Mother: ಅಮ್ಮಾ ನಿನಗೂ ಅವಕಾಶ ಸಿಗಬೇಕಿತ್ತು!
Team Udayavani, Jan 14, 2025, 9:18 PM IST
ಈ ಆಸೆ ನನಗೆ ಮಾತ್ರ ಅಲ್ಲ ಅದೆಷ್ಟೋ ಮಧ್ಯಮ ವರ್ಗದ ಮಕ್ಕಳಿಗೆ ಇರಬಹುದು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಮಾತು ಎಷ್ಟು ನಿಜ. ಕೆಲವೊಂದು ಆಸೆ ಕನಸುಗಳು ನಾವೇ ಮನಸ್ಸಿನಲ್ಲಿ ಕಟ್ಟಿಕೊಂಡು ಖುಷಿ ಪಡುವುದುಂಟು, ನೋವುಣ್ಣುವುದುಂಟು, ವಿಷಾದಿಸುವುದುಂಟು. ಅವೆಲ್ಲವೂ ಸ್ವಾರ್ಥವೇ ಆಗಿರಬೇಕೆಂದಿಲ್ಲ. ನಮಗೂ ನಮ್ಮದೇ ಬಯಕೆಗಳಿರುತ್ತವೆ.
ನನಗಂತೂ ಅಂತಹ ಮಹಾನ್ ವೈಯಕ್ತಿಕ ಆಸೆಗಳೇನಿಲ್ಲ. ಹೀಗೆ ಯಾವುದೋ ದಿನ ನಡೆದ ಘಟನೆಯ ತುಣುಕಷ್ಟೇ ಬಹುಶಃ ಘಟನೆಯೂ ಅಲ್ಲ ಕೇವಲ ಅದೊಂದು ಸನ್ನಿವೇಶ. ಮನದಲ್ಲಿ ಆ ಕ್ಷಣ ಬೇರೂರಿದ ಸಣ್ಣ ಬಯಕೆ ವಿಧಿಯ ಮೇಲೆ ಮೂಡಿದ ಸಣ್ಣ ವಿಷಾದ.
ನಾನು ದ್ವಿತೀಯ ವರ್ಷದ ಪದವಿಯಲ್ಲಿದ್ದೆ. ನಾನು ನನ್ನ ಗೆಳತಿಯರು ಕಾಲೇಜಿನ ಲೈಬ್ರರಿ ಬಳಿ ಕೂತು ಹರಟೆ ಹೊಡಿತಾ ಇದ್ದೆವು. ಹೀಗೆ ಹರಟೆ ಹೊಡೆಯುತ್ತಾ ಇರುವಾಗ ಏಳೆಂಟು ಜನ ಹೆಂಗಸರು ಕಾಲೇಜು ಪ್ರವೇಶ ಮಾಡಿದರು. ಲೈಬ್ರರಿ ತುಂಬ ಅಡ್ಡಾಡುತ್ತಾ ಇದ್ದರು. ಅವರೆಲ್ಲರಿಗೂ ವಯಸ್ಸು 50 ದಾಟಿರಬಹುದು. ವಿದ್ಯಾವಂತರಂತೆ ಕಾಣಿಸುತ್ತಾ ಇದ್ದರು. ಅವರನ್ನು ಮಾತನಾಡಿಸುವ ತವಕ ಉಂಟಾಗಿ ಮಾತನಾಡಿಸಿದೆವು.
ಅವರು ನಮ್ಮದೇ ಕಾಲೇಜಿನ ಹಳೆ ವಿದ್ಯಾರ್ಥಿಗಳು. ಅವರ ಗೆಳತಿಯರ ಗುಂಪು ಆ ದಿನ ಕಾಲೇಜಿಗೆ ಭೇಟಿ ನೀಡಲು ಬಂದಿತ್ತು. ಆ ಕ್ಷಣ ನನ್ನಲ್ಲಿ ಏನೋ ಒಂದು ಮೌನ ಆವರಿಸಿತ್ತು. ನಮ್ಮ ಅಮ್ಮಂದಿರು ಕೂಡ ಒಳ್ಳೆಯ ಶಿಕ್ಷಣ ಪಡೆದಿದ್ದರೆ ಬಹುಶಃ ಇದೇ ಸ್ಥಾನದಲ್ಲಿ ಇರುತ್ತಿದ್ದರೋ ಏನೋ ಎಂದು.
ಎಲ್ಲ ಸಮಯದಲ್ಲಿ ಯಶಸ್ಸು ಕೇವಲ ಪರಿಶ್ರಮದ್ದು ಮಾತ್ರ ಆಗಿರಲ್ಲ, ಅವಕಾಶಗಳದ್ದು ಕೂಡ ಆಗಿರುತ್ತೆ. ಅಂತಹ ಅವಕಾಶ ನಮ್ಮ ಅಮ್ಮಂದಿರಿಗೂ ಸಿಕ್ಕಿದ್ದಿದ್ದರೆ ಇವತ್ತು ಅವರು ಕೂಡ ಜೀವನದಲ್ಲಿ ಒಳ್ಳೆಯ ಯಶಸ್ಸು ಕಾಣುತ್ತಿದ್ದರು. ಅವಕಾಶಗಳು ಸಿಕ್ಕಿದರೆ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು. ಆದರೆ ಅವಕಾಶದಿಂದಲೇ ವಂಚಿತರಾದರೆ? ಪ್ರಾಯಶಃ ಅದಕ್ಕೇನೆ ಆಗಿರಬಹುದು ನಮ್ಮ ತಂದೆ ತಾಯಿ ಅವರ ಕನಸುಗಳನ್ನು ನಮ್ಮ ಕಣ್ಣಲ್ಲಿ ಕಾಣುತ್ತಿದ್ದಾರೆ. ಅವರಿಗೆ ಸಿಗದ ಅವಕಾಶಗಳನ್ನು ನಮಗೆ ಕೈಗೆಟುಕುವ ಹಾಗೆ ತಂದಿಟ್ಟಿದ್ದಾರೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳೋಣ.
-ಪ್ರೇರಣಾ ಸುವರ್ಣ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.