕೆ ಇಳಿದರೆ ಸಾಕು ಶುದ್ಧವಾದ ಗಾಳಿಯನ್ನು ಸವಿಯುತ್ತಾ ಮನಸ್ಸು ಆನಂದಿಸುತ್ತದೆ. ದೇವಸ್ಥಾನಗಳಿಗೆ ಪ್ರವೇಶಿಸಿದರಂತೂ ಒಂದು ರೀತಿಯ ಪ್ರಶಾಂತತೆ ನಮ್ಮನ್ನು ಆವರಿಸಿ ಬಿಡುತ್ತದೆ. ಈ ಪ್ರದೇಶದಲ್ಲಿ ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಬದುಕುತ್ತಾರೆ. ಇನ್ನೇನ್ ಬೇಕು ಮಾರೆì ನಮ್ಮೂರು ಚಂದ ಅಂತ ಹೇಳಿಕ್ಕೆ?
-ಲಾವಣ್ಯ ಎಸ್.
ವಿವೇಕಾನಂದ ಸ್ವಾಯತ್ತ,
ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.