ಪ್ರಕೃತಿಯೊಂದಿಗೆ ನನ್ನ ಆತ್ಮಸಂವಾದ
Team Udayavani, Sep 21, 2020, 2:59 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸ ಇರುವಂತೆ ನನಗೆ ಪ್ರಕೃತಿಯ ಸೌಂದರ್ಯ ಸವಿಯುವುದು ಬಹಳ ಇಷ್ಟ.
ಮುಂಜಾನೆ, ಮುಸ್ಸಂಜೆಯಲ್ಲಿ ಪ್ರಕೃತಿಯು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿರುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ.
ಇಂಪಾದ ಧ್ವನಿಯಿಂದ ಚಿಲಿಪಿಲಿಗುಟ್ಟುತ್ತಿರುವ ಹಕ್ಕಿಗಳು, ತಂಪಾಗಿ ಬೀಸುತ್ತಿರುವ ತಂಗಾಳಿ, ನಗು-ಮುಖದಿಂದ ಅರಳುತ್ತಿರುವ ಹೂಗಳು, ಮುಂಜಾನೆಯನ್ನು ಆವರಿಸಿರುವ ಮಂಜು, ಅದನ್ನು ಕರಗಿಸಲೆಂದೇ ಉದಯಿಸುತ್ತಿರುವ ಅರುಣ.
ಸೂರ್ಯನು ತನ್ನ ಕಿರಣದಿಂದ ಭೂಮಿಯನ್ನು ಸ್ಪರ್ಶಿಸಿದಾಗ ನಿಧನವಾಗಿ ಮೇಲೇಳಿ ಹೊಸ ಜೀವನ ಆರಂಭಿಸುವ, ಪ್ರಕೃತಿಗೆ ಇನ್ನಷ್ಟು ಮೆರುಗು ನೀಡುವ ಹುಲ್ಲುಗಳು ಆಹಾ! ಎಂತಹ ರಮ್ಯ ಮನೋಹರವಾದ ದೃಶ್ಯ . ಇದು ಮುಂಜಾನೆಯ ನೋಟ. ಇನ್ನು ಮುಸ್ಸಂಜೆ ಭಾಸ್ಕರನಿಗೆ ಬೈ ಹೇಳಿ ಚಂದ್ರನಿಗೆ ಹಾಯ್ ಹೇಳುವ ಸಮಯ.
ಕತ್ತಲಾಯಿತು ಅಂತ ಅವಸರದಲ್ಲಿ ಗೂಡು ಸೇರುತ್ತಿರುವ ಪಕ್ಷಿಗಳು, ತಮ್ಮ ಜೀವನ ಮುಗಿತು ಅನ್ನುವ ಬೇಜಾರು ಇದ್ದರೂ ಮುಗುಳ್ನಗುತ್ತಾ ಮುದುಡುತ್ತಿರುವ ಹೂ ಗಳು, ಶಾಂತವಾದ ವಾತವಾರಣ ಹೀಗೆ ಪ್ರಕೃತಿಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಳೆಗಾಲದಲ್ಲಂತೂ ಪ್ರಕೃತಿಯ ಸೌಂದರ್ಯ ಇಮ್ಮಡಿಯಾಗುತ್ತದೆ.
ಹಸುರು ಬಣ್ಣದ ಉಡುಗೆ ತೊಟ್ಟಂತೆ ಕಾಣಿಸುವ ಭೂ ತಾಯಿ. ಅದರ ಮೇಲೆ ವರುಣನ ನರ್ತನ ಹೀಗೆ ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ಅದನ್ನು ಸವಿಯಲು ಮಾತ್ರ ಸಾಧ್ಯ.
ಪ್ರಕೃತಿ ಸೌಂದರ್ಯದ ಮುಂದೆ ಉಳಿದೆಲ್ಲ ಸೌಂದರ್ಯಗಳು ಶೂನ್ಯ. ಪ್ರಕೃತಿಯ ಪ್ರತಿಯೊಂದು ಅಂಶಗಳು ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತವೆ. ತಮ್ಮ ಭವಿಷ್ಯ ಒಂದೇ ದಿನ ಎಂದುತಿಳಿದಿದ್ದರೂ ಹೂವುಗಳು ಸದಾ ನಗುತ್ತಲೇ ಇರುತ್ತವೆ. ಹೀಗೆ ಪ್ರಕೃತಿಯಿಂದ ಖುಷಿಯನ್ನು ಪಡೆಯುವುದರ ಜತೆಗೆ ಅದರಿಂದ ಕಲಿಯ ಬೇಕಾದ ಪಾಠವು ಇದೆ. ಶಾಶ್ವತವಾದ ಪ್ರಕೃತಿಯೇ ಸ್ವಾರ್ಥವನ್ನು ಮರೆತಿರುವಾಗ ತಾತ್ಕಾಲಿಕವಾಗಿ ನಾವುಗಳು ಕೂಡ ನಿಸ್ವಾರ್ಥ ಮನೋಭಾವನೆ ಬೆಳೆಸಿಕೊಳ್ಳೋಣ.
ವಿನಯ ಆಚಾರ್ಯ, ಎಂ.ಪಿ.ಎಂ. ಕಾಲೇಜು ಕಾರ್ಕಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.