ಪ್ರಕೃತಿ ಉಳಿದರೆ ಮಾತ್ರ ಕುವೆಂಪು ಹುಟ್ಟಲು ಸಾಧ್ಯ
Team Udayavani, Jun 5, 2020, 11:11 AM IST
ಸಾಂದರ್ಭಿಕ ಚಿತ್ರ
ಕೋವಿಡ್ ದಿಂದ ಜನರಿಗೆ ಆಗಿರುವ ಅನಾಹುತವೇ ಹೆಚ್ಚು. ಆದರೆ ಪರಿಸರಕ್ಕೆ ಆದ ಉಪಕಾರವನ್ನು ನಾವು ಮರೆಯುವಂತಿಲ್ಲ. ಕಾರಣ ಇಷ್ಟೇ ಕೋವಿಡ್ ಸಂಕಷ್ಟದಿಂದ ದೇಶವೇ ಲಾಕ್‌ಡೌನ್‌ನಿಂದ ಕೈಗಾರಿಕೆಗಳನ್ನೆಲ್ಲ ಮುಚ್ಚಲಾಯಿತು. ಜನರ ಸಂಚಾರಕ್ಕೆ, ವಾಹನ ಓಡಾಟಕ್ಕೂ ಬ್ರೇಕ್‌ಬಿತ್ತು. ಇದರಿಂದ ಸ್ವಾರ್ಥಿ ಮನುಷ್ಯ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಿಂದ ಪರಿಸರ ಸ್ವಲ್ಪ ಮಟ್ಟಿಗೆ ಪ್ರಶಾಂತವಾಗಿರಲು ಸಾಧ್ಯವಾಗಿದೆ. ಪ್ರತಿ ವರ್ಷವೂ ಪರಿಸರ ದಿನವನ್ನು ಆಚರಿಸುತಿದ್ದೇವೆ. ಆದರೆ ಈ ವರ್ಷದ ಪರಿಸರ ದಿನಾಚರಣೆಗೆ ಕೋವಿಡ್ ಜೀವ ತುಂಬಿದೆ. ಸರಕಾರ ಗಂಗಾ ನದಿಯ ಶುದ್ಧೀಕರಣಕ್ಕೆ ಸಾಕಷ್ಟು ಅನುದಾನ ಮೀಸಲಾಗಿರಿಸಿದ್ದರೂ ಶುದ್ಧವಾಗದ ನೀರು ಲಾಕ್ ಡೌನ್ ನಿಂದಾಗಿ ನದಿಯಲ್ಲಿ ಶುದ್ಧ ನೀರಿನ ಹರಿವು ಕಾಣಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಗಂಗಾ ನದಿಯನ್ನು ಹೀಗೆ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನದಿ ತಟದ ಜನರ ಮೇಲಿದೆ.
ಪರಿಸರವನ್ನು ರಕ್ಷಿಸಲು ಕೆಲವೊಂದು ವಿನೂತನ ಪ್ರಯತ್ನಗಳನ್ನು ಮಾಡಬೇಕಿದೆ. ಸಾವಯವ ಕೃಷಿ ಪ್ರಸ್ತುತ ದಿನಗಳಲ್ಲಿ ರೈತರಿಗೆ ಕಷ್ಟವಾಗಬಹುದಾದರೂ ಸರಕಾರ ರೈತರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಬೇಕಿದೆ. ಮನುಷ್ಯನ ದುರಾ ಸೆ ಎಂಬ ಕೊಚ್ಚೆಯಲ್ಲಿ ಬಿದ್ದು ಹಣದ ಆಸೆಗೆ ಮರಗಿಡಗಳನ್ನು ನಾಶ ಮಾಡಿ ಮಾಲಿನ್ಯಗಳನ್ನು ಸೃಷ್ಟಿಸಿ ಇಡೀ ಮನುಷ್ಯ ಕುಲವನ್ನೇ ಅಳಿವಿನ ಅಂಚಿಗೆ ತಳ್ಳುತ್ತಿದ್ದಾನೆ. ಅಂತಹ ವ್ಯಕ್ತಿಗಳಿಗೆ ಸಾಮಾನ್ಯ ತಿಳಿವಳಿಕೆಯನ್ನು ನೀಡಬೇಕಿದೆ. ಗಿಡಮರಗಳಿಲ್ಲದೆ ಮನುಷ್ಯ ಸಂಕುಲವೇ ಇರುವುದಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿ ನಮ್ಮ ಸುತ್ತಮುತ್ತಲಿನ ಪರಿಸರದ ಜತೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಳ್ಳುವಂತೆ ಪರಿವರ್ತಿಸಬೇಕು.
ಮಾಲಿನ್ಯದ ಕಾರಣದಿಂದ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಹಳದಿ ಮತ್ತು ಹಸುರು ಬಣ್ಣಕ್ಕೆ ತಿರುಗಿದೆ. ಅಂದರೆ ಮಾನವ ಕುಲ ಐತಿಹಾಸಿಕ ಸ್ಮಾರಕಗಳಿಗೂ ಕುತ್ತು ತಂದಿದೆ ಎಂದಾಯಿತು. ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಇಂತಹ ಅನಾಹುತಗಳಾಗದಂತೆ ತಡೆಗಟ್ಟಬೇಕಿದೆ.
ನಮ್ಮ ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಆವಶ್ಯಕ ವಸ್ತುವಾಗಿದೆ. ಪ್ಲಾಸ್ಟಿಕ್ ನಿಂದಲೂ ನಮಗೆ ಆಪತ್ತು ಕಾದಿದೆ. ಆದಷ್ಟು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್‌ಗಳನ್ನು ಬಳಸುವುದು ಅನಿವಾರ್ಯ. ಕುವೆಂಪು ಹುಟ್ಟಿದ ನಾಡಿನವರು ನಾವು ಪ್ರಕೃತಿ ಮಡಿಲಿನಲ್ಲಿ ಬರೆದ ಕಥೆ, ಕವನ, ಕಾದಂಬರಿಗಳನ್ನು ಓದುತ್ತಾ ಬೆಳೆದವರು. ಪ್ರಕೃತಿ ಉಳಿದರೆ ಮಾತ್ರ ಭವಿಷ್ಯದಲ್ಲಿ ಮತ್ತೂಮ್ಮೆ ಕುವೆಂಪು ಹುಟ್ಟಲು ಸಾಧ್ಯ.
-ಅನಿಲ್ ಗುಮ್ಮಘಟ್ಟ
ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.