Krishna Janmashtami: ಯುವಜನತೆಗೆ ಮಾದರಿಯಾಗಲಿ ಶ್ರೀಕೃಷ್ಣ
Team Udayavani, Aug 26, 2024, 8:00 AM IST
ಹಿಂದೂ ಧರ್ಮದಲ್ಲಿ ಪ್ರಮುಖ ದೇವರು ಕೃಷ್ಣ. ಆತನನ್ನು ವಿಷ್ಣುವಿನ ಎಂಟನೇ ಅವತಾರವಾಗಿ ಪೂಜಿಸಲಾಗುತ್ತದೆ. ಕೃಷ್ಣನು ಮಹಾಭಾರತ, ಭಾಗವತ ಪುರಾಣ ಬ್ರಹ್ಮನ ವೈವರ್ತ ಪುರಾಣ ಮತ್ತು ಭಗವದ್ಗೀತೆಗಳಲ್ಲಿ ಕೇಂದ್ರ ವ್ಯಕ್ತಿಯಾಗಿದ್ದಾನೆ.
ಕೃಷ್ಣ ಜನ್ಮಾಷ್ಟಮಿಯ ಹಬ್ಬವು ಹಿಂದೂಗಳಿಗೆ ಅತೀ ಪ್ರೀತಿಯ ಶ್ರೇಷ್ಠವಾದ ಹಬ್ಬವಾಗಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀ ಜಯಂತಿ ಎಂದು ಕರೆಯಲಾಗುತ್ತದೆ.
ದೇವಕಿಯ ಸಹೋದರನಾಗಿದ್ದ ಮಥುರಾದ ರಾಕ್ಷಸ ರಾಜ ಕಂಸನನ್ನು ಸೋಲಿಸುವ ಉದ್ದೇಶದಿಂದ ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಎಂಟನೇ ಅವತಾರವಾದ, ಹಾಗೆಯೇ ದೇವಕಿ ಮತ್ತು ವಸುದೇವನ ಮಗನಾದ ಶ್ರೀ ಕೃಷ್ಣನು ಜನ್ಮಾಷ್ಟಮಿಯಂದು ಜನಿಸಿದನು.
ದೇವಕಿಯ ಎಂಟನೇ ಮಗುವಿನ ಕೈಯಿಂದಲೇ ಕಂಸನ ಅವನತಿ ಎಂಬ ಭವಿಷ್ಯವಾಣಿಯನ್ನು ತಿಳಿದಂತಹ ಕಂಸನು ದೇವಕಿ ಮತ್ತು ವಸುದೇವನನ್ನು ಸೆರಮನೆಯಲ್ಲಿ ಇಡುತ್ತಾನೆ. ಹಾಗೆಯೇ ದೇವಕಿಗೆ ಜನಿಸಿದ ಮಕ್ಕಳನ್ನು ಕೊಲ್ಲುತ್ತಾ ಬರುತ್ತಾನೆ. ಆದರೆ ದುರಂತದ ವಿಷಯ ಏನೆಂದರೆ ಕಂಸನು ದೇವಕಿಯ ಆರು ಮಕ್ಕಳನ್ನು ನಿರ್ಮೂಲನೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗುತ್ತಾನೆ. ಆದರೆ ದೇವಕಿ ತನ್ನ ಏಳನೇಯ ಮಗು ಬಲರಾಮನನ್ನು ಗರ್ಭಿಣಿಯಾಗಿದ್ದಾಗ ಹುಟ್ಟಲಿರುವ ಮಗು ಅದ್ಭುತವಾಗಿ ಅವಳ ಗರ್ಭದಿಂದ ರಾಜಕುಮಾರಿ ರೋಹಿಣಿಗೆ ವರ್ಗಾಯಿಸಲ್ಪಟ್ಟಿತು.
