Navaratri: ನವರಾತ್ರಿಯ ನವವರ್ಣ
Team Udayavani, Oct 15, 2023, 1:09 PM IST
ನವರಾತ್ರಿಯು ದೇವಿಯ ಆರಾಧನೆಯ ವಿಶೇಷ ಹಬ್ಬವಾಗಿದೆ. ಇದನ್ನು ದಸರಾ ಎಂದು ಕೂಡ ಕರೆಯುತ್ತಾರೆ. ಈ ಒಂಭತ್ತು ದಿನದಲ್ಲಿ ದೇವಿಯ ಒಂಭತ್ತು ರೂಪವನ್ನು ಪೂಜಿಸಲಾಗುತ್ತದೆ. ಮೊದಲನೇ ದಿನ ಶೈಲಾಪುತ್ರಿ, ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟ, ನಾಲ್ಕನೇ ದಿನ ಕುಷ್ಮಾಂಡ, ಐದನೇ ದಿನ ಸ್ಕಂದಮಾತಾ, ಆರನೇ ದಿನ ಕಾತ್ಯಾಯನಿ, ಏಳನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ, ಒಂಭತ್ತನೇ ದಿನ ಸಿಧಿœಧಾತ್ರಿ ಅವತಾರಗಳನ್ನು ದೇವಿಯ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಹಲವು ಕಡೆ ವಿಶೇಷ ಪೂಜೆಯೊಂದಿಗೆ ಜಾತ್ರೆ ಕೂಡ ನಡೆಯುತ್ತದೆ. ದೊಡ್ಡವರಿಗೆ ಪೂಜೆಯ ಖುಷಿಯಾದರೆ ಮಕ್ಕಳಿಗೆ ದಸರಾಕ್ಕೆಂದು ಸಿಗುವ ರಜೆಯೇ ಖುಷಿ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಕೆಲವು ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಸಣ್ಣ ಮಟ್ಟದಲ್ಲಿ ಆಚರಿಸಲಾಗುತ್ತದೆ.ಮಂಗಳೂರು ಸೇರಿದಂತೆ ಕೆಲವು ಹೆಸರುವಾಸಿ ದೇವಸ್ಥಾನಗಳಲ್ಲಿ ಪೂಜೆ ಅದ್ದೂರಿಯಾಗಿ ನಡೆಯುತ್ತದೆ. ನವರಾತ್ರಿ ಸಮಯದಲ್ಲಿ ಅಲಂಕರಗೊಂಡಿರುವ ದೇವಿಯ ಮೂರ್ತಿಯನ್ನು ನೋಡುವುದೇ ಚೆಂದ, ಮನಸ್ಸಿಗೆ ಆನಂದ.
ದೇವಿಯ ಒಂಭತ್ತು ಅವತಾರಗಳಿಗೆ ಅನುಗುಣವಾಗಿ ದೇವಸ್ಥಾನಗಳಲ್ಲಿ ದೇವಿಗೆ ಒಂಭತ್ತು ದಿನ ಒಂಭತ್ತು ಬಣ್ಣದ ಸೀರೆಯನ್ನುಡಿಸಿ, ದಿನಕ್ಕೊಂದು ನೈವೇದ್ಯ ಮಾಡಿ ಒಂಭತ್ತು ದಿನ ಬಹಳ ಅಚ್ಚುಕಟ್ಟಾಗಿ ಪೂಜೆಯನ್ನು ಮಾಡುತ್ತಾರೆ. ಹಲವಾರು ದೇವಿ ಮಂದಿರಗಳಲ್ಲಿ ಒಂಬತ್ತು ದಿನವೂ ಮುಂಜಾನೆ ಹೊಸ ಸೀರೆಯನ್ನುಡಿಸಿ, ಹಣೆಗೆ ಕುಂಕುಮವನ್ನಿಟ್ಟು , ಹೂವನ್ನು ಹಾಕಿ, ಹಣ್ಣು ಕಾಯಿಗಳನ್ನು ನೈವೇದ್ಯವನ್ನು ಇಟ್ಟು ಒಂಭತ್ತು ದಿನವೂ ರಾತ್ರಿ ಭಜನೆಯನ್ನು ಮಾಡಿ ದೇವಿಯ ಗಂಧ – ಪ್ರಸಾದವನ್ನು ಪಡೆಯಲು ಜನ ಕಾದು ಕುಳಿತಿರುತ್ತಾರೆ. ಎಲ್ಲ ಕಡೆಗಳಲ್ಲೂ ಕೊನೆಯ ದಿನದ ಪೂಜೆ ಬಹಳ ಅದ್ದೂರಿಯಾಗಿ ನಡೆಯುತ್ತದೆ.
