ಕಲಿಯುಗದ ಶ್ರವಣ ಕುಮಾರ
Team Udayavani, Jul 6, 2021, 3:43 PM IST
ಸಾಂದರ್ಭಿಕ ಚಿತ್ರ
ಕಾಮಧೇನುವಿನ ಕೆಚ್ಚಲಿನಿಂದ ಸಕಲ ಅಮೃತವ ಹೀರಿ ಕೊನೆಗೆ ಗೊಡ್ಡೆಂದು ಮಾರುವ ಸ್ವಾರ್ಥಿಗಳು ನಾವು.
ಸುಖದ ಸುಪ್ಪತ್ತಿಗೆಯಲ್ಲೇ ಹೆತ್ತವರನ್ನು ಮೆರೆಸಿದರೂ ಕೊಂಚ ಸಮಯದ ಪ್ರೀತಿಯ ಬದಲು ಬಿಝಿ ಎಂಬ ಟ್ಯಾಗ್ ಲೈನ್. ಓದಿಗಾಗಿ ಹಾಸ್ಟೆಲ್ ಸೇರಿದರೆ ಮನೆಯವರ ಕರೆಗಾಗಿ ಐದು ನಿಮಿಷ ಸಮಯ ಮೀಸಲಿಡುವುದೂ ಕಷ್ಟ. ಕೆಲಸದ ನಿಮಿತ್ತ ಪಟ್ಟಣ ಅಥವಾ ವಿದೇಶದ ಹಾದಿ ಹಿಡಿದರಂತೂ ವೃದ್ಧರು ಮಕ್ಕಳ ದಾರಿ ಕಾಯುತ್ತಾ ಹಳ್ಳಿಯಲ್ಲೇ ಬಾಕಿ.
ನಾವಿಬ್ಬರೂ ನಮಗಿಬ್ಬರು ಎಂಬಂತಾದ ಮೇಲೆ ಹೆತ್ತವರು ದೂರ, ವೃದ್ಧಾಶ್ರಮವೇ ಅವರ ಪಾಲಿಗೆ ಆಶ್ರಯ. ತ್ರೇತಾಯುಗದಲ್ಲಿ ಶ್ರವಣ ಕುಮಾರ ತನ್ನ ಅಂಧ, ವೃದ್ಧ ತಂದೆ ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿ ತೀರ್ಥಯಾತ್ರೆಗೆಂದು ಹೊರಟ ಕಥೆ ಗೊತ್ತೇ ಇದೆ. ಇಂತಹ ಶ್ರೇಷ್ಠ ಗುಣದಿಂದ ಆತ ಎಂದೂ ಅಜರಾಮರ. ಅಂತೆಯೇ ಇತ್ತೀಚೆಗೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಅದೊಂದು ದೃಶ್ಯ ನಮ್ಮ ಕಣ್ಣುಗಳು ತೇವವಾಗುವಂತೆ ಮಾಡಿತ್ತು. ಪುಟ್ಟ ಹಸುಗೂಸನ್ನು ತಾಯಿ ಜೋಪಾನವಾಗಿ ಹೇಗೆ ಎತ್ತಿಕೊಳ್ಳುವಳ್ಳೋ ಹಾಗೆಯೇ ತಾಯಿಯನ್ನು ಎತ್ತಿಕೊಂಡು ದೇವರ ದರ್ಶನಕ್ಕೆಂದು ಬಂದಿದ್ದ ಮಗ. ಅಡಿಗಡಿಗೆ ಪ್ರೀತಿಯ ಮುತ್ತುಗಳನ್ನು ತಾಯಿಯ ಗಲ್ಲಕ್ಕಿತ್ತು ಮುಗುಳು ನಗುತ್ತಿದ್ದ. ಮಾತೃ ಮಮಕಾರವೇ ತೊಟ್ಟಿಲಾಗಿತ್ತು ತಾಯಿಗೆ.