ಅನಂತರ ಅವರ ಎಂಟನೆಯ ಮಗು ಕೃಷ್ಣ ಜನಿಸಿದಾಗ ಇಡೀ ಅರಮನೆಯು ಗಾಢವಾದ ನಿದ್ರಾವಸ್ಥೆಯಲ್ಲಿ ಮುಳುಗಿತು. ಏಕೆಂದರೆ ಮಗುವನ್ನು ರಕ್ಷಿಸಲು ಭಗವಾನ್ ಕೃಷ್ಣ ವಸುದೇವನಿಗೆ ಮಾಡಿಕೊಟ್ಟಂತಹ ಅವಕಾಶ ಅದಾಗಿತ್ತು. ಕೃಷ್ಣನನ್ನು ವಸುದೇವನು ಬೃಂದಾವನದಲ್ಲಿರುವ ತನ್ನ ಸ್ನೇಹಿತ ನಂದ ಮಹಾರಾಜ ಮತ್ತು ಯಶೋದಾ ಅವರ ಮನೆಗೆ ತೆಗೆದುಕೊಂಡು ಹೋಗಿ ಬಿಟ್ಟನು. ಅನಂತರ ವಸುದೇವನು ಅರಮನೆಗೆ ಹಿಂದಿರುಗಿದನು. ದೇವಕಿಯ ಪಕ್ಕದಲ್ಲಿ ಒಂದು ಹೆಣ್ಣು ಮಗುವನ್ನು ಇರಿಸಲಾಯಿತು ಅದೇ ಮಗುವನ್ನು ಕಂಸನಿಗೆ ನೀಡಿದ ಮಾತಿನಂತೆ ಅವನಿಗೆ ಒಪ್ಪಿಸಲಾಯಿತು. ಕಂಸನು ಆ ಮಗುವನ್ನು ಸಾಯಿಸಲು ಪ್ರಯತ್ನಿಸಿದಾಗ ಆ ಮಗು ದುರ್ಗೆಯಾಗಿ ರೂಪಾಂತರಗೊಂಡಳು.
ಹಾಗೆಯೇ ದುರ್ಗೆಯು ಕಂಸನಿಗೆ ಅವನ ವಿನಾಶದ ಮುನ್ಸೂಚನೆಯನ್ನು ನೀಡಿ ಮಾಯಾವಾದಳು. ಹೀಗಾಗಿ ದುಷ್ಟರನ್ನು ನಾಶಗೊಳಿಸುವ ಸಲುವಾಗಿ ಹುಟ್ಟಿದ ಶ್ರೀ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ
ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಶ್ರೀ ಕೃಷ್ಣನು ಮಧುರ ಪಟ್ಟಣದಲ್ಲಿ ಅಷ್ಟಮಿ ತಿಥಿ ಅಥವಾ ಶ್ರಾವಣ ಮಾಸದಲ್ಲಿ ದೇವಕಿ ಮತ್ತು ವಸುದೇವನ ಪುತ್ರನಾಗಿ ಜನಿಸಿದನು. ಹೀಗೆ ಜನಿಸಿದ ಕೃಷ್ಣ ಎಲ್ಲರ ಮೆಚ್ಚಿನ ಮಗುವಾಗಿ, ನಾಯಕನಾಗಿ ಬೆಳೆಯುತ್ತಾನೆ. ಪ್ರೀತಿಯ ನಲ್ಲನಾಗಿ, ಮುಗ್ಧನಾಗಿ ಪ್ರತಿಯೊಬ್ಬ ತಾಯಿಯೂ ಇಷ್ಟಪಡುವಂತಹ ಮಗು ಇವನಾಗಿದ್ದ.