ನಮ್ಮಲ್ಲಿ ನಡೆಯುವ ದಸರಾಗೂ ಮೈಸೂರಿನಲ್ಲಿ ನಡೆಯುವ ದಸರಾಗೂ ತುಂಬಾ ವ್ಯತ್ಯಾಸಗಳಿವೆ. ನಮ್ಮಲ್ಲಿ ನಡೆಯುವ ಪೂಜೆಯ ರೀತಿಯೇ ಬೇರೆ. ಅಲ್ಲಿ ನಡೆಯುವ ಪೂಜೆಯೇ ಬೇರೆ. ಮೈಸೂರಿನಲ್ಲಿ ಕೊನೆಯ ದಿನದಂದು ಚಾಮುಂಡೇಶ್ವರಿಯ ಮೂರ್ತಿಯನ್ನು ಅಂಬಾರಿ ಮೇಲೆ ಕುಳ್ಳಿರಿಸಿ ಅಂಬಾರಿ ಮೆರವಣಿಗೆ ಮಾಡುತ್ತಾರೆ. ಕೊನೆಯ ದಿನದಂದು ಬಹಳ ವಿಜೃಂಭಣೆಯಿಂದ ದಸರಾ ಉತ್ಸವ ನಡೆಸುತ್ತಾರೆ. ಆನೆ ಮೇಲಿನ ಅಂಬಾರಿ ಸವಾರಿಯನ್ನು ನೋಡಲೆಂದು ಸೇರಿರುವ ಜನರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು. ಇಲ್ಲಿನ ಅಂಬಾರಿ ಮೆರವಣಿಗೆ, ಅರಮನೆ ಅಲಂಕಾರ, ಪೂಜೆ ವಿಧಾನ, ಅಬ್ಟಾ ಇದನ್ನೆಲ್ಲ ಕೇಳಿಯೇ ಅಲ್ಲಿ ಹೋಗಬೇಕೆಂಬ ಹಂಬಲ ಹೆಚ್ಚಾಗಿದೆ.
ನೀವು ಕೂಡ ನವರಾತ್ರಿಯ ಪೂಜೆಯಲ್ಲಿ ಬಾಗವಹಿಸಿ ದೇವಿಯ ದರ್ಶನವನ್ನು ಪಡೆಯಿರಿ.
– ಲತಾ, ಎಂಜಿಎಂ ಕಾಲೇಜು, ಉಡುಪಿ
**
ಆಧುನಿಕ ಭಕ್ತಿ
ಭಕ್ತಿ ಅಂದರೆ ದೇವರ ಆರಾಧನೆ. ಅದು ಎಲ್ಲ ಮಾನವ ಸಂಬಂಧಗಳ ಮೂಲದ್ರವ್ಯ. ಮನಸ್ಸು ಎಂಬ ಪ್ರಪಂಚದ ಅಷ್ಟೂ ವ್ಯಾಪಾರಗಳು ನಡೆಯುತ್ತಿರುವುದು ಭಕ್ತಿ ಎನ್ನುವ ಮಂತ್ರದ ಭಿನ್ನ ಭಿನ್ನ ಸ್ವರೂಪಗಳಿಂದಲೇ. ಇತ್ತೀಚಿನ ದಿನಗಳಲ್ಲಿ ನವವಿಧ ಭಕ್ತಿಗಳೊಂದಿಗೆ ಆಧುನಿಕ ಭಕ್ತಿಯೂ ಸೇರಿಕೊಂಡಿದೆ.
ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾದರೂ ನಮ್ಮೊಳಗಿನ ನಂಬಿಕೆಗಳಲ್ಲಿ ಯಾವುದೇ ಬದಲಾವಣೆ ಆಗಬಾರದು. ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಂಡಿವೆ. ಹಿಂದಿನ ಕಾಲದಲ್ಲಿ ದೇವರ ದರ್ಶನಕ್ಕಾಗಿ ಮನೆಯವರೆಲ್ಲಾ ಜತೆಯಾಗಿ ದೇಗುಲಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು. ಆದರೆ ಈಗ ಇ-ದರ್ಶನ, ಇ-ಟಿಕೆಟ್‌ಗಳಾಗಿವೆ. ದೇವರ ಸೇವೆಗಳಲ್ಲೂ ಅನೇಕ ಬದಲಾವಣೆಗಳನ್ನು ಕಾಣಬಹುದು. ಆನ್‌ಲೈನ್ ಸೇವೆಗಳು, ಮನೆಬಾಗಿಲಿಗೆ ಪ್ರಸಾದಗಳನ್ನು ತಲುಪಿಸುವುದು, ನೈವೇದ್ಯದ ಬದಲು ಮನೆಗಳಲ್ಲಿ ಮಾಡುವ ಪುಳಿಯೋಗರೆ, ಬಿಸಿಬೇಳೆಬಾತ್, ಕೇಕ್ ಮುಂತಾದವುಗಳನ್ನು ಪ್ರಸಾದ ರೂಪದಲ್ಲಿ ನೀಡುವುದು; ಕೆಲವು ಕಡೆಗಳಲ್ಲಿ ಆರ್ಡರ್ ಸ್ವೀಕರಿಸಿ ಸೀಲ್ಡ್ ಬಾಟಲಿಗಳಲ್ಲಿ ಪ್ರಸಾದ ಒದಗಿಸುವ ವ್ಯವಸ್ಥೆ…! ಕುಟುಂಬದವರೆಲ್ಲ ಜತೆಯಾಗಿ ಹೋಗಿ ದೇವರ ಸೇವೆಗಳನ್ನು ಮಾಡಿಸಿ ನೆರೆಮನೆಯವರಿಗೆ, ಬಂಧುಬಾಂಧವರಿಗೆ ಪ್ರಸಾದ ನೀಡುತ್ತಿದ್ದರು. ಅದೆಲ್ಲವೂ ಈಗ ಡೋರ್ ಡೆಲಿವರಿ ಆಗಿದೆ!