ಆ ಗಳಿಗೆಯಲಿ ನನಗನಿಸಿದ್ದು , ಜಗತ್ತು ನಾನಂದುಕೊಂಡಷ್ಟು ಕೆಟ್ಟದಲ್ಲ , ಸ್ವಾರ್ಥದಲ್ಲೇ ಮುಳುಗಿಲ್ಲವೇನೋ..? ಪ್ರೀತಿ, ವಾತ್ಸಲ್ಯ ಇನ್ನೂ ಜೀವಂತವಾಗಿದೆ ಎಂದು. ಮಂಜುನಾಥ ಹಾಗೂ ನಿಸ್ವಾರ್ಥ ಮನಗಳ ದರ್ಶನದ ಸಾರ್ಥಕ ಭಾವ. ಇವರು ಮೂಲತಃ ತಿಪಟೂರಿನವರು. 96 ವಸಂತಗಳ ಮಳೆ, ಬಿಸಿಲು ಕಂಡು ಬಾಗಿದ ಮರ ಶಿವಮ್ಮ ಹಾಗೂ 43 ವರ್ಷ ಪ್ರಾಯದ ಮಗ ಶಿವರುದ್ರಯ್ಯ. ಗಾರೆ ಕೆಲಸದ ವರಮಾನವೇ ಅವರಿಗೆ ಆಧಾರ. ಪ್ರತೀ ವರ್ಷವೂ ಮಲೆ ಮಹದೇಶ್ವರನ ಬೆಟ್ಟಕ್ಕೆ ತಾಯಿಯನ್ನು ಎತ್ತಿಕೊಂಡು ಹೋಗುತ್ತಿದ್ದರಂತೆ ಶಿವರುದ್ರಯ್ಯ.
ನೀವು ನಿಜಕ್ಕೂ ಗ್ರೇಟ್ ಸಾರ್ ಅಂತ ಅಂದಾಗ “ಹುಟ್ಟಿನಿಂದ ಇಲ್ಲಿ ವರೆಗೂ ತಾಯಿ ಸಮಾನ ಪ್ರೀತಿಕೊಟ್ಟವಳು. ಹೀಗೆಯೇ ಎತ್ತಿ, ಮುದ್ದಾಡಿ ಬೆಳೆಸಿದವಳು. ಈಗ ಅವಳಿಗೆ ವಯಸ್ಸಾಯಿತು ಅಂತ ನಾನು ಕೈ ಬಿಡುವುದು ಎಷ್ಟು ಸರಿ. ಇದು ನಮ್ಮ ಕರ್ತವ್ಯ ರೀ. ಇವಳು ನನ್ನ ದೇವತೆ’ ಎಂದು ತಾಯಿಯ ಮುಖ ಸವರಿದರು. ಮಾತಿನ ಮಧ್ಯೆ “ಇವನೊಬ್ನೆ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ತಾನೆ. ಮದುವೇನೂ ಆಗಿಲ್ಲ ಇವನು. ಗಾರೆ ಕೆಲಸ ಅಂತ ಯಾರೂ ಹೆಣ್ಣು ಕೊಡಲ್ಲ. ಕೆಲಸ ಯಾವುದಾದರೇನು’ ಎಂದರು ಶಿವಮ್ಮ. ನಮ್ಮ ಮನದಲ್ಲಿ ಯಾವುದೇ ಪರಮೋತ್ಛ ಹುದ್ದೆಯವನಿಗಿಂತ ಎತ್ತರದ ಸ್ಥಾನ ಗಳಿಸಿದ್ದರು ಶಿವರುದ್ರಯ್ಯ. ಅಂದು ಅಲ್ಲಿದ್ದ ಪ್ರತಿಯೋರ್ವನೂ ಅವರ ಬಳಿ ಬಂದು ಮಾತನಾಡುತ್ತಾ, ತಾಯಿ ಮಗನನ್ನು ಹರಸುತ್ತಿದ್ದರು.
ಕೆಲವರಂತೂ “ಅಮ್ಮಾ… ಇಂತಹ ಮಗನನ್ನು ಪಡೆಯಲು ನೀವು ಪುಣ್ಯ ಮಾಡಿರಬೇಕು. ಎಲ್ಲರಿಗೂ ಸಿಗಲಿ ಇಂತಹ ಮಗ’ ಎಂದು ದೃಷ್ಟಿ ತೆಗೆಯುತ್ತಿದ್ದರು. ತೊದಲು ನುಡಿಯಲಿ ಮೊದಲು ಸ್ಪುಟಿಸಿದ ಅಮ್ಮ ಎಂಬ ನಾದ ಅಮರ. ನಾನೂ ಹೆತ್ತವರನ್ನು ಹೀಗೆಯೇ ಆರೈಕೆ ಮಾಡಬೇಕು ಎಂಬ ಭಾವ ಪ್ರತಿಯೊಬ್ಬನ ಮನದಲ್ಲಿ ಬಂದದ್ದಂತೂ ನಿಜ.
ರಾಮ್ ಮೋಹನ್ ಭಟ್ ಎಚ್.
ಎಸ್. ಡಿ. ಎಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.