ಇಂದಿಗೂ ತಾಯಂದಿರು ಇಷ್ಟಪಟ್ಟು ಕೃಷ್ಣನ ವೇಷವನ್ನು ಒಮ್ಮೆಯಾದರೂ ತನ್ನ ಮಗುವಿಗೆ ಹಾಕಿಸಿ ಖುಷಿಪಡುತ್ತಾರೆ. ಮಗುವಿನ ಕೈಯಲ್ಲೊಂದು ಕೊಳಲು, ತಲೆಗೊಂದು ನವಿಲುಗರಿ ಇಟ್ಟು ಅವಳೇ ಯಶೋಧರಿಯಾಗಿ ಮೆರೆಯುತ್ತಾಳೆ. ಕೃಷ್ಣನನ್ನು ಭಕ್ತಿಯಿಂದ, ಪ್ರೀತಿಯಿಂದ ಪೂಜಿಸುವ ಅವನ ಕಥೆಯನ್ನು ತಿಳಿದ ಪ್ರತಿಯೊಂದು ಹೆಣ್ಣು ತಾನೇ ರಾಧೆ ಎಂಬಂತೆ ಕಲ್ಪಿಸಿಕೊಳ್ಳುತ್ತಾಳೆ. ರಾಧೆಯ ಸ್ಥಾನದಲ್ಲಿ ತನ್ನನ್ನೇ ಕಾಣುತ್ತಾಳೆ. ಹಾಗೆಯೇ ಹೆಣ್ಣಿಗೆ ಗಂಡು ಹುಡುಕುವ ತಂದೆ ತಾಯಿಯರು ಕೃಷ್ಣನಂತಹ ಗಂಡೇ ಸಿಗಬಾರದೇ ಎಂದು ಬೇಡುತ್ತಾರೆ, ಹಾಗೆಯೇ ಕಷ್ಟದಲ್ಲಿರುವ ಪ್ರತಿಯೊಬ್ಬರೂ ನಾನೆ ಕುಚೇಲ ನನ್ನ ಬಳಿ ಕೃಷ್ಣ ಬರಬಾರದೆ ನನ್ನ ಕಷ್ಟವ ಪರಿಹರಿಸಬಾರದೆ ನನಗೂ ಮಾರ್ಗದರ್ಶನ ತೋರಿ ನಡೆಸಬಾರದೇ ಎಂದು ಬೇಡುತ್ತಾನೆ.
ಒಟ್ಟಾರೆಯಾಗಿ ಕೃಷ್ಣ ಯಾಕೆ ಎಲ್ಲರಿಗೂ ಇಷ್ಟ ಆಗುವಂತಹ ವ್ಯಕ್ತಿತ್ವವನ್ನು ಹೊಂದಿದ್ದಾನೆ ಎಂಬುದು ಎಲ್ಲರಿಗೂ ಕುತೂಹಲದ ಸಂಗತಿಯಾಗಿದೆ. ಕೃಷ್ಣನ ಹುಟ್ಟಿನಿಂದ ಸಾವಿನವರೆಗೂ ಇರುವಂತಹ ಕೃಷ್ಣನ ಕಥೆಯನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಆದರೆ ಮತ್ತೂಂದು ಆಶ್ಚರ್ಯಕರ ವಿಷಯ ಏನೆಂದರೆ ಕೃಷ್ಣನಿಗೆ ಯಾವತ್ತೂ ವಯಸ್ಸಾಗಲೇ ಇಲ್ಲ… ಅದು ಹೇಗೆಂದರೆ ಕೃಷ್ಣನದು ಲವಲವಿಕೆಯ ಬದುಕಾಗಿತ್ತು. ಬೃಂದಾವನದಲ್ಲಿ ಚಿಕ್ಕ ಮಗುವಾಗಿದ್ದಾಗ ಹೇಗಿದ್ದನೋ ಹಾಗೆಯೇ ಕೊನೆಯವರೆಗೂ ಇದ್ದ. ಅಂದರೆ ಮಗುವಿನಂತ ಮನಸ್ಸನ್ನು ಹೊಂದಿದ್ದ.