ಇನ್ನು ದೇವಸ್ಥಾನಗಳಲ್ಲಿ ಕೇಳಿ ಬರುತ್ತಿದ್ದ ಮಂಗಳವಾದ್ಯಗಳನ್ನು ಮೆಷಿನ್ ಕೈಗಳು, ರೆಕಾರ್ಡಿಂಗ್ ಮೂಲಕ ಕೇಳುವಂತಾಗಿದೆ. ಅದ್ದೂರಿಯಾಗಿ ನಡೆಯುತ್ತಿದ್ದ ಉತ್ಸವಗಳು, ಪ್ರವಚನಾದಿಗಳು ಈಗ ಫೇಸ್‌ಬುಕ್ ಲೈವ್‌ನಂತಹ ಸಾಮಾಜಿಕ ಜಾಲತಾಣದಲ್ಲೇ ನಡೆಯುತ್ತಿವೆ. ದೇವರಿಗೂ ಕೃತಕ ಆಭರಣಗಳು, ಪ್ಲಾಸ್ಟಿಕ್ ಹೂವಿನ ಅಲಂಕಾರಗಳನ್ನು ಕಾಣಬಹುದು. ದೇವರ ಸಲಕರಣೆಗಳು ಇತ್ಯಾದಿಗಳಲ್ಲೂ ಬದಲಾವಣೆಗಳನ್ನು ತಂದುಕೊಂಡಿದ್ದೇವೆ.
ಪ್ಲಾಸ್ಟಿಕ್ ಬಳಕೆ, ಕೆಮಿಕಲ್ ಕುಂಕುಮ, ದೇವರ ಬಿಂಬಕ್ಕೆ ಫೋಕಾಸ್ ಲೈಟ್, ಗರ್ಭಗುಡಿಗೆ ಆರ್.ಸಿ.ಸಿ. ಮಾಡು, ಗೋಡೆಗೆ ಟೈಲ್ಸ್ ಇತ್ಯಾದಿ ಇತ್ಯಾದಿ. (ಹಾಗೆಂದ ಮಾತ್ರಕ್ಕೆ ಮೋಟಾರ್ ಕಾರು ಬಂದ ಮೇಲೂ ಎತ್ತಿನಗಾಡಿಯನ್ನೇ ಬಳಸಿ ಎಂದು ನನ್ನ ಆಶಯವಲ್ಲ) ದೇವಾಲಯಗಳು ಪವಿತ್ರ ತಾಣವಾಗಿದೆ. ನಮ್ಮ ಅಹಂಕಾರಗಳನ್ನು ದೇವಾಲಯದ ಬಾಗಿಲಲ್ಲೇ ಬಿಟ್ಟು ಅನನ್ಯ ಭಕ್ತಿಯೊಂದಿಗೆ ದೇವರ ಸ್ಮರಣೆ ಮಾಡಬೇಕು. ಇದರ ಬದಲಾಗಿ ಈಗ ಸರಿಯಾದ ವಸ್ತ್ರ ಸಂಹಿತೆ ಪಾಲಿಸದೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಹಾಗೆ ದೇವಾಲಯಕ್ಕೂ ಹೋಗುತ್ತಾರೆ. ಅಲ್ಲಿಯೂ ಸೆಲ್ಫಿ ರೀಲ್ಸ್ ಮಾಡುವುದನ್ನು ಕಾಣಬಹುದು.
ನಮ್ಮ ಧಾರ್ಮಿಕ ನಂಬಿಕೆ ಆಚರಣೆ ಸಂಪ್ರದಾಯಗಳಲ್ಲಿ ಯಾವುದೇ ರೀತಿಯ ಆಧುನಿಕತೆ ಅಥವಾ ಅಡ್ಜಸ್ಟ್ ಮೆಂಟ್ ಮಾಡಬಾರದು. ದೇವಾಲಯಕ್ಕೆ ಭೇಟಿ ನೀಡುವವರಲ್ಲಿ ಸಕಾರಾತ್ಮಕ ಶಕ್ತಿಗಳು ಹಚ್ಚಾಗಿರುತ್ತದೆ. ಅವರ ಭಾವನೆಗಳು ಕೂಡ ಸಕಾರಾತ್ಮಕ ರೀತಿಯಲ್ಲಿರುತ್ತದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿದರೂ ಅವುಗಳು ನಮ್ಮ ಆಚರಣೆ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಬಾರದು.
- ವೈಷ್ಣವೀ ಜೆ. ರಾವ್ ಎಸ್.ಡಿ.ಎಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.