ಹೃದಯದಲ್ಲಿ ತುಂಬಿದ್ದ ಅಪಾರವಾದ ಪ್ರೀತಿಯಿಂದ, ಸದಾ ಉಲ್ಲಾಸದಿಂದ ಇದ್ದ ಮನಸ್ಸಿನಿಂದ, ಅವನು ಕಾಪಾಡಿಕೊಂಡಂತಹ ದೃಢಕಾಯದಿಂದ, ಹೃದಯ, ಮನಸ್ಸು ಮತ್ತು ದೇಹದ ಆರೋಗ್ಯ ಯಾವತ್ತೂ ಕೆಡದಂತೆ ಕಾಪಾಡಿಕೊಂಡಿದ್ದರಿಂದ ಹಾಗೆ ಇರಲು ಸಾಧ್ಯವಾಗಿದ್ದು.
ಕೃಷ್ಣ ಎಂದರೆ ನಮಗೆ ನೆನಪಾಗುವುದು ಅವನ ತುಂಟತನ. ಆದರೆ ಅದು ಅವನ ಜೀವನದ ಒಂದು ಪುಟ್ಟ ಭಾಗ ಅಷ್ಟೇ. ಆದರೆ ಕೃಷ್ಣ ಯಾವ ವಯಸ್ಸಿಗೆ ಹೇಗಿರಬೇಕು ಅದೆಲ್ಲವನ್ನು ಪರಿಪೂರ್ಣವಾಗಿ ಮಾಡಿದ್ದ. ಆದ್ದರಿಂದಲೇ ಅವನ ಬದುಕು ಎಲ್ಲ ವಯಸ್ಸಿನವರಿಗೂ ಇಷ್ಟವಾಗುವುದು. ರಾಧೆ – ಕೃಷ್ಣರ ಪ್ರೀತಿ ಇಂದಿಗೂ ಅಮರವಾಗಿದೆ. ಆದರೆ ತನ್ನ 16ನೇ ವಯಸ್ಸಿನಲ್ಲೇ ಈ ಪ್ರೀತಿಯ ಬಂಧನವನ್ನು ಕಳಚಿಕೊಂಡು ಮುಂದಿನ ದಾರಿಗೆ ಸಾಗಿದ್ದ ಕೃಷ್ಣ, ಬೃಂದಾವನದಲ್ಲಿಯೇ ಕೊಳಲು ಊದಿಕೊಂಡು ಕುಳಿತರೆ ಆಗದು ಸಾಧನೆಯ ಹಾದಿ ತುಂಬಾ ದೀರ್ಘವಿದೆ ಎನ್ನುವ ಸತ್ಯವನ್ನು ಸಣ್ಣ ವಯಸ್ಸಿನಲ್ಲಿಯೇ ಕಂಡುಕೊಂಡಿದ್ದ.
ಕೃಷ್ಣ ತನ್ನ ಮಾವ ಕಂಸ ಕರೆದ ಬಿಲ್ಲು ಹಬ್ಬಕ್ಕಾಗಿ ಹೊರಟು ನಿಂತಾಗ ರಾಧೆಯ ವ್ಯಥೆಯನ್ನು ಹೇಳತೀರದಾಗಿತ್ತು. ಆಗ ಕೃಷ್ಣನು ಸುದೀರ್ಘವಾಗಿ ಕೊಳಲು ನುಡಿಸಿ ಕೊನೆಗೆ ಕೊಳಲನ್ನು ರಾಧೆಗೆ ಕೊಟ್ಟನು. ಮುಂದೆ ಯಾವತ್ತೂ ಕೊಳಲು ಮುಟ್ಟುವುದಿಲ್ಲ ಬೃಂದಾವನಕ್ಕೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹೊರಟು ನಿಂತ. ಅನಂತರ ಕೃಷ್ಣನೇ ಕೊಳಲಾಗಿ ರಾಧೆಯ ಕೈಯಲ್ಲಿ ನಿಂತನು. ರಾಧೆಯೂ ಸಹ ಮತ್ಯಾವತ್ತೂ ಕೃಷ್ಣನ ಬೆನ್ನು ಹತ್ತಿ ಹೋಗಲಿಲ್ಲ.
ಕೃಷ್ಣನು ನಾಲ್ಕು ಕ್ಷಣಕ್ಕೆ ಹುಟ್ಟಿಕೊಳ್ಳುವಂತಹ ಪ್ರೀತಿ ಬದುಕಿನ ಎಲ್ಲ ಸಾಧನೆಯ ದಾರಿಗಳನ್ನು ಮುಚ್ಚಿ ಪ್ರೀತಿಯೇ ಸಾಧನೆ ಎಂದು ಬೀಗುವ ಮನೋಸ್ಥಿತಿಗಳಿಗೆ ಪ್ರೀತಿ ಬದುಕಿನ ಒಂದು ಭಾಗವಷ್ಟೇ. ಅಮರ ಮಧುರ ನೆನಪಷ್ಟೇ, ಸಾಧನೆಯ ಹಾದಿಯೇ ಮುಖ್ಯ ಎಂದು ತೋರಿಸಿಕೊಟ್ಟಿದ್ದ.
ಹೀಗೆ ಜೀವನದಲ್ಲಿ ಎಷ್ಟೇ ಸಂದಿಗ್ಧ ಕಷ್ಟದ ಸಮಯ ಸಂದರ್ಭ ಬಂದಾಗಲೂ ಕುಗ್ಗದೇ, ಚಿಂತಿಸದೆ ಮುಂದಿನ ಹಾದಿ ಯೋಚಿಸುತ್ತಾ ಸಾಗುವ ಕೃಷ್ಣ, ಹಾಗೆಯೇ ತನ್ನ ಜೀವನದ ಗುರಿಯನ್ನು ಸಾಗಿ ಬಿಡುವ ಕೃಷ್ಣನ ಆದರ್ಶಗಳು ಅವನ ಜೀವನ ಇಂದಿನ ಯುವಕರಿಗೆ ಯುವ ಪೀಳಿಗೆಗೆ ದಾರಿಯಾಗಲಿ. ಕೃಷ್ಣ ಜನ್ಮಾಷ್ಟಮಿಯನ್ನು ಅಥವಾ ಯಾವುದೇ ಹಬ್ಬವನ್ನು ಕೇವಲ ಹೆಸರಿಗಷ್ಟೇ ಹಬ್ಬವಾಗಿ ಆಚರಿಸಿ ಸಂಭ್ರಮಿಸದೆ ಅದರ ಪೂರ್ಣ ಮಹತ್ವವನ್ನು ಅರಿತುಕೊಳ್ಳೋಣ.
ಕೃಷ್ಣನಿಂದ ನಾವು ಜೀವನದಲ್ಲಿ ಕಲಿತು ಅಳವಡಿಸಿಕೊಳ್ಳಬೇಕಾದ ನೀತಿ “ಶಕ್ತಿಗಿಂತ ಯುಕ್ತಿ ಮೇಲು’ ಶಕ್ತಿಯಿಂದ ಅಸಾಧ್ಯವಾದುದನ್ನು ಯುಕ್ತಿಯಿಂದಲೇ ಮಾಡಬೇಕು. ಹಾಗೆಯೇ ಕೋಪ ದ್ವೇಷದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ ಪ್ರೀತಿ ಪ್ರೇಮದಿಂದಲೇ ಎಲ್ಲವನ್ನು ಜಯಿಸಬಹುದು. ಒಬ್ಬ ವ್ಯಕ್ತಿ ಶತ್ರುವೂ ಆಗಬಲ್ಲ ಮಿತ್ರನೂ ಆಗಬಲ್ಲ ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಪಡೆಯುತ್ತೀರಿ ಎಂದು ಹೇಳಿದ ಕೃಷ್ಣವಾಣಿ ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ..?
-ಭಾಗ್ಯ ಜೆ.
ಬೋಗಾದಿ, